ಒಡಿಶಾ (Odisha) ಸರ್ಕಾರವು 2015 ರಲ್ಲಿ ಗೊತ್ತುಪಡಿಸಿದ ಕೆಲವು ಪ್ರದೇಶಗಳಲ್ಲಿ ಸಿಡಿಲಿನ ಹೊಡೆತಗಳಿಂದ (Lightning Strikes) ಉಂಟಾಗುವ ಸಾವಿನ ವಿರುದ್ಧ ಹೋರಾಡಲು 19 ಲಕ್ಷ ತಾಳೆ ಮರಗಳನ್ನು (Palm Trees) ನೆಡುವ ಪ್ರಸ್ತಾಪವನ್ನು ಅನುಮೋದಿಸಿತ್ತು. ಇದೀಗ ಆ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ಒಡಿಶಾ ಸರ್ಕಾರ ಮುಂದಾಗಿದೆ.
ಒಡಿಶಾದಲ್ಲಿ ಸಿಡಿಲಿಗೆ ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ?
ಕಳೆದ 11 ವರ್ಷಗಳಲ್ಲಿ ಒಟ್ಟು 3,790 ಜನರು ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದಾರೆ. ಹಿಂದಿನ ಮೂರು ವರ್ಷಗಳಲ್ಲಿ 791 ಮಂದಿ ಸಿಡಿಲಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಸೆಪ್ಟೆಂಬರ್ 2, 2023 ರಂದು 2 ಗಂಟೆಗಳ ಮಧ್ಯಂತರದಲ್ಲಿ 61,000 ಸಿಡಿಲುಗಳು ಒಡಿಶಾದಲ್ಲಿ ಬಡಿದಿವೆ. ಇದರಲ್ಲಿ ಕನಿಷ್ಠ 12 ಜನ ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ವರದಿ ಬಿಡುಗಡೆ ಮಾಡಿದೆ.
Advertisement
Advertisement
2021-22ರಲ್ಲಿ ಸಿಡಿಲು ಬಡಿದು 282, 2022-23ರಲ್ಲಿ 297 ಮತ್ತು 2023-24ರಲ್ಲಿ 212 ಮಂದಿ ಸಾವನ್ನಪ್ಪಿದ್ದಾರೆ. ಮಯೂರ್‌ಭಂಜ್, ಕಿಯೋಂಜರ್, ಬಾಲಸೋರ್, ಭದ್ರಕ್, ಗಂಜಾಂ, ಧೆಂಕನಲ್, ಕಟಕ್, ಸುಂದರ್‌ಗಢ, ಕೊರಾಪುಟ್ ಮತ್ತು ನಬರಂಗಪುರದಂತಹ ಜಿಲ್ಲೆಗಳಲ್ಲಿ ಸಿಡಿಲು-ಸಂಬಂಧಿತ ಸಾವುನೋವುಗಳು ಹೆಚ್ಚು ವರದಿಯಾಗಿವೆ.
Advertisement
ಒಡಿಶಾದಲ್ಲಿ ಮಿಂಚಿನ ದಾಳಿ ಏಕೆ ಹೆಚ್ಚು?
ವೈಜ್ಞಾನಿಕವಾಗಿ, ಮಿಂಚು ವಾತಾವರಣದಲ್ಲಿನ ವಿದ್ಯುಚ್ಛಕ್ತಿಯ ಕ್ಷಿಪ್ರ ಮತ್ತು ಬೃಹತ್ ಶಕ್ತಿಯಾಗಿದೆ. ಇದು ಭೂಮಿಯ ಕಡೆಗೆ ಚಲಿಸಿ ಅಪ್ಪಳಿಸಿದಾಗ ಸಿಡಿಲಿನ ಅವಘಡಗಳು ಸಂಭವಿಸುತ್ತವೆ. ಒಡಿಶಾ ಉಷ್ಣವಲಯದ ವಲಯದಲ್ಲಿ ನೆಲೆಗೊಂಡಿರುವ ಪೂರ್ವ ಕರಾವಳಿ ರಾಜ್ಯವಾಗಿದ್ದು, ಅದರ ಬಿಸಿ, ಶುಷ್ಕ ಹವಾಮಾನವು ಮಿಂಚಿನ ಹೊಡೆತಗಳು ಹೆಚ್ಚಾಗಲು ಕಾರಣವಾಗಿದೆ.
Advertisement
ಬಾಲಸೋರ್‌ನ ಫಕೀರ್ ಮೋಹನ್ ವಿಶ್ವವಿದ್ಯಾನಿಲಯದ ಭೌಗೋಳಿಕ ಪ್ರಾಧ್ಯಾಪಕ ಮನೋರಂಜನ್ ಮಿಶ್ರಾ ಅವರು, ಪ್ರತಿಕೂಲ ಹವಾಮಾನದಿಂದ ಒಡಿಶಾ ಮಿಂಚಿನ ದಾಳಿಗೆ ಒಳಗಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಮುದ್ರದ ತಾಪಮಾನ ಮತ್ತು ಸೈಕ್ಲೋನ್‌ನಿಂದಾಗಿ ಮಿಂಚಿನ ದಾಳಿ ಹೆಚ್ಚಾಗಲು ಕಾರಣ ಎಂದು ಹೇಳಿಕೊಂಡಿದ್ದಾರೆ.
ಹವಾಮಾನ ಬದಲಾವಣೆಯ ಪಾತ್ರವೇನು?
IMD ಯ ʻ ಕ್ಲೈಮೇಟ್ ಚೇಂಜ್ & ಇನ್ಸಿಡೆನ್ಸ್ ಆಫ್ ಲೈಟ್ನಿಂಗ್ ಇನ್ ಒಡಿಶಾ: ಆನ್ ಎಕ್ಸ್‌ಪ್ಲೋರೇಟರಿ ರಿಸರ್ಚ್ʼ ಎಂಬ ಸಂಶೋಧನಾ ಪ್ರಬಂಧವು ಹವಾಮಾನ ಬದಲಾವಣೆಯು ಮಿಂಚಿನ ಹೊಡೆತಗಳನ್ನು ತೀವ್ರಗೊಳಿಸುತ್ತಿದೆ ಎಂದು ಉಲ್ಲೇಖಿಸಿದೆ. ದೀರ್ಘಾವಧಿಯ ಉಷ್ಣತೆಯ ಪ್ರತಿ ಒಂದು ಡಿಗ್ರಿ ಸೆಲ್ಸಿಯಸ್‌ಗೆ, ಮಿಂಚಿನ ಚಟುವಟಿಕೆಯಲ್ಲಿ ಸುಮಾರು 10% ಹೆಚ್ಚಳ ಮಾಡುವ ಶಕ್ತಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಗಮನಾರ್ಹ ವಿಚಾರವೆಂದರೆ ಕಳೆದೆರಡು ವರ್ಷಗಳಿಂದ ವಿಶ್ವದಾದ್ಯಂತ ತಾಪಮಾನ ಹೆಚ್ಚುತ್ತಿವೆ.
ಸಿಡಿಲಿನಿಂದ ಯಾರು ಅಪಾಯದಲ್ಲಿದ್ದಾರೆ?
ಗ್ರಾಮೀಣ ಪ್ರದೇಶಗಳಲ್ಲಿ 96% ರಷ್ಟು ಮಿಂಚಿನ ದಾಳಿಯಿಂದ ರೈತರು ಮತ್ತು ಕೃಷಿ ಕಾರ್ಮಿಕರಂತಹ ದಿನಗೂಲಿ ಕಾಮಿಕರು ಅಪಾಯ ಎದುರಿಸುತ್ತಿದ್ದಾರೆ. ಒಡಿಶಾ ಜನಸಂಖ್ಯೆಯ 80% ಕ್ಕಿಂತ ಹೆಚ್ಚು ಜನರು ಕೃಷಿ ಮತ್ತು ಇತರ ಸಂಬಂಧಿತ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ. ಅವರೆಲ್ಲ ತೆರೆದ ಮೈದಾನದಲ್ಲಿ ದೀರ್ಘಕಾಲ ಕೆಲಸ ಮಾಡುತ್ತಾರೆ. ಇದರಿಂದಾಗಿ ಅವರು ಮಿಂಚಿನ ದಾಳಿಗೆ ಗುರಿಯಾಗುತ್ತಾರೆ. ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಹೆಚ್ಚಿನ ಮಿಂಚಿನ ಹೊಡೆತಗಳು ಸಂಭವಿಸಿದರೂ, ಹೆಚ್ಚಿನ ಸಾವುಗಳು ಜೂನ್ ಮತ್ತು ಅಕ್ಟೋಬರ್ ನಡುವಿನ ಗರಿಷ್ಠ ಕೃಷಿ ಋತುವಿನಲ್ಲಿ ವರದಿಯಾಗಿದೆ.
ಸಿಡಿಲಿನ ಹೊಡೆತದಿಂದ ಒಡಿಶಾ ತನ್ನನ್ನು ಹೇಗೆ ರಕ್ಷಿಸಿಕೊಳ್ಳಲು ಮುಂದಾಗಿದೆ?
ತಾಳೆ ಮರಗಳು ಮಿಂಚಿನ ವಾಹಕಗಳಾಗಿದ್ದು, ಅವುಗಳನ್ನು ಬೆಳೆಸುವ ಮೂಲಕ ಸಿಡಿಲಿನಿಂದ ಜನರನ್ನು ರಕ್ಷಿಸುವ ಕಾರ್ಯಕ್ಕೆ ಒಡಿಶಾ ಮುಂದಾಗಿದೆ. ತಾಳೆ ಮರಗಳು ಅವುಗಳ ಎತ್ತರ, ಹೆಚ್ಚಿನ ತೇವಾಂಶದಿಂದ ಮಿಂಚನ್ನು ಹೀರಿಕೊಳ್ಳುತ್ತವೆ ಮತ್ತು ನೆಲದ ಮೇಲೆ ಅದರ ನೇರ ಪರಿಣಾಮವನ್ನು ಕಡಿಮೆ ಮಾಡಬಹುದು.
ಇದೇ ಕಾರಣಕ್ಕೆ ಸರ್ಕಾರ ಪಾಮ್ ಗಿಡಗಳನ್ನು ನೆಡಲು ಉದ್ದೇಶಿತ ಯೋಜನೆಗೆ 7 ಕೋಟಿ ರೂ. ಮೀಸಲಿಟ್ಟಿದೆ. ಅಲ್ಲದೇ ರಾಜ್ಯವು ಈಗಿರುವ ತಾಳೆ ಮರಗಳನ್ನು ಮತ್ತು ಎತ್ತರದ ಮರಗಳನ್ನು ಕಡಿಯುವುದನ್ನು ನಿಷೇಧಿಸಿದೆ. ಆರಂಭದಲ್ಲಿ 19 ಲಕ್ಷ ತಾಳೆ ಮರಗಳನ್ನು ಅರಣ್ಯಗಳ ಗಡಿಯಲ್ಲಿ ನೆಡಲು ಮುಂದಾಗಿದೆ.
ಯೋಜನೆಗೆ ತಜ್ಞರು ಕಳವಳವೇನು?
ಈ ಯೋಜನೆ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಒಂದು ತಾಳೆ ಮರವು 20 ಅಡಿ ಎತ್ತರವನ್ನು ತಲುಪಲು ಕನಿಷ್ಠ 15 ರಿಂದ 20 ವರ್ಷಗಳು ಬೇಕಾಗುತ್ತದೆ. ಅಲ್ಲದೇ ಸಿಡಿಲು ಬಡಿದ ನಂತರ ಕೆಲವು ಮರಗಳಿಗೆ ಬೆಂಕಿ ಬೀಳುವ ಆತಂಕವೂ ಇದೆ. ಇದೊಂದೆ ಯೋಜನೆಯಲ್ಲದೇ ಬೇರೆ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.