ಶಿವಮೊಗ್ಗ: ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೇ ಪತ್ನಿಯೂ (Wife) ನೇಣಿಗೆ ಶರಣಾದ ಘಟನೆ ಭದ್ರಾವತಿಯ (Bhadravati) ಹೊಸ ಸಿದ್ದಾಪುರದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಗೃಹಿಣಿಯು ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಇವರ ಪತಿ ಜಗದೀಶ್ ಅವರು ಕೆಎಸ್ಐಎಸ್ಎಫ್ (KSISF) ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಜುಗುಪ್ಸೆಗೊಂಡು ಫೆಬ್ರವರಿ 14ರಂದು ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ. ಇದನ್ನೂ ಓದಿ: ಮೈಸೂರು| ಪ್ರವಾಸಕ್ಕೆ ತೆರಳಲು ಗಂಡ ಅನುಮತಿ ಕೊಡ್ಲಿಲ್ಲ ಅಂತ ಗೃಹಿಣಿ ಆತ್ಮಹತ್ಯೆ
ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ
ಸ್ವಾತಿ ಅವರು ಸಾಯುವ ಮುನ್ನ ತನ್ನ ತಾಯಿಗೆ ಮೆಸೇಜ್ ಮಾಡಿದ್ದು, ಅದರಲ್ಲಿ ಮೋಹನ್ ಎಂಬವರ ಹೆಸರನ್ನು ಉಲ್ಲೇಖಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಮೋಹನ್ ಎಂಬ ಪೊಲೀಸ್ ತನಗೆ ಮೆಸೇಜ್ ಮಾಡಿದ್ದರು. ಬ್ಲಾಕ್ ಮಾಡಿದ್ದಕ್ಕೆ, ಆತ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡಬೇಡಿ ಎಂದು ಸ್ವಾತಿ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸ್ವಾತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮುಡಾ ಪ್ರಕರಣದ ರುವಾರಿ ಸ್ನೇಹಮಯಿ ಕೃಷ್ಣ ಅರೆಸ್ಟ್

