ಬೆಂಗಳೂರು ಮಾರುಕಟ್ಟೆಗೆ ಅಮುಲ್‌ – ನಂದಿನಿ ಉಳಿಸಲು ಕನ್ನಡಿಗರಿಂದ #SaveNandini ಅಭಿಯಾನ

Public TV
3 Min Read
amul milk bengaluru

– ಆರೋಗ್ಯಕರ ಸ್ಪರ್ಧೆಗೆ ಅಮುಲ್‌ ಬಂದರೆ ಸಮಸ್ಯೆ ಏನು?
– ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

ಬೆಂಗಳೂರು: ಗುಜರಾತ್‌ನ ಅಮುಲ್‌  ಸಂಸ್ಥೆ ಬೆಂಗಳೂರಿನಲ್ಲಿ ಹಾಲಿನ ವ್ಯವಹಾರಕ್ಕೆ ಇಳಿದಿರುವುದರ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಅಮುಲ್‌ ಪರ ಕೆಲವರು ಬ್ಯಾಟಿಂಗ್‌ ಮಾಡಿದ್ದು ಅಮುಲ್‌ ವ್ಯವಹಾರದಂತೆ ನಂದಿನಿ ಯಾಕೆ ಆನ್‌ಲೈನ್‌ ಮೂಲಕ ಹಾಲನ್ನು ವಿತರಣೆ ಮಾಡಬಾರದು. ಆರೋಗ್ಯಕರ ಸ್ಪರ್ಧೆ ಇದ್ದರೆ ಸಮಸ್ಯೆ ಏನು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ಏನಿದು ವಿವಾದ?
ಅಮುಲ್ ಕುಟುಂಬ ಬೆಂಗಳೂರು ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್‌ ಕನ್ನಡ ಏಪ್ರಿಲ್‌ 5 ರಂದು ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ ಮಾಡಿದ ಬೆನ್ನಲ್ಲೇ ಕನ್ನಡಿಗರು, ರಾಜಕೀಯ ನಾಯಕರು ಅಮುಲ್‌ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?
ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ. ಸಚಿವ ಅಮಿತ್ ಶಾ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ.

ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ಬಿಜೆಪಿ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್ ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ?


ನಮ್ಮ ಸರ್ಕಾರವು ಹಾಲಿಗೆ ನೀಡುವ ಸಹಾಯಧನವನ್ನು ಲೀಟರಿಗೆ 5 ರೂ.ಗಳಷ್ಟು ಹೆಚ್ಚಿಸಿತ್ತು. ಇದರಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಈಗ ಕಡಿಮೆಯಾಗುತ್ತ ಸಾಗಲು ಕಾರಣವೇನು? ನಮ್ಮ ಸರ್ಕಾರ ಐದು ವರ್ಷಗಳಲ್ಲಿ 1,356 ಕೋಟಿ ರೂಪಾಯಿಗಳನ್ನು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿದ್ದೆವು. ಆದರೆ ಬಿಜೆಪಿ ಸರ್ಕಾರ 2020 -21 ರಲ್ಲಿ1186 ಕೋಟಿ ಖರ್ಚು ಮಾಡಿದ್ದರೆ 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಒದಗಿಸಿ ರೈತರಿಗೆ ಅನ್ಯಾಯ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಕ್ಷಣ ಮಧ್ಯಪ್ರವೇಶಿಸಿ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವ ಅಮುಲ್ ಸಂಸ್ಥೆಯನ್ನು ತಡೆಯಬೇಕಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ರಾಜ್ಯದ ಜನಾಭಿಪ್ರಾಯವನ್ನು ಗಮನಕ್ಕೆ ತಂದು ಈ ದ್ರೋಹ ಚಿಂತನೆಯನ್ನು ನಿಲ್ಲಿಸಬೇಕು.

ಅಮುಲ್‌ ಪರ ವಾದವೇನು?
ನಂದಿನಿ ಕೇವಲ ಕರ್ನಾಟಕದಲ್ಲಿ ಮಾತ್ರ ಹಾಲನ್ನು ಮಾರಾಟ ಮಾಡುತ್ತಿಲ್ಲ. ಉಳಿದ ರಾಜ್ಯಗಳಲ್ಲೂ ಹಾಲನ್ನು ಮಾರಾಟ ಮಾಡುತ್ತಿದೆ. ಹೀಗಿರುವಾಗ ಅಮುಲ್‌ ಬೇಡ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ  ಯಾವ ಅಧಿಕಾರವಿದೆ. ಯಾವುದು ಬೇಕೋ ಅದನ್ನು ಗ್ರಾಹಕ ಖರೀದಿಸುತ್ತಾನೆ. ಇದನ್ನೂ ಓದಿ: ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

ಯಾವುದೇ ಸಂಸ್ಥೆಯದರೂ ಸರಿಯಾದ ಸ್ಪರ್ಧೆ ಇಲ್ಲದೇ ಇದ್ದರೆ ಗುಣಮಟ್ಟದ ಉತ್ಪನ್ನ ನೀಡಲು ಸಾಧ್ಯವಿಲ್ಲ. ಕೆಎಂಎಫ್‌ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುತ್ತದೆ. ರಾಜಕೀಯ ಪಕ್ಷಗಳ ಮುಖಂಡರೇ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ. ಮುಖ್ಯವಾಗಿ ವಿಚಾರದ ಬಗ್ಗೆ ನಾವು ಚರ್ಚೆಯೇ ಮಾಡುವುದಿಲ್ಲ. ಮಂಡ್ಯದಲ್ಲಿ ನೀರು ಮಿಶ್ರಿತ ಹಾಲು ವಿತರಣೆ ಮಾಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ಕಂಪನಿಗಳು ನಷ್ಟ ಅನುಭವಿಸಿ ಬಾಗಿಲು ಮುಚ್ಚಿದೆ. ಹೀಗಾಗಿ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿ ಗುಣಮಟ್ಟದ ಹಾಲನ್ನು ಕೆಎಂಎಫ್‌ ನೀಡಬೇಕು. ಸ್ಪರ್ಧೆ ಇದ್ದಷ್ಟು ಗುಣಮಟ್ಟ ಹೆಚ್ಚಾಗುತ್ತದೆ. ಅಂತಿಮವಾಗಿ ಇದರ ಲಾಭ ರೈತರಿಗೆ ಮತ್ತು ಗ್ರಾಹಕರಿಗೆ ಆಗುತ್ತದೆ ಎಂದು ಕೆಲವರು ವಾದ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕ ಚುನಾವಣೆಯ ಸಮಯದಲ್ಲಿ ಅಮುಲ್‌ ಆನ್‌ಲೈನಿನಲ್ಲಿ ಹಾಲನ್ನು ಮಾರಾಟ ಮಾಡಲು ಮುಂದಾಗಿರುವುದು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ.

Share This Article