ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತ ಮೇಲೆ ಸುಂಕದ ಸಮರವನ್ನು ಸಾರುತ್ತಲೇ ಬರುತ್ತಿದ್ದಾರೆ. ಒಂದು ಕಡೆಯಿಂದ ಭಾರತದ ಪ್ರಧಾನಿ ನಾನು ಒಳ್ಳೆಯ ಸ್ನೇಹಿತ ಅಂತ ಹೇಳಿದ್ರೆ ಇನ್ನೊಂದು ಕಡೆ ಭಾರತದ (India) ಮೇಲೆಯೇ 50% ಸುಂಕ ವಿಧಿಸಿ, ಅತ್ತ ಮಗುನೂ ಚಿವುಟಿ, ತೊಟ್ಟಿಲು ತೂಗುವ ಕೆಲಸ ಮಾಡ್ತಾ ಇದ್ದಾರೆ. ಹೌದು, ಇದೀಗ ಅಲ್ಲಿನ ವಾಣಿಜ್ಯ ಸಚಿವರು ಇತ್ತೀಚೆಗೆ ಭಾರತ 140 ಕೋಟಿ ಜನಸಂಖ್ಯೆಯನ್ನು ಹೊಂದಿದೆ, ಆದರೆ ಅದು ನಮ್ಮಿಂದ ಒಂದು ಜೋಳವನ್ನು ಸಹ ಖರೀದಿಸುವುದಿಲ್ಲ ಎಂದು ಹೇಳಿದರು. ಭಾರತ ನಮ್ಮಿಂದ ಜೋಳವನ್ನು ಖರೀದಿಸದಿದ್ದರೆ, ಅದು ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಇಷ್ಟೆಲ್ಲ ಹೇಳಿದಾಗ ಭಾರತ ಯಾಕೆ ಅಮೆರಿಕದಿಂದ ಜೋಳ ಖರೀಸಲ್ಲ? ಮತ್ತೆ ಯಾವ ದೇಶಗಳಿಂದ ಜೋಳ ಖರೀದಿ ಮಾಡುತ್ತಿಲ್ಲ ಎಂದೆಲ್ಲ ಪ್ರಶ್ನೆ ಉದ್ಭವಿಸುವುದು ಸಹಜ. ಹೌದು, ಭಾರತ ಅಮೆರಿಕದಿಂದ ಜೋಳ ಖರೀದಿ ಮಾಡಲ್ಲ. ಭಾರತವು ತನ್ನ ಸ್ವಂತ ಬಳಕೆಗೆ ಸಾಕಾಗುವಷ್ಟು ಜೋಳವನ್ನು ಹೊಂದಿದೆ. ಆದರೆ ಎಥೆನಾಲ್ ನೀತಿ ಬಂದ ನಂತರ, ಅದರ ಬಳಕೆ ಹೆಚ್ಚಾಗಿದೆ. ಸರ್ಕಾರವು ಇಂಧನಕ್ಕೆ ಎಥೆನಾಲ್ ಸೇರಿಸಲು ಜೋಳವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು.
ಇದೀಗ ಭಾರತವು ಬೇರೆ ಬೇರೆ ದೇಶಗಳಿಂದ ಜೋಳವನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಅಮೆರಿಕದಿಂದ ಮಾತ್ರ ಜೋಳವನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಇದರಿಂದ ಕೋಪಗೊಂಡ ಟ್ರಂಪ್, ಇತರ ದೇಶಗಳಿಂದ ಜೋಳವನ್ನು ಖರೀದಿಸ್ತಾರೆ ಅಂದ್ರೆ ನಮ್ಮಿಂದ ಏಕೆ ಖರೀದಿಸಬಾರದು ಎಂದು ಪ್ರಶ್ನೆ ಮಾಡ್ತಿದೆ.
ಜೋಳ ಬೆಳೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
ಜೋಳ ಉತ್ಪಾದನೆಯ ವಿಷಯದಲ್ಲಿ, ಭಾರತವು ವಿಶ್ವದ 6 ನೇ ಅತಿದೊಡ್ಡ ರಾಷ್ಟ್ರವಾಗಿದೆ. ಜೋಳ ಸೇವನೆಯ ಜೊತೆಗೆ, ಜೋಳವನ್ನು ಪಶು ಆಹಾರ, ಎಥೆನಾಲ್ ಉತ್ಪಾದನೆ ಮತ್ತು ಕೋಳಿ ಸಾಕಣೆ ಕೇಂದ್ರಗಳಿಗೆ ಬಳಸಲಾಗುತ್ತದೆ. ಭಾರತದಲ್ಲೂ ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಬಿಹಾರ, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲೇ ಅತ್ಯಧಿಕವಾಗಿ ಜೋಳವನ್ನು ಬೆಳೆಯಲಾಗುತ್ತದೆ.
ಇದೀಗ ದೇಶದಲ್ಲಿ ಸುಮಾರು 4 ಕೋಟಿ ಟನ್ ಜೋಳವನ್ನು ಉತ್ಪಾದಿಸಲಾಗುತ್ತಿದೆ. ಈ ಉತ್ಪಾದನೆಯನ್ನು 2047ರ ಹೊತ್ತಿಗೆ 8.6 ಕೋಟಿ ಟನ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ. ದೇಶದಲ್ಲಿ ಒಟ್ಟು ಉತ್ಪಾದನೆಯ 50 ರಿಂದ 60 ಪ್ರತಿಶತವು ಪಶುಗಳ ಆಹಾರಕ್ಕಾಗಿ ಬಳಕೆಯಾಗುತ್ತದೆ. ಆದರೆ 15 ರಿಂದ 20 ಪ್ರತಿಶತವು ಎಥೆನಾಲ್‌ಗಾಗಿ ಬಳಕೆಯಾದರೆ, ಇನ್ನುಳಿದ 10 ರಿಂದ 15 ಪ್ರತಿಶತವನ್ನು ಆಹಾರದ ರೂಪದಲ್ಲಿ ಬಳಸಲಾಗುತ್ತದೆ.
ಬಳಕೆ ಹೆಚ್ಚಾದಂತೆ ಆಮದುಗಳು ಶುರು
ದೇಶದಲ್ಲಿ ಎಥೆನಾಲ್ ತಯಾರಿಸುವ ಮೊದಲು ಜೋಳದ ಉತ್ಪಾದನೆ ಹಾಗೂ ಬಳಕೆ ಎರಡೂ ಸಮಾನವಾಗಿತ್ತು. ಆದರೆ ಎಥೆನಾಲ್ ತಯಾರಿಯಿಂದಾಗಿ ಹೆಚ್ಚಿಗೆ ಬೇಕಾದ ಜೋಳವನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. 2022-23ರ ನಂತರ ಕೋಳಿ ಉದ್ಯಮವು ಗಣನೀಯ ಬೆಳವಣಿಗೆ ಹಾಗೂ ಸಕ್ಕರೆ ಉತ್ಪಾದನೆಯ ಇಳಿಕೆಯಿಂದಾಗಿ ಜೋಳದ ಬೇಡಿಕೆಯು ಹೆಚ್ಚಳವಾಯಿತು. ಇದಾದ ಬಳಿಕ 2023ರಲ್ಲಿ ಭಾರತ 5 ಸಾವಿರ ಟನ್‌ಗಳಷ್ಟು ಜೋಳವನ್ನು ಆಮದು ಮಾಡಿಕೊಂಡ್ರೆ, 2024ರಲ್ಲಿ ಸುಮಾರು 10 ಲಕ್ಷ ಟನ್ ಆಮದು ಮಾಡಿಕೊಂಡಿತು.
ಭಾರತ ಯಾವೆಲ್ಲ ದೇಶದಿಂದ ಜೋಳ ಆಮದು ಮಾಡಿಕೊಳ್ಳುತ್ತದೆ?
ದೇಶದಲ್ಲಿ ಜೋಳದ ಬೇಡಿಕೆ ಹೆಚ್ಚಾದಂತೆ ಬೇರೆ ಬೇರೆ ದೇಶಗಳಿಂದ ಖರೀದಿ ಮಾಡಲು ಪ್ರಾರಂಭಿಸಿತು. 2024 ರಲ್ಲಿ ಭಾರತವು ಮ್ಯಾನ್ಮಾರ್‌ನಿಂದ 1 ರಿಂದ 2 ಲಕ್ಷ ಟನ್ ಜೋಳವನ್ನು ಆಮದು ಮಾಡಿಕೊಂಡಿತು. ಭಾರತವು ಮ್ಯಾನ್ಮಾರ್‌ನೊಂದಿಗೆ ಆಮದು ತೆರಿಗೆ ಮುಕ್ತವಾಗಿದೆ.
ಮ್ಯಾನ್ಮಾರ್‌ನಿಂದ ಮಾತ್ರವಲ್ಲದೇ ಇದೇ ವರ್ಷ ಉಕ್ರೇನ್‌ನಿಂದ ಸುಮಾರು 4 ಲಕ್ಷ ಟನ್ ಜೋಳವನ್ನು ಖರೀದಿಸಿದೆ. ಉಕ್ರೇನ್ ಕೂಡ ಆಮದು ವಸ್ತುಗಳ ಮೇಲೆ ಯಾವುದೇ ಸುಂಕ ವಿಧಿಸಿಲ್ಲ. ಇನ್ನು ಭಾರತವು ಮೆಕ್ಕೆಜೋಳವನ್ನು ಥೈಲ್ಯಾಂಡ್, ಅರ್ಜೆಂಟೀನಾದಂತಹ ದೇಶಗಳಿಂದ ಸಹ ಖರೀದಿಸಿದೆ ಎಂದು ಕೇಂದ್ರ ಸಚಿವಾಲಯವು ತಿಳಿಸಿದೆ.
ಅಮೆರಿಕದಿಂದ ಯಾಕೆ ಭಾರತ ಜೋಳ ಖರೀದಿಸಲ್ಲ?
1. ಕುಲಾಂತರಿ ತಳೀಯ ಜೋಳ
ಭಾರತವು ಅಮೆರಿಕದಿಂದ ಜೋಳ ಖರೀದಿಸದಿರಲು ಮುಖ್ಯ ಕಾರಣವೇನೆಂದರೆ ಅಲ್ಲಿನ ಕುಲಾಂತರಿ ತಳೀಯ ಜೋಳವನ್ನು ಬೆಳೆಯಲಾಗುತ್ತದೆ. ಭಾರತದಲ್ಲಿ ಈ ತಳೀಯ ಜೋಳವನ್ನು ಸೇವನೆಗಾಗಲಿ ಅಥವಾ ಪ್ರಾಣಿಗಳ ಮೇವಿಗಾಗಿ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.
2. ಅಮೆರಿಕದ ಸುಂಕ ಸಮರ
ಇನ್ನೊಂದು ಎಲ್ಲರಿಗೂ ತಿಳಿದಿರುವ ಕಾರಣವೆಂದ್ರೆ ಅದು ಭಾರತದ ಮೇಲೆ ವಿಧಿಸುತ್ತಿರುವ 50% ಸುಂಕ. ಮ್ಯಾನ್ಮಾರ್ ಹಾಗೂ ಉಕ್ರೇನ್ ದೇಶವು ಭಾರತದ ಆಮದು ವಸ್ತುಗಳ ಮೇಲೆ ಯಾವುದೇ ತೆರಿಗೆಯನ್ನು ವಿಧಿಸುತ್ತಿಲ್ಲ. ಅಮೆರಿಕದಿಂದ ಆಮದು ಮಾಡಿಕೊಂಡರೆ ಲಾಜಿಸ್ಟಿಕ್ಸ್ ವೆಚ್ಚವು ಹೆಚ್ಚಾಗಿ, ದೇಶೀಯ ಮಾರುಕಟ್ಟೆಯಲ್ಲೂ ಇದರ ದರ ಹೆಚ್ಚಾಗುತ್ತದೆ. ಹೀಗಾಗಿ ಭಾರತವು ಅಮೆರಿಕದಿಂದ ಜೋಳ ಖರೀದಿಸುತ್ತಿಲ್ಲ.
3. ಬೇಡಿಕೆ & ಪೂರೈಕೆಗೂ ಹೆಚ್ಚೇನು ವ್ಯತ್ಯಾಸವಿಲ್ಲ
ದೇಶದಲ್ಲೂ ಜೋಳವನ್ನು ಬೆಳೆಯುವುದರಿಂದ ಬೇಡಿಕೆ ಹಾಗೂ ಪೂರೈಕೆಯ ನಡುವೆ ಹೆಚ್ಚು ವ್ಯತ್ಯಾಸವಾಗುತ್ತಿಲ್ಲ. ಭಾರತವು ಬೇಡಿಕೆ ಇರುವಷ್ಟು ಪ್ರಮಾಣದ ಜೋಳವನ್ನು ಸುಂಕ ರಹಿತ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
4.ದೇಶೀಯ ಉತ್ಪಾದನೆಗೆ ಆದ್ಯತೆ
ಭಾರತವು ತನ್ನ ದೇಶ ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಬೇರೆ ದೇಶಗಳಿಂದಲೇ ಎಲ್ಲವನ್ನು ಆಮದು ಮಾಡಿಕೊಂಡರೆ ನಮ್ಮ ದೇಶದ ರೈತರ ಮೇಲೆ ಪರಿಣಾಮ ಬೀರುತ್ತದೆ. ದೇಶದಲ್ಲೇ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಆಮದಿನ ಮೇಲಿನ ಅವಲಂಬನೆ ಕಡಿಮೆ ಆಗುತ್ತದೆ.
ಮೇಲಿನ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ಅಮೆರಿಕದಿಂದ ಜೋಳವನ್ನು ಖರೀದಿ ಮಾಡುತ್ತಿಲ್ಲ. ಹಂತ ಹಂತವಾಗಿ ಭಾರತದ ಮೇಲೆ ಸುಂಕ ಹೇರುತ್ತಿರುವ ಅಮೆರಿಕಕ್ಕೆ ಭಾರತವು ಈ ರೀತಿಯಾಗಿ ಪಾಠ ಕಲಿಸುತ್ತಿದೆ.