ಅಹಮದಾಬಾದ್: ಗುಜರಾತ್ ಗೆ ಓಖಿ ಚಂಡಮಾರುತ ಅಪ್ಪಳಿಸಿಲ್ಲ ನಿಜ. ಆದರೆ ಗಾಂಧಿ ನಾಡಲ್ಲಿ ಚಾಣಕ್ಯದ್ವಯರಾದ ಪ್ರಧಾನಿ ನರೇಂದ್ರ ದಾಮೋದರ ಮೋದಿ-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಂತ್ರಗಾರಿಕೆಯ ಫಲವಾಗಿ ಸೃಷ್ಟಿಯಾದ ಸುಂಟರಗಾಳಿಯಲ್ಲಿ ಕೇಸರಿ ಕೂಟ ಸತತ ಆರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದು ಸಿಕ್ಸರ್ ಬಾರಿಸಲಿದೆ ಎಂದು ಅಂದಾಜಿಸಲಾಗಿದೆ.
ಪಟೇಲ್ ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಿದ್ದ ಹಾರ್ದಿಕ್ ಪಟೇಲ್, ದಲಿತ ನಾಯಕ ಜಿಗ್ನೇಶ್ ಮೆವಾನಿ, ಹಿಂದುಳಿದ ವರ್ಗಗಳ ಮುಖ ಅಲ್ಪೇಶ್ ಥಾಕೂರ್ ಕಾಂಗ್ರೆಸ್ ಜೊತೆ ಸೇರಿಕೊಂಡು ಬಿಜೆಪಿಯ 22 ವರ್ಷಗಳ ಪಾರಪತ್ಯಕ್ಕೆ ಕೊನೆಯ ಮೊಳೆ ಹೊಡೆಯಲಿದ್ದಾರೆ ಎಂಬ ನಿರೀಕ್ಷೆ, ವಾದಗಳೆಲ್ಲಾ ಚಾಣಕ್ಯರ ಓಖಿ ಮುಂದೆ ಹುಸಿಯಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆ ಹೇಳಿದೆ.
Advertisement
Advertisement
ಉಳಿದೆಲ್ಲಾ ಚುನಾವಣೋತ್ತರ ಸಮೀಕ್ಷೆಗಳಿಗೆ ಹೋಲಿಸಿದರೆ ಟುಡೇಸ್ ಚಾಣಕ್ಯದ ಅಂದಾಜಿನಲ್ಲಿ ಬಿಜೆಪಿಗೆ ಪ್ರಚಂಡ ಬಹುಮತವನ್ನು ಊಹಿಸಲಾಗಿದೆ. 2012ರಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ನೋಟು ನಿಷೇಧ, ಜಿಎಸ್‍ಟಿ, ಗುಜರಾತ್ ಮಾದರಿ ಕುರಿತ ಪ್ರಶ್ನಾವಳಿ, ಟೀಕೆ-ಟಿಪ್ಪಣಿ, ಪಟೇಲ್ ಮೀಸಲಾತಿ ಹೋರಾಟಗಳ ಹೊರತಾಗಿಯೂ ಬಿಜೆಪಿ ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ 20 ಹೆಚ್ಚುವರಿ ಸ್ಥಾನಗಳನ್ನು ಬಾಚಿಕೊಳ್ಳಲಿದೆ ಎಂದು ಟುಡೇಸ್ ಚಾಣಕ್ಯ ಹೇಳಿದೆ.
Advertisement
Advertisement
ಇದೇ ಹೊತ್ತಲ್ಲಿ ದಣಿವರಿಯದ ಮೂರು ತಿಂಗಳ ಗುಜರಾತ್ ಚುನಾವಣಾ ಪ್ರಚಾರ, ದೇವಸ್ಥಾನದಿಂದ ದೇವಸ್ಥಾನದಿಂದ ಹೋಗಿ ಪೂಜೆ ಸಲ್ಲಿಸಿದರೂ ರುದ್ರಾಕ್ಷ ಮಾಲೆ ಧರಿಸಿದರೂ ಕಾಂಗ್ರೆಸ್ ಗೆ ನಯಾಪೈಸೆ ಲಾಭವಾಗಿಲ್ಲ. ಬದಲಿಗೆ ಬುಟ್ಟಿಯಲ್ಲಿದ್ದ ಶಾಸಕ ಕ್ಷೇತ್ರಗಳನ್ನು ಕಳೆದುಕೊಂಡು ಮೀಸೆಗೆ ಮಣ್ಣು ಮಾಡಿಕೊಳ್ಳಲಿದೆ. 2012ರಲ್ಲಿ 61 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‍ಗೆ ಈ ಬಾರಿ 14 ಸ್ಥಾನಗಳು ಕೈ ತಪ್ಪಿ 47 ಸ್ಥಾನಗಳಿಗಷ್ಟೇ ಸಂತೃಪ್ತವಾಗಬೇಕಿದೆ ಎನ್ನುವುದು ಕೂಡಾ ಟುಡೇಸ್ ಚಾಣಕ್ಯ ಲೆಕ್ಕಾಚಾರ.
ಹಾಗಾದರೆ, ಗುಜರಾತ್‍ನಲ್ಲಿ ಬಿಜೆಪಿಯ ನಿರೀಕ್ಷಿತ ಪ್ರಚಂಡ ಜಯ ಮತ್ತು ಕಾಂಗ್ರೆಸ್‍ನ ಘನಘೋರ ಸೋಲಿಗೆ ಕಾರಣ ಏನಿರಬಹುದು..? ಅದಕ್ಕೆ ಈ ಮೂರು ಪ್ರಶ್ನೆಗಳೇ ಉತ್ತರ ನೀಡುತ್ತವೆ.
1. ನಿಮ್ಮ ಮತ ಚಲಾವಣೆಯನ್ನು ನಿರ್ಧಾರ ಮಾಡುವುದು ಏನು..?
ಎ) ರಾಜಕೀಯ ಪಕ್ಷ ಮತ್ತು ಅಭ್ಯರ್ಥಿ – ಶೇಕಡಾ 34
ಬಿ) ಅಭಿವೃದ್ಧಿ – ಶೇಕಡಾ 35
ಸಿ) ಜಿಎಸ್‍ಟಿ – ಶೇಕಡಾ 18
ಡಿ) ಇತರೆ – ಶೇಕಡಾ 7
2. ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾಗಬೇಕೆಂದು ಬಯಸುತ್ತೀರಾ..?
ಎ) ಹೌದು – ಶೇಕಡಾ 31
ಬಿ) ಇಲ್ಲ – ಶೇಕಡಾ 58
3. ಹಾಲಿ ಮುಖ್ಯಮಂತ್ರಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು..?
ಎ) ಉತ್ತಮ – ಶೇಕಡಾ 29
ಬಿ) ಸರಾಸರಿ – ಶೇಕಡಾ 34
ಸಿ) ಕಳಪೆ – ಶೇಕಡಾ 24
ಗುಜರಾತ್‍ನಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಹಂಚಿಕೆಯಾಗಿರುವ ಜಾತಿವಾರು ಮತಗಳು ಎಷ್ಟು..?
ಪಟೇಲ್ ಸಮುದಾಯ: ಈ ಬಾರಿ ಗುಜರಾತ್‍ನಲ್ಲಿ ಕಾಂಗ್ರೆಸ್ ನೆಚ್ಚಿಕೊಂಡಿದ್ದು ಪಟೇಲ್ ಸಮುದಾಯವನ್ನು. ಅದೇ ಉಮೇದಿನಲ್ಲಿ ಹಾರ್ದಿಕ್ ಪಟೇಲ್ ಜೊತೆಗೆ ಸಖ್ಯವನ್ನೂ ಬೆಳೆಸಿತ್ತು. ಹಾಗಾದರೆ ಬಿಜೆಪಿಯ ಕಟ್ಟಾ ಬೆಂಬಲಿಗರಾಗಿರುವ ಪಾತಿದಾರರು ಕಮಲಕ್ಕೆ ಕೈ ಎತ್ತಿದ್ರಾ..? ಮುಳುಗುವ ಹಡಗಿನಂತಿದ್ದ ಕಾಂಗ್ರೆಸ್‍ಗೆ ಕಡೆ ಆಸರೆಯಾದ್ರಾ..? ಟುಡೇಸ್ ಚಾಣಕ್ಯ ಪ್ರಕಾರ ಪಟೇಲ್ ಸಮುದಾಯದ ಶೇಕಡಾ 54ರಷ್ಟು ಮತಗಳು ವಾಲಿರುವುದು ಮೋದಿಯತ್ತ. ಶೇಕಡಾ 37ರಷ್ಟು ಮಾತ್ರ ಪಟೇಲ್ ಮತವನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಯಶಸ್ವಿಯಾಗಿದೆ. ಉಳಿದ ಶೇಕಡಾ 5ರಷ್ಟು ಮತಗಳು ಇತರರಿಗೆ ದಕ್ಕಬಹುದು ಎಂದು ಸಮೀಕ್ಷೆ ಹೇಳಿದೆ.
ಮುಂದುವರಿದ ಜಾತಿಗಳು: ಇವರಲ್ಲಿ ಶೇಕಡಾ 58ರಷ್ಟು ಮಂದಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಅಂದಾಜಿಸಲಾಗಿದೆ. ಶೇಕಡಾ 32ರಷ್ಟು ಮತಗಳು ಕಾಂಗ್ರೆಸ್‍ಗೆ ದಕ್ಕಿರಬಹುದು. ಉಳಿದ ಶೇಕಡಾ 7ರಷ್ಟು ಇತರರಿಗೆ ಹೋಗಿರಬಹುದು ಎಂದು ಊಹಿಸಲಾಗಿದೆ.
ಎಸ್‍ಟಿ: ಈ ಸಮುದಾಯದಲ್ಲಿ ಶೇಕಡಾ 52ರಷ್ಟು ಬಿಜೆಪಿಗೆ ಶೇಕಡಾ 35ರಷ್ಟು ಕಾಂಗ್ರೆಸ್‍ಗೆ ಇತರರು ಶೇಕಡಾ 8ರಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಮುಸ್ಲಿಂ: ಶೇಕಡಾ 81ರಷ್ಟು ಮತಗಳು ಕಾಂಗ್ರೆಸ್‍ಗೆ ಸಿಕ್ಕಿರಬಹುದು. ಅತ್ಯಲ್ಪ ಅಂದ್ರೆ ಶೇಕಡಾ 11ರಷ್ಟು ಮುಸ್ಲಿಂ ಮತಗಳು ಬಿಜೆಪಿಗೆ ದಕ್ಕಿರಬಹುದು.
ಎಸ್‍ಸಿ: ಎಸ್‍ಸಿ ಸಮುದಾಯದಲ್ಲಿ ಶೇಕಡಾ 41ರಷ್ಟು ಮತಗಳು ಬಿಜೆಪಿಗೆ ಶೇಕಡಾ 46ರಷ್ಟು ಕಾಂಗ್ರೆಸ್‍ಗೆ ಶೇಕಡಾ 7ರಷ್ಟು ಮತಗಳು ಇತರರ ಪಾಲಾಗಿರಬಹುದು ಎಂದು ಊಹಿಸಲಾಗಿದೆ.
ಇತರೆ ಹಿಂದುಳಿದ ವರ್ಗ: ಶೇಕಡಾ 53ರಷ್ಟು ಒಬಿಸಿ ಮತಗಳು ಬಿಜೆಪಿಗೆ ಶೇಕಡಾ 30ರಷ್ಟು ಕಾಂಗ್ರೆಸ್‍ಗೆ ಶೇಕಡಾ 10ರಷ್ಟು ಇತರರಿಗೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಮತ ಗಳಿಕೆ ಲೆಕ್ಕಾಚಾರ: 2012ರಲ್ಲಿ ಬಿಜೆಪಿ ಪಡೆದಿದ್ದ ಶೇಕಡವಾರು ಮತ ಶೇಕಡಾ 47.19. ಆದರೆ ಈ ಬಾರಿ ಶೇಕಡಾ 49ರಷ್ಟು ಮತಗಳನ್ನು ಪಡೆಯಲಿದೆ ಎಂದು ಊಹಿಸಲಾಗಿದೆ. ಆದರೆ ಕಾಂಗ್ರೆಸ್ ಮತಗಳಿಕೆ 2012ರಲ್ಲಿದ್ದ ಶೇಕಡಾ 38.9ರಿಂದ ಶೇಕಡಾ 38ಕ್ಕೆ ಇಳಿಕೆಯಾಗಲಿದೆ. ಇತರೆ ಅಭ್ಯರ್ಥಿಗಳ ಮತ ಗಳಿಕೆ ಪ್ರಮಾಣ ಶೇಕಡಾ 13.2 ರಿಂದ ಶೇಕಡಾ 13ಕ್ಕೆ ಕುಸಿಯಲಿದೆ ಎಂದು ಟುಡೇಸ್ ಚಾಣಕ್ಯ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.