– ತೈಲ ಆಮದು ರಾಷ್ಟ್ರಗಳು Vs ಒಪೆಕ್ ಮಧ್ಯೆ ತೈಲ ಸಮರ
– ತಂತ್ರದಿಂದ ಹಿಂದಕ್ಕೆ ಸರಿಯದೇ ಇದ್ದಲ್ಲಿ ಉತ್ಪಾದನೆ ಕಡಿತದ ಬೆದರಿಕೆ
ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡುವ ರಾಷ್ಟ್ರಗಳು ಮತ್ತು ತೈಲ ಉತ್ಪಾದನೆ ಮಾಡುವ ರಾಷ್ಟ್ರಗಳ ಮಧ್ಯೆ ತೈಲ ಸಮರ ಸೃಷ್ಟಿಯಾಗಿದೆ. ಅಮೆರಿಕ ತಂತ್ರಗಾರಿಕೆ ಈಗ ಉಳಿದ ರಾಷ್ಟ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಏನಿದು ತಿಕ್ಕಾಟ? ತೈಲ ಆಮದು ಮಾಡುವ ರಾಷ್ಟ್ರಗಳ ಪ್ಲ್ಯಾನ್ ಏನು? ಒಪೆಕ್ ರಾಷ್ಟ್ರಗಳ ತಿರುಗೇಟು ಏನು ಇತ್ಯಾದಿ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.
ತಿಕ್ಕಾಟ ಸೃಷ್ಟಿಯಾಗಿದ್ದು ಯಾಕೆ?
ಕೋವಿಡ್ 19 ನಿಯಂತ್ರಣಕ್ಕೆ ವಿಶ್ವದ ಹಲವು ರಾಷ್ಟ್ರಗಳು ಲಾಕ್‍ಡೌನ್ ಹೇರಿತ್ತು. ಈ ವೇಳೆ ಬೇಡಿಕೆ ಕಡಿಮೆಯಾಗಿ ಬ್ಯಾರೆಲ್ ತೈಲ ದರ 19 ಡಾಲರ್ಗೆ ಇಳಿಕೆಯಾಗಿತ್ತು. ಈ ವೇಳೆ ತೈಲ ಉತ್ಪಾದನೆ ಮಾಡುತ್ತಿರುವ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದ್ದವು. 2020ರ ಮಧ್ಯ ಭಾಗದ ಬಳಿಕ ರಾಷ್ಟ್ರಗಳು ಲಾಕ್‍ಡೌನ್ ತೆರವು ಮಾಡಿದ್ದರೂ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಳ ಮಾಡುತ್ತಿಲ್ಲ.
Advertisement
Advertisement
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸೃಷ್ಟಿಯಾದ ಆರ್ಥಿಕ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಒಪೆಕ್ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿವೆ. ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಮಾಡದ ಕಾರಣ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ 7 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ.
Advertisement
ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಆರ್ಥಿಕ ಚಟುವಟಿಕೆಗಳು ಆರಂಭಗೊಂಡರೂ ಒಪೆಕ್ ರಾಷ್ಟ್ರಗಳು ಮಾತ್ರ ಉತ್ಪಾದನೆ ಹೆಚ್ಚಿಸುತ್ತಿಲ್ಲ. ಭಾರತ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಮನವಿ ಮಾಡಿದರೂ ಒಪೆಕ್ ರಾಷ್ಟ್ರಗಳು ಬಗ್ಗುತ್ತಿಲ್ಲ. ಹೀಗಾಗಿ ಒಪೆಕ್ ರಾಷ್ಟ್ರಗಳನ್ನು ಬಗ್ಗು ಬಡಿಯಲು ಅಮೆರಿಕ ಹೂಡಿದ ತಂತ್ರವೇ ಈಗ ತಿಕ್ಕಾಟಕ್ಕೆ ಕಾರಣವಾಗಿದೆ.
Advertisement
ಅಮೆರಿಕ ತಂತ್ರ ಏನು?
ತುರ್ತು ಬಳಕೆಗೆಂದು ಸಂಗ್ರಹಿಸಿದ್ದ ಕಚ್ಚಾತೈಲವನ್ನು ಹೊರತೆಗೆಯಲು ಅಮೆರಿಕ ಮುಂದಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಭಾರತ, ಜಪಾನ್, ಚೀನಾ, ದಕ್ಷಿಣ ಕೊರಿಯಾ, ಬ್ರಿಟನ್ ಸೇರಿದಂತೆ ಅತಿ ಹೆಚ್ಚು ಕಚ್ಚಾತೈಲ ಬಳಸುವ ದೇಶಗಳ ಮನವೊಲಿಸಿದ್ದರು. ಹೀಗಾಗಿ ಅಮೆರಿಕ 5 ಕೋಟಿ ಬ್ಯಾರಲ್, ಭಾರತ 50 ಲಕ್ಷ ಬ್ಯಾರಲ್ ಕಚ್ಚಾತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿದ್ದವು. 1970ರಲ್ಲಿ ಲಿಬಿಯಾ ಯುದ್ಧದ ಬಳಿಕ ಅಮೆರಿಕ ತನ್ನ ಭೂಗತ ಸಂಗ್ರಹಾಗಾರದಿಂದ ಕಚ್ಚಾತೈಲವನ್ನು ಈ ಪ್ರಮಾಣವನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು ಎನ್ನುವುದು ವಿಶೇಷ. ಇದನ್ನೂ ಓದಿ: ಮಂಗಳೂರು ಸಂಗ್ರಹಗಾರದಿಂದ ಕಚ್ಚಾ ತೈಲ ಮಾರಾಟಕ್ಕೆ ಮುಂದಾದ ಸರ್ಕಾರ
ಒಪೆಕ್ ಪ್ರತಿತಂತ್ರ:
ತುರ್ತು ಬಳಕೆಗೆ ಸಂಗ್ರಹ ಮಾಡಿದ ತೈಲವನ್ನು ಬಿಡುಗಡೆ ಮಾಡಿದರೆ ಕಚ್ಚಾ ತೈಲದ ಬೇಡಿಕೆ ಇಳಿಯಬಹುದು ಎನ್ನುವುದು ಅಮೆರಿಕದ ಲೆಕ್ಕಾಚಾರವಾಗಿತ್ತು. ಆದರೆ ಈ ತಂತ್ರಕ್ಕೆ ಒಪೆಕ್ ರಾಷ್ಟ್ರಗಳು ಸೆಡ್ಡು ಹೊಡೆದಿವೆ. ತೈಲ ಆಮದು ಮಾಡುವ ದೇಶಗಳು ಕೈಗೊಂಡ ನಿರ್ಧರದಿಂದ ಹಿಂದಕ್ಕೆ ಸರಿಯಬೇಕು. ಇಲ್ಲದೇ ಇದ್ದಲ್ಲಿ ಮುಂದಿನ ಜನವರಿ ತಿಂಗಳಿನಿಂದ ಉದ್ದೇಶಿಸಿದ್ದ ಉತ್ಪಾದನೆ ಹೆಚ್ಚಳವನ್ನು 2 ತಿಂಗಳು ಮುಂದೂಡುವುದಾಗಿ ತಿಳಿಸಿವೆ. ಅಷ್ಟೇ ಅಲ್ಲದೇ ಈಗಾಗಲೇ ಮಾಡುತ್ತಿರುವ ಉತ್ಪಾದನೆಯನ್ನೇ ಕಡಿತ ಮಾಡುವ ಬೆದರಿಕೆಯನ್ನು ಹಾಕಿದೆ. ಇದನ್ನೂ ಓದಿ: ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ
ಮತ್ತೆ ಬೆಲೆ ಏರಿಕೆ?
ತುರ್ತು ಬಳಕೆಗೆ ಇರಿಸಿದ ತೈಲವನ್ನು ತೆಗೆದರೂ ಮತ್ತೆ ಆಮದು ಮಾಡಲೇಬೇಕು. ಒಂದು ವೇಳೆ ತೈಲ ಉತ್ಪಾದನೆ ಕಡಿಮೆ ಮಾಡಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಒಪೆಕ್ ಮತ್ತು ತೈಲ ಆಮದು ಮಾಡುವ ರಾಷ್ಟ್ರಗಳ ನಡುವಿನ ಕಿತ್ತಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುವ ಸಾಧ್ಯತೆಯಿದೆ. ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರೀ ಸಮಸ್ಯೆಗೆ ಕಾರಣವಾಗಬಹುದು.
ಐಇಎ ಒತ್ತಾಯ:
ಅಂತಾರಾಷ್ಟ್ರೀಯ ಇಂಧನ ಸಂಸ್ಥೆ(ಐಇಎ) ತೈಲ ಉತ್ಪಾದನೆ ಹೆಚ್ಚು ಮಾಡಲು ಒಪೆಕ್ ರಾಷ್ಟ್ರಗಳಿಗೆ ಒತ್ತಾಯ ಮಾಡಿದೆ. 1 ಬ್ಯಾರೆಲ್ ತೈಲದ ಬೆಲೆ 80 ಡಾಲರ್ ದಾಟಿದೆ. ಕೊರೊನಾದಿಂದ ಆರ್ಥಿಕ ಚಟುವಟಿಕೆಗಳು ಚೇತರಿಸುವ ಸಮಯದಲ್ಲಿ ತೈಲ ಉತ್ಪಾದನೆ ಕಡಿತ ಮಾಡುವುದು ಸರಿಯಲ್ಲ. ಇದರಿಂದ ವಿಶ್ವದ ಆರ್ಥಿಕ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ಪ್ಲ್ಯಾನ್ ಏನು?
ಒಪೆಕ್ ರಾಷ್ಟ್ರಗಳು ಏಪ್ರಿಲ್ ತಿಂಗಳಿನಲ್ಲೂ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸದ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಲು ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು.
ತೈಲ ಆಮದಿನ ವಿಚಾರದಲ್ಲಿ ಬೇರೆ ಬೇರೆ ಮೂಲಗಳನ್ನು ಹುಡುಕುವಂತೆ ನಾವು ಕಂಪನಿಗಳಿಗೆ ತಿಳಿಸಿದ್ದೇವೆ. ತೈಲ ಉತ್ಪಾದಿಸುತ್ತಿರುವ ಮಧ್ಯಪ್ರಾಚ್ಯದ ದೇಶಗಳು ನಮ್ಮನ್ನು ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡುವುದಿಲ್ಲ. ಒಪೆಕ್ ರಾಷ್ಟ್ರಗಳು ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿವಾರಣೆಯಾಬೇಕೆಂದು ಬಯಸಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದರು.
ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಂಡರೆ ಆರಂಭದಲ್ಲಿ ಹೆಚ್ಚು ಹಣ ಪಾವತಿಸಬೇಕಾದರೂ ಭವಿಷ್ಯದಲ್ಲಿ ಇದರಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಗಯಾನಾದಿಂದ ತೈಲ ಆಮದು ಮಾಡಿಕೊಳ್ಳುವ ಒಂದು ಪ್ಲಾನ್ ಇದೆ. ಇದರ ಜೊತೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ನವೀಕರಿಸಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದಿಂದ ಮತ್ತೆ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುಬಹುದು ಎಂಬ ಭರವಸೆ ಭಾರತಕ್ಕಿದೆ.