ಬೆಂಗಳೂರು: ಲಂಬಾಣಿ ಸಮುದಾಯದ ಮಹಿಳೆಯರು ಧರಿಸಿರುವ ಸಾಂಪ್ರದಾಯಿಕ ಉಡುಪಿನಲ್ಲಿ ಹೆಚ್ಚಾಗಿ ಕನ್ನಡಿಗಳನ್ನು ಯಾಕೆ ಬಳಸಲಾಗುತ್ತದೆ ಎಂಬ ಹಲವರ ಪ್ರಶ್ನೆಗೆ ನಾದಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ಉತ್ತರ ನೀಡಿದ್ದಾರೆ.
ನಮ್ಮ ಸುತ್ತಮುತ್ತ ವಾಸವಾಗಿರುವ ಲಂಬಾಣಿ ಸಮುದಾಯದ ಮಹಿಳೆಯರ ಉಡುಪು ತುಂಬಾ ವಿಭಿನ್ನವಾಗಿರುತ್ತೆ. ಈ ಉಡುಪಿನಲ್ಲಿ ಮಣಿಗಳು, ನಾಣ್ಯಗಳು, ಬೆಳ್ಳಿ ಆಭರಣಗಳು ಸೇರಿದಂತೆ ಹೆಚ್ಚು ಕನ್ನಡಿಗಳನ್ನು ಬಳಕೆ ಮಾಡಲಾಗಿರುತ್ತದೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ನಿರೂಪಕಿ ಅನುಶ್ರೀ ಲಂಬಾಣಿ ಸಮುದಾಯದ ಮಹಿಳೆಯರ ಕಲರ್ ಫುಲ್ ಡ್ರೆಸ್ ಧರಿಸಿದ್ದರು. ಈ ವೇಳೆ ಸಮುದಾಯದ ಬಗ್ಗೆ ಮಾತನಾಡುತ್ತಿದ್ದ ಕಾರ್ಯಕ್ರಮದ ತೀರ್ಪುಗಾರರಾದ ಹಂಸಲೇಖ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹಂಸಲೇಖ ಮಾತು:
ಇದೊಂದು ಸಮಾಜದಿಂದ ಅಲಕ್ಷಿಸಲ್ಪಟ್ಟ ಸಮುದಾಯವಾಗಿದ್ದು, ಇಂದು ಕನ್ನಡದ ಮನೆ ಮಗಳಾಗಿರುವ ಅನುಶ್ರೀ ಲಂಬಾಣಿ ವೇಷಭೂಷಣಗಳನ್ನು ಧರಿಸುವ ಮೂಲಕ ಆ ಸಮುದಾಯಕ್ಕೆ ಗೌರವ ಸಲ್ಲಿಸಿದ್ದಾಳೆ. ಈ ಸಮುದಾಯದವರು ಪತ್ತೆದಾರಿ, ಗೂಢಚರ್ಯೆ ಮತ್ತು ಸುದ್ದಿಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ರವಾನಿಸುವ ಕೆಲಸ ಮಾಡುತ್ತಿದ್ದರು. ಈ ಸಮುದಾಯದ ಮಹಿಳೆಯರು ಸ್ಫುರದ್ರೂಪಿಗಳು. ಬೇರೆ ಹುಡುಗರು ಹತ್ತಿರಕ್ಕೆ ಬಂದು ಅವರ ಮುಖವನ್ನು ಉಡುಪಿನಲ್ಲಿರುವ ಕನ್ನಡಿಯಲ್ಲಿ ನೋಡಿ ನಾನು ಈಕೆಗೆ ಸರಿಸಾಟಿ ಇಲ್ಲ ಅಂತ ವಾಪಾಸ್ ಹೋಗು ಅಂತಾ ಕನ್ನಡಿಗಳು ಹೇಳುತ್ತವೆ. ಹಾಗಾಗಿ ಮಹಿಳೆಯರ ವೇಷ-ಭೂಷಣಗಳಲ್ಲಿ ಕನ್ನಡಿಯನ್ನು ಬಳಸಲಾಗುತ್ತದೆ. ಈ ಸಮುದಾಯದಲ್ಲಿ ಮಹಿಳೆಯರು ಹೆಚ್ಚು ಬಲಶಾಲಿಗಳು. ಎಂತಹ ಹೋರಾಟಕ್ಕೂ ಸಿದ್ಧವಾಗಿರುತ್ತಾರೆ ಎಂದು ಹಂಸಲೇಖ ಸಮುದಾಯದ ಇತಿಹಾಸವನ್ನು ಪರಿಚಯಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಪರ್ಧಿ ಹನುಮಂತನ ತಾಯಿ ಶೀಲವ್ವ ಅವರು ಲಂಬಾಣಿ ಸಮುದಾಯದ ಹಾಡು ಹಾಡಿದ್ದರು. ಲಂಬಾಣಿ ಹಾಡುಗಳಲ್ಲಿ ಕ್ವಾಟರ್ ನೋಟ್ಸ್ ಬಳಕೆ ಮಾಡಲಾಗುತ್ತದೆ. ಅರೇಬಿಕ್ ಹಾಡುಗಳಲ್ಲಿ ಇದೇ ರೀತಿಯ ನೋಟ್ ಗಳಿರುತ್ತವೆ ಎಂದು ಹಂಸಲೇಖ ತಿಳಿಸಿದರು. ಶೀಲವ್ವರ ಹಾಡು ಕೇಳುತ್ತಿದ್ದಂತೆ ಇನ್ನೋರ್ವ ತೀರ್ಪುಗಾರ, ಗಾಯಕ ವಿಜಯ್ ಪ್ರಕಾಶ್ ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಮೆಚ್ಚುಗೆ ಸೂಚಿಸಿದರು.
ಮಾತು ಉಳಿಸಿಕೊಂಡ ಶೀಲವ್ವ:
ಈ ಹಿಂದೆ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶೀಲವ್ವರನ್ನು ನೋಡಿದ್ದ ಅನುಶ್ರೀ ನನಗೂ ಇದೇ ರೀತಿ ಬಟ್ಟೆ ಮತ್ತು ಆಭರಣಗಳು ಬೇಕೆಂದು ಕೇಳಿಕೊಂಡಿದ್ದರು. ರಿಯಾಲಿಟಿ ಶೋದಲ್ಲಿಯೂ ಹನುಮಂತನಿಗೆ ನಿಮ್ಮ ತಾಯಿ ಬಟ್ಟೆ ಬೇಕು ಅಂತ ಹೇಳಿದ್ದರು. ಹೀಗಾಗಿ ರಿಯಾಲಿಟಿ ಶೋಗೆ ಆಗಮಿಸಿದ್ದ ಶೀಲವ್ವ ಅವರು ಕೊಟ್ಟ ಮಾತಿನಂತೆ ತಾವೇ ಕೈಯಿಂದ ಕಸೂತಿ ಮಾಡಿದ ಬಣ್ಣ ಬಣ್ಣದ ಉಡುಪನ್ನು ಅನುಶ್ರೀ ಅವರಿಗೆ ನೀಡಿದ್ದರು.
ಶೀಲವ್ವರು ನೀಡಿದ ಉಡುಗೆಯನ್ನು ಧರಿಸಿದ ಅನುಶ್ರೀ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮೂವರೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಫಿ ಫೋಟೋ ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರೆ.
https://www.instagram.com/p/BsQCrpuhQN4/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv