ದೀಪಾವಳಿ (Deepavali) ಎಂದರೆ ದೀಪಗಳ ಹಬ್ಬ ಎಂದು ಎಲ್ಲರಿಗೂ ಗೊತ್ತೇ ಇದೆ. ಈ ದೀಪಾವಳಿಯ ಬಲಿಪಾಡ್ಯಮಿಯಂದು ಗೋವುಗಳಿಗೆ ಪೂಜೆಯನ್ನೂ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗೋಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಶಾಸ್ತ್ರೋಕ್ತ ಪೂಜೆ ಮಾಡಿ, ತಿಂಡಿ- ತಿನಿಸುಗಳನ್ನು ನೀಡುವ ಸಂಪ್ರದಾಯವು ಈಗಲೂ ಇದೆ. ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯಕ್ಕೂ ಒಂದೊಂದು ಹಿನ್ನೆಲೆ ಇರುವಂತೆ ದೀಪಾವಳಿಯ ಸಮಯದಲ್ಲಿನ ಗೋ ಆರಾಧನೆಗೂ ಒಂದು ಪೌರಾಣಿಕ ಹಿನ್ನೆಲೆ ಇದೆ.
Advertisement
ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ (Go Pooja) ಇವುಗಳನ್ನು ಮಾಡಲಾಗುವುದು. ಯಾಕೆಂದರೆ ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
Advertisement
ಕೃಷ್ಣ ನಂದಗೋಕುಲದಲ್ಲಿದ್ದಾಗ ಅಲ್ಲಿದ್ದ ಗೋಪ, ಗೋಪಿಯರು ಪ್ರತಿವರ್ಷ ಮಳೆ ಬರಲಿ ಎಂದು ಎಲ್ಲರು ಇಂದ್ರದೇವನ ಪೂಜೆಯನ್ನು ಮಾಡುತ್ತಿದ್ದರು. ಇದರಿಂದಾಗಿ ಇಂದ್ರನಿಗೆ ನಾನು ಮಳೆ ಬರಿಸುವುದರಿಂದಲೇ ಪ್ರಪಂಚದಲ್ಲಿ ಎಲ್ಲವೂ ನಡೆಯುತ್ತಿದೆ ಎಂದು ಗರ್ವದಿಂದ ಬೀಗಿದ. ಇಂದ್ರ ತಾನು, ತನ್ನಿಂದ ಎಂದು ಗರ್ವದಲ್ಲಿ ಬೀಗುತ್ತಿರುವ ವಿಚಾರ ಕೃಷ್ಣನಿಗೆ ತಿಳಿಯುತ್ತದೆ. ಈ ಕಾರಣಕ್ಕೆ ಈತನ ಗರ್ವ ಇಳಿಸಲು ಇಂದ್ರನಿಗೆ ಪೂಜೆ ಮಾಡದೇ ಗೋವರ್ಧನ ಪರ್ವತಕ್ಕೆ ಪೂಜೆ ಮಾಡಬೇಕೆಂದು ಗೋಪಾಲಕರಿಗೆ ಸೂಚಿಸಿದ. ನಮಗೆ ಮಳೆ ಗೋವರ್ಧನ ಪರ್ವತದಿಂದ ಬರುತ್ತಿದೆ, ಅದಕ್ಕಾಗಿ ನಾವು ಇನ್ನು ಮುಂದೆ ಗೋವರ್ಧನ ಪರ್ವತವನ್ನು ಪೂಜೆ ಮಾಡಬೇಕೇ ವಿನಾಃ ಇಂದ್ರದೇವನ ಪೂಜೆ ಮಾಡುವುದು ಬೇಡ ಎಂದು ಸೂಚಿಸಿದ. ಇದನ್ನೂ ಓದಿ: ನರಕ ಚತುರ್ದಶಿ ಏಕೆ ಆಚರಿಸ್ತಾರೆ?
Advertisement
Advertisement
ಕೃಷ್ಣನ ಸೂಚನೆಯ ಹಿನ್ನೆಲೆಯಲ್ಲಿ ಗೋವರ್ಧನ ಪರ್ವತದ ಪೂಜೆ ಮಾಡಲು ಶುರು ಮಾಡಿದರು. ನನಗೆ ಪೂಜೆ ಮಾಡುವುದನ್ನು ಬಿಟ್ಟು ಗೋವರ್ಧನ ಪರ್ವತಕ್ಕೆ ಪೂಜೆ ಮಾಡುವುದನ್ನು ನೋಡಿ ಇಂದ್ರನಿಗೆ ಕೋಪ ಬಂತು. ಗೋಪಾಲರಿಗೆ ಪಾಠ ಕಲಿಸಲು ಇಂದ್ರನು ತುಂಬಾ ರಭಸವಾಗಿ ಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಇದರಿಂದಾಗಿ ನದಿಯು ತುಂಬಿ ಹರಿಯಲಾರಂಭಿಸಿತು. ಎಲ್ಲ ಜನರು ಗಾಬರಿಯಿಂದ ಶ್ರೀಕೃಷ್ಣನ ಬಳಿಗೆ ಸಹಾಯ ಕೇಳಲು ಓಡಿದರು.
ಆಗ ಶ್ರೀಕೃಷ್ಣನು, ನೀವು ಯಾರು ಭಯ ಪಡುವ ಅಗತ್ಯವಿಲ್ಲ. ಎಲ್ಲರೂ ಒಟ್ಟು ಸೇರೋಣ. ನಾವು ಪೂಜಿಸಿದ ಗೋವರ್ಧನ ಪರ್ವತವೇ ನಮ್ಮನ್ನು ರಕ್ಷಿಸುತ್ತದೆ ಎಂದು ಅಭಯವನ್ನು ಇತ್ತ. ಎಲ್ಲ ಜನ ಸೇರಿದ ನಂತರ ಕೃಷ್ಣ ತನ್ನ ಕಿರು ಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಗ್ರಾಮಸ್ಥರನ್ನು ರಕ್ಷಿಸಿದ. ಬಲಿ ಪಾಡ್ಯಮಿಯಂದು ಕೃಷ್ಣ ಗೋವರ್ಧನ ಪರ್ವತವನ್ನು ಎತ್ತಿದ ಹಿನ್ನೆಲೆಯಲ್ಲಿ ಈ ದಿನ ಈಗಲೂ ಗೋವುಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.
ಹೆಚ್ಚಿನ ಕಡೆಗಳಲ್ಲಿ ಆ ದಿನದಂದು ಹಸುವಿನ ಹಾಲನ್ನೂ ಕರೆಯಬಾರದೆಂಬ ಪ್ರತೀತಿ ಇದೆ. ಕರುಗಳು ಬೇಕಾದಷ್ಟು ಹಾಲು ಕುಡಿದು ಸಂತೋಷವಾಗಿರಬೇಕೆಂಬುದು ಇದರ ಉದ್ದೇಶ. ಸರ್ವಸಮೃದ್ಧಿಯುಂಟಾಗಿ, ಧನಕನಕಗಳು ವೃದ್ಧಿಯಾಗುವಂತೆ ಇದೇ ದಿನ ಧನಲಕ್ಷ್ಮಿ ಪೂಜೆಯ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಲಿ ಚಕ್ರವರ್ತಿಯ ರಾಜ್ಯದಲ್ಲಿದ್ದಂತೆ ಎಲ್ಲಾ ಸುಖೋಪಭೋಗಗಳು ದೊರೆಯುವುದು ಎಂಬ ನಂಬಿಕೆ ಜನರಲ್ಲಿದೆ. ಒಟ್ಟಾರೆ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಸಂಭ್ರಮದಲ್ಲಿ ಗೋ ಪೂಜೆ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಇದು ಭೂಲೋಕದ ಕಾಮಧೇನುವಿಗೆ ನೀಡಿದ ಮಹತ್ವವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.