ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಯಾಕೆ ವಿರೋಧಿಸಬೇಕು? ದೇಶದ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಭಾಷೆಗಳು ಹೇಗೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಕನ್ನಡಿಗರೊಬ್ಬರು ಹಿಂದಿಯಲ್ಲಿ ವಿವರಿಸುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉದ್ಯಮಿ ಪ್ರಶಾಂತ್ ಸಂಬರ್ಗಿ ಅವರು ಈ ವಿಡಿಯೋದಲ್ಲಿ ಮಾತನಾಡಿ ಬೆಂಗಳೂರಿನಲ್ಲಿ ನೆಲೆಸಿರುವ ಹೊರ ರಾಜ್ಯದವರಿಗೆ ಕನ್ನಡ ಕಲಿಯುವಂತೆ ಮನವಿ ಮಾಡಿದ್ದಾರೆ.
Advertisement
ವಿಡಿಯೋದಲ್ಲಿ ಹೇಳಿದ್ದೇನು?
ನಾನು ಯಾವುದೇ ಪಕ್ಷಕ್ಕೆ ಸೇರಿದ ವ್ಯಕ್ತಿಯಲ್ಲ. ಯಾವುದೇ ರಾಜಕೀಯ ಉದ್ದೇಶವೂ ನನಗೆ ಇಲ್ಲ. ಮೆಟ್ರೋವನ್ನು ನಾವು ಪ್ರೀತಿಯಿಂದ ‘ನಮ್ಮ ಮೆಟ್ರೋ’ ಎಂದು ಕರೆದಿದ್ದೇವೆ. ಆದರೆ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿದ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಕಳೆದ 70 ವರ್ಷಗಳಿಂದ ಕೇಂದ್ರ ಸರ್ಕಾರಗಳು ಹಿಂದಿ ಅಭಿವೃದ್ಧಿಗೆ 1700 ಕೋಟಿ ರೂ. ಅನುದಾನ ಕೊಟ್ಟಿದೆ.
Advertisement
ಪ್ರಾದೇಶಿಕ ಭಾಷೆಗಳು ನಮ್ಮ ನಾಡಿನ ಸೊಬಗು. ಭಾರತದ ವಿವಿಧತೆಯಲ್ಲಿ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದೆ. ಆದರೆ ಹಿಂದಿ ದಬ್ಬಾಳಿಕೆಯಿಂದ ವೈವಿಧ್ಯತೆಯಲ್ಲಿ ಏಕತೆಯ ಬದಲು ಮೂರ್ಖತೆಯಲ್ಲಿ ಏಕತೆ ಕಾಣುತ್ತಿದ್ದೇವೆ. ಬಿಹಾರದ ಮೈಥಿಲಿ, ಗುಜರಾತಿನ ಸಿಂಧಿ, ಅಸ್ಸಾಮಿನ ಬೋಡೋ ಭಾಷೆಯನ್ನು ಈಗಾಗಲೇ ಕೊಲ್ಲಲಾಗಿದೆ.
Advertisement
ಕನ್ನಡ ಹೇಗೆ ಸಾಯುತ್ತದೆ ಎಂದು ನೀವು ಕೇಳಬಹುದು. 18ನೇ ಶತಮಾನದಲ್ಲಿ ಚಾರ್ಲ್ಸ್ ಡಾರ್ವಿನ್ ವಿಕಾಸವಾದ ನಿಮಗೆ ತಿಳಿದಿರಬಹುದು. ಮನುಷ್ಯನಿಗೂ ಮಂಗನಂತೆ ಬಾಲ ಇತ್ತು. ಆದರೆ ನಾವು ಅದನ್ನು ಬಳಸಲಿಲ್ಲ. ಹೀಗಾಗಿ ಬಾಲ ಮಾಯವಾಗಿದೆ ಎನ್ನುವ ವಿಕಾಸವಾದ ಪ್ರಾದೇಶಿಕ ಭಾಷೆಗಳಿಗೂ ಅನ್ವಯವಾಗುತ್ತದೆ. ಹಿಂದಿ ಹೇರಿಕೆ ಜಾಸ್ತಿಯಾಗಿ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾದರೆ ಈ ಭಾಷೆಗಳು ಕಣ್ಮರೆಯಾಗಬಹುದು. ಹೀಗಾಗಿ ಕನ್ನಡ ಕಣ್ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
Advertisement
ಬೇರೆ ರಾಜ್ಯಗಳಿಂದ ಬೆಂಗಳೂರಿಗೆಂದು ಉದ್ಯೋಗಕ್ಕೆ ಬಂದವರಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ಒಂದು ಕನ್ನಡ ಕಲಿಯಲು ಒಂದು ಹೆಜ್ಜೆ ಇಟ್ಟರೆ ಕನ್ನಡಿಗರು ನಿಮಗೆ ಕನ್ನಡ ಕಲಿಸಲು ಎರಡು ಹೆಜ್ಜೆ ಮುಂದಕ್ಕೆ ಇಡುತ್ತಾರೆ. ನಾವೆಲ್ಲರೂ ಪ್ರಾದೇಶಿಕ ಭಾಷೆಯನ್ನು ಉಳಿಸಲು ಪ್ರಮಾಣ ಮಾಡೋಣ. ಈ ಮೂಲಕ ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸೋಣ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಅಚ್ಚ ಕನ್ನಡಿಗರಾಗಿರುವ ಇವರು ‘ನಿಜವಾದ ಕನ್ನಡಿಗ ಯಾರು’ ಎನ್ನುವ ಶೀರ್ಷಿಕೆಯ ಅಡಿ ವಿಡಿಯೋಗಳನ್ನು ತರುತ್ತಿದ್ದಾರೆ. ಡಬ್ಬಿಂಗ್ ಪರವಾಗಿರುವ ಇವರು ಕನ್ನಡ ಸಾಹಿತ್ಯ ಓದುವವರು, ಕನ್ನಡದಲ್ಲಿ ವ್ಯವಹರಿಸುವವರು ನಿಜವಾದ ಕನ್ನಡಿಗರು ಎಂದು ಹೇಳಿದ್ದಾರೆ. ಬಾಹುಬಲಿ ಸತ್ಯರಾಜ್ ಗಲಾಟೆ ಸಂದರ್ಭದಲ್ಲಿ ಇವರು ವಿಡಿಯೋ ಮೂಲಕ ಕನ್ನಡಿಗರು ಯಾರು ಎಂದು ವಿವರಿಸಿದ್ದರು.
ಈ ವಿಡಿಯೋಗೆ ಕನ್ನಡ ಸಂಘಟನೆಗಳಿಂದ ಆಕ್ಷೇಪ ಕೇಳಿ ಬಂದಿತ್ತು.
ವಿಡಿಯೋ ವೀಕ್ಷಿಸಲು ಲಿಂಕ್: https://www.facebook.com/VS.Prashanth.Sambargi