ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಖಾತೆಯನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನ ಅನ್ ಫಾಲೋ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ಕಚೇರಿಯ ಖಾತೆ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಟ್ವಿಟ್ಟರ್ ಖಾತೆಯನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ಫಾಲೋ ಮಾಡಿತ್ತು. ಆದರೆ ಈಗ ಏಕಾಏಕಿ ಟ್ವಿಟ್ಟರ್ ನಲ್ಲಿ ಮೋದಿ ಮತ್ತು ಕೋವಿಂದ್ ಅವರ ಖಾತೆಯನ್ನು ಅನ್ ಫಾಲೋ ಮಾಡಿದೆ.
Advertisement
Advertisement
ವೈಟ್ ಹೌಸ್ ಅಮೆರಿಕ ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರತು ಪಡಿಸಿದ ಬೇರೆ ಯಾರ ಖಾತೆಯನ್ನು ಫಾಲೋ ಮಾಡುವುದಿಲ್ಲ. ಆದರೆ ಅಚ್ಚರಿ ಎಂಬಂತೆ ಮೂರು ವಾರಗಳ ಹಿಂದೆ ಮೋದಿ ಮತ್ತು ಕೋವಿಂದ್ ಅವರ ಖಾತೆಯನ್ನು ಫಾಲೋ ಮಾಡಿತ್ತು. ಈ ಎರಡು ಖಾತೆಗಳನ್ನು ಅನ್‍ಫಾಲೋ ಮಾಡುವುರ ಜೊತೆಗೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ವಾಷಿಂಗ್ಟನ್ ನಲ್ಲಿರುವ ಭಾರತ ರಾಯಭಾರ ಕಚೇರಿಯನ್ನು ಅನ್ ಫಾಲೋ ಮಾಡಿದೆ.
Advertisement
ಗಣ್ಯ ವ್ಯಕ್ತಿಗಳ ಖಾತೆಯನ್ನು ಫಾಲೋ ಮಾಡಿ ವೈಟ್ ಹೈಸ್ ಅನ್‍ಫಾಲೋ ಮಾಡಿದ್ದು ಯಾಕೆ? ದಿಢೀರ್ ಆಗಿ ಈ ನಿರ್ಧಾರ ಯಾಕೆ ಮಾಡಿತು ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು.
Advertisement
ಈ ಪ್ರಶ್ನೆಗೆ ಹೆಸರು ಪ್ರಕಟಿಸಲು ಇಚ್ಚಿಸದ ವೈಟ್ ಹೌಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ವೈಟ್ ಹೌಸ್ ಟ್ವಿಟ್ಟರ್ ಯಾವಾಗಲೂ ಅಮೆರಿಕ ಸರ್ಕಾರದ ಹಿರಿಯ ವ್ಯಕ್ತಿಗಳ ಖಾತೆಯನ್ನು ಫಾಲೋ ಮಾಡುತ್ತದೆ. ಇದರ ಜೊತೆ ಕೆಲವು ಖಾತೆಗಳನ್ನು ಫಾಲೋ ಮಾಡುತ್ತದೆ. ಸೀಮಿತ ಅವಧಿಗೆ ಒಂದು ದೇಶಕ್ಕೆ ಗೌರವ ಸಲ್ಲಿಸುವ ಸಲುವಾಗಿ ಆ ದೇಶದ ಪ್ರಮುಖ ಖಾತೆಗಳನ್ನು ಫಾಲೋ ಮಾಡುತ್ತದೆ ಎಂದು ಉತ್ತರಿಸಿದ್ದಾರೆ.
ಪ್ರಸ್ತುತ 13 ಖಾತೆಗಳನ್ನು ವೈಟ್ ಹೌಸ್ ಫಾಲೋ ಮಾಡುತ್ತಿದ್ದು, ಈ ಎಲ್ಲ ಖಾತೆಗಳು ಅಮೆರಿಕ ಸರ್ಕಾರಲ್ಲಿರುವ ವ್ಯಕ್ತಿ/ ಸಂಸ್ಥೆಗಳಾಗಿವೆ. ವೈಟ್ ಹೌಸ್ ಖಾತೆಯನ್ನು 2.2 ಕೋಟಿ ಜನ ಫಾಲೋ ಮಾಡುತ್ತಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಸೇರಿದಂತೆ ಹಲವು ಔಷಧಿಗಳ ರಫ್ತನ್ನು ನಿಷೇಧಿಸಿತ್ತು. ಈ ಸಮಯದಲ್ಲಿ ಕೋವಿಡ್-19ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪರಿಣಾಮ ಬೀರುತ್ತದೆ ಎಂಬ ಸಲಹೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಕಳುಹಿಸುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಭಾರತ ಅಮೆರಿಕಕ್ಕೆ ಮಾತ್ರೆಗಳನ್ನು ರಫ್ತು ಮಾಡಿತ್ತು. ಇದಾದ ಬಳಿಕ ಟ್ರಂಪ್ ಸಂತೋಷಗೊಂಡು ಮೋದಿ ಅವರನ್ನು ಹೊಗಳಿದ್ದರು. ಟ್ರಂಪ್ ಹೊಗಳಿಕೆಯ ಟ್ವೀಟ್ ಬೆನ್ನಲ್ಲೇ ವೈಟ್ ಹೌಸ್ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಪಿಎಂಓ ಖಾತೆಯನ್ನು ಫಾಲೋ ಮಾಡಿತ್ತು.