ಬಾಲಕೋಟ್ ಮೀರಿ ಯಾಕೆ ಹೋಗಬಾರದು – ಬಿಪಿನ್ ರಾವತ್ ಪ್ರಶ್ನೆ

Public TV
2 Min Read
bipin rawat

– 500 ಉಗ್ರರು ಭಾರತದೊಳಗೆ ನುಸುಳಲು ಸಂಚು

ಚೆನ್ನೈ: ನಾವು ಈ ಹಿಂದೆ ಕೈಗೊಂಡ ರೀತಿಯ ಕ್ರಮವನ್ನೇ ಯಾಕೆ ಪುನರಾವರ್ತಿಸಬೇಕು? ಅದನ್ನು ಮೀರಿ ಯಾಕೆ ಹೋಗಬಾರದು ಎಂದು ಪ್ರಶ್ನಿಸುವ ಮೂಲಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಇನ್ನೂ ದೊಡ್ಡ ಆಘಾತ ನೀಡುವ ಸುಳಿವು ನೀಡಿದ್ದಾರೆ.

ಬಾಲಕೋಟ್‍ನ ಉಗ್ರರ ಅಡಗುತಾಣವನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ ಎಂಬ ವರದಿಯ ಬೆನ್ನಲ್ಲೇ ಸೇನಾ ಮುಖ್ಯಸ್ಥರು ಈ ಕುರಿತು ಇಂದು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

ಈ ವೇಳೆ ಪಾಕಿಸ್ತಾನದ ಪುಂಡಾಟವನ್ನು ತಣ್ಣಗಾಗಿಸಲು ಮತ್ತೊಂದು ಸ್ಟ್ರೈಕ್ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೇ ರೀತಿಯ ಸ್ಟ್ರೈಕ್‍ಗಳನ್ನು ಯಾಕೆ ಮಾಡಬೇಕು ಅದನ್ನು ಮೀರಿ ಏಕೆ ಹೋಗಬಾರದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದವರು ಊಹಿಸುವುದನ್ನು ಮುಂದುವರಿಸಲಿ ಬಿಡಿ ಎಂದು ಹರಿಹಾಯ್ದರು.

ಫೆಬ್ರವರಿಯಲ್ಲಿ ಭಾರತ ನಡೆಸಿದ ಏರ್ ಸ್ಟ್ರೈಕ್ ನಂತರ ನಾಶವಾಗಿದ್ದ ಪಾಕಿಸ್ತಾನದ ಬಾಲಕೋಟ್‍ನ ಭಯೋತ್ಪಾದನಾ ಶಿಬಿರವನ್ನು ಇದೀಗ ಮತ್ತೆ ಸಕ್ರಿಯಗೊಳಿಸಲಾಗಿದೆ ಎಂದು ಸೇನಾ ಮುಖ್ಯಸ್ಥರು ಇದೇ ವೇಳೆ ಸ್ಪಷ್ಟಪಡಿಸಿದರು.

ಬಾಲಕೋಟ್‍ನ್ನು ಪಾಕಿಸ್ತಾನ ಇತ್ತೀಚೆಗೆ ಮತ್ತೆ ಸಕ್ರಿಯಗೊಳಿಸಿದೆ. ಇದರರ್ಥ ಭಾರತ ನಡೆಸಿದ್ದ ಏರ್ ಸ್ಟ್ರೈಕ್‍ನಿಂದಾಗಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ಅಡಗುತಾಣಗಳು ಹಾಗೂ ತರಬೇತಿ ಕೇಂದ್ರಗಳಿಗೆ ಹಾನಿಯಾಗಿತ್ತು. ಬಾಲಕೋಟ್ ಮೇಲೆ ಪರಿಣಾಮ ಬೀರಿ ನಾಶವಾಗಿತ್ತು ಎಂಬುದನ್ನು ತೋರಿಸುತ್ತದೆ. ಹೀಗಾಗಿಯೇ ಅಲ್ಲಿಂದ ಜನರು ದೂರ ಹೋಗಿದ್ದರು. ಇದೀಗ ಮತ್ತೆ ಸಕ್ರಿಯವಾಗಿದ್ದಾರೆ. ಈ ಮೂಲಕ ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ನಡೆಸಿದ ದಾಳಿಯಿಂದ ಬಾಲಾಕೋಟ್‍ನ ಉಗ್ರರ ತಾಣಗಳು ನಾಶವಾಗಿದ್ದವು ಎಂದರ್ಥ ಎಂದು ಜನರಲ್ ಬಿಪಿರ್ ರಾವತ್ ತಿಳಿಸಿದರು.

ಸುಮಾರು 500ಕ್ಕೂ ಹೆಚ್ಚು ಉಗ್ರರು ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ. ಭಯೋತ್ಪಾದಕರನ್ನು ನಮ್ಮ ಭೂಪ್ರದೇಶಕ್ಕೆ ನುಗ್ಗಿಸಲು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುತ್ತಿದೆ. ಆದರೆ ಕದನ ವಿರಾಮವನ್ನು ಹೇಗೆ ಎದುರಿಸಬೇಕೆಂಬುದು ನಮಗೆ ತಿಳಿದಿದೆ. ನಮ್ಮ ಸೈನಿಕರನ್ನು ಪಾಕಿಸ್ತಾನವನ್ನು ಹೇಗೆ ನಡೆಸಿಕೊಳ್ಳಬೇಕು, ಹೇಗೆ ಕ್ರಮ ಕೈಗೊಳ್ಳಬೇಕೆಂಬುದನ್ನು ಅರಿತಿದ್ದಾರೆ. ನಾವು ಎಚ್ಚರವಾಗಿರುತ್ತೇವೆ. ಒಳನುಸುಳುವಿಕೆಯ ಪ್ರಯತ್ನಗಳನ್ನು ವಿಫಲಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

balakot airstrike 2

ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಬೆಂಗಾವಲು ಪಡೆಯ ವಾಹನದ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ, ಭಾರತೀಯ ವಾಯು ಪಡೆಯು ಬಾಲಕೋಟ್‍ನ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಿತ್ತು. ಹಾನಿಯಿಂದಾಗಿ ಅಲ್ಲಿನ ಉಗ್ರರು ಸ್ಥಳಾಂತರಗೊಂಡಿದ್ದರು.

Share This Article