ಉಗ್ರರು ದಾಳಿ ನಡೆಸಿದ ಬೈಸರನ್‌ ಕಣಿವೆಯನ್ನು ಮಿನಿ ಸ್ವಿಟ್ಜರ್ಲೆಂಡ್ ಎನ್ನುವುದ್ಯಾಕೆ?

Public TV
4 Min Read
Baisaran Valley

ಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22, 2025 ರಂದು ನಡೆದ ಭಯೋತ್ಪಾದಕ ದಾಳಿಯು ಭಾರತದಾದ್ಯಂತ ಆತಂಕವನ್ನುಂಟುಮಾಡಿದೆ. ಈ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ, ʼಮಿನಿ ಸ್ವಿಟ್ಜರ್ಲೆಂಡ್ʼ ಎಂದು ಕರೆಯಲ್ಪಡುವ ಸುಂದರವಾದ ಕಾಡಿನ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಉಗ್ರರು ಪ್ರವಾಸಿಗರ ಗುರುತಿನ ಚೀಟಿಯನ್ನು ಪರಿಶೀಲಿಸಿ, ಕಲ್ಮಾ ಪಠಿಸುವಂತೆ ಒತ್ತಾಯಿಸಿ ಹಿಂದೂಗಳನ್ನ ಟಾರ್ಗೆಟ್‌ ಮಾಡಿ ಗುಂಡಿನ ದಾಳಿ ನಡೆಸಿದ ಭೀಕರ ದೃಶ್ಯಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಹಾಗಿದ್ರೆ ಉಗ್ರರು ದಾಳಿ ನಡೆಸಲು ಬೈಸರನ್‌ ಕಣಿವೆಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ? ಬೈಸರನ್‌ ಕಣಿವೆಯನ್ನು ಮಿನಿ ಸ್ವಿಟ್ಜರ್ಲೆಂಡ್‌ ಎಂದು ಕರೆಯುವುದ್ಯಾಕೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

Baisaran Valley 1

ಉಗ್ರರು ಬೈಸರನ್‌ ಕಣಿವೆ ಆಯ್ದುಕೊಳ್ಳಲು ಕಾರಣವೇನು?
ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಿಂದ 5 ಕಿ.ಮೀ ದೂರದಲ್ಲಿರುವ ಬೈಸರನ್‌ಗೆ ಕುದುರೆ ಸವಾರಿ ಅಥವಾ ಕಾಲ್ನಡಿಗೆಯ ಮೂಲಕ ಮಾತ್ರ ಪ್ರವೇಶಿಸಬಹುದು. ಬೈಸರನ್ ಕಠಿಣವಾದ ಮತ್ತು ಕಡಿದಾದ ಕಣಿವೆ ಪ್ರದೇಶ. ಕುದುರೆ ಅಥವಾ ವ್ಯಕ್ತಿ ನಡೆದುಕೊಂಡು ಹೋಗಲು ಸಾಧ್ಯವಿರುವ ಕಾರಣಕ್ಕೆ ಉಗ್ರರು ಈ ತಾಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೇ ಸುತ್ತಮುತ್ತಲು ಅಡಗು ತಾಣಗಳಿರುವ ಕಾರಣಕ್ಕೆ ಉಗ್ರರು ಈ ಪ್ರದೇಶವನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಿಗರ ರಕ್ಷಣೆಗೆ ಭದ್ರತಾ ಸಿಬ್ಬಂದಿ ಆಗಮಿಸುವಷ್ಟರಲ್ಲೇ ಉಗ್ರರು ಅಲ್ಲಿಂದ ಕಾಲ್ಕಿತ್ತಿದ್ದರು.

ಮಿನಿ ಸ್ವಿಟ್ಜರ್ಲೆಂಡ್‌ ಎನ್ನುವುದ್ಯಾಕೆ?
ಪಹಲ್ಗಾಮ್‌ನಿಂದ ಹತ್ತಿರದಲ್ಲಿರುವ ಅತ್ಯಂತ ಸುಂದರವಾದ ಮತ್ತು ಪ್ರಶಾಂತವಾದ ಸ್ಥಳಗಳಲ್ಲಿ ಬೈಸರನ್ ಕಣಿವೆ ಕೂಡ ಒಂದು. ಭಾರತದ ಸ್ವಿಟ್ಜರ್ಲೆಂಡ್ ಅಥವಾ ಮಿನಿ-ಸ್ವಿಟ್ಜರ್ಲೆಂಡ್ ಎಂದೂ ಕರೆಯಲ್ಪಡುವ ಬೈಸರನ್ ಕಣಿವೆಯು ಅದರ ತೆರೆದ ಕಣಿವೆ, ಎತ್ತರದ ಫರ್ ಮರಗಳು ಮತ್ತು ಮಂಜಿನಿಂದ ಸುತ್ತುವರಿದಿದೆ. ಸುಂದರವಾದ ಸರೋವರಗಳನ್ನು ಹೊಂದಿದೆ. ಗಾಢವಾದ ಮತ್ತು ಉದ್ದವಾದ ಹುಲ್ಲುಗಾವಲುಗಳನ್ನು ಹೊಂದಿರುವ ಈ ಪ್ರದೇಶ ಹಿಮದಿಂದ ಸುತ್ತುವರೆದಿರುವುದರಿಂದ ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯುತ್ತಾರೆ.

ಹಚ್ಚ ಹಸಿರಿನ ಹುಲ್ಲುಗಾವಲುಗಳು, ವಿಹಂಗಮ ನೋಟಗಳು ಮತ್ತು ಕುದುರೆ ಸವಾರಿಯಂತಹ ಸಾಹಸ ಚಟುವಟಿಕೆಗಳನ್ನು ಹೊಂದಿರುವ ಅದ್ಭುತ ತಾಣವಾಗಿರುವುದರಿಂದ ಪ್ರಕೃತಿ ಪ್ರಿಯರು ಪ್ರವಾಸಿಗರು ಹೆಚ್ಚು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇದು ಎತ್ತರದ ಪೈನ್ ಮರಗಳು ಮತ್ತು ಹಿಮದಿಂದ ಆವೃತವಾದ ಶಿಖರಗಳಿಂದ ಆವೃತವಾಗಿದೆ. ಇದು ಪಾದಯಾತ್ರಿಕರಿಗೆ ಜನಪ್ರಿಯ ತಾಣ. ಟ್ರೆಕ್ಕಿಂಗ್ ಉತ್ಸಾಹಿಗಳಿಗೆ ಬೈಸರನ್ ಒಂದು ಸೂಕ್ತವಾದ ಕ್ಯಾಂಪಿಂಗ್ ತಾಣ ಕೂಡ ಹೌದು.

ಹಿಂದೂಗಳಿಗೆ ಪ್ರಮುಖ ಸ್ಥಳ:
ಹಿಂದೂಗಳಿಗೆ ಇದೊಂದು ಪ್ರಮುಖ ಸ್ಥಳ ಎನ್ನಬಹುದು. ಪವಿತ್ರ ಅಮರನಾಥ ಯಾತ್ರೆಗೆ ಹೋಗುವ ಮಾರ್ಗವು ಇದರ ಸುತ್ತಮುತ್ತಲಿನ ಪರಿಸರಕ್ಕೆ ಬರುತ್ತದೆ. ಈ ಧಾರ್ಮಿಕ ಯಾತ್ರೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಸಾವಿರಾರು ಜನರು ಬರುತ್ತಾರೆ. ಇದೇ ಸ್ಥಳದಲ್ಲಿ ಕ್ಯಾಂಪಿಂಗ್ ಹಾಕಲಾಗುತ್ತದೆ. ಪಹಲ್ಗಾಮ್, ಅರು ಕಣಿವೆ ಮತ್ತು ಬೇತಾಬ್ ಕಣಿವೆ ಮತ್ತು ಶೇಷನಾಗ ಸರೋವರ ಸಾಕಷ್ಟು ಹತ್ತಿರದಲ್ಲಿದೆ.

Baisaran Valley 3

ಶೂಟಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ:
ಬೈಸರನ್‌ ತನ್ನ ಪ್ರಾಕೃತಿಕ ಸೊಬಗಿನಿಂದ ಪ್ರವಾಸಿಗರಿಗೆ ಮಾತ್ರವಲ್ಲದೇ ಸಿನಿಮಾ ತಂಡಕ್ಕೂ ನೆಚ್ಚಿನ ಸ್ಥಳವಾಗಿದೆ. ಇಲ್ಲಿರುವ ಹುಲ್ಲುಗಾವಲಿನ ಪ್ರದೇಶ ಮತ್ತು ದಟ್ಟ ಕಾಡುಗಳು ವಿಹಂಗಮ ನೋಟ ನೀಡಲಿದ್ದು, ಅನೇಕ ಸಿನಿಮಾ ತಂಡಗಳು ತಮ್ಮ ಚಿತ್ರೀಕರಣದ ಒಂದು ಭಾಗವನ್ನು ಇಲ್ಲಿ ಚಿತ್ರೀಕರಿಸಿವೆ. ಕನ್ನಡ ಸಿನಿಮಾ, ಭಜರಂಗಿ ಭಾಯಿಜಾನ್‌ ಸೇರಿದಂತೆ ಕೆಲವೊಂದು ಬಾಲಿವುಡ್‌ ಸಿನಿಮಾ ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

ಪ್ರಯಾಣಿಸುವುದು ಹೇಗೆ?
ಬೈಸರನ್ ಕಣಿವೆ ಸಮುದ್ರ ಮಟ್ಟದಿಂದ ಸುಮಾರು 7,874 ಅಡಿ ಎತ್ತರದಲ್ಲಿದೆ. ಪಹಲ್ಗಾಮ್ ಶ್ರೀನಗರದ ಆಗ್ನೇಯಕ್ಕೆ ಸುಮಾರು 90 ಕಿಲೋಮೀಟರ್ (56 ಮೈಲುಗಳು) ದೂರದಲ್ಲಿದೆ . ಈ ಪ್ರದೇಶದ ಅತಿ ಎತ್ತರದ ಶಿಖರಕ್ಕೆ ಕೊಲಹೋಯ್ ಪರ್ವತ ಎನ್ನುತ್ತಾರೆ. ಇಲ್ಲಿಂದ ಎತ್ತರದ ಹಿಮಾಲಯ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಬೈಸರನ್ ಕಣಿವೆಗೆ ಹೋಗಲು ಹತ್ತಿರದ ಪಟ್ಟಣ ಪಹಲ್ಗಾಮ್. ರಸ್ತೆಯ ಮೂಲಕ ಹೋಗುವುದಾದರೆ 1 ರಿಂದ 2 ಗಂಟೆಗಳವರೆಗೆ ತೆಗೆದುಕೊಳ್ಳಬಹುದು. ಕಣಿವೆ ಮೇಲಕ್ಕೆ ಹೋಗುವುದು ಕಷ್ಟವಾಗುವುದರಿಂದ ಕುದುರೆ ಸವಾರಿ ಅಥವಾ ಸಣ್ಣ ಚಾರಣ ಮೂಲಕ ಕಷ್ಟಪಟ್ಟುಕೊಂಡು ಹೋಗಬೇಕು. ಚಾರಣ ಸುಮಾರು 2ರಿಂದ 3 ಗಂಟೆ ತೆಗೆದುಕೊಳ್ಳುತ್ತದೆ. ಬೈಸರನ್ ಕಣಿವೆಯ ಸೌಂದರ್ಯವನ್ನು ನೋಡಲು ಕುದುರೆ ಸವಾರಿ ಅತ್ಯುತ್ತಮ ಮಾರ್ಗವಾಗಿದೆ.

ಬೈಸರನ್ ಕಣಿವೆಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಶೇಖ್ ಉಲ್-ಆಲಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಶ್ರೀನಗರದಲ್ಲಿದೆ. ಇದು ಪಹಲ್ಗಾಮ್‌ನಿಂದ ಸುಮಾರು 95 ಕಿಲೋಮೀಟರ್ ದೂರದಲ್ಲಿದೆ. ರೈಲಿನ ಮೂಲಕ ಹೋಗುವುದಾದರೆ ಅನಂತನಾಗ್ ಹತ್ತಿರದ ರೈಲು ನಿಲ್ದಾಣ. ಇದು ಪಹಲ್ಗಾಮ್ ನಿಂದ 45 ಕಿ.ಮೀ ದೂರದಲ್ಲಿದೆ.

Baisaran Valley 2

ಪ್ರತಿಯೊಂದು ಋತುವಿನಲ್ಲಿ ವಿಭಿನ್ನ ಅನುಭವ:
ಬೈಸರನ್ ಕಣಿವೆಯು ಪ್ರತಿಯೊಂದು ಋತುವಿನಲ್ಲಿಯೂ ವಿಭಿನ್ನ ಅನುಭವಗಳನ್ನು ನೀಡುತ್ತದೆ.
ವಸಂತಕಾಲ (ಮಾರ್ಚ್ ನಿಂದ ಮೇ): ಎಲ್ಲೆಡೆ ಹಸಿರು ತುಂಬಿ ಮಧ್ಯಮ ಮತ್ತು ಬೆಚ್ಚನೆಯ ತಾಪಮಾನವಿರುತ್ತದೆ. ಈ ಸಮಯದಲ್ಲಿ ಕಣಿವೆಯಲ್ಲಿ ಸುಂದರವಾದ ಹೂವುಗಳು ಅರಳಿರುತ್ತವೆ.ಬೆಚ್ಚನೆಯ ತಾಪಮಾನದಿಂದ ಹಿಮ ಕರಗಲು ಪ್ರಾರಂಭವಾಗುತ್ತದೆ.

ಬೇಸಿಗೆ ( ಜೂನ್ ನಿಂದ ಆಗಸ್ಟ್): ಬೇಸಿಗೆಯು ಬೈಸರನ್ ಕಣಿವೆಗೆ ಭೇಟಿ ನೀಡಲು ಉತ್ತಮ ಸಮಯ. ಸೌಮ್ಯವಾದ ತಾಪಮಾನ ಮತ್ತು ಹೆಚ್ಚಿನ ಭೂಭಾಗ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಕಣಿವೆಯು ಹುಲ್ಲು ಮತ್ತು ಕಾಡು ಹೂವುಗಳಿಂದ ಆವೃತವಾಗಿರುತ್ತದೆ. ತಂಪಾದ ಗಾಳಿಯು ಬಯಲು ಪ್ರದೇಶದ ಸುಡುವ ಬೇಸಿಗೆಯ ಶಾಖವನ್ನು ಕಡಿಮೆ ಮಾಡುತ್ತದೆ.

ಶರತ್ಕಾಲ (ಸೆಪ್ಟೆಂಬರ್ ನಿಂದ ನವೆಂಬರ್): ಶರತ್ಕಾಲದಲ್ಲಿ ಬೈಸರನ್ ಕಣಿವೆಯ ತಾಪಮಾನ ಹೆಚ್ಚು ತಂಪಾಗಿರುತ್ತದೆ. ಈ ಸಮಯದಲ್ಲಿ ಮರಗಳ ಸಮೃದ್ಧ ಎಲೆಗಳ ಬಣ್ಣ ಬದಲಾಗಿರುತ್ತದೆ. ಕಣಿವೆಯ ಮರಗಳು ಕಿತ್ತಳೆ, ಕೆಂಪು ಮತ್ತು ಹಳದಿ ಬಣ್ಣಗಳಲ್ಲಿ ಬದಲಾಗುತ್ತವೆ.

ಚಳಿಗಾಲ (ಡಿಸೆಂಬರ್ ನಿಂದ ಫೆಬ್ರವರಿ): ಈ ಸಮಯದಲ್ಲಿ ಇಡೀ ಕಣಿವೆಯು ತನ್ನ ದಪ್ಪನೆಯ ಪದರಗಳಲ್ಲಿ ಹಿಮದಿಂದ ಆವೃತವಾಗಿರುತ್ತದೆ. ಆಗ ಅದ್ಭುತ ನೋಟಗಳು ಕಾಣ ಸಿಗುತ್ತವೆ. ಈ ಸಂಧರ್ಭದಲ್ಲಿ ಸ್ನೋಬೋರ್ಡಿಂಗ್ ಮತ್ತು ಸ್ಲೆಡ್ಜಿಂಗ್ ಮಾಡುವವರು ಹೆಚ್ಚು ಕಾಣ ಸಿಗುತ್ತಾರೆ. ಬೈಸರನ್ ಕಣಿವೆಯಲ್ಲಿಯೇ ಪ್ರವಾಸಿಗರಿಗೆ ತಂಗುವಂತಹ ಹೋಟೆಲ್‌ಗಳಿಲ್ಲ. ಪಹಲ್ಗಾಮ್‌ನಲ್ಲಿ ತಂಗುವುದು ಉತ್ತಮ ಆಯ್ಕೆಯಾಗಿದೆ. ಪಹಲ್ಗಾಮ್‌ನಲ್ಲಿ ಪ್ರವಾಸಿಗರಿಗೆ ಅನುಕೂಲಕರವಾಗುವಂತಹ ಹೋಮ್‌ ಸ್ಟೇ, ಲಾಡ್ಜ್‌ಗಳು ಲಭ್ಯವಿರುತ್ತದೆ.

Share This Article