ಲೆಕ್ಕಕ್ಕಿಲ್ಲ ರಿಂಕು ಸಿಕ್ಸರ್‌ – ಕೊನೇ ಎಸೆತದಲ್ಲಿ 7 ರನ್‌ ಗಳಿಸಿದ್ರೂ ಭಾರತಕ್ಕೆ ಸಿಕ್ಕಿದ್ದು 1 ರನ್‌, ಏಕೆ ಗೊತ್ತೇ?

Public TV
3 Min Read
Rinku

ವಿಶಾಖಪಟ್ಟಣಂ: ಸದ್ಯ ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಪೈಕಿ ಭಾರತ ಮೊದಲ ಪಂದ್ಯದಲ್ಲೇ ರೋಚಕ ಜಯ ಸಾಧಿಸಿದೆ.

ಸೂರ್ಯಕುಮಾರ್‌ ಯಾದವ್‌ (Suryakumar Yadav), ಇಶಾನ್‌ ಕಿಶನ್‌, ರಿಂಕು ಸಿಂಗ್‌ (Rinku Singh) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ ಆಸೀಸ್‌ ವಿರುದ್ಧ ಗೆದ್ದು ಬೀಗಿದೆ. ಆದ್ರೆ ಕೊನೇ ಎಸೆತದಲ್ಲಿ 1 ರನ್‌ ಬೇಕಿದ್ದಾಗ ಸಿಕ್ಸರ್‌ ಸಿಡಿಸಿ ಭಾರತ ಒಟ್ಟು 214 ರನ್‌ ಕಲೆಹಾಕಿದರೂ ತಂಡಕ್ಕೆ ಸೇರ್ಪಡೆಯಾಗಿದ್ದು 209ರನ್‌ ಮಾತ್ರ. ಆದ್ರೆ ಕೊನೆಯಲ್ಲಿ 7 ರನ್‌ ಬಾರಿಸಿದರೂ ಭಾರತಕ್ಕೆ ಒಂದೇ ಒಂದು ರನ್‌ ಸಿಕ್ಕಿತು. ಅದು ಟೀಂ ಇಂಡಿಯಾ (Team India) ಖಾತೆಗಾಗಲಿ ಅಥವಾ ರಿಂಕು ಸಿಂಗ್‌ ಅವರ ಖಾತೆಯಾಗಲಿ ಸೇರಲಿಲ್ಲ. ಯಾಕೆ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ…

T 20

ರಿಂಕು ಭರ್ಜರಿ ಸಿಕ್ಸ್‌ ಲೆಕ್ಕಕ್ಕಿಲ್ಲದಂತಾಗಿದ್ದೇಕೆ?
ಅಂತಿಮ ಓವರ್‌ನಲ್ಲಿ ಭಾರತಕ್ಕೆ 7 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲೇ ರಿಂಕು ಬೌಂಡರಿ ಬಾರಿಸಿ, 2ನೇ ಎಸೆತದಲ್ಲಿ 1 ರನ್‌ ಬೈಸ್‌ ಕದ್ದರು. ಆದ್ರೆ 3 ಮತ್ತು 4ನೇ ಎಸೆತಗಳಲ್ಲಿ ಸತತ 2 ವಿಕೆಟ್‌ ಉರುಳಿತು. ಈ ವೇಳೆ ಮತ್ತೊಂದು ವೈಡ್‌ ತಂಡಕ್ಕೆ ಸೇರ್ಪಡೆಯಾಯಿತು. ಕೊನೆಯ ಒಂದು ಎಸೆತದಲ್ಲಿ ಇನ್ನೊಂದು ರನ್‌ ಗೆಲುವಿಗೆ ಅಗತ್ಯವಿತ್ತು. ಸೇನ್‌ ಅಬಾಟ್‌ ಫುಲ್‌ ಲೆಂತ್‌ ಬೌಲಿಂಗ್‌ಗೆ ರಿಂಕು ಸಿಂಗ್‌, ಲಾಂಗ್‌ ಆನ್‌ಗೆ ಸಿಕ್ಸರ್‌ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಇದರಿಂದ ಟೀಂ ಇಂಡಿಯಾ ಕೊನೇ ಎಸೆತದಲ್ಲಿ 7 ರನ್‌ ಗಳಿಸಿದರೂ ಒಂದೇ ಒಂದು ರನ್‌ ಸೇರ್ಪಡೆಯಾಯಿತು. ಇದನ್ನೂ ಓದಿ: ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

Cricket 1

ಏಕೆಂದರೆ ಸೇನ್‌ ಅಬ್ಬಾಟ್‌ ಕೊನೇ ಎಸೆತವನ್ನು ಓವರ್‌ ಕ್ರೀಸ್‌ ನೋಬಾಲ್‌ ಎಸೆದಿದ್ದರು. ನೋಬಾಲ್‌ನಲ್ಲಿ ಗೇಮ್ ಕೊನೆಯಾದರೆ ಕೇವಲ ಒಂದು ರನ್ ಸಿಗುತ್ತದೆ ಹೊರತು ಬ್ಯಾಟರ್ ಖಾತೆಗೆ ಆ ರನ್ ಸೇರ್ಪಡೆಯಾಗುವುದಿಲ್ಲ. ಆ ಕ್ಷಣದಲ್ಲಿ ಬ್ಯಾಟ್, ಲೆಗ್-ಬೈ ಅಥವಾ ಬೈಗಳ ಮೂಲಕ ಗಳಿಸಿದ ರನ್‌ ಕೂಡ ತಂಡದ ಖಾತೆಗೆ ಸೇರ್ಪಡೆಯಾಗುವುದಿಲ್ಲ. ನೋಬಾಲ್‌ ಸಿಕ್ಸರ್‌ ಸಿಡಿಸುವುದಕ್ಕೂ ಮುಂಚಿತವಾಗಿ ಆಗಿತ್ತು. ಭಾರತದ ಗೆಲುವಿಗೆ 1 ರನ್‌ಗಳಷ್ಟೇ ಅಗತ್ಯವಿದ್ದ ಕಾರಣ ರಿಂಕು ಸಿಂಗ್‌ ಅವರ ಸಿಕ್ಸರ್‌ ಸ್ಕೋರ್‌ ಅವರ ಖಾತೆಗಾಗಲಿ ಅಥವಾ ತಂಡದ ಖಾತೆಗಾಗಲಿ ಸೇರ್ಪಡೆಯಾಗುವುದಿಲ್ಲ. ಒಂದು ವೇಳೆ ಒಂದು ರನ್‌ಗಿಂತಲೂ ಹೆಚ್ಚು ರನ್‌ಗಳ ಅಗತ್ಯವಿದ್ದಿದ್ದರೇ ಮಾತ್ರ ಆ ರನ್‌ ಸೇರ್ಪಡೆಯಾಗುತ್ತದೆ. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

ಸೆಹ್ವಾಗ್ ಅವರಿಗೂ ಇದೇ ರೀತಿ ಆಗಿತ್ತು?
ಟೀಂ ಇಂಡಿಯಾಕ್ಕೆ ಈ ಘಟನೆ ಇದೇ ಮೊದಲೇನಲ್ಲ. 2010ರಲ್ಲಿ ಶ್ರೀಲಂಕಾ, ಭಾರತ, ನ್ಯೂಜಿಲೆಂಡ್ ಮಧ್ಯೆ ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆಯೋಜನೆಗೊಂಡಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಶ್ರೀಲಂಕಾ 170 ರನ್‌ಗಳಿಗೆ ಆಲೌಟ್ ಆಗಿತ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 34 ಓವರ್‌ಗಳಲ್ಲಿ 166 ರನ್‌ಗಳಿಸಿತ್ತು. ಸೆಹ್ವಾಗ್ 99 ರನ್‌ಗಳಿಸಿದ್ದರೆ ಧೋನಿ 23 ರನ್‌ಗಳಿಸಿ ಕ್ರೀಸ್‌ನಲ್ಲಿದ್ದರು. ಭಾರತದ ಗೆಲುವಿಗೆ ಕೇವಲ 5 ರನ್ ಬೇಕಿತ್ತು. ರಂದೀವ್ 35ನೇ ಓವರ್ ಎಸೆಯಲು ಬಂದಾಗ ಸೆಹ್ವಾಗ್ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನು ಸೆಹ್ವಾಗ್ ಬ್ಯಾಟಿನಿಂದ ತಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟಿಗೆ ಸಿಗಲಿಲ್ಲ. ಈ ಚೆಂಡನ್ನು ನಾಯಕನಾಗಿದ್ದ ಕುಮಾರ ಸಂಗಕ್ಕಾರ ಸಹ ಹಿಡಿಯದ ಕಾರಣ ಬೌಂಡರಿಗೆ ಹೋಗಿತ್ತು. ಬೈ ಮೂಲಕ ಇತರೇ 4 ರನ್ ಸೇರ್ಪಡೆಯಾದ ಕಾರಣ ಸ್ಕೋರ್ ಸಮವಾಗಿತ್ತು. ಹೀಗಿದ್ದರೂ ಸೆಹ್ವಾಗ್ 1 ರನ್ ಗಳಿಸಿ ಶತಕ ಹೊಡೆಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ನಂತರ ಎರಡು ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. 4ನೇ ಎಸೆತವನ್ನು ಸೆಹ್ವಾಗ್ ಲಾಂಗ್ ಅಫ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದ್ದರು. ಸೆಹ್ವಾಗ್ ಸಿಕ್ಸ್ ಸಿಡಿಸಿದ್ದರೂ ಶತಕ ಪೂರ್ಣಗೊಂಡಿರಲಿಲ್ಲ. ಏಕೆಂದರೆ ರಂದೀವ್ ನೋಬಾಲ್ ಎಸೆದಿದ್ದರು.

Share This Article