ಸೂರ್ಯಾನ್ವೇಷಣೆಗೆ ಸಜ್ಜಾಗಿದೆ ಆದಿತ್ಯ ಎಲ್-1
ಹೊಸ ಮೈಲುಗಲ್ಲಿನತ್ತ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ದಾಪುಗಾಲಿಟ್ಟಿದೆ. ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದಕ್ಕೆ ಕ್ಷಣಗಣನೆ ಬಾಕಿಯಿದೆ. ಈ ದೃಶ್ಯವನ್ನ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಈ ನಡುವೆ ಸೂರ್ಯನ ಸನಿಹಕ್ಕೆ ತೆರಳುವ ಸಾಹಸಕ್ಕೆ ಇಸ್ರೋ ಭರದ ಸಿದ್ಧತೆ ನಡೆಸಿದೆ. ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ (URSC) ಸಿದ್ಧಪಡಿಸಿದಲಾದ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆಗೊಳಿಸಲು ಸಜ್ಜುಗೊಳಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಆಗಸ್ವ್ 26 ರಂದು ʻಆದಿತ್ಯ ಎಲ್-1′ (Aditya-L1) ಯೋಜನೆಯ ಉಡಾವಣೆಗೆ ಇಸ್ರೊ ಮುಂದಾಗಿದೆ. ಇದು ಭಾರತದ ಪ್ರಪ್ರಥಮ ಸೂರ್ಯ ಅಧ್ಯಯನ ಯೋಜನೆ ಎನ್ನುವುದು ಇನ್ನೊಂದು ಗರಿಮೆ.
Advertisement
ಆದಿತ್ಯ ಎಲ್-1 ಯೋಜನೆಯು ಸೌರ ಬಿರುಗಾಳಿ ಹೇಗೆ ಉಂಟಾಗುತ್ತವೆ? ಅನ್ನೋದನ್ನ ಅಧ್ಯಯನ ನಡೆಸುವ ಜೊತೆಗೆ ಅವುಗಳನ್ನ ಅರ್ಥೈಸಿಕೊಳ್ಳುವ ಉದ್ದೇಶವನ್ನೂ ಹೊಂದಿದೆ. ಇದರಿಂದ ಸೂರ್ಯನ ವರ್ತನೆ, ಭೂಮಿಯ ವಾತಾವರಣದ ಮೇಲೆ ಅದರ ಪ್ರಭಾವ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಭೀಕರ ಸೌರಮಾರುತಗಳು ಅಪ್ಪಳಿಸುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಲೂ ಸಹಾಯವಾಗುತ್ತದೆ. ಅದಕ್ಕಾಗಿಯೇ ಇಸ್ರೋ ಆದಿತ್ಯ ಎಲ್-1 ಯೋಜನೆಯಲ್ಲಿ ಕರೊನಾಗ್ರಾಫ್ ಸ್ಯಾಟಲೈಟ್ ಎಂಬ ವಿಶೇಷ ಉಪಗ್ರಹವನ್ನ ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಈ ಉಪಗ್ರಹ ವಿಜ್ಞಾನಿಗಳಿಗೆ ಸೂರ್ಯ ಮತ್ತು ʻಕರೊನಾ’ ಎಂದು ಕರೆಯಲಾಗುವ ಭಾಸ್ಕರನ ಹೊರ ವಾತಾವರಣವನ್ನ ಅಧ್ಯಯನ ನಡೆಸಿ, ಸೂರ್ಯನ ವರ್ತನೆ ಮತ್ತು ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಸಹಕರಿಸುತ್ತದೆ. ಈ ಉಡಾವಣೆಗೆ ಇಸ್ರೋ ತನ್ನ ವಿಶ್ವಾಸಾರ್ಹ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಬಳಸಿಕೊಳ್ಳಲಿದೆ.
Advertisement
Advertisement
ಸೂರ್ಯನ ಸುತ್ತಲೂ ಫೋಟೋಸ್ಪಿಯರ್, ಕ್ರೋಮೊಸ್ಪಿಯರ್ ಮತ್ತು ಕರೊನಾ ಎಂಬ ಮೂರು ಅನಿಲ ಪದರಗಳು ಇರುತ್ತವೆ. ಫೋಟೋಸ್ಪಿಯರ್ ಅನ್ನೋದು ನಮಗೆ ಕಾಣುವ ಸೂರ್ಯನ ಮೇಲ್ಮೈ. ಅಲ್ಲಿಂದ ಬೆಳಕು ಬಿಡುಗಡೆಯಾಗುತ್ತದೆ. ಕ್ರೋಮೊಸ್ಪಿಯರ್ ಎನ್ನುವುದು ಫೋಟೊಸ್ಪಿಯರ್‌ನ ಮೇಲಿದ್ದು, ಸೂರ್ಯ ಗ್ರಹಣದ ಸಂದರ್ಭದಲ್ಲಿ ಕೆಂಪಾಗಿ ಗೋಚರಿಸುತ್ತದೆ. ಸೂರ್ಯನ ಅತ್ಯಂತ ಹೊರಗಿನ ಪದರವೇ ಕರೊನಾ. ಆದ್ರೆ, ಇದು ಸೂರ್ಯನ ಮೇಲ್ಮೈಗಿಂತಲೂ ಬಿಸಿಯಾಗಿರುತ್ತದೆ. ಸೂರ್ಯನ ವಾತಾವರಣ ಸೌರ ಮಾರುತಗಳನ್ನ ಸೃಷ್ಟಿಸುತ್ತದೆ. ಇವು ಭೂಮಿ ಮತ್ತು ಸಸ್ಯಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ತಜ್ಞರು ಹೇಳುತ್ತಾರೆ.
Advertisement
ಇಸ್ರೋಗೆ ಏಕೆ ಸೂರ್ಯನ ಮೇಲೆ ಆಸಕ್ತಿ?
ಆದಿತ್ಯ ಎಲ್-1 ನೌಕೆ ಯು ದೀರ್ಘಾವಧಿ (ವೈಜ್ಞಾನಿಕ ಅನ್ವೇಷಣೆ) ಹಾಗೂ ಅಲ್ಪಾವಧಿ (ಸೌರ ಮಾರುತಗಳಿಂದ ನಮ್ಮ ಉಪಗ್ರಹಗಳ ರಕ್ಷಣೆ) ಯೋಜನೆಯ ಉದ್ದೇಶದಿಂದ ಈ ಸಾಹಸಕ್ಕೆ ಇಸ್ರೋ ಮುಂದಾಗಿದೆ. 2006ರಲ್ಲಿ ಈ ಬಗ್ಗೆ ಭಾರತೀಯ ಆಸ್ಟ್ರೋಫಿಸಿಕ್ಸ್ ಮತ್ತು ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ವಿಜ್ಞಾನಿಗಳ ಗುಂಪು ಇಸ್ರೋಗೆ ಪ್ರಸ್ತಾಪಿಸಿತ್ತು. ಸೂರ್ಯನಿಂದ ಹೊರಬರುವ ವಸ್ತುಗಳಿಂದ ನಮ್ಮ ಉಪಗ್ರಹಗಳನ್ನು ರಕ್ಷಿಸುವ ಉದ್ದೇಶವನ್ನೂ ಒತ್ತಿ ಹೇಳಿತ್ತು. ಆದರೆ ಇಸ್ರೋ ಮಾಜಿ ಅಧ್ಯಕ್ಷರಾದ ಪ್ರೊ.ಯು.ಆರ್ ರಾವ್ ಮಿಷನ್ ವ್ಯಾಪ್ತಿಯನ್ನ ವಿಸ್ತರಿಸಲು ಸಲಹೆ ನೀಡಿದ್ದರು. ಇದೀಗ ಆಯೋಜನೆ ಮುನ್ನೆಲೆಗೆ ಬಂದಿದ್ದು, ಶೀಘ್ರದಲ್ಲೇ ಉಡಾವಣೆಗೊಳ್ಳಲಿದೆ. ಇದರಿಂದ ಚಂದ್ರಯಾನದ ಬಳಿಕ ಸೂರ್ಯಾನ್ವೇಷಣೆ ಇಸ್ರೋಗೆ ಮತ್ತಷ್ಟು ಬಲ ತುಂಬಲಿದೆ.
ನಮ್ಮ ಉಪಗ್ರಹಗಳನ್ನು ಹಾನಿಗೊಳಿಸಬಹುದಾದ ಸೌರ ಚಂಡಮಾರುತಗಳ ವಿರುದ್ಧ ಕಾರ್ಯಾಚರಣೆ ನಡೆಸುವುದು, ಜೊತೆಗೆ ಸೂರ್ಯನನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಇದರ ಪರಿಕಲ್ಪನೆಯಾಗಿದೆ. ಸೌರ ಚಂಡಮಾರುತಗಳು ಅನೇಕ ರೂಪಗಳಲ್ಲಿ ಹೊರಬರುತ್ತವೆ. ಉದಾಹರಣೆಗೆ ಕರೋನಲ್ ಮಾಸ್ ಇಜೆಕ್ಷನ್‌ಗಳು (ಸೂರ್ಯನಿಂದ ಬಿಲಿಯನ್ ಟನ್‌ಗಳಷ್ಟು ವಸ್ತುವನ್ನು ಹೊರಹಾಕಲಾಗುತ್ತದೆ ಇದು ಭೂಮಿ ಸೇರಿದಂತೆ ಎಲ್ಲಿಂದಲಾದರೂ ಅಪ್ಪಳಿಸಬಹುದು), ಸೌರ ಜ್ವಾಲೆಗಳು, ಹಠಾತ್ ಸ್ಫೋಟಗಳು, ಬೆಂಕಿಯ ಕೆನ್ನಾಲಿಗೆ ಹೊರಸೂಸುವಿಕೆ, ಎಕ್ಸ್-ಕಿರಣಗಳು, ವಿದ್ಯುತ್ಕಾಂತೀಯ ಅಲೆಗಳು ಅಥವಾ ಹೆಚ್ಚಿನ ಶಕ್ತಿಯ ಕಣಗಳನ್ನು ಬಾಹ್ಯಾಕಾಶದಾದ್ಯಂತ ಹರಡಬಹುದು ಇದರಿಂದ ರೇಡಿಯೊ ಸಂವಹನಗಳನ್ನ ಅಡ್ಡಿಪಡಿಸಬಹುದು ಮತ್ತು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಹಾನಿ ಮಾಡಬಹುದು. ಇದೆಲ್ಲದರ ಬಗ್ಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಇಸ್ರೋ ಸೂರ್ಯನ ಮೇಲೆ ಸವಾರಿ ಮಾಡಲು ಮುಂದಾಗಿದೆ.
ಸೂರ್ಯ ಸುಮಾರು 4.5 ಶತಕೋಟಿ ವರ್ಷಗಳಷ್ಟು ಹಳೆಯ ನಕ್ಷತ್ರ, ಪ್ರಮುಖವಾಗಿ ಜಲಜನಕ ಮತ್ತು ಹೀಲಿಯಂನಿಂದ ಆವೃತ್ತವಾಗಿದೆ. ಸೂರ್ಯ ನಮ್ಮ ಸೌರವ್ಯೂಹದ ಕೇಂದ್ರ ಸ್ಥಾನದಲ್ಲಿದ್ದು, ಭೂಮಿಯಿಂದ 93 ದಶಲಕ್ಷಮೈಲು (151 ದಶಲಕ್ಷಕಿ.ಮೀ.) ದೂರದಲ್ಲಿದೆ. ಸೂರ್ಯನ ಶಕ್ತಿ ಭೂಮಿಯಲ್ಲಿ ಜೀವಿಗಳ ಅಸ್ತಿತ್ವಕ್ಕೆ ಅತ್ಯಂತ ಅವಶ್ಯ. ಸೌರಮಂಡಲದಲ್ಲೇ ಅತ್ಯಂತ ಬೃಹತ್ತಾಗಿರುವ ಸೂರ್ಯನ ಒಳಗೆ ಸುಮಾರು 13 ಲಕ್ಷ ಭೂಮಿಗಳನ್ನು ಜೋಡಿಸಿಡಬಹುದಾಗಿದೆ. ಅದರ ತಾಪಮಾನ ಅಂದಾಜು 1.5 ಕೋಟಿ ಡಿಗ್ರಿ ಸೆಲ್ಸಿಯಸ್‌ನಷ್ಟು ಸೂರ್ಯನ ಚಟುವಟಿಕೆಗಳಾದ ಉಷ್ಣ ಹೊರಸೂಸುವಿಕೆ, ಚಾರ್ಜ್ ಹೊಂದಿರುವ ಕಣಗಳ ಚಲನೆ ಸಂಪೂರ್ಣ ಸೌರವ್ಯೂಹದ ಮೇಲೆ ಪರಿಣಾಮ ಬೀರುತ್ತವೆ ಎಂದು ಬಾಹ್ಯಾಕಾಶ ತಜ್ಞರು ವಿವರಿಸಿದ್ದಾರೆ.
ಸೂರ್ಯನತ್ತ ಜಿಗಿದವರು ಯಾರ‍್ಯಾರು?
1960ರಲ್ಲಿ ಅಮೆರಿಕ ನಾಸಾ ಕೈಗೊಂಡಿದ್ದ ಪಯೋನಿರ್-5 ಮೊಟ್ಟ ಮೊಲದ ಸೂರ್ಯನ ಅನ್ವೇಷಣೆಯಾಗಿತ್ತು. ಈವರೆಗೆ ಒಟ್ಟು 14 ಬಾರಿ ಸೂರ್ಯನ ಅನ್ವೇಷಣೆಗಳನ್ನ ಕೈಗೊಂಡಿದೆ. ಅಮೆರಿಕ, ಜರ್ಮನಿ ಹಾಗೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸೇರಿ ಒಟ್ಟು 22 ಬಾರಿ ಸೂರ್ಯನ ಕಾರ್ಯಾಚರಣೆ ನಡೆದಿದೆ.
ಆದಿತ್ಯ ಎಲ್1 ಎಷ್ಟು ಪವರ್ ಫುಲ್?
ಉಪಗ್ರಹ 1,500 ಕೆಜಿ (3,300 LB) ತೂಕ ಹೊಂದಿದೆ. ಈ ಉಪಗ್ರಹ ಹೊಂದಿರುವ ಪೇಲೋಡ್‌ಗಳು ಸೂರ್ಯನ ವಾತಾವರಣ ಮತ್ತು ಭೂಮಿಯ ಮೇಲೆ ಅದರ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಈ ಪೇಲೋಡ್‌ಗಳು ಸೌರ ಬಿರುಗಾಳಿ ಮತ್ತು ಇತರ ಬಾಹ್ಯಾಕಾಶ ಹವಾಮಾನದ ಕುರಿತು ನಿಖರವಾದ ಮಾಹಿತಿ ನೀಡಿ, ನಮ್ಮ ಉಪಗ್ರಹಗಳು ಮತ್ತು ತಂತ್ರಜ್ಞಾನಗಳು ಹಾಳಾಗದಂತೆ ಕಾಪಾಡಲು ನೆರವಾಗುತ್ತವೆ. ಸೂರ್ಯನ ಅನ್ವೇಷಣೆ ಮಾಡಬೇಕಾದರೆ ಅಷ್ಟೆಲ್ಲಾ ತಾಪಮಾನವನ್ನ ಗ್ರಹಿಸಿ ಡೇಟಾ ಕಳುಹಿಸಬೇಕು ಅಂದರೆ ಉಪಗ್ರಹವೂ ಅಷ್ಟೇ ಸಾಮರ್ಥ್ಯ ಹೊಂದಿರಬೇಕಾಗುತ್ತದೆ.
ಯಾವುದು ಹೇಗೆ ಕಾರ್ಯ ನಿರ್ವಹಿಸುತ್ತವೆ?
* ವಿಸಿಬಲ್ ಎಮಿಷನ್ ಲೈನ್ ಕರೊನಾಗ್ರಾಫ್ (VELC):
ಈ ಪೇಲೋಡ್ ಸೂರ್ಯನ ವಾತಾವರಣದ ಅತ್ಯಂತ ಹೊರಪದರವಾದ ಕರೊನಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ.
* ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT):
ಈ ಪೇಲೋಡ್ ಸೂರ್ಯನ ವಾತಾವರಣದ ಒಂದು ಪದರವಾದ ಕ್ರೋಮೊಸ್ಪಿಯರ್ ಚಿತ್ರಗಳನ್ನ ತೆಗೆಯಲಿದೆ. ಈ ಕ್ರೋಮೊಸ್ಪಿಯರ್ ಎನ್ನುವುದು ಸೂರ್ಯನ ವಾತಾವರಣದಲ್ಲಿ ಫೋಟೊಸ್ಪಿಯರ್ ಮೇಲಿರುತ್ತದೆ.
* ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪಿರಿಮೆಂಟ್ (ASPEX):
ಈ ಪೇಲೋಡ್ ಸೋಲಾರ್ ವಿಂಡ್, ಅಂದರೆ ಚಾರ್ಜ್ ಹೊಂದಿರುವ ಕಣಗಳ ಚಲನೆಯನ್ನ ಅಳೆಯಲು ಬಳಕೆಯಾಗುತ್ತದೆ.
* ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ (PAPA):
ಈ ಪೇಲೋಡ್ ಸೂರ್ಯನ ಸುತ್ತಲೂ ಇರುವ ಪ್ಲಾಸ್ಮಾ ಅಥವಾ ಚಾರ್ಜ್ ಹೊಂದಿರುವ ಅನಿಲವನ್ನ ಅಳೆಯಲು ನೆರವಾಗುತ್ತದೆ.
* ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟೋಮೀಟರ್ (SOLEXS):
ಸೂರ್ಯನಿಂದ ಹೊರಬರುವ ಉತ್ಕೃಷ್ಟ ಶಕ್ತಿಯ ಎಕ್ಸ್-ರೇಗಳನ್ನು ಅಳೆಯುವ ಪೇಲೋಡ್ ಇದು.
* ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್ ರೇ ಸೆಕ್ಟೋಮೀಟರ್ (HEL1OS):
ಈ ಪೇಲೋಡ್ ಸೂರ್ಯನಿಂದ ಹೊರಬರುವ ಹೈ ಎನರ್ಜಿ ಎಕ್ಸ್ ರೇ ಹೊರಸೂಸುವಿಕೆಯನ್ನು ಅಳೆಯುತ್ತದೆ.
* ಮ್ಯಾಗ್ನೆಟೊಮೀಟರ್:
ಸೂರ್ಯನ ಮತ್ತು ಸುತ್ತಮುತ್ತಲಿನ ಕಾಂತಕ್ಷೇತ್ರವನ್ನು ಅಳೆಯುವ ಪೇಲೋಡ್ ಇದು.
Web Stories