ಏನಿದು ಪೋಲಾವರಂ ಯೋಜನೆ? ಒಡಿಶಾದಲ್ಲಿ ವಿರೋಧ ಯಾಕೆ?

Public TV
3 Min Read
POLAVARAM DAM

ಪೋಲಾವರಂ ಯೋಜನೆಯು (Polavaram Dam Project) ಆಂಧ್ರಪ್ರದೇಶದ (Andhra Pradesh) ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಗೋದಾವರಿ ನದಿಗೆ ನಿರ್ಮಿಸಲಾಗುತ್ತಿರುವ ಬಹುಪಯೋಗಿ ನೀರಾವರಿ ಯೋಜನೆಯಾಗಿದೆ. ಈ ಯೋಜನೆಯು ಗೋದಾವರಿ ನದಿಯ ಮೇಲಿನ ಅಂತರರಾಜ್ಯ ಯೋಜನೆಯಾಗಿದ್ದು, ಇದನ್ನು 1980 ರಲ್ಲಿ ಗೋದಾವರಿ ಜಲ ವಿವಾದಗಳ ನ್ಯಾಯಮಂಡಳಿಯ (GWDT) ಶಿಫಾರಸುಗಳ ಭಾಗವಾಗಿ ನಿರ್ಮಿಸಲಾಗುತ್ತಿದೆ. 

1980ರ ಏ.2 ರಂದು, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳು 36 ಲಕ್ಷ ಕ್ಯುಸೆಕ್‌ ಸಾಮರ್ಥ್ಯದ 150 ಅಡಿ ಜಲಾಶಯ ನಿರ್ಮಾಣದ ಈ ಯೋಜನೆಗೆ ಒಪ್ಪಂದ ಮಾಡಿಕೊಂಡಿವೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ (ಈಗ ಛತ್ತೀಸ್‌ಗಢವೂ ಸೇರಿಕೊಂಡಿದೆ) ರಾಜ್ಯಗಳ ನಡುವೆ ಗೋದಾವರಿ ನದಿ ನೀರಿಗೆ ಸಂಬಂಧಿಸಿದ ನೀರು ಹಂಚಿಕೆ ವಿವಾದಗಳನ್ನು ಪರಿಹರಿಸಲು ಗೋದಾವರಿ ಜಲ ವಿವಾದಗಳ ನ್ಯಾಯಮಂಡಳಿ (GWDT) ಸ್ಥಾಪಿಸಲಾಯಿತು. ಗೋದಾವರಿ ನದಿ ನೀರಿನ ಬಳಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣವು ಆಂಧ್ರಪ್ರದೇಶಕ್ಕೆ 80 ಟಿಎಂಸಿ ಗೋದಾವರಿ ನೀರನ್ನು ನೀರಾವರಿ ಮತ್ತು ಇತರ ಬಳಕೆಗೆ 75% ತಿರುಗಿಸಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಒಪ್ಪಂದ ಅಡಿಯಲ್ಲಿ ಎಲ್ಲಾ ರಾಜ್ಯಗಳ ನಡುವೆ ಸಮಾನ ನೀರಿನ ಹಂಚಿಕೆಯನ್ನು ಖಚಿತಪಡಿಸುತ್ತದೆ.

POLAVARAM DAM 1

ಈಗ ಏಕೆ ಇದು ಸುದ್ದಿಯಲ್ಲಿದೆ? 

2027ರ ಒಳಗೆ ಪೋಲಾವರಂ ಯೋಜನೆ ಪೂರ್ಣಗೊಳಿಸುವುದಾಗಿ ಆಂದ್ರಪ್ರದೇಶದ ಸರ್ಕಾರ ಘೋಷಿಸಿದೆ. ಇದರ ಬೆನ್ನಲ್ಲೇ, ಒಡಿಶಾದ (Odisha) ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಆಂಧ್ರಪ್ರದೇಶದ ಪೋಲಾವರಂ ವಿವಿಧೋದ್ದೇಶ ಯೋಜನೆಯನ್ನು ವಿರೋಧಿಸಿದೆ. ಈ ಯೋಜನೆಯು ಒಡಿಶಾದ ಮಲ್ಕನ್‌ಗಿರಿಯಲ್ಲಿ ಬುಡಕಟ್ಟು ಜನಾಂಗದವರು ವಾಸಿಸುವ ಹೆಚ್ಚಿನ ಭೂಮಿ ಮುಳುಗಡೆಗೆ ಕಾರಣವಾಗುತ್ತದೆ ಎಂದು ಬಿಜೆಡೆ ಆರೋಪಿಸಿದೆ.

ಪೋಲಾವರಂ ಯೋಜನೆಯ ಪರಿಣಾಮಗಳೇನು? 

ಸಾಮಾಜಿಕ ಪರಿಣಾಮ: ಈ ಯೋಜನೆಯು ಸರಿಸುಮಾರು 276 ಹಳ್ಳಿಗಳಾದ್ಯಂತ 150,000 ಜನರನ್ನು ಸ್ಥಳಾಂತರಿಸುವ ನಿರೀಕ್ಷೆಯಿದೆ. ಇವುಗಳಲ್ಲಿ ಹೆಚ್ಚಿನವು ಬುಡಕಟ್ಟು ಸಮುದಾಯಗಳಾಗಿವೆ. ಪ್ರತಿ ಐದು ಎಕರೆ ನೀರಾವರಿಗೆ, ಒಂದು ಬುಡಕಟ್ಟು ಕುಟುಂಬವು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಮೂಲಸೌಕರ್ಯದ ಒತ್ತಡ: ಯೋಜನೆಯು ಪುನರ್ವಸತಿ ಪ್ರಯತ್ನಗಳಿಗೆ ಹಣಕಾಸಿನ ಸವಾಲುಗಳನ್ನು ಎದುರಿಸಲಿದೆ. ಇದು ಸ್ಥಳಾಂತರಗೊಂಡ ಜನರ ಮೇಲೆ ತೀವ್ರ ಪರಿಣಾಮ ಬೀರಬಹುದು. ಇದು ಕಾಲುವೆಗಳಂತಹ ಅಗತ್ಯ ಮೂಲಸೌಕರ್ಯಗಳ ಕೆಲಸವನ್ನು ಸ್ಥಗಿತಗೊಳಿಸುವುದಕ್ಕೆ ಕಾರಣವಾಗುತ್ತದೆ. 

POLAVARAM DAM 2

ಪರಿಸರದ ಮೇಲಿನ ಪ್ರಭಾವ: ಅಣೆಕಟ್ಟಿನ ಹಿನ್ನೀರು ಅಂದಾಜು 3,731 ಹೆಕ್ಟೇರ್ ಅರಣ್ಯ ಭೂಮಿಯನ್ನು ಮುಳುಗಿಸುತ್ತದೆ. ಇದರಿಂದ ಭೂಕುಸಿತ ಸಂಭವಿಸುವ ಆತಂಕವಿದೆ. 

ಪೋಲವರಂ ಯೋಜನೆಯ ಮುಖ್ಯಂಶಗಳು 

ಈ ಯೋಜನೆಗೆ ಭಾರತದ ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನಾ ಸ್ಥಾನಮಾನವನ್ನು ನೀಡಿದೆ. ಇದು 55,000 ಕೋಟಿ ರೂ. ಯೋಜನೆಯಾಗಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ 12,157 ಕೋಟಿ ರೂ. ಅನುದಾನ ಘೋಷಣೆಯಾಗಿದೆ. ಈಗಾಗಲೇ, 2,900 ಕೋಟಿ ರೂ. ಬಿಡುಗಡೆಯಾಗಿದೆ. ಪೋಲವರಂ ಯೋಜನೆಯಿಂದ 4.3 ಲಕ್ಷ ಹೆಕ್ಷರ್‌ಗೆ ನೀರಾವರಿ ಸೌಲಭ್ಯ ಸಿಗಲಿದೆ. 611 ಹಳ್ಳಿಗಳಿಗೆ ಕುಡಿಯುವ ನೀರು, 960 ಮೆ.ವ್ಯಾ ವಿದ್ಯುತ್‌ ಉತ್ಪಾದನೆ ಮಾಡುವ ಗುರಿ ಈ ಯೋಜನೆಯದ್ದಾಗಿದೆ. 

BJD ಎತ್ತಿರುವ ಕಳವಳಗಳೇನು?

ಡ್ಯಾಮ್ ಸಾಮರ್ಥ್ಯವನ್ನು 36 ಲಕ್ಷ ಕ್ಯುಸೆಕ್‌ನಿಂದ 50 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಬಿಜೆಡಿ ಆರೋಪಿಸಿದೆ. ಒಡಿಶಾ ಮತ್ತು ಛತ್ತೀಸ್‌ಗಢದ (ಹಿಂದಿನ ಮಧ್ಯಪ್ರದೇಶದ ಭಾಗ) ಮೇಲಿನ ಹಿನ್ನೀರಿನ ಪ್ರಭಾವವನ್ನು ಸಾಕಷ್ಟು ಪರಿಗಣಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಡೆ ಆರೋಪಿಸಿದೆ. 

ಮುಳುಗಡೆ ಮಟ್ಟವನ್ನು ಮಿತಿಗೊಳಿಸಲು ಮೊದಲೇ ಹೇಳಿದಂತೆ ಡ್ಯಾಮ್‌ನ ಎತ್ತರ 150 ಅಡಿ ಇರಬೇಕು. ಯೋಜನೆಯ ವಿನ್ಯಾಸದಲ್ಲಿನ ಬದಲಾವಣೆಯು ಒಡಿಶಾದಲ್ಲಿ ಗರಿಷ್ಠ ಹಿನ್ನೀರಿನ ಮಟ್ಟವನ್ನು 174.22 ಅಡಿಗಳಿಗೆ ಹೆಚ್ಚಿಸುತ್ತದೆ ಎಂದು BJD ಹೇಳಿಕೊಂಡಿದೆ. 

ಇದು ತಮ್ಮ ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿರುವ ಮಲ್ಕಾನ್‌ಗಿರಿಯ ಜನಸಂಖ್ಯೆಯ ಮೇಲೆ ಪರಿಣಾಮ ಬೀರಬಹುದು. ಯೋಜನೆಯಿಂದಾಗಿ ಮಲ್ಕನಗಿರಿಯ ಸುಮಾರು 162 ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯಿದೆ ಎಂದು ಬಿಜೆಡೆ ಕಳವಳ ವ್ಯಕ್ತಪಡಿಸಿದೆ.

Share This Article