ತಮಿಳುನಾಡು ರಾಜಕಾರಣದ ಮೇರುಪರ್ವ ಎಂ. ಕರುಣಾನಿಧಿಯ ಜಂಘಾಬಲವನ್ನು ಅಡಗಿಸಿದ್ದು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ. ಬಹುಶಃ ಅದೊಂದು ತಪ್ಪು ಮಾಡದಿದ್ರೆ, ಇಬ್ಬರ ಮಧ್ಯೆ ದ್ವೇಷ ಹುಟ್ಟುತ್ತಿರಲಿಲ್ಲವೇನೋ? ಜಯಲಲಿತಾ ಕೂಡ ಹಗೆತನ ಸಾಧಿಸುತ್ತಿರಲಿಲ್ಲವೇನೋ?
ಎಂತಹ ಬುದ್ದಿವಂತನಾದರೂ ಒಂದಲ್ಲ ಒಂದು ವಿಷ್ಯದಲ್ಲಿ ಎಡವಿಯೇ ಬೀಳುತ್ತಾನೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕೂಡ ಹೊರತಲ್ಲ. ಒಂದು ಕಾಲದಲ್ಲಿ ತಮಿಳುನಾಡು ರಾಜಕೀಯದ ಮೇಲೆ ಪ್ರಭುತ್ವ ಸಾಧಿಸಿದ್ದ ಡಿಎಂಕೆ ಇವತ್ತು ಮೂಲೆಗುಂಪಾಗಲು ಎರಡೇ ಕಾರಣ ಒಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮತ್ತೊಂದು ಕರುಣಾ ಕುಟುಂಬದಲ್ಲಿನ ಒಳಜಗಳ
Advertisement
ತಮಿಳುನಾಡು ವಿಧಾನಸಭೆಯಲ್ಲಿ ಏನಾಯ್ತು?
ಅದು 1989 ಮಾರ್ಚ್ 25. ತಮಿಳುನಾಡಿನ ವಿಧಾನಸಭೆಯಲ್ಲಿ ಗಂಭೀರ ಚರ್ಚೆಯಾಗುತ್ತಿತ್ತು. ಮುಖ್ಯಮಂತ್ರಿ ಕರುಣಾನಿಧಿ ಸರ್ಕಾರವನ್ನು ಪ್ರತಿಪಕ್ಷ ನಾಯಕಿ ಜಯಲಲಿತಾ ತರಾಟೆಗೆ ತೆಗೆದುಕೊಂಡಿದ್ದರು. ಸದನದ ವಿಐಪಿ ಗ್ಯಾಲರಿಯಲ್ಲಿ ಕರುಣಾನಿಧಿ ಅವರ ಇಬ್ಬರು ಪತ್ನಿಯರು ಕಲಾಪ ವೀಕ್ಷಿಸುತ್ತಿದ್ದರು. ಏಕಾಏಕಿ ನಡೆಯಬಾರದಂತಹ ಘಟನೆಯೊಂದು ನಡೆದೇ ಹೋಯ್ತು.
Advertisement
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಜಯಲಲಿತಾ ಮೇಲೆ ಡಿಎಂಕೆ ಶಾಸಕರು ಸಿಟ್ಟಾಗಿದ್ದರು. ಏಕಾಏಕಿ ಪ್ರತಿಪಕ್ಷ ನಾಯಕಿಯ ಮೇಲೆರಗಿದ್ದರು. ಓರ್ವ ಹೆಣ್ಣು ಮಗಳು ಅನ್ನೋದನ್ನಾ ಮರೆತ ಡಿಎಂಕೆ ಸದಸ್ಯರು ತಲೆ ಕೂದಲನ್ನು ಎಳೆದು ಚಪ್ಪಲಿಯನ್ನು ಎಸೆದು ಬಿಟ್ಟರು. ಓರ್ವ ಶಾಸಕನಂತೂ ಮೈ ಮೇಲೆ ಇದ್ದ ಸೀರೆಯನ್ನೇ ಎಳೆಯುವಷ್ಟರ ಮಟ್ಟಿಗೆ ಮುಂದಾಗುತ್ತಾನೆ. ದೌರ್ಭಾಗ್ಯ ಎಂದರೆ, ಇವೆಲ್ಲದಕ್ಕೂ ಸಾಕ್ಷಿಯಾಗಿದ್ದು ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಸದನದಲ್ಲಿದ್ದ ಅವರ ಇಬ್ಬರ ಹೆಂಡಿರು.
Advertisement
Advertisement
ಜಯಾ ಪ್ರತಿಜ್ಞೆ:
ಈ ಘಟನೆಯಿಂದ ಜಯಲಲಿತಾ ಕನಲಿ ಕೆಂಡವಾಗಿದ್ದರು. ಕಣ್ಣೀರಿಡುತ್ತಲೇ ತಮಿಳುನಾಡಿಗೆ ಒಂದೇ ಸಂದೇಶ ರವಾನಿಸಿದ್ರು. ಅವತ್ತೇ ನಿರ್ಧಾರವೊಂದನ್ನು ಮಾಡಿದ್ದರು. ಮುಖ್ಯಮಂತ್ರಿ ಕರುಣಾನಿಧಿ ಸೊಕ್ಕು ಅಡಗಿಸುವ ಶಪಥಗೈಯ್ದರು. “ಕರುಣಾನಿಧಿ ಎಲ್ಲಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರೋ ಅಲ್ಲಿಯವರೆಗೆ ನಾನು ವಿಧಾನಸಭೆಗೆ ಕಾಲಿಡುವುದೇ ಇಲ್ಲ. ಮುಖ್ಯಮಂತ್ರಿಯಾಗಿ ಈ ಸದನಕ್ಕೆ ಕಾಲಿಡುತ್ತೇನೆ. ನನಗಾದ ಅಪಮಾನಕ್ಕೆ ಈ ಮೂಲಕ ಸೇಡು ತೀರಿಸಿಕೊಳ್ಳುತ್ತೇನೆ” ಎಂದು ಹೇಳಿಕೆಯೊಂದನ್ನು ನೀಡಿ ಜಯಲಲಿತಾ ಸದನದಿಂದ ಹೊರ ನಡೆದೇ ಬಿಟ್ಟರು.
ತಮಿಳುನಾಡು ವಿಧಾನಸಭೆಯಲ್ಲಿ ಆದ ಘಟನೆಯಿಂದ ಜಯಲಲಿತಾ ನೊಂದು ಹೋಗಿದ್ದರು. ವಿಧಾನಸಭೆಯಿಂದ ನೇರವಾಗಿ ಮನೆಗೆ ತೆರಳಿ ಬಿಕ್ಕಿ ಬಿಕ್ಕಿ ಅತ್ತರು. ಅವತ್ತೇ ನಿರ್ಧರಿಸಿಬಿಟ್ಟರು. ಯುದ್ಧ ಭೂಮಿಯಿಂದ ಹೆದರಿ ಓಡುವ ಬದಲು ಧೈರ್ಯವಾಗಿ ಪುರುಷರನ್ನು ಹೆದರಿಸಬೇಕೆಂದು ತೀರ್ಮಾನಿಸಿದ್ರು. ಬದ್ಧವೈರಿ ಕರುಣಾನಿಧಿ ವಿರುದ್ಧ ಹೋರಾಟಕ್ಕೆ ಜಯಲಲಿತಾ ಆಯ್ದುಕೊಂಡ ಅಸ್ತ್ರವೇ ಪ್ರಚಾರ.
ಮೂಲೆ ಮೂಲೆಯೂ ಸಂಚಾರ:
ವಿಧಾನಸಭೆಯಲ್ಲಿ ಆದ ಅಪಮಾನವನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡ ಜಯಲಲಿತಾ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಮಿಳುನಾಡಿನಾದ್ಯಂತ ಮಿಂಚಿನ ಸಂಚಾರ ನಡೆಸಿದ್ರು. ಅಣ್ಣಾಡಿಎಂಕೆ ಮುಖಂಡರು ಕರುಣಾನಿಧಿಯನ್ನು ದುರ್ಯೋಧನ ಎಂದೂ, ಜಯಲಲಿತಾರನ್ನು ದ್ರೌಪದಿ ಎಂದು ಬಿಂಬಿಸಿದ್ರು. ಎಲ್ಲಿವರೆಗೆ ಕರುಣಾನಿಧಿ ಮುಖ್ಯಮಂತ್ರಿ ಪದವಿಯಲ್ಲಿರುವರೋ ಅಲ್ಲಿಯವರೆಗೆ ಮಹಿಳೆಯರಿಗೆ ರಕ್ಷಣೆ ಇಲ್ಲ ಇದೊಂದು ದುರ್ಯೋಧನ-ದುಶ್ಯಾಸನರ ಸರ್ಕಾರ ಎಂದು ಜನರ ಮುಂದೆ ಜಯಾ ಸಾರಿದ್ರು. ಇದರಿಂದಾಗಿ 1991ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೆಲಕಚ್ಚಿ ಹೋಯ್ತು. ಯಂಗ್ ಸಿಎಂ ಜಯಲಲಿತಾ ಪ್ರಮಾಣವಚನ ಸ್ವೀಕರಿಸಿದ್ರು.
ಜಯಲಲಿತಾ ಪ್ರಮಾಣ ವಚನ ಸ್ವೀಕರಿಸಿದ ನಂತರ ತಮಿಳುನಾಡು ರಾಜಕೀಯ ಚಿತ್ರಣವೇ ಬದಲಾಗಿ ಹೋಯ್ತು. ಕರುಣಾನಿಧಿ ರಾಜಕೀಯ ಜೀವನದಲ್ಲಿ ನಡೆಯಬಾರದ ಘಟನೆಗಳೂ ನಡೆದು ಹೋದವು. ಜಯಲಲಿತಾ ಸಿಎಂ ಆಗ್ತಿದ್ದಂತೆ ಸೇಡಿನ ರಾಜಕಾರಣ ಶುರುವಾಯಿತು. ಕರುಣಾನಿಧಿ ಬಾಳಲ್ಲಿ ರಾಜಕೀಯ ಹಿನ್ನಡೆಯ ಜೊತೆಗೆ ಸಾಂಸರಿಕ ತಾಪತ್ರಯಗಳೂ ಶುರುವಾದವು. ಅಧಿಕಾರಕ್ಕೇರುತ್ತಿದ್ದಂತೆ, ಜಯಲಲಿತಾ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ರು. ಚೆನ್ನೈಯಲ್ಲಿನ ಮೇಲುಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದಡಿ ಕರುಣಾನಿಧಿಯವರನ್ನ ಬಂಧಿಸುವಂತೆ ಆದೇಶಿಸಿದ್ರು. 2001ರ ಜೂನ್ 30 ತಡರಾತ್ರಿ 2 ಗಂಟೆ ಸುಮಾರಿಗೆ ಚೆನ್ನೈನ ಗೋಪಾಲಪುರಂ ನಿವಾಸದಿಂದ ಕರುಣಾನಿಧಿ ಅವರನ್ನು ಪೊಲೀಸರು ಎಳೆದು ತಂದು ಬಲವಂತವಾಗಿ ಹೊತ್ತೊಯ್ದರು.
ಅಧಿಕಾರಕ್ಕಾಗಿ ಸಹೋದರರ ಕಿತ್ತಾಟ..!
ಕರುಣಾನಿಧಿ ರಾಜಕೀಯ ಬದುಕಿನಲ್ಲಿ ಮತ್ತೊಂದು ಹಿನ್ನಡೆಗೆ ಕಾರಣ ಕುಟುಂಬದಲ್ಲಿನ ಕಿತ್ತಾಟ. ಕರುಣಾನಿಧಿಗೆ ಮೂವರು ಹೆಂಡತಿಯರು. ಎರಡನೇ ಹೆಂಡತಿ ದಯಾಳ್ ಅಮ್ಮಾಳ್ ಮಕ್ಕಳು ಅಳಗಿರಿ ಹಾಗೂ ಸ್ಟ್ಯಾಲಿನ್. ಮೂರನೇ ಹೆಂಡತಿ ಮಗಳು ರಜತಿ ಅಮ್ಮಾಳ್ ಪುತ್ರಿ ಕನ್ನಿಮೋಳಿ. ಕರುಣಾನಿಧಿಗೆ 90 ವರ್ಷ ದಾಟುತ್ತಿದ್ದಂತೆ ಉತ್ತರಾಧಿಕಾರಕ್ಕಾಗಿ ಪಕ್ಷದಲ್ಲಿ ಸೋದರರಿಬ್ಬರ ಕಾಳಗ ಆರಂಭಗೊಂಡಿತ್ತು.
ಕರುಣಾನಿಧಿಯ ಎರಡನೇ ಪತ್ನಿ ಮಕ್ಕಳಾದ ಅಳಗಿರಿ ಮತ್ತು ಸ್ಟಾಲಿನ್ ನಡುವಿನ ಸಮರ ಪಕ್ಷಕ್ಕೆ ಭಾರೀ ಹಿನ್ನಡೆ ತಂದೊಡ್ಡಿತು. ಕರುಣಾನಿಧಿ ನಂತರದ ಉತ್ತರಾಧಿಕಾರಕ್ಕೆ ಅಳಗಿರಿ ಹೊಂಚು ಹಾಕಿದ್ರೆ. ಅತ್ತ ಡಿಎಂಕೆಯಲ್ಲಿ ಚಾಣಕ್ಯ ಎಂದೇ ಗುರುತಿಸಿಕೊಂಡಿರುವ ಇನ್ನೋರ್ವ ಪುತ್ರ ಸ್ಟಾಲಿನ್ ಕೂಡಾ ಉತ್ತರಾಧಿಕಾರದ ಆಕಾಂಕ್ಷಿಯಾಗಿದ್ದರು.
ಇಬ್ಬರ ಕಾಳಗವನ್ನು ಶಮನಗೊಳಿಸಲೆಂದೇ ಅಳಗಿರಿಯನ್ನು ಕೇಂದ್ರದಲ್ಲಿ ಮಂತ್ರಿ ಮಾಡಿ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿದ್ರೆ. ಸ್ಟಾಲಿನ್‍ನನ್ನು ಉಪಮುಖ್ಯಮಂತ್ರಿ ಮಾಡಿ ರಾಜ್ಯ ರಾಜಕಾರಣಕ್ಕೆ ಸೀಮಿತಗೊಳಿಸಿದ್ರು, ಇದ್ರಿಂದ ಸೋದರರ ವೈಷಮ್ಯ ಶಮನಗೊಳಿಸುವ ಉದ್ದೇಶ ಕರುಣಾನಿಧಿಯದ್ದಾಗಿತ್ತು. ಆದ್ರೆ ಅಳಗಿರಿ ಮತ್ತೆ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದರಿಂದ ಅನಿವಾರ್ಯವಾಗಿ ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕಾಯಿತು. ಅಣ್ಣಾ ತಮ್ಮಂದಿರ ಕಿತ್ತಾಟದಿಂದ ಡಿಎಂಕೆ ಇಬ್ಭಾಗವಾಯ್ತೇ ಹೊರತು, ಪಕ್ಷಕ್ಕೆ ಅಧಿಕಾರ ದಕ್ಕಲೇ ಇಲ್ಲ.
ಕುಟುಂಬ ವ್ಯಾಮೋಹಕ್ಕೆ ಒಳಗಾಗಿದ್ದ ಕರುಣಾನಿಧಿ ಬದುಕು ಮಾಜಿ ಟೆಲಿಕಾಂ ಸಚಿವ ಎ.ರಾಜಾರಿಂದ ಮತ್ತಷ್ಟು ಹಾಳಾಯ್ತು. ಸೋದರ ಸಂಬಂಧಿ ಮಾರನ್ ಕುಟುಂಬದೊಂದಿಗೆ ಸಂಬಂಧ ಹಳಸಿದ್ದರಿಂದ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್ ಬದಲಿಗೆ ಪುತ್ರಿ ಕನ್ನಿಮೋಳಿ ಸಲಹೆಯಂತೆ ಎ.ರಾಜಾರನ್ನು ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. 2-ಜಿ ತರಂಗಾಂತರ ಹಂಚಿಕೆಯಲ್ಲಿ ಸ್ವತಂತ್ರ ಭಾರತ ಕಂಡು ಕೇಳರಿಯದ ಹಗರಣದಲ್ಲಿ ಸಿಲುಕಿದ್ದ ರಾಜಾ, ಪಕ್ಷಕ್ಕೆ ಮಸಿ ಬಳಿದು ಬಿಟ್ಟರು. ರಾಜಾ ಜೊತೆಗೆ ಕನ್ನಿಮೋಳಿ ಸಹ ಜೈಲು ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಈ ಹಗರಣದ ನಂತರ ಡಿಎಂಕೆ ಮೇಲೇಳಲೇ ಇಲ್ಲ. ತಮಿಳುನಾಡಿನ ಜನತೆ ಕರುಣಾನಿಧಿಯನ್ನು ಸೋಲಿಸದಿದ್ದರೂ, ಡಿಎಂಕೆಗೆ ಅಧಿಕಾರ ನೀಡಲೇ ಇಲ್ಲ.
2011ರ ವಿಧಾನಸಭೆ ಚುನಾವಣೆ, 2013ರ ಲೋಕಸಭೆ ಚುನಾವಣೆ, 2106ರ ವಿಧಾನಸಭೆ ಚುನಾವಣೆಯಲ್ಲೂ ಡಿಎಂಕೆ ಸೋಲಿನ ಮನೆ ಸೇರಬೇಕಾಯಿತು. ತಮಿಳುನಾಡಿನ ಮೇಲೆ ಜಯಲಲಿತಾ ಎಷ್ಟರ ಮಟ್ಟಿಗೆ ಪಾರುಪತ್ಯ ಸಾಧಿಸಿದ್ದರೆಂದರೆ, ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೇರುವ ಮೂಲಕ ಇತಿಹಾಸವನ್ನೇ ಸೃಷ್ಠಿಸಿಬಿಟ್ಟಿದ್ದರು. ಆದ್ರೆ ಒಂದೂವರೆ ವರ್ಷಗಳ ಹಿಂದೆ ಸಿಎಂ ಆಗಿರುವಾಗ್ಲೇ ಜಯಲಲಿತಾ ತೀರಿಕೊಂಡರು. ಅಲ್ಲಿಗೆ ರಾಜಕಾರಣದ ಒಂದು ಶಕೆ ಅಂತ್ಯಗೊಂಡಿತ್ತು.
https://www.youtube.com/watch?v=mpTq3Jumfeg
https://www.youtube.com/watch?v=CadStB3RhRs