DistrictsGadagKarnatakaLatestMain Post

ಮಕ್ಕಳು ಬಿಸಿಯೂಟ ತಿಂದು ಅಸ್ವಸ್ಥರಾಗೋದು ಯಾಕೆ?- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲಾಯ್ತು ಭಯಾನಕ ಸತ್ಯ

ಗದಗ: ಜಿಲ್ಲೆಯ ಅಕ್ಷರದಾಸೋಹಕ್ಕೆ ಸರ್ಕಾರ ಪೂರೈಸುವ ಆಹಾರ ಪದಾರ್ಥಗಳು ಹೇಗೆಲ್ಲಾ ಇರುತ್ತೆ ಎಂಬುದನ್ನ ನೋಡಿದ್ರೆ ಒಂದು ಕ್ಷಣ ಬೆಚ್ಚಿಬಿಳ್ತಿರಾ. ಯಾಕಂದ್ರೆ ಈ ಬಗ್ಗೆ ಸ್ಟಿಂಗ್ ಆಪರೇಷನ್ ಮೂಲಕ ಪಬ್ಲಿಕ್ ಟಿವಿ ಎಲ್ಲವನ್ನೂ ಬಯಲು ಮಾಡಿದೆ.

ಕಳಪೆ ಗುಣಮಟ್ಟದ ತೊಗರಿ ಬೇಳೆಗಳನ್ನ ಮಕ್ಕಳ ಬಿಸಿ ಊಟಕ್ಕೆ ಸಪ್ಲೈ ಮಾಡ್ತಾರೆ. ಏನೂ ಅರಿಯದ ಮುದ್ದುಮಕ್ಕಳು ಈ ಆಹಾರ ಸೇವಿಸಿ ಅನಾರೋಗ್ಯಕ್ಕೆ ಈಡಾಗ್ತಿದ್ದಾರೆ. ಗೋದಾಮುನಲ್ಲಿ ಕೊಳೆತು ನಾರುವ ಕಲ್ಲುಬಂಡೆಯಂತೆ ಗಟ್ಟಿಯಾದ ತೊಗರಿಬೇಳೆಯನ್ನ ಲಾರಿನಲ್ಲಿ ತಂದು ಹೇಗೆ ಸಂಸ್ಕರಣೆ ಮಾಡ್ತಾರೆ? ಎಲ್ಲಿ ಸಪ್ಲಾಯ್ ಮಾಡ್ತಾರೆ? ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ರೂ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರಾ ಎಂಬುದನ್ನ ಅನಾವರಣ ಮಾಡಲಾಗಿದೆ.


ಇತ್ತೀಚೆಗಷ್ಟೇ ಬಾಗಲಕೋಟೆಯಲ್ಲಿ ಬಿಸಿಯೂಟ ಸೇವಿಸಿದ 40 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದರು. ಬಳ್ಳಾರಿ ಜಿಲ್ಲೆಯ ಅಗಲೂರಿನಲ್ಲೂ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ನರಳಾಡಿದ ದೃಶ್ಯ ನಮ್ಮ ಕಣ್ಣ ಮುಂದೇಯೇ ಇದೆ. ಈ ಮಧ್ಯೆ ಬಿಸಿಯೂಟಕ್ಕೆ ಪೂರೈಸೋ ಅಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಆಗಾಗ್ಗೇ ದೂರುಗಳು ಬರ್ತಾನೇ ಇರ್ತಾವೆ. ಮಕ್ಕಳ ಊಟದಲ್ಲಿ ನುಸಿ, ಜಿರಲೆಗಳು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಎಷ್ಟೇ ದೂರು ನೀಡಿದ್ರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಹೀಗಾಗಿ ಪಬ್ಲಿಕ್ ಟಿವಿ ಅಸಲಿ ಸತ್ಯ ಏನೆಂದು ಹುಡುಕಲು ಗದಗ ಜಿಲ್ಲೆಯಲ್ಲಿ ರಹಸ್ಯ ಕಾರ್ಯಾಚರಗೆ ಇಳಿದಾಗ ಘನ ಘೋರ ಸತ್ಯ ಬಯಲಾಗಿದೆ.


ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಸರ್ಕಾರಿ ಗೋದಾಮು ಬಳಿ ಶಾಕಿಂಗ್ ದೃಶ್ಯ ಕಾದಿತ್ತು. ಸಗಟು ಮಳಿಗೆ ಬಳಿ ಅನ್ನಭಾಗ್ಯದ ಬೋರ್ಡ್ ಹೊತ್ತ ಲಾರಿ ನಿಂತಿತ್ತು. ಈ ಲಾರಿಯಲ್ಲಿ ಗಂಟು ಕಟ್ಟಿದ್ದ ರಾಶಿ ರಾಶಿ ತೊಗರಿ ಬೇಳೆ ಕಂಡುಬಂದಿದೆ. ಬೇಳೆಯ ಬಣ್ಣವೇ ಬದಲಾಗಿತ್ತು. ಇಂತಹ ಕೆಟ್ಟ ಆಹಾರ ಪದಾರ್ಥವನ್ನ ಲಾರಿನಲ್ಲಿ ತಂದು ನಿರ್ಜನ ಪ್ರದೇಶದಲ್ಲಿರುವ ಸರ್ಕಾರಿ ಉಗ್ರಾಣದ ಮುಂಭಾಗ ನಿಂತಿದ್ದ ಪಾಲೀಶ್ ಮಷಿನ್‍ಗೆ ಹಾಕಿ ಪಾಲೀಶ್ ಮಾಡೋ ಕೆಲಸ ತಣ್ಣಗೆ ನಡೆಯುತ್ತಿತ್ತು. ಥಳ ಥಳ ಹೊಳೆಯುವ ಪಾಲೀಶ್ ಮಾಡಿದ ತೊಗರಿ ಬೇಳೆಯನ್ನು ಶಾಲೆಗಳಿಗೆ ಕಳಿಸಲು ಚೀಲಗಳಿಗೆ ತುಂಬಿಸೋ ಪ್ರಕ್ರಿಯೆ ನಡೆಯುತ್ತಿತ್ತು.

ಈ ವೇಳೆ ನಮ್ಮ ರಹಸ್ಯ ಕಾರ್ಯಾಚರಣೆ ತಂಡದ ಓರ್ವ ಸದಸ್ಯ, ಅಪರಿಚಿತರಂತೆ ಹೋಗಿ ಅಲ್ಲಿರುವ ಸಿಬ್ಬಂದಿ ಮಾತನಾಡಿಸಿದಾಗ, ಸರ್ಕಾರದಿಂದ ಮೂರು ತಿಂಗಳಿಗೊಮ್ಮೆ ಟೆಂಡರ್ ಆಗಿರುತ್ತೆ. ಎರಡು-ಮೂರು ತಿಂಗಳು ಸ್ಟಾಕ್ ಇರೋದ್ರಿಂದ ಹೀಗಾಗಿದೆ ಅಷ್ಟೇ ಎಂಬ ಬೇಜವಾಬ್ದಾರಿಯುತವಾಗಿ ಉತ್ತರಿಸಿದ್ದಾನೆ.

ಕೇಂದ್ರ ಸರ್ಕಾರದ ನಾಫೆಡ್ ಸಂಸ್ಥೆಯಿಂದ ಈ ರೀತಿಯಾದ ಹುಳು-ಹೆಂಟೆಗಟ್ಟಿರೋ ತೊಗರಿ ಬೇಳೆ ಬರುತ್ತದೆ. ಟೆಂಡರ್ ಮೂಲಕ ಬಂದ ಬೇಳೆಗಳನ್ನ ಪರೀಕ್ಷೆ ಮಾಡದೇ ಅವುಗಳನ್ನ ರಿಸೀವ್ ಮಾಡಿಕೊಳ್ಳುತ್ತಾರೆ. ಇವನ್ನೇ ಪಾಲೀಶ್ ಮಷಿನ್‍ಗೆ ಕಳಿಸಿ ಪಾಲೀಶ್ ಮಾಡಿಸುತ್ತಾರೆ. ವಿಷಾದವೆಂದರೆ ಶಾಲೆಯಲ್ಲಿ ಅಡುಗೆ ಮಾಡೋ ಸಿಬ್ಬಂದಿಗೆಲ್ಲಾ ಗೊತ್ತಿದ್ರೂ ಏನು ಹೇಳಲಾಗದ ಸ್ಥಿತಿ. ಏನಾದ್ರೂ ಕೇಳಿದ್ರೆ ಬೆದರಿಕೆ ಮಾತುಗಳು ಕೇಳಿಬರುತ್ತವೆ. ಒಳ್ಳೆದೋ ಕೆಟ್ಟದ್ದೋ, ಒಟ್ಟಿನಲ್ಲಿ ಮಕ್ಕಳಿಗೆ ಮಾಡಿ ಹಾಕಬೇಕು ಅನ್ನುವ ಧೋರಣೆಯಿಂದ ಅಡುಗೆ ಮಾಡಿ ಬಡಿಸ್ತಾರೆ. ಆದ್ರೆ ಮಕ್ಕಳು ಮಾತ್ರ ಇಲ್ಲಿ ಶಿಕ್ಷೆ ಅನುಭವಿಸುತ್ತಾರೆ.

ಇಂತಹ ಪದಾರ್ಥಗಳಿಂದ ತಯಾರು ಮಾಡಿದ ಬಿಸಿಯೂಟದಿಂದ ಶಾಲಾ ಮಕ್ಕಳು ಇತ್ತೀಚೆಗೆ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮ ಅನ್ಯಾಯ ಆ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಚೆನ್ನಾಗಿರುವ ಬೇಳೆ ಪ್ಯಾಕೆಟ್‍ಗಳನ್ನ ಕಾಳಸಂತೆನಲ್ಲಿ ಮಾರಾಟಮಾಡುವ ಮೂಲಕ ಅಧಿಕಾರಿಗಳು ತಮ್ಮ ಬೇಳೆ ಬೇಯಿಸಿಕೊಳ್ತಾರೆ. ಇದು ಹೀಗೆ ಮುಂದುವರಿದ್ರೆ ಉಗ್ರವಾದ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button