ಬಿಡುಗಡೆಯಾದ ನಾಲ್ಕೇ ವಾರದಲ್ಲಿ ಕಾಂತಾರ: ಚಾಪ್ಟರ್ 1 (Kantara: Chapter 1) ಸಿನಿಮಾ ಒಟಿಟಿಯಲ್ಲಿ (OTT) ಬಿಡುಗಡೆಯಾಗುತ್ತಿರುವುದು ಹಲವರ ಹುಬ್ಬೇರಿತ್ತು. ಚಿತ್ರ ಮಂದಿರದಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಚಿತ್ರವನ್ನು ಬೇಗ ಬಿಡುಗಡೆ ಮಾಡುತ್ತಿರುವುದು ಯಾಕೆ ಎಂದು ಹಲವು ಸಿನಿ ಪಂಡಿತರು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಈಗ ಹೊಂಬಾಳೆ ಫಿಲ್ಮ್ಸ್ (Hombale Films) ಉತ್ತರ ನೀಡಿದೆ.
ಮಾಧ್ಯಮದ ಜೊತೆ ಮಾತನಾಡಿದ ಬಾಳೆ ಫಿಲ್ಮ್ಸ್‌ನ ಪಾಲುದಾರ ಚಲುವೇಗೌಡ, ಮೂರು ವರ್ಷದ ಹಿಂದೆ ಒಟಿಟಿ ಬಿಡುಗಡೆಗೆ ಸಂಬಂಧಪಟ್ಟಂತೆ ಒಪ್ಪಂದ ನಡೆದಿತ್ತು. ಅದರಂತೆ ನಾಲ್ಕು ವಾರಗಳಲ್ಲಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಚಿತ್ರದ ದಕ್ಷಿಣ ಭಾಷೆಯ (ತಮಿಳು, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ) ಆವೃತ್ತಿಗಳು ಮಾತ್ರ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಹಿಂದಿ ಆವೃತ್ತಿ ಎಂಟು ವಾರಗಳ ನಂತರ ಬರಲಿದೆ. ಹೆಚ್ಚಿನ ದಕ್ಷಿಣ ಚಲನಚಿತ್ರಗಳು ಈಗ ನಾಲ್ಕು ವಾರಗಳ ಅವಧಿಯನ್ನು ಅನುಸರಿಸುತ್ತವೆ ಎಂದು ವಿವರಿಸಿದರು. ಇದನ್ನೂ ಓದಿ: ಒಂದು ಭಾಷೆ ಬಿಟ್ಟು 4 ಭಾಷೆಗಳಲ್ಲಿ ಅ.31ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಕಾಂತಾರ ರಿಲೀಸ್

ಕೆಲ ಸಿನಿಮಾಗಳು ಹೆಚ್ಚು ಕಾಲ ಓಡುತ್ತವೆ. ಕೆಲವು ಮೂರರಿಂದ ನಾಲ್ಕು ವಾರಗಳಲ್ಲಿ ಕೊನೆಯಾಗುತ್ತವೆ. ಪ್ರತಿಯೊಂದು ಚಿತ್ರಕ್ಕೂ ತನ್ನದೇ ಆದ ಒಪ್ಪಂದ ಮತ್ತು ಸಮಯವಿದೆ. ಕೋವಿಡ್‌ಗೆ ಮೊದಲು ಎಲ್ಲಾ ಚಿತ್ರಗಳಿಗೆ ಎಂಟು ವಾರ ನಿಗದಿಯಾಗಿತ್ತು. ಕೋವಿಡ್ ನಂತರ ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳು ನಾಲ್ಕು ವಾರಗಳ ನಂತರ ಒಟಿಟಿಯಲ್ಲಿ ಬರುತ್ತಿವೆ ಎಂದು ತಿಳಿಸಿದರು.
ಈಗಲೂ ಚಿತ್ರ ಮಂದಿರಗಳಲ್ಲಿ ಚಿತ್ರ ಉತ್ತಮವಾಗಿ ಓಡುತ್ತಿದೆ. ಒಟಿಟಿಯಲ್ಲಿ ಬಿಡುಗಡೆಯಾದರೂ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲಿದೆ. ವ್ಯತ್ಯಾಸವು ಹೆಚ್ಚೆಂದರೆ 10–15% ಮಾತ್ರ ಇರಬಹುದು ಎಂದು ಹೇಳಿದರು.
 


 
		
 
		 
		 
		 
		