– ಹೊಸಕೆರೆಹಳ್ಳಿ ಖಾಸಗಿ ಕಾಲೇಜು ಸಭಾಂಗಣದಲ್ಲಿ ಸಂವಾದ
– ಕಾರ್ಯಕ್ರಮಕ್ಕೆ ದೇಶದ 1,200 ಗಣ್ಯರಿಗೆ ಆಹ್ವಾನ
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ (RSS) ಸಂಘ ಈಗ ನೂರನೇ ವರ್ಷದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಸಂಘ ಯಾಕೆ ನೋಂದಣಿಯಾಗಿಲ್ಲ ಎಂಬ ಪ್ರಶ್ನೆಯನ್ನು ಹಲವು ಮಂದಿ ಎತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಸಹ ಆಗಿತ್ತು. ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಸರಸಂಘ ಚಾಲಕ ಡಾ. ಮೋಹನ್ ಭಾಗವತ್ (Mohan Bhagwat) ಉತ್ತರ ನೀಡಿದ್ದಾರೆ.
ಹೊಸಕೆರೆಹಳ್ಳಿ ಖಾಸಗಿ ಕಾಲೇಜು ಸಭಾಂಗಣದಲ್ಲಿ ಡಾ ಮೋಹನ್ ಭಾಗವತ್ ಅವರೊಂದಿಗೆ ಸಂವಾದ ನಡೆಯಿತು. ಈ ಸಂದರ್ಭದಲ್ಲಿ ಹಲವು ಮಂದಿ ಪ್ರಶ್ನೆ ಕೇಳಿದ್ದು ಆ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ದೇಶದ ವಿವಿಧ ಭಾಗದಲ್ಲಿರುವ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಕಲೆ ವಿಜ್ಞಾನ, ಆಡಳಿತ, ಪತ್ರಿಕೋದ್ಯಮ, ಕ್ರೀಡೆ, ಉದ್ಯಮ, ಸಾಮಾಜಿಕ ಸೇವೆ, ಆಧ್ಯಾತ್ಮ ಸೇರಿದಂತೆ ಬಹುತೇಕ ಕ್ಷೇತ್ರದ1200 ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಲ್ಲಿ ಕೇಳಿದ ಪ್ರಶ್ನೆಗಳ ಪೈಕಿ ಕೆಲ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ.
ಆರ್‌ಎಸ್‌ಎಸ್ ಇನ್ನೂ ಯಾಕೆ ನೋಂದಣಿಯಾಗಿಲ್ಲ?
ಈ ಪ್ರಶ್ನೆ ಬರುವುದು ಹೊಸದೆನಲ್ಲ. ಸಾಕಷ್ಟು ಬಾರಿ ಈ ಪ್ರಶ್ನೆಗೆ ನಾವು ಉತ್ತರ ನೀಡಿದ್ದೇವೆ. ಆರ್‌ಎಸ್‌ಎಸ್ ಸ್ಥಾಪನೆಯಾಗಿದ್ದು 1925ರಲ್ಲಿ. ಆಗ ಭಾರತನ್ನು ಬ್ರಿಟಿಷರು ಆಳುತ್ತಿದ್ದರು. ನಾವು ಅವರ ಹತ್ತಿರ ಸಂಘವನ್ನು ನೋಂದಣಿ ಮಾಡಿಕೊಳ್ಳಬೇಕಿತ್ತಾ? ನಾವು ಬ್ರಿಟಿಷರ ಹತ್ತಿರ ಸಂಘವನ್ನು ನೋಂದಣಿ ಮಾಡಿಸಲು ನೀವು ನಿರೀಕ್ಷೆ ಮಾಡುತ್ತೀರಾ? ನಮ್ಮ ಹೋರಾಟ ಬ್ರಿಟಿಷರ ವಿರುದ್ಧ ಇತ್ತು. ಸ್ವಾತಂತ್ರ‍್ಯ ಬಂದ ನಂತರವೂ ಸಂಘಗಳನ್ನು ನೋಂದಣಿ ಮಾಡಬೇಕೆಂದು ಕಡ್ಡಾಯವಿಲ್ಲ.
ನಮ್ಮದು ಸ್ವತಂತ್ರ ಹಾಗೂ ಕಾನೂನಾತ್ಮಕ ಸಂಘ. ನಮ್ಮದು ಗುರುತಿಸಲ್ಪಡುವ ಸಂಘ. ಆರ್‌ಎಸ್‌ಎಸ್ ಆದಾಯ ತೆರಿಗೆ ಪಾವತಿಸುತ್ತಿದೆ. ಗುರುದಕ್ಷಿಣೆ ಹೊರತಾಗಿ ಆದಾಯ ತೆರಿಗೆ ಇಲಾಖೆ, ನಮಗೆ ಟ್ಯಾಕ್ಸ್ ಕಟ್ಟಲು ಸಹ ಹೇಳಿದೆ. ನಮ್ಮನ್ನು ಮೂರು ಬಾರಿ ನಿಷೇಧಿಸಲು ಪ್ರಯತ್ನ ನಡೆದಿದೆ. ನಿಷೇಧ ಮಾಡುವ ಮೂಲಕ ಸರ್ಕಾರ ನಮ್ಮನ್ನು ಗುರುತಿಸಿದೆ. ಆದರೆ ಕೋರ್ಟ್ ಈ ನಿಷೇಧವನ್ನು ತಿರಸ್ಕರಿಸಿದೆ. ನಮ್ಮದು ಸಂವಿಧಾನಾತ್ಮಕ ಸಂಘ. ಅದಕ್ಕಾಗಿ ನಮ್ಮ ಸಂಘವನ್ನು ನೋಂದಣಿ ಮಾಡಿಲ್ಲ. ಹಿಂದೂ ಧರ್ಮ ಕೂಡ ನೋಂದಣಿಯಾಗಿಲ್ಲ.
ಸಂಘದಲ್ಲಿ ಮುಸ್ಲಿಂರನ್ನು ಸೇರಿಸಿಕೊಳ್ಳಲು ಅವಕಾಶ ಇದೆಯಾ?
ಸಂಘದಲ್ಲಿ ಜಾತಿ, ಲಿಂಗ, ಮುಸ್ಲಿಂ, ಕ್ರೈಸ್ತ, ಬ್ರಾಹ್ಮಣ, ಶೈವ ಎಂಬ ಪಂಥಗಳಿಗೆ ಅವಕಾಶ ಇಲ್ಲ. ಯಾವುದೇ ಧರ್ಮದವರು ಶಾಖೆಗೆ ಬರಬಹುದು. ಆದರೆ ಶಾಖೆಗೆ ಬರುವವರು ತಮ್ಮ ಧರ್ಮವನ್ನು ಹೊರಗಿಟ್ಟು, ಭಾರತ ಮಾತೆಯ ಮಕ್ಕಳಾಗಿ ಬರಬೇಕು. `ಮೆಂಬರ್ ಆಫ್ ದಿ ಹಿಂದೂ ಸೊಸೈಟಿ’ ಅಡಿಯಲ್ಲಿ ಮುಸ್ಲಿಂ, ಕ್ರೈಸ್ತ ಯಾರು ಬೇಕಾದರೂ ಶಾಖೆಗೆ ಬರಬಹುದು. ನೀವು ಹಿಂದೂ ಸಮಾಜವನ್ನು ಒಪ್ಪಿಕೊಂಡು ಶಾಖೆಗೆ ಬರಬೇಕು. ನೀವು ಯಾವ ಧರ್ಮದವರು ಅಂತಾನು ನಾವು ಕೇಳುವುದಿಲ್ಲ.

