ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ

Public TV
3 Min Read
AnjaniPutra Lawyer 1

ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಮೂರು ದಿನಗಳ ಹಿಂದೆ ಬಿಡುಗಡೆಗೊಂಡಿದೆ. ಸಿನಿಮಾ ರಿಲೀಸ್ ಆದ ಬಳಿಕ ಒಂದಿಲ್ಲೊಂದು ತೊಂದರೆಗಳನ್ನು ಅನುಭವಿಸುತ್ತಾ ಬಂದಿದೆ. ಈಗ ಸಿನಿಮಾದಲ್ಲಿ ವಕೀಲರ ಬಗ್ಗೆ ವಿವಾದಾತ್ಮಕ ಹೇಳಿಕೆ ಇದೆ ಎಂದು ಆರೋಪಿಸಿ ವಕೀಲ ನಾರಾಯಣಸ್ವಾಮಿ ಚಿತ್ರ ಪ್ರದರ್ಶನಕ್ಕೆ ತಡೆ ತಂದಿದ್ದಾರೆ.

ಸಿನಿಮಾ ವಿರುದ್ಧ ನಾನು ದೂರು ನೀಡಿದ್ದು ಯಾಕೆ ಎನ್ನುವುದಕ್ಕೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ನಾರಾಯಣಸ್ವಾಮಿ, ಚಿತ್ರದಲ್ಲಿ ನಟ ರವಿಶಂಕರ್ ಪೊಲೀಸ್ ಪಾತ್ರಧಾರಿಯಲ್ಲಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಅವರ ಕಡೆಯಿಂದ ವಕೀಲರೊಬ್ಬರ ಎದುರು ಪಂಚಿಂಗ್ ಡೈಲಾಗ್ ಹೇಳಿಸಲಾಗಿದೆ. ಈ ಡೈಲಾಗ್ ನಿಂದ ಎಲ್ಲ ವಕೀಲರಿಗೂ ಅವಮಾನವಾಗಿದ್ದು, ಚಿತ್ರದ ಬಗ್ಗೆ ಎಲ್ಲ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕೋರ್ಟ್ ನಲ್ಲಿ ಸಿನಿಮಾದಲ್ಲಿರುವ ವಿವಾದಾತ್ಮಕ ಡೈಲಾಗ್ ತೆಗೆಯುವರೆಗೂ ತಡೆಕೋರುವಂತೆ ದೂರು ಸಲ್ಲಿಸಲಾಗಿತ್ತು. ಇಂದು ಕೋರ್ಟ್ ತನ್ನ ಆದೇಶ ನೀಡಿದ್ದು, ಈ ಕೂಡಲೇ ಸಿನಿಮಾದ ಪ್ರದರ್ಶನ ನಿಲ್ಲಿಸಬೇಕಾಗುತ್ತದೆ ಎಂದು ಆದೇಶಿಸಿದೆ ಎಂದು ತಿಳಿಸಿದರು.

anajaniputra lawyer 2

ಸಿನಿಮಾದ ದೂರಿನ ಬಗ್ಗೆ ವಕೀಲರ ಸಂಘದ ಅಧ್ಯಕ್ಷ ಶಿವರಾಮ್ ಪ್ರತಿಕ್ರಿಯಿಸಿದ್ದು, ಚಿತ್ರದ ಒಂದು ಭಾಗದಲ್ಲಿ ಪೊಲೀಸ್ ಪಾತ್ರಧಾರಿ ರವಿಶಂಕರ್, ವಕೀಲರ ಬಗ್ಗೆ ಅವಹೇಳನಾಕಶರಿ ಹೇಳಿಕೆ ನೀಡಿದ್ದಾರೆ. ಪೊಲೀಸರು ಮಾತನಾಡುತ್ತಿರುವ ಈ ಡೈಲಾಗ್ ಇರುವ ದೃಶ್ಯವನ್ನು ತೆಗೆದು ಹಾಕುವಂತೆ ಮನವಿ ಮಾಡಲಾಗಿದೆ. ಸದ್ಯ ಈ ಕ್ಷಣದಲ್ಲಿ ಆದೇಶ ಬಂದಿದ್ದು, ಎಲ್ಲಾ ಶೋಗಳನ್ನು ರದ್ದು ಮಾಡಬೇಕಾಗುತ್ತದೆ. ಸಿನಿಮಾದಲ್ಲಿ ಬಳಸಿದ ಆ ಪದವನ್ನು ತೆಗೆದರೆ ನಮ್ಮ ಅಭ್ಯಂತರವಿಲ್ಲ. ಕೋರ್ಟ್ ಆರ್ಡರ್ ಕಾಪಿ ಇಂದು ಸಿಗೋದು ಅನುಮಾನ. ಆದ್ರೆ ನಮ್ಮ ಕೋರ್ಟ್ ವೆಬ್ ಸೈಟ್ ನಲ್ಲಿ ಆದೇಶದ ಪ್ರತಿ ಸಿಗಲಿದೆ. ಇದೂವರೆಗೂ ಚಿತ್ರದ ನಿರ್ಮಾಪಕರು, ನಿರ್ದೇಶಕರು ನಮ್ಮನ್ನು ಸಂಪರ್ಕಿಸಿಲ್ಲ. ಆ ಒಂದು ಪಂಚಿಂಗ್ ಡೈಲಾಗ್ ಡಿಲೀಟ್ ಮಾಡಬೇಕು ಎನ್ನುವುದೇ ನಮ್ಮ ಒತ್ತಾಯವಾಗಿದೆ. ಚಿತ್ರತಂಡ ಜನವರಿ 2 ರವರೆಗೆ ಕಾಯುವ ಅಗತ್ಯವಿಲ್ಲ, ಸಿನಿಮಾದಿಂದ ಎಷ್ಟು ಬೇಗ ಆ ಪದವನ್ನು ತೆಗೆಯುತ್ತಾರೋ ಅಷ್ಟು ಬೇಗ ಪುನಃ ಪ್ರದರ್ಶನ ಮಾಡಬಹುದಾಗಿದೆ. ಪುನೀತ್ ಈ ರೀತಿಯ ಸಿನಿಮಾ ಮಾಡುವವವರಲ್ಲ ಎಲ್ಲೋ ಏನೋ ತಪ್ಪಾಗಿರಬಹುದು ಎಂದು ಹೇಳಿದರು.

anajaniputra lawyer 2 1

ಏನದು ವಿವಾದಾತ್ಮಕ ಡೈಲಾಗ್? “ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ” ಎಂದು ರವಿ ಶಂಕರ್ ಇನ್ಸ್ ಪೆಕ್ಟರ್ ಆಗಿ ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲರಿಗೆ ಅವಮಾನವಾಗಿದೆ. ಹೀಗಾಗಿ ಒಂದೋ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಮಾತನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಅಂಜನಿಪುತ್ರ ಸಿನಿಮಾಗೆ ಅಭಿಮಾನಿಯಿಂದ ಬಿಗ್ ಶಾಕ್!

ಸಿನಿಮಾದಲ್ಲಿ ವಕೀಲರ ಬಗ್ಗೆ ವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದ್ದು, ಸ್ಯಾಂಡಲ್‍ವುಡ್ ನ ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರದ’ ಸಿನಿಮಾ ಇನ್ನೂ 10 ದಿನಗಳ ಕಾಲ ರದ್ದಾಗಿದೆ. ವಕೀಲ ಜಿ. ನಾರಾಯಣಸ್ವಾಮಿ ಅವರು ನಿರ್ದೇಶಕ, ನಿರ್ಮಾಪಕ, ಸೆನ್ಸಾರ್ ಬೋರ್ಡ್, ಫಿಲಂ ಚೇಂಬರ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅರ್ಜಿ ವಿಚಾರಣೆಯನ್ನು ಶನಿವಾರ ನಡೆಸಿದ ಕೋರ್ಟ್ ಅಂಜನಿಪುತ್ರ ಸಿನಿಮಾ ಪ್ರದರ್ಶನ ಮಾಡದಂತೆ ಆದೇಶಿಸಿ ಜ. 2ಕ್ಕೆ ವಿಚಾರಣೆ ಮುಂದೂಡಿದೆ.

https://www.youtube.com/watch?v=f7IZoviKUvA

anjaniputra court

ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದ್ದು ಗುರುವಾರ ಬಿಡುಗಡೆಯಾಗಿತ್ತು. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Puneeth Rajkumar in Anjani Putra 1

Share This Article
Leave a Comment

Leave a Reply

Your email address will not be published. Required fields are marked *