ಯುವ ನಟ ಸಮರ್ಜಿತ್ ಲಂಕೇಶ್ (Samarjit Lankesh) ಹಾಗೂ ನಾಯಕಿ ಸಾನ್ಯ ಅಯ್ಯರ್ ಅಭಿನಯದ ಗೌರಿ ಸಿನಿಮಾ ರಾಜ್ಯದಾದ್ಯಂತ ಜುಲೈ ನಲ್ಲಿ ತೆರೆ ಕಾಣುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಸಿನಿಮಾತಂಡ ಹುಬ್ಬಳ್ಳಿಯಲ್ಲಿ ಚಿತ್ರದ ಹಾಡನ್ನು ರಿಲೀಸ್ ಮಾಡಿ ಸಂಭ್ರಮಿಸಿದೆ. ಹಾಡನ್ನು ರಿಲೀಸ್ ಮಾಡಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ (Indrajit Lankesh) , ‘ನನ್ನ ಪುತ್ರ ಸಮರ್ಜಿತ್ ಹಾಗೂ ಸಾನ್ಯ ಅಯ್ಯರ್ ಗೆ ಇದು ಚೊಚ್ಚಲ ಸಿನಿಮಾವಾಗಿದ್ದು, ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿದ ಕಡೆ ಚಿತ್ರೀಕರಣ ಮಾಡಲಾಗಿದೆ. ಅಕ್ಕ ಗೌರಿಯ ಸಿದ್ದಾಂತ ಇದರಲ್ಲಿಯಿಲ್ಲ. ಇದು ಅಕ್ಕ ಗೌರಿಯ ಕಥೆಯೂ ಅಲ್ಲ. ಅಕ್ಕನ ಮೇಲಿನ ಅಭಿಮಾನದಿಂದ ಸಿನಿಮಾಗೆ ಆಕೆಯ ಹೆಸರು ಇಟ್ಟಿದ್ದೇನೆ’ ಎಂದರು.
ಇನ್ನೂ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ನಟ ಸಮರ್ಜಿತ ಮಾತನಾಡಿ, ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ದು, ಅದ್ಭುತವಾಗಿ ಮೂಡಿಬಂದಿದೆ. ಜುಲೈ ತಿಂಗಳಲ್ಲಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಎಲ್ಲರೂ ಸಿನಿಮಾ ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟಿ ಸಾನ್ಯ ಅಯ್ಯರ್ ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಇಂದ್ರಜಿತ್, ಈ ಕೇಸ್ ಬಗ್ಗೆ ನಾನು ಈಗ ಏನು ಹೇಳಲ್ಲ, ತನಿಖೆ ನಾಡೆಯುತ್ತಿದೆ. ಶಿವಮೊಗ್ಗದಲ್ಲಿ ನಾನು ಏನು ಮಾತನಾಡಿಲ್ಲ. ನನ್ನ ತಂದೆ ಹುಟ್ಟಿದ ಸ್ಥಳ ಅದು ಎಂದರು. ದರ್ಶನ್ ಅವರಿಗೆ ನಾನು ಯಾಕೆ ಟಾಂಗ್ ಕೊಡಲಿ. ಬಸವಣ್ಣನ ವಚನ ಹೇಳಿದೆ ಅಷ್ಟೆ. ಅವರ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಪತ್ರಕರ್ತನಾಗಿ ನಾನು ಕೆಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೆ ಅಷ್ಟೆ. ಅದು ಬಿಟ್ಟರೆ ನಮ್ಮ ನಡುವೆ ಏನು ಇಲ್ಲ. ಅನ್ಯಾಯ ಆದಾಗ ಧ್ವನಿ ಎತ್ತುವ ಬಗ್ಗೆ ನನ್ನ ತಂದೆ ಲಂಕೇಶ್ ಅವರಿಂದ ಕಲಿತ್ತಿದ್ದು . ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ದೇವರು ಶಕ್ತಿ ಕೊಡಲಿ ಎಂದರು.
ಸಾಮಾಜಿಕ ಜಾಲತಾಣ ಅದ್ಭುತವಾದ ಮಾದ್ಯಮ. ಅದು ತುಂಬ ಕೆಟ್ಟದಾಗಿ ಬಳಕೆಯಾಗುತ್ತಿದೆ ಎಂದು ಸರ್ಕಾರ ಹಾಗೂ ಸೈಬರ್ ಕ್ರೈಮ್ ವಿರುದ್ದ ಇಂದ್ರಜಿತ್ ಆಕ್ರೋಶ ಹೊರಹಾಕಿದರು. ಇದೇ ಸಮಯದಲ್ಲಿ ಸರಿಯಾದ ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದರಿಂದ ಇಂದಿನ ಯುವ ಜನತೆ ಹಾಳಾಗುತ್ತಿದೆ. ಇತ್ತೀಚಿಗಷ್ಟೇ ಎಸ್ ಎಸ್ ಎಲ್‌ಸಿಯಲ್ಲಿ ರ್ಯಾಂಕ್ ಬಂದ ಹುಡುಗಿಯನ್ನು ಆಡಿಕೊಳ್ಳಲಾಯಿತು, ಅವರ ರೂಪದ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದರು. ನಾವು ಎಂಥ ದುರಂತದ ಸ್ಥಿತಿಯಲ್ಲಿ ಇದ್ದೀವಿ ಎಂದು ಕಳವಳ ವ್ಯಕ್ತಪಡಿಸಿದರು. .
ಸೈಬರ್ ಕ್ರೈಮ್ ಯಾವತ್ತು ಯಾರಿಗೂ ಉಪಯೋಗ ಆಗಿಲ್ಲ. ಸಾಮಾಜಿಕ ಜಾಲತಾಣದಿಂದನೇ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ, ಮಂತ್ರಿಗಳ ಮನೆಯಲ್ಲಿ ಆದಾಗ ಗೊತ್ತಾಗುತ್ತೆ. ಅತೀ ಶೀಘ್ರದಲ್ಲೆ ಇದರ ಬಗ್ಗೆ ಆಕ್ಷನ್ ತೆಗೆದುಕೊಳ್ಳಬೇಕು. ನಾನು ಕೂಡ ಇದರ ವಿರುದ್ದ ಹೋರಾಟ ಮಾಡುತ್ತೇನೆ. ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹುಬ್ಬಳ್ಳಿಯಲ್ಲಿ ಹೇಳಿದರು.