ಹಾಸನ: ಕೊಡಗು ಜಿಲ್ಲೆಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಬಾಲಕ ಸಿಎಂ ಕುಮಾರಸ್ವಾಮಿ ಅವರ ಗಮನಸೆಳೆದ ಬೆನ್ನಲ್ಲೇ, ಹಾಸನ ಬಾಲಕಿಯೊಬ್ಬಳು ಎಚ್‍ಡಿಕೆ ಕಣ್ಣೀರು ಹಾಕಿದ್ದು ಕಂಡು ಧೈರ್ಯ ತುಂಬಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲೆ ಹೊಳೇನರಸೀಪುರ ತಾಲೂಕಿನ ಮಳಲಿ ಗ್ರಾಮದ ಬಾಲಕಿ ಅರುಂಧತಿ, ವಿಡಿಯೋದಲ್ಲಿ ತಮ್ಮ ಗ್ರಾಮಕ್ಕೆ ಬರುವಂತೆ ಆಹ್ವಾನ ನೀಡಿದ್ದಾಳೆ. ಕರ್ನಾಟಕ ಸಿಎಂ ಆಗಿ ನೀವು ಅಧಿಕಾರ ವಹಿಸಿಕೊಂಡ ಬಳಿಕ ಉತ್ತಮ ಮಳೆಯಾಗಿದ್ದು, ನಮ್ಮ ಗ್ರಾಮದಲ್ಲೂ ಉತ್ತಮ ಬೆಳೆಯಾಗಿದೆ. ನಾನು ಹುಟ್ಟಿದ ಸಂದರ್ಭದಲ್ಲಿ ನಮ್ಮ ಗ್ರಾಮದ ಕೆರೆ ತುಂಬಿತ್ತು. ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಕೆರೆ ತುಂಬಿದೆ. ನಿಮಗೆ ಅಧಿಕಾರ ಕೊಟ್ಟಿರುವುದು ಕನ್ನಡಿಗರು, ನಿಮ್ಮ ಪರ ಹೋರಾಟ ಮಾಡಲು ಕರ್ನಾಟಕ ರೈತ ಮಕ್ಕಳು ಜೊತೆಗಿರುತ್ತಾರೆ ಎಂದು ಅಭಯ ನೀಡಿದ್ದಾಳೆ.
ಇದೇ ವೇಳೆ ರೈತ ಸಾಲಮನ್ನಾ ಕುರಿತು ಪ್ರಸ್ತಾಪ ಮಾಡಿರುವ ಬಾಲಕಿ, ಕರ್ನಾಟಕದ ಬಹುತೇಕ ಡ್ಯಾಂಗಳು ತುಂಬಿದ್ದು, ಉತ್ತಮ ಬೆಳೆ ಆಗುವ ನಿರೀಕ್ಷೆ ಇದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ನಿಮ್ಮ ಸಾಲಮನ್ನಾ ನಮಗೆ ಬೇಡ. ಸಾಲಮನ್ನಾ ಬೇಡ ನಮ್ಮ ಕುಟುಂಬ ತುಂಬ ಚೆನ್ನಾಗಿದೆ. ನೀವು ಆರೋಗ್ಯದಿಂದ ಇರುವುದು ನಮಗೇ ಬೇಕು. ನೀವು ಅತ್ತರೆ ನಮಗೆ ಬೇಜಾರಾಗುತ್ತೆ ನಮಗೂ ಆಳುಬರುತ್ತೆ. ನೀವು ಹೆದರಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ಆದ್ದರಿಂದ ಹೆಚ್ಚು ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ. ನಗರದಲ್ಲಿ ಉತ್ತಮ ವಾತಾವರಣ ಲಭ್ಯವಿಲ್ಲ. ಗ್ರಾಮಗಳು ಹಚ್ಚ ಹಸಿರಾಗಿದ್ದು, ಒಳ್ಳೆಯ ವಾತಾವರಣವಿದೆ ಎಂದು ಹೇಳಿದ್ದಾಳೆ.