ಬೆಂಗಳೂರು: ನೂತನ ಸಚಿವ ಜಗದೀಶ್ ಶೆಟ್ಟರ್ ಅವರು ಇಂದು ವಿಧಾನಸೌಧದಲ್ಲಿರುವ ತನ್ನ ಕಚೇರಿಗೆ ಪೂಜೆ ನಡೆಸಿದ್ದಾರೆ. ಆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಾಕೆ ಡಿಸಿಎಂ ಆಗಬೇಕು ಎಂದು ಪ್ರಶ್ನಿಸಿದರು.
ತಮಗೆ ನೀಡಿದ ಸ್ಥಾನದ ಕುರಿತು ಅಸಮಾಧನವಿದೆ ಎಂಬ ಮಾತು ಕೇಳಿ ಬರುತ್ತಿದ್ದ ಕುರಿತು ಪ್ರಶ್ನಿಸಿದಾಗ, ನಾನು ನನ್ನ ಹಾಗೂ ನನ್ನ ಇಲಾಖೆ ಬಗ್ಗೆ ಮಾತನಾಡುತ್ತೇನೆ. ನಾನು ಈಗ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಕೈಗಾರಿಕೆ ಇಲಾಖೆ ಚೆನ್ನಾಗಿಯೇ ಇದೆ. ನಾನು ಇಂದು ಕಚೇರಿ ಪೂಜೆ ಮುಗಿಸಿ ಹೊರಡುತ್ತೇನೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಬೆಳೆಸಲು ಅನುಕೂಲ ಆಗಲಿದೆ. ಈ ಖಾತೆಯಲ್ಲಿ ನಾನು ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಬಳಿಕ ಮಾತನಾಡಿದ ಅವರು, ನಾನು ಯಾಕೆ ಡಿಸಿಎಂ ಆಗಬೇಕು. ಡಿಸಿಎಂ ಎಂಬುದು ಸಂವಿಧಾನಿಕ ಹುದ್ದೆಯೇ ಅಲ್ಲ. ನಾನು ಸಿಎಂ ಆದವನು ಡಿಸಿಎಂ ಆಗಬಾರದು ಎಂದರು. ಬಳಿಕ ಬಿಜೆಪಿ ನಾಯಕರ ಅಸಾಮಾಧನದ ಬಗ್ಗೆ ಪ್ರಶ್ನಿಸಿದಾಗ, ಎಲ್ಲವೂ ಸರಿ ಹೋಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಜಗದೀಶ್ ಶೆಟ್ಟರ್ ಅವರು ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಬಯಸಿದ್ದರು. ಆದರೆ ಅವರ ಪಾಲಿಗೆ ಬೃಹತ್/ಮಧ್ಯಮ ಕೈಗಾರಿಕಾ ಖಾತೆ ಸಿಕ್ಕಿದೆ. ತಮ್ಮ ಜಾಯಮಾನಕ್ಕೆ ಒಗ್ಗದ ಖಾತೆ ಕೊಟ್ಟಿದ್ದಾರೆ ಎಂದು ಶೆಟ್ಟರ್ ಅಳಲು ತೋಡಿಕೊಂಡಿದ್ದರು ಎಂಬ ಮಾತು ಕೇಳಿಬಂದಿತ್ತು.