ಉಡುಪಿ: ಸಿಎಂ ಸಿದ್ದರಾಮಯ್ಯ ತನ್ನ ಅಧಿಕಾರಾವಧಿಯ ರೆಕಾರ್ಡ್ ಅನ್ನು ಹಾಗೇಯೇ ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಪಟ್ಟ ಅಲಂಕರಿಸಿಕೊಂಡ ನಂತರ ಉಡುಪಿಗೆ ಐದನೇ ಬಾರಿಗೆ ಆಗಮಿಸಿದ ಮುಖ್ಯಮಂತ್ರಿ ಶ್ರೀಕೃಷ್ಣ ಮಠಕ್ಕೆ ತೆರಳದೆ ತನ್ನ ಹಠ ಮುಂದುವರೆಸಿದ್ದಾರೆ.
ಮಧ್ಯಾಹ್ನ ಎರಡು ಹದಿನೈದರ ವೇಳೆಗೆ ಉಡುಪಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ನೇರವಾಗಿ ಐಬಿಗೆ ಬಂದು ಮಧ್ಯಾಹ್ನದ ಊಟ ಸ್ವೀಕರಿಸಿದರು. ನಂತರ ಶ್ರೀಕೃಷ್ಣ ಮಠದ ವ್ಯಾಪ್ತಿಯಿಂದ ಇನ್ನೂರು ಮೀಟರ್ ದೂರದಲ್ಲಿರುವ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಸಿಎಂ ಉದ್ಘಾಟನೆ ಮಾಡಿದರು. ಈ ವ್ಯಾಪ್ತಿ ಕೇವಲ 300 ಮೀಟರ್ ನಷ್ಟು ದೂರ. ಅಲ್ಲಿಂದ ನೇರವಾಗಿ ಸರ್ವಿಸ್ ಬಸ್ ಸ್ಟ್ಯಾಂಡ್ ಬಳಿಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಉದ್ಘಾಟನಾ ಸಭೆ ನಡೆಯಿತು. ಇದು ಶ್ರೀಕೃಷ್ಣಮಠಕ್ಕೆ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿದೆ.
Advertisement
ಕೃಷ್ಣಮಠಕ್ಕೆ ಇಷ್ಟು ಹತ್ತಿರದಲ್ಲಿದ್ದರೂ ದೇವಸ್ಥಾನಕ್ಕೆ ತೆರಳದೆ ಪೇಜಾವರ ಶ್ರೀಗಳನ್ನು ಭೇಟಿ ಮಾಡದೇ ಸಿಎಂ ದೂರ ಉಳಿದರು. ಈ ಸಭಾ ಕಾರ್ಯಕ್ರಮ ಮುಗಿಸಿ ಮೀನುಗಾರರ ಮಹಿಳಾ ಸಮಾವೇಶಕ್ಕೆ ಬನ್ನಂಜೆ ರಸ್ತೆಯ ಮೂಲಕ ಅಂಬಲ್ಪಾಡಿಗೆ ತೆರಳಿ ಅಲ್ಲಿಂದ ಮಂಗಳೂರಿಗೆ ತೆರಳಿದರು. ಸುಮಾರು 5 ಗಂಟೆಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ ಕೂಡ ಸಿಎಂ ಕೃಷ್ಣಮಠಕ್ಕೆ, ಕನಕದಾಸರ ಗುಡಿಯ ಪಕ್ಕ ತೆರಳದೆ ತನ್ನ ಹಳೆಯ ದಾಖಲೆಯನ್ನು ಹಾಗೆ ಕಾಯ್ದಿರಿಸಿಕೊಂಡರು.
Advertisement
ಉಡುಪಿಗೆ ಆಗಮಿಸಿದ್ದರೂ ಶ್ರೀಕೃಷ್ಣಮಠಕ್ಕೆ ಹೋಗುವುದಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಈ ಹಿಂದೆ ಮಠಕ್ಕೆ ಹೋಗಿದ್ದೆ. ಆದರೆ ಈಗ ಹೋಗಲ್ಲ. ಮಠದಿಂದ ಈ ಬಾರಿ ನನಗೆ ಆಹ್ವಾನವೂ ಇಲ್ಲ ಎಂದರು. ಪೇಜಾವರ ಶ್ರೀಗಳ ಜೊತೆ ನನಗೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನಾನು ಆರೂವರೆ ಕೋಟಿ ಜನರ ಜೊತೆ ಚೆನ್ನಾಗಿಯೇ ಇದ್ದೇನೆ. ಬಸವಣ್ಣನವರ ವಚನವನ್ನು ಸಿಎಂ ಪುನರುಚ್ಚರಿಸಿ ಉಡುಪಿಯಿಂದ ತೆರಳಿದರು.