ಭಾರತದ ಸಾಂಪ್ರದಾಯಿಕ ಪಕ್ಷಗಳಲ್ಲಿ ಹೆಬ್ಬಕ (Great Indian bustard) ಕೂಡ ಒಂದು. ಈಗ ಅದು ಅಪರೂಪದ ಪಕ್ಷಿಯಾಗಿದೆ. ಹುಲ್ಲುಗಾವಲು ಮತ್ತು ಕುರುಚಲು ಗಿಡಗಳಿರುವ ಪ್ರದೇಶಗಳಲ್ಲಿ ವಾಸಿಸುವ ಇವುಗಳ ಸಂತತಿ ವರ್ಷದಿಂದ ವರ್ಷಕ್ಕೆ ಅಳಿಯುತ್ತಲೇ ಬರುತ್ತಿದೆ. ಆದ್ರೆ ಇವುಗಳಿರುವ ಪ್ರದೇಶಗಳಲ್ಲಿ ಸರ್ಕಾರ ಗೋಪುರಗಳನ್ನು ನಿರ್ಮಿಸುತ್ತಾ ಹಲವು ಶಿಬಿರಗಳನ್ನು (Birds Camp) ನಡೆಸುತ್ತಿದೆ ಅನ್ನೋ ಆರೋಪ ಕೇಳಿಬಂದಿತ್ತು. ಇದರಿಂದ ಪಕ್ಷಿಗಳ ಸಂತತಿ ಕಡಿಮೆಯಾಗುತ್ತಿದೆ, ಈ ಕುರಿತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಪಕ್ಷಿ ತಜ್ಞರು ಹಾಗೂ ವನ್ಯಜೀವಿ ತಜ್ಞರಿಂದ ಕೇಳಿಬರುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಹೆಬ್ಬಕ (ಗ್ರೇಟ್ ಇಂಡಿಯನ್ ಬಸ್ಟರ್ಡ್ – ಜಿಐಬಿ) ಸಂರಕ್ಷಣೆಗೆ ಒತ್ತು ನೀಡಿದೆ.
2025ರ ಡಿಸೆಂಬರ್ 19 ರಂದು ಸುಪ್ರೀಂ ಕೋರ್ಟ್ ಪ್ರಕಟಿಸಿದ ಆದೇಶದಲ್ಲಿ, ಹೆಬ್ಬಕಗಳ ಸಮಸ್ಯೆ ಪರಿಹರಿಸುವ ಹಾಗೂ ವಿದ್ಯುತ್ ಮಾರ್ಗಗಳಲ್ಲಿ ಡಿಕ್ಕಿ ಹೊಡೆದು ಸಾವನ್ನಪ್ಪುತ್ತಿರುವುದನ್ನ ತಡೆಗಟ್ಟುವಂತೆ ಸೂಚಿಸಿತ್ತು. ವನ್ಯಜೀವಿ, ಸಂರಕ್ಷಣೆ ಮತ್ತು ವಿದ್ಯುತ್ ವಲಯದ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಕೋರ್ಟ್ ಅಳಿವಿನ ಅಂಚಿನಲ್ಲಿರುವ ಪಕ್ಞಿಗಳಿಗಾಗಿ ಆದ್ಯತೆಯ ಪ್ರದೇಶಗಳನ್ನೂ ಗುರುತಿಸಿತು. ಜೊತೆಗೆ ವಿದ್ಯುತ್ ಮಾರ್ಗಗಳನ್ನ ಬದಲಿಸಲು ಕಾರ್ಯವಿಧಾನ ರೂಪಿಸುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್‌ನ ಈ ಕ್ರಮದಿಂದ ಬೃಹತ್ ಗಾತ್ರ ಪ್ರಭೇಧವು ಗುಜರಾತ್ ಹಾಗೂ ರಾಜಸ್ಥಾನಗಳಲ್ಲಿರುವ ಪಕ್ಷಿಗಳ ಸಂರಕ್ಷಣೆಗೆ ಒತ್ತು ನೀಡಿದಂತಾಗಿದೆ.

ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ.. ಅದಕ್ಕೂ ಮುನ್ನ ಹೆಬ್ಬಕದ ವಿಶೇಷತೆ ಏನು? ಭಾರತದಲ್ಲಿ ಇದರ ಸಂತತಿ ಹೇಗಿದೆ? ಇವುಗಳ ಸಂಖ್ಯೆ ಎಷ್ಟಿದೆ? ಎಂಬುದನ್ನ ತಿಳಿಯೋಣ..
ಹೆಬ್ಬಕದ ವಿಶೇಷತೆ ಏನು?
ಭಾರತದ ಒಣ ಹುಲ್ಲುಗಾವಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಹೆಬ್ಬಕ, ದೊಡ್ಡ ಗಾತ್ರದ & ಭಾರವಾದ ಪಕ್ಷಿ. ಸುಮಾರು ಒಂದು ಮೀಟರ್ ಎತ್ತರ, ಉದ್ದನೆಯ ಕಾಲುಗಳು, ಉದ್ದನೆಯ ಕತ್ತು ಹೊಂದಿದೆ. ದೇಹದ ಮೇಲ್ಭಾಗ ಕಂದು ಬಣ್ಣ, ಕೆಳಭಾಗ ಮತ್ತು ಕುತ್ತಿಗೆ ಮುಖ ಮಾಸಲು ಬಿಳಿ ಬಣ್ಣ, ಕಪ್ಪು ಬಣ್ಣದ ತಲೆ ಇವುಗಳಿಗಿದೆ. ಹೆಣ್ಣು ಹಕ್ಕಿ ಗಾತ್ರದಲ್ಲಿ ತುಸು ಸಣ್ಣದು. ಕಾಳುಗಳು, ಬೀಜಗಳು, ಕೀಟಗಳು ಇದರ ಮುಖ್ಯ ಆಹಾರ. ಇಲಿ, ಹಾವುಗಳನ್ನೂ ತಿನ್ನಬಲ್ಲದು. ಮಾರ್ಚ್ ನಿಂದ ಸೆಪ್ಟೆಂಬರ್ ವರೆಗೆ ಇದರ ಸಂತಾನೋತ್ಪತ್ತಿ ಸಮಯ. ಆ ಸಮಯದಲ್ಲಿ ಗಂಡು ತನ್ನ ಕತ್ತಿನ ಭಾಗದಲ್ಲಿರುವ ಗೌಲಾರ್ ಪೌಚ್ ಎಂಬ ಚೀಲದಂತಹ ಅಂಗವನ್ನ ಉಬ್ಬಿಸಿ, ದೊಡ್ಡ ಕೂಗಿನಿಂದ ಹೆಣ್ಣನ್ನು ಆಕರ್ಷಿಸುತ್ತದೆ. ಹೆಣ್ಣು ಹಕ್ಕಿಯು ನೆಲದಲ್ಲಿ ಮಾಡಿದ ಗೂಡಿನಲ್ಲಿ ಒಂದೇ ಮೊಟ್ಟೆಯನ್ನಿಟ್ಟು ಪೋಷಿಸಿ ಮರಿ ಮಾಡಿ ಬೆಳೆಸುತ್ತವೆ. ಮಾನವರು ಈ ಪಕ್ಷಿಯನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಬೇಟೆಯಾಡುವುದು, ವಾಸಸ್ಥಳದ ಅಭಾವ ಮೊದಲಾದ ಕಾರಣಗಳಿಂದ ಈ ಹಕ್ಕಿಯು ಈಗ ಅಳಿವಿನಂಚಿನಲ್ಲಿದೆ. ಆದ್ದರಿಂದ ರಕ್ಷಿತ ಹಕ್ಕಿಗಳ ಪಟ್ಟಿಯಲ್ಲಿದೆ.

ಭಾರತದಲ್ಲಿ ಹೆಬ್ಬಕಗಳ ಸಂತತಿ ಹೇಗಿದೆ?
1969 ರಲ್ಲಿ 1,260 ಇದ್ದ ಹೆಬ್ಬಕಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ. 1978 ರಲ್ಲಿ 745, 2001 ರಲ್ಲಿ 600, 2006 ರಲ್ಲಿ 300 ಮತ್ತು 2018 ರಲ್ಲಿ 150 ಪಕ್ಷಗಳು ಕಾಣಿಸಿಕೊಂಡಿವೆ. ಆ ಪೈಕಿ ರಾಜಸ್ಥಾನದಲ್ಲಿ 100, ಗುಜರಾತ್‌ನಲ್ಲಿ 25, ಮಹಾರಾಷ್ಟ್ರದಲ್ಲಿ 1, ಕರ್ನಾಟಕ ಮತ್ತು ಅವಿಭಜಿತ ಆಂಧ್ರ ಪ್ರದೇಶದಲ್ಲಿ ತಲಾ 6 ಪಕ್ಷಿಗಳು ಕಂಡುಬಂದಿವೆ. ಆದ್ರೆ ಮಧ್ಯ ಪ್ರದೇಶದಲ್ಲಿ ಇದ್ದ ಸಂತತಿ ಸಂಪೂರ್ಣ ನಾಶವಾಗಿದೆ ಅನ್ನೋದು 2018 ರ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೆಬ್ಬಕಗಳಿಗೆ ಮಾರಕ ಏನು ಅಂತ ನೋಡೊದಾದ್ರೆ, ಇವು ಭಾರವಾದ ದೇಹಗಳನ್ನು ಹೊಂದಿರುವುದರಿಂದ ಕೆಳ ಭಾಗದಲ್ಲಿ ಹಾರುತ್ತವೆ. ಅವುಗಳ ದೃಷ್ಟಿ ವ್ಯಾಪ್ತಿ ಸೀಮಿತವಾಗಿರುತ್ತವೆ. ಹಾಗಾಗಿ ಅವು ವಿದ್ಯುತ್ ತಂತಿಗಳಿಗೆ ಸಿಕ್ಕಿ ಸಾಯುತ್ತಿವೆ.
ಸುಪ್ರೀಂ ಗಮನ ಸೆಳೆದ ಪರಿಸರ ವಾದಿ
ನಿವೃತ್ತ ಅಧಿಕಾರಿ ಹಾಗೂ ಪರಿಸರವಾದಿ ಎಂ.ಕೆ ರಂಜಿತ್ ಸಿನ್ಹಾ ಅವರು ಅಳಿವಿನ ಅಂಚಿನಲ್ಲಿರುವ ಈ ಗ್ರೇಟ್ ಇಂಡಿಯನ್ ಬಸ್ಟರ್ಡ್ (ಜಿಐಬಿ) ಪ್ರಭೇದಗಳನ್ನ ಸಂರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು 2019ರಲ್ಲಿ ಕೋರ್ಟ್ ಮೊರೆ ಹೋಗಿದ್ದರು. 2018ರಲ್ಲಿ ಕೊನೇ ಬಾರಿಗೆ ನಡೆದ ಸಮೀಕ್ಷೆ ಪ್ರಕಾರ ಹೆಬ್ಬಕ ಸಂತತಿ 150 ಮಾತ್ರ ಇದ್ದು, ಅದೂ ಕ್ಷೀಣಿಸುತ್ತಿದೆ. ನವೀಕರಿಸಬುದಾದ ಇಂಧನ ಯೋಜನೆಗಳು ಹಾಗೂ ಹೊಸ ಹೊಸ ವಿದ್ಯುತ್ ಪ್ರಸರಣ ಮಾರ್ಗಗಳಲ್ಲಿ ಆಗಾಗ್ಗೆ ತಂತುಗಳಿಗೆ ತಾಕಿ ಸಾವನ್ನಪ್ಪುತ್ತಿವೆ. ಇದು ಅವುಗಳ ಸಂತತಿ ಕುಸಿಯುವಂತೆ ಮಾಡಿದೆ ಎಂದು ಸಿನ್ಹಾ ಕೋರ್ಟ್ ಗಮನ ಸೆಳೆದಿದ್ದರು.

ಅಷ್ಟೇ ಅಲ್ಲದೇ ಜಿಐಬಿ ಭಾರವಾದ ದೇಹ ಹೊಂದಿರುವುದರಿಂದ ಹೆಚ್ಚು ದೂರ ಸಾಗಲು ಕಷ್ಟವಾಗುತ್ತದೆ. ಇರುವ ಮಾರ್ಗಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಾಗುತ್ತಿದೆ, ಇದು ಅವುಗಳ ಸಾವಿಗೆ ಕಾರಣವಾಗುತ್ತಿದೆ. 2018ರ ʻಪವರ್ ಲೈನ್ ಮಿಟಿಗೇಷನ್ʼ ವರದಿಯಲ್ಲಿ ಭಾರತೀಯ ವನ್ಯಜೀವಿ ಸಂಸ್ಥೆಯ ಅಧಿಕಾರಿಗಳು, ವಿದ್ಯುತ್ ಮಾರ್ಗಗಳಿಂದ ಜಿಐಬಿ ಸಾವು ತಡೆಯದಿದ್ದರೆ ಅವುಗಳ ಸಂತತಿ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ ಎಂಬ ಅಂಶ ಉಲ್ಲೇಖಿಸಿದ್ದನ್ನ ಕೋರ್ಟ್ ಗಮನಕ್ಕೆ ತಂದಿದ್ದರು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಅರ್ಜಿದಾರರ ವಾದದ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದ ಸುಪ್ರೀಂ ಕೋರ್ಟ್ ಹೆಬ್ಬಕಗಳ ಆವಾಸ ಸ್ಥಾನಗಳಲ್ಲಿ ಹೊಸ ವಿದ್ಯುತ್ ಯೋಜನೆಗಳ ಮೇಲೆ ನಿರ್ಬಂಧ ವಿಧಿಸಿತು. 2021 ಮತ್ತು 2024ರ ವರೆಗೆ ಪ್ರಮುಖ ಆದೇಶಗಳನ್ನೂ ಕಟಿಸಿತು. ಮೊದಲನೆಯದ್ದಾಗಿ, 99,000 ಚದರ ಕಿಮೀಗಳಲ್ಲಿ ಹೊಸ ಓವರ್‌ಹೆಡ್ ಟ್ರಾನ್ಸ್‌ಮಿಷನ್ ಲೈನ್‌ಗಳನ್ನ ನಿಷೇಧಿಸಿತು. ಜೊತೆಗೆ ಭೂಮಿಯೊಳಗೆ ಹೈವೋಲ್ಟೇಜ್ ವಿದ್ಯುತ್ ಮಾರ್ಗಗಳ ಸ್ಥಾಪನೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನ ಸಮಿತಿ ನಿರ್ಣಯಕ್ಕೆ ಬಿಟ್ಟಿತು. ಜೊತೆಗೆ ಪಕ್ಷಿಗಳ ಡೈವರ್ಟರ್‌ಗಳನ್ನ (ವಿದ್ಯುತ್ ಮಾರ್ಗಗಳು ಗೋಚರವಾಗುವಂತೆ ಮಾಡಿ ಪಕ್ಷಿಗಳನ್ನು ಬೇರೆಡೆಗೆ ತಿರುಗಿಸುವ ಸಾಧನ) ಸ್ಥಾಪಿಸಲು ಒತ್ತಾಯಿತು. ಆದ್ರೆ 2024ರಲ್ಲಿ ಕೋರ್ಟ್ ತನ್ನ ಆದೇಶದಲ್ಲಿ ಮಾರ್ಪಾಡು ತಂದಿತು. ತಜ್ಞರ ಸಮಿತಿಯೊಂದನ್ನ ನೇಮಿಸಿ, ಜಿಐಬಿ ಆದ್ಯತೆಯ ಪ್ರದೇಶಗಳಲ್ಲಿ ವಿದ್ಯುತ್ ಲೇನ್‌ಗಳ ವ್ಯಾಪ್ತಿಯನ್ನ ಹೇಗೆ ಸರಿಹೊಂದಿಸಬೇಕು? ಪಕ್ಷಿಯ ದೀರ್ಘಕಾಲಿನ ಉಳಿವಿಗೆ ಏನೇನು ಕ್ರಮಗಳನ್ನ ಕೈಗೊಳ್ಳಬೇಕು ಅನ್ನೋದನ್ನ ನಿರ್ವಹಿಸಲು ಸಮಿತಿಗೆ ನಿರ್ದೇಶನ ನೀಡಿತು.

ಇದರೊಂದಿಗೆ ವಿದ್ಯುತ್ ಕಾರಿಡಾರ್‌ಗಳ ಮೂಲಕ ಹೊರತುಪಡಿಸಿ (11 ಕೆವಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯಗಳನ್ನು ಹೊರತುಪಡಿಸಿ) ಯಾವುದೇ ಹೊಸ ಓವರ್‌ಹೆಡ್ ವಿದ್ಯುತ್ ಮಾರ್ಗಗಳು ಆದ್ಯತೆಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಪರಿಷ್ಕೃತ ಆದ್ಯತೆಯ ಪ್ರದೇಶಗಳಲ್ಲಿ 2 ಮೆಗಾವ್ಯಾಟ್ ಮೀರಿದ ಸಾಮರ್ಥ್ಯವಿರುವ ಹೊಸ ಸೌರ ಉದ್ಯಾನವನಗಳು/ಸ್ಥಾವರಗಳು ಮತ್ತು ಅಸ್ತಿತ್ವದಲ್ಲಿರುವ ಸೌರ ಉದ್ಯಾನವನಗಳ ವಿಸ್ತರಣೆಯನ್ನು ಸಹ ಇದು ನಿಷೇಧಿಸಿದ್ದು, ವೋಲ್ಟೇಜ್ ಪ್ರಮಾಣವನ್ನು ತಗ್ಗಿಸುವಂತೆ ಸೂಚಿಸಿದೆ.
ಕೋರ್ಟ್ ಅಂತಿಮವಾಗಿ ಹೇಳಿದ್ದೇನು?
ಸುಪ್ರೀಂ ನೇಮಿತಿಸಿದ ತಜ್ಞರ ಸಮಿತಿಯು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಭೇಟಿ ನೀಡಿದ ಪ್ರದೇಶಗಳು ಹಾಗೂ ಸಮಾಲೋಚನೆ ನಡೆಸಿದವರ ಆಧಾರದ ಮೇಲೆ ವರದಿಯೊಂದನ್ನ ಸಿದ್ಧಪಡಿಸಿತು. ಸಂರಕ್ಷಣೆಗೆ ಮೂರು ಪ್ರದೇಶಗಳು ಸೂಕ್ತವೆಂದು ವರದಿ ನೀಡಿತು. ಈ ಪ್ರದೇಶಗಳಲ್ಲಿ ವಿದ್ಯುತ್ ಯೋಜನೆಯ ಮಾಪಾರ್ಡುಗಳಿಗೆ ಸಲಹೆ ನೀಡಿತು. ಸಮಿತಿ ವರದಿ ಒಪ್ಪಿದ ಸುಪ್ರೀಂ ಹೆಬ್ಬಕಗಳ ಸಂರಕ್ಷಣಾ ವ್ಯಾಪ್ತಿಯನ್ನ 13,163 ಚದರ ಕಿ.ಮೀ.ನಿಂದ 14,013 ಚದರ ಕಿ.ಮೀ.ಗೆ ಹೆಚ್ಚಿಸಿತು.

ಮರುಭೂಮಿ ರಾಷ್ಟ್ರೀಯ ಉದ್ಯಾನವನ, ಸಲ್ಖಾ-ಕುಚ್ರಿ ಪ್ರದೇಶ, ಸಾನು-ಮೊಕ್ಲಾ-ಪರೇವಾರ್, ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್, ರಾಮದೇವ್ರಾದ ಬಫರ್ ಪ್ರದೇಶಗಳು ಮತ್ತು PFFR ನ ಪೂರ್ವ ಪರಿಧಿ, ಧೋಲಿಯಾ, ಖೇಟೋಲೈ ಮತ್ತು ಚಾಚಾ ಮುಂತಾದ ನಿರ್ಣಾಯಕ ತಾಣಗಳನ್ನ ಹೆಬ್ಬಕಗಳ ಆದ್ಯತೆಯ ಪ್ರದೇಶಗಳಾಗಿ ಘೋಷಿಸಿತು.
ಕೋರ್ಟ್ ಯಾವ ಸಂರಕ್ಷಣಾ ಕ್ರಮ ಸೂಚಿಸಿದೆ?
* ಹೆಬ್ಬಕ ಸಂರಕ್ಷಣೆಗೆ ಹುಲ್ಲುಗಾವಲು ಪರಿಸರ ವ್ಯವಸ್ಥೆಯನ್ನ ಪುನಃ ಸ್ಥಾಪಿಸುವುದು, ಸಂರಕ್ಷಣೆಗೆ ಒತ್ತು ನೀಡುವುದು
* ಹೊರಗಿನ ಆವಾಸಸ್ಥಾನಗಳಲ್ಲಿ ಮೊಟ್ಟೆಗಳಿಂದ ಕೃತಕ ಸಂತಾನೋತ್ಪತ್ತಿಗೆ ಒತ್ತು ನೀಡುವುದು.
* ನಾಯಿಗಳು ಹಾಗೂ ಇತರ ಪರಭಕ್ಷಕಳಿಂದ ಅವುಗಳನ್ನು ರಕ್ಚಣೆ ಮಾಡುವುದು, ಆಹಾರ ಮತ್ತು ನೀರಿನ ಕೊರತೆ ಆಗದಂತೆ ಗಮನಹರಿಸುವುದು
* ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡಿಲು ಜಂಪ್‌ಸ್ಟಾರ್ಟ್ ವಿಧಾನ ಅಳವಡಿಸುವುದು. ಇದರಿಂದ ಹೆಣ್ಣು ಹೆಬ್ಬಕ ಕಾವು ಕೊಡಲು ಅನುವು ಮಾಡಿಕೊಟ್ಟಂತಾಗುತ್ತದೆ. ಅದಕ್ಕಾಗಿ ಜಿಪಿಎಸ್ ಟ್ರ್ಯಾಕರ್‌ಗಳನ್ನ ಅಳವಡಿಸುವಂತೆ ಸೂಚಿಸಿದೆ.

