ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

Public TV
3 Min Read
northrop b 2 spirit stealth bomber 1

– ಸದ್ಯದ ವಿಶ್ವದ ಅತ್ಯಂತ ಶಕ್ತಿಶಾಲಿ ಬಾಂಬ್‌ ಎಂದೇ ಪ್ರಸಿದ್ಧಿ
– ಬಿ2 ಯುದ್ಧ ವಿಮಾನದಿಂದ ಬಾಂಬ್‌ ದಾಳಿ

ವಾಷಿಂಗ್ಟನ್‌: ಇಸ್ರೇಲ್‌- ಇರಾನ್‌ (Isreal-Iran) ಮಧ್ಯೆ ನಡೆಯುತ್ತಿರುವ ಕಾದಾಟಕ್ಕೆ ಅಮೆರಿಕ (USA) ಈಗಾಗಲೇ ಅಧಿಕೃತವಾಗಿ ಎಂಟ್ರಿಯಾಗಿದೆ. ಈಗ ಇರಾನ್‌ನ ಫೋರ್ಡೋ ಪರಮಾಣು ಘಟಕ (Fordo Nuclear Facility) ಮೇಲೆ ದಾಳಿ ಮಾಡಲು ಅಮೆರಿಕ 14,000 ಕೆಜಿ ತೂಕದ ಬಾಂಬ್‌ ಹಾಕುತ್ತಾ ಎಂಬ ಪ್ರಶ್ನೆ ಎದ್ದಿದೆ.

ಹೌದು, ಇರಾನಿನ ಪರಮಾಣು ಘಟಕಗಳ ಮೇಲೆ ಇಸ್ರೇಲ್‌ ದಾಳಿ ಮಾಡಿದರೂ ಸಂಪೂರ್ಣ ಯಶಸ್ಸು ಸಿಕಿಲ್ಲ. ಇರಾನಿನ ಶಕ್ತಿ ಯಾವುದು ಎಂದರೆ ಅದು ಫೋರ್ಡೋ ಪರಮಾಣು ಘಟಕ. ಈ ಘಟಕದ ಮೇಲೆ ದಾಳಿ ಮಾಡುವುದು ಅಷ್ಟು ಸುಲಭವಲ್ಲ.

Fordo Nuclear Facility
ಇರಾನ್‌ನ ಫೋರ್ಡೋ ಪರಮಾಣು ಘಟಕ

ಇರಾನ್‌ ರಾಜಧಾನಿ ತೆಹ್ರಾನ್‌ನಿಂದ 100 ಕಿ.ಮೀ ದೂರದಲ್ಲಿರುವ ಫೋರ್ಡೋ ಘಟಕವನ್ನು ಬೆಟ್ಟದ ಮೇಲೆ ಸ್ಥಾಪನೆ ಮಾಡಲಾಗಿದೆ. ಫೋರ್ಡೊ ಅತ್ಯಂತ ರಹಸ್ಯ ಮತ್ತು ಬಿಗಿ ಭದ್ರತೆಯ ಸೌಲಭ್ಯವಾಗಿದ್ದು 2009 ರಲ್ಲಿ ಈ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬಂದಿತ್ತು.

ಇರಾನ್‌ನ ಪವಿತ್ರ ನಗರವಾದ ಕೋಮ್‌ಗೆ ಹತ್ತಿರದಲ್ಲಿ ನಿರ್ಮಾಣವಾಗಿರುವ ಈ ಘಟಕದ ನಿಜವಾದ ಗಾತ್ರ ಮತ್ತು ಒಳಗಡೆ ಯಾವೆಲ್ಲ ಸಂಶೋಧನೆಗಳು ನಡೆಯುತ್ತಿದೆ ಎನ್ನುವುದು ಇನ್ನೂ ಊಹಾಪೋಹಗಳ ವಿಷಯವಾಗಿದೆ. ಹೀಗಿದ್ದರೂ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ ಕೆಲ ವರ್ಷಗಳ ಹಿಂದೆ ಕದ್ದ ಇರಾನಿನ ದಾಖಲೆಗಳಿಂದ ಕೆಲವು ವಿವರಗಳು ಬಹಿರಂಗವಾಗಿದೆ. ಇದನ್ನೂ ಓದಿ: ಎಲ್ಲಿ ಅಡಗಿರೋದು ಗೊತ್ತಿದೆ – ಈಗ ಹತ್ಯೆ ಮಾಡಲ್ಲ, ಖಮೇನಿ ಶರಣಾಗಬೇಕು: ಟ್ರಂಪ್‌ ವಾರ್ನಿಂಗ್‌

bunker buster bomb GBU 57AB Massive Ordinance Penetrator 3

ಈ ಘಟಕದ ಮುಖ್ಯ ಸಭಾಂಗಣವು ನೆಲದಡಿಯಲ್ಲಿ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿದೆ. ಇಷ್ಟು ಅಡಿ ಆಳದಲ್ಲಿರುವ ಈ ಘಟಕವನ್ನು ಇಸ್ರೇಲ್ ಹೊಂದಿರುವ ಯಾವುದೇ ವೈಮಾನಿಕ ಬಾಂಬ್‌ನಿಂದ ಧ್ವಂಸ ಮಾಡಲು ಸಾಧ್ಯವಿಲ್ಲ.

ಇಷ್ಟು ಆಳದಲ್ಲಿ ನಿರ್ಮಾಣವಾಗಿರುವ ಪರಮಾಣು ಘಟಕವನ್ನು ಧ್ವಂಸ ಮಾಡಬೇಕಾದರೆ ಅಮೆರಿಕ ನಿರ್ಮಿತ GBU-57A/B Massive Ordinance Penetrator ಬಾಂಬ್‌ನಿಂದ ಮಾತ್ರ ಸಾಧ್ಯ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

bunker buster bomb GBU 57AB Massive Ordinance Penetrator 2

2011 ರಿಂದ ಈ ಬಾಂಬ್‌ ಅಮೆರಿಕ ವಾಯುಸೇನೆಯ ಬತ್ತಳಿಕೆಯಲ್ಲಿದೆ. 6.2 ಮೀಟರ್‌ ಉದ್ದದ ಈ ಬಾಂಬ್‌ 13,608 ಕೆಜಿ ತೂಕವನ್ನು ಹೊಂದಿದೆ. ಈ ಬಾಂಬ್‌ ಅನ್ನು ʼಬಂಕರ್‌ ಬಸ್ಟರ್‌ʼ ಬಾಂಬ್‌ ಎಂದೇ ಕರೆಯಲಾಗುತ್ತದೆ. ಅಂದಾಜು ಸುಮಾರು 200 ಮೀಟರ್‌ ಆಳದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಈ ಬಾಂಬ್‌ ಹೊಂದಿದೆ. 2007 ರಲ್ಲಿ ಈ ಬಾಂಬ್‌ ಪ್ರಯೋಗ ನಡೆದು 2011 ರಲ್ಲಿ 16 ಬಂಕರ್‌ ಬಾಂಬ್‌ ಅಮೆರಿಕ ವಾಯುಸೇನೆಗೆ ಸೇರ್ಪಡೆಯಾಗಿತ್ತು.

ಜಿಪಿಎಸ್‌ ಆಧಾರಿತ ಈ ಬಾಂಬ್‌ ವಿನ್ಯಾಸವನ್ನು ಬೋಯಿಂಗ್‌ ಕಂಪನಿ ಮಾಡಿದ್ದು ಅಮೆರಿಕ ವಾಯುಸೇನೆ ಈ ಉತ್ಪಾದನೆ ಮಾಡಿದೆ. ಅಮೆರಿಕದ ವಾಯುಪಡೆಯ ಬಳಿ ಇರುವ ಅತ್ಯಂತ ಶಕ್ತಿಶಾಲಿ ಪರಮಾಣು ರಹಿತ ಬಾಂಬ್ ಎಂದೇ ಇದನ್ನು ಕರೆಯಲಾಗುತ್ತದೆ. ಇದನ್ನೂ ಓದಿ: ಇರಾನ್‌ ವಾರ್‌ ಟೈಂ ಕಮಾಂಡರ್‌ ಹತ್ಯೆ – ಖಮೇನಿ ಹತ್ಯೆ ಬಳಿಕವಷ್ಟೇ ಯುದ್ಧಕ್ಕೆ ವಿರಾಮ ಎಂದ ಇಸ್ರೇಲ್‌

bunker buster bomb GBU 57AB Massive Ordinance Penetrator 1

ಈ ಬಾಂಬ್‌ ಅನ್ನು ಹಾಕಬೇಕಾದರೆ ಅಮರಿಕದ ಬಳಿ ಇರುವ ಶಕ್ತಿಶಾಲಿ Northrop B-2 Spirit ಯುದ್ಧವಿಮಾನದಿಂದ ಮಾತ್ರ ಸಾಧ್ಯ. ಬಾವಲಿಯಂತೆ ಕಾಣುವ ಈ ವಿಮಾನಕ್ಕೆ ಒಂದು ಬಾರಿ ಇಂಧನ ತುಂಬಿಸಿದರೆ 11 ಸಾವಿರ ಕಿ.ಮೀ ದೂರವನ್ನು ಕ್ರಮಿಸಬಲ್ಲದು. ಅಲ್ಲದೇ ನಿರಂತರವಾಗಿ 44 ಗಂಟೆಗಳ ಕಾಲ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನವು ದೀರ್ಘಾವಧಿಯ ಕಾರ್ಯಾಚರಣೆ ನಡೆಸುವುದರಿಂದ ಶೌಚಾಲಯ, ಹಾಸಿಗೆ ಜೊತೆಗೆ ಮೈಕ್ರೋವೇವ್ ಹೊಂದಿದೆ. ಇಬ್ಬರು ಪೈಲಟ್‌ ಪೈಕಿ ಒಬ್ಬರು ವಿಶ್ರಾಂತಿ ಪಡೆದರೆ ಇನ್ನೊಬ್ಬರು ವಿಮಾನವನ್ನು ಹಾರಿಸುತ್ತಿರುತ್ತಾರೆ. ಇದರಿಂದಾಗಿ ಕಾರ್ಯಾಚರಣೆಯು ಅಡಚಣೆಯಿಲ್ಲದೆ ಮುಂದುವರಿಯುತ್ತದೆ.

2001 ರಲ್ಲಿ ಐದು ಬಿ-2 ವಿಮಾನಗಳು ಅಫ್ಘಾನಿಸ್ತಾನದ ಮೇಲೆ ನಿರಂತರ 44 ಗಂಟೆಗಳ ಕಾರ್ಯಾಚರಣೆ ನಡೆಸಿತ್ತು. ಇದು ಇತಿಹಾಸದಲ್ಲಿ ಅತಿ ಉದ್ದದ ವಾಯು ಯುದ್ಧ ಕಾರ್ಯಾಚರಣೆ ಎಂಬ ಹೆಸರನ್ನು ಪಡೆದಿದೆ.

northrop b 2 spirit stealth bomber 2

ಸದ್ಯ ಅಮೆರಿಕ ವಾಯುಸೇನೆ 19 ಬಿ-2 ಬಾಂಬರ್‌ ಯುದ್ಧ ವಿಮಾನಗಳನ್ನು ಹೊಂದಿದೆ. B-2 ಏಕಕಾಲದಲ್ಲಿ ಎರಡು MOP ಬಾಂಬ್‌ಗಳನ್ನು ಮಾತ್ರ ಸಾಗಿಸಬಲ್ಲದು. ಹೀಗಾಗಿ ಅಮೆರಿಕ ಈ ಬಾಂಬ್‌ ಹಾಕುವ ಮೂಲಕ ಇರಾನಿನ ಪರಮಾಣು ಘಟಕವನ್ನು ನಾಶ ಮಾಡುತ್ತಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.

Share This Article