ಸರ್ಕಾರದ ಬೊಕ್ಕಸ ಖಾಲಿ ಮಾಡಿರೋದೆ ಸಿದ್ದರಾಮಯ್ಯ ಸಾಧನೆ – ಸಿಎಂ ವಿರುದ್ಧ ಜೆಡಿಎಸ್ ಕಿಡಿ

Public TV
3 Min Read
jds flag

ಬೆಂಗಳೂರು: ಅನುದಾನ ಸಿಗುತ್ತಿಲ್ಲ ಎಂಬ ಕಾಂಗ್ರೆಸ್ ಶಾಸಕರ ಅಳಲು ವಿಚಾರಕ್ಕೆ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ (JDS) ಕಿಡಿಕಾರಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ಅನುದಾನ ಕೊಡಿ ಸಿಎಂ ಎಂದು ಸಿದ್ದರಾಮಯ್ಯ (Siddaramaiah) ವಿರುದ್ಧ ಲೇವಡಿ ಮಾಡಿದೆ.

ಜೆಡಿಎಸ್ ಟ್ವೀಟ್‌ನಲ್ಲೇನಿದೆ?
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಹೆಚ್.ಆರ್.ಗವಿಯಪ್ಪ ಕಣ್ಣೀರು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಬೊಕ್ಕಸದಲ್ಲಿ ಹಣವಿಲ್ಲದ ಅನುದಾನ ಕಡಿತ. ವಿಜಯನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತ. ಇದೇನಾ ಕಾಂಗ್ರೆಸ್ ನ್ಯಾಯ? ವಚನ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹುಸಿ ಭರವಸೆಗಳಿಗೆ ಸ್ವಪಕ್ಷೀಯ ಶಾಸಕರೇ ಬೇಸತ್ತಿದ್ದಾರೆ.

ಅಭಿವೃದ್ಧಿಗೆ ಅಡ್ಡಿಯಾದ ಕಾಂಗ್ರೆಸ್ ಅವೈಜ್ಞಾನಿಕ ಗ್ಯಾರಂಟಿ. ಸಿದ್ದರಾಮಯ್ಯನವರ ಸುಳ್ಳುಗಳನ್ನು ಸ್ವತಃ ಕಾಂಗ್ರೆಸ್ ಶಾಸಕರೇ ಬಯಲಿಗೆಳೆಯುತ್ತಿದ್ದಾರೆ. ವಿಜಯನಗರ (Vijayanagar) ವಿಧಾನಸಭಾ ಕ್ಷೇತ್ರದ ಶಾಸಕ ಗವಿಯಪ್ಪ ನನ್ನ ಬಳಿ ಹಣವಿಲ್ಲ ನನ್ನ ಕ್ಷೇತ್ರದ ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನಾನೇನು ಮಾಡಲಿ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಅಸಹಾಯಕತೆ ಹೊರಹಾಕಿದ್ದಾರೆ.

ರಾಜ್ಯದ ಹಣ ಯಾರ ಯಾರ ಜೇಬು ಸೇರುತ್ತಿದೆ? ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ದುಡ್ಡಿಲ್ಲದ ಖಾಲಿ ‘ಕೈ’ ಆಡಳಿತ. ರಾಜು ಕಾಗೆ ಬಳಿಕ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕರಾದ ಗವಿಯಪ್ಪ, ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ.

ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಗೆ ಬರೀ‌ 10 ಕೋಟಿ ರೂ. ಅನುದಾನ‌ ಕೊಡಲಾಗಿದೆ ಎಂದು ಗವಿಯಪ್ಪ ಅಸಮಾಧಾನ ತೋಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ. ಆದರೆ ಈ ಬಾರಿ ಅನುದಾನ ಸಿಗದೆ, ಕ್ಷೇತ್ರದಲ್ಲಿ ಆಸ್ಪತ್ರೆಗಳು, ರಸ್ತೆಗಳ ಸಮಸ್ಯೆಗಳು ಸಾಕಷ್ಟಿದೆ. ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ ಎಂದು ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಧ್ಯಕ್ಷ ಆಡಳಿತಕ್ಕೆ ಉದಾಹರಣೆಯಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣಹೊಂದಿಸಲು ಹೆಣಗಾಡುತ್ತಿರುವ ಸಿಎಂ, ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿಲ್ಲ.‌ ಸ್ವತಃ ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಕಣ್ಣೀರಿಡುತ್ತಿದ್ದರೂ ಮುಖ್ಯಮಂತ್ರಿಗಳು ಕಿವಿಗೊಡುತ್ತಿಲ್ಲ. ಯಾಕಂದರೆ ಸರ್ಕಾರದ ಬೊಕ್ಕಸ ಖಾಲಿ ಮಾಡಿರುವುದೇ ಸಿದ್ದರಾಮಯ್ಯ ಅವರ ಸಾಧನೆ. ಅವೈಜ್ಞಾನಿಕ ಗ್ಯಾರಂಟಿಯಿಂದಾಗಿ ನಿಜವಾದ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತೆ ಮಾಡಿದೆ ಭ್ರಷ್ಟ ಕಾಂಗ್ರೆಸ್. ವೇದಿಕೆಯಲ್ಲಿ ದೊಡ್ಡ ದೊಡ್ಡ ಹುಸಿ ಭಾಷಣಗಳನ್ನು ಮಾಡುವ ಸಿದ್ದರಾಮಯ್ಯ ಸರ್ಕಾರ ನ್ಯಾಯಯುತವಾಗಿ ಕ್ಷೇತ್ರಗಳಿಗೆ ನಿಧಿ ಹಂಚಿಕೆ ಮಾಡಲು ಕೈಲಾಗದ ದುಸ್ಥಿತಿ ತಲುಪಿದೆ. ಈ ಸತ್ಯವನ್ನು ಕಾಂಗ್ರೆಸ್ ಶಾಸಕ ಗವಿಯಪ್ಪ ಬಿಚ್ಚಿಟ್ಟಿದ್ದಾರೆ.

ಕೊಟ್ಟಿರುವ 12 ಕೋಟಿ ರೂ.ಆಸ್ಪತ್ರೆಗೆ ಸಾಲುತ್ತಿಲ್ಲ. ಇನ್ನಿತರ ಯೋಜನೆಗಳಿಗೆ ನಾವೇನು ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಆದರೆ ಹಗರಣಗಳಲ್ಲಿ ಸಿಲುಕಿರುವ ಭ್ರಷ್ಟ ಸಿಎಂ ಸಿದ್ದರಾಮಯ್ಯ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ನಾಡಿನ ದುರಂತ. ಅನುದಾನದ ಕೊರತೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಮತ್ಯಾಕೆ ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಹಾಗೂ ಪಕ್ಷಪಾತ ಮಾಡುತ್ತಿರುವುದು? ಇತರರು ಕೋಟಿ ಕೋಟಿ ಹಣ ಪಡೆಯುತ್ತಿರುವಾಗ ವಿಜಯನಗರವನ್ನೇಕೆ ಕಡೆಗಣಿಸಲಾಗುತ್ತಿದೆ? ಖಾಲಿ ‘ಕೈ’ ಸರ್ಕಾರದ ಹುಸಿ ಭರವಸೆಗಳ ವಿರುದ್ಧ ಕಾಂಗ್ರೆಸ್ ಶಾಸಕ ಗವಿಯಪ್ಪ ಅವರ ಅಸಹನೆ ಮತ್ತು ಆಕ್ರೋಶ ನ್ಯಾಯಯೋಚಿತವಾಗಿಯೇ ಇದೆ ಎಂದು ಜೆಡಿಎಸ್‌ ಗವಿಯಪ್ಪ ಪರ ಬ್ಯಾಟ್‌ ಬೀಸಿದೆ.

Share This Article