ನವದೆಹಲಿ: ಯಡಿಯೂರಪ್ಪನವರು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬುದು ತುಂಬಾ ದಿನಗಳ ಬಯಕೆಯಾಗಿತ್ತು ಅದೀಗ ಈಡೇರಿದೆ. ರಾಜ್ಯಕ್ಕೆ ಏನೇನು ಒಳ್ಳೆಯ ಕೆಲಸಗಳಾಗಬೇಕೋ ಅದೆಲ್ಲವನ್ನು ಯಡಿಯೂರಪ್ಪನವರು ಮಾಡುತ್ತಾರೆ ಎಂದು ಮಾಧುಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅಸ್ತಿತ್ವದ ನಂತರ ತುಂಬಾ ಸಂಕಟವಾಗಿತ್ತು. ಯಡಿಯೂರಪ್ಪನವರಿಗೂ ಸಹ ತುಂಬಾ ದಿನಗಳಿಂದ ಒಂದು ರೀತಿಯ ಬೇಸರ ಕಾಡುತ್ತಿತ್ತು. ಇದೀಗ ಮರಳಿ ಅಧಿಕಾರಕ್ಕೇರುತ್ತಿರುವುದು ಹಾಗೂ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗುತ್ತಿರುವುದು ತುಂಬಾ ಸಂತಸ ತಂದಿದೆ. ರಾಜ್ಯಕ್ಕೆ ಏನೇನು ಒಳ್ಳೆಯ ಕೆಲಸ ಮಾಡಬೇಕೋ ಅದನ್ನು ಅವರು ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
Advertisement
Advertisement
ವಿಧಾನಸಭೆ ಚುನಾವಣೆಯಲ್ಲಿ ಮತದಾರರು 105 ಜೊತೆಗೆ ಇನ್ನು 5-6 ಸ್ಥಾನ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕೆಲವೇ ಸ್ಥಾನ ಕಡಿಮೆ ಬಂದಿದ್ದರಿಂದ ದೊಡ್ಡ ಪಾರ್ಟಿಯಾಗಿದ್ದರೂ ಅಧಿಕಾರದಿಂದ ದೂರ ಉಳಿಯಬೇಕಾಯಿತು. ಹೀಗಾಗಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ನಂತರ ಅವರ ಕಚ್ಚಾಟ ಶುರುವಾಯಿತು. ಆಗಲೇ ಇವರು ತುಂಬಾ ದಿನ ಉಳಿಯುವುದಿಲ್ಲ ಎಂದು ನಾವು ಅಂದುಕೊಂಡಿದ್ದೆವು. ನಂತರ ನಡೆದ ಲೋಕಸಭಾ ಚುನಾವಣೆ ವೇಳೆ ಮತದಾರರು ಜಾಗೃತಿಯಿಂದ ಮತ ಹಾಕಿದರು ಎಂದು ತಿಳಿಸಿದರು.
Advertisement
ವಿಧಾನಸಭೆಯಲ್ಲಾದ ತಪ್ಪು ಲೋಕಸಭೆಯಲ್ಲಾಗಬಾರದು ಎಂದು ಉತ್ತಮ ತೀರ್ಪು ನೀಡಿದರು. ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸಿ ಕೊಟ್ಟರು. ಇದರಿಂದ ಜನರ ಅಭಿಪ್ರಾಯವೇನು ಎಂಬುದು ಸ್ಪಷ್ಟವಾಗುತ್ತದೆ. ಇಡೀ ರಾಜ್ಯದ ಜನತೆ ಇದೀಗ ನಮ್ಮ ಜೊತೆಗಿದ್ದಾರೆ. ಮೈತ್ರಿ ಸರ್ಕಾರದ ಶಾಸಕರಿಗೂ ಅಲ್ಲಿನ ದುರಾಡಳಿತ ನೋಡಿ ಬೇಸರವಾಯಿತು. ಶಾಸಕರು ನಿರೀಕ್ಷಿಸಿದ ಕೆಲಸ ಆಗುತ್ತಿಲ್ಲ. ಕೆಲವೇ ಜನರ ಕೆಲಸವಾಗುತ್ತದೆ. ಒಂದೇ ಕುಟುಂಬದ ಮಾತನ್ನು ಎಲ್ಲರೂ ಕೇಳುವ ಪರಿಸ್ಥಿತಿ ಇದೆ ಎಂದು ಅವರಲ್ಲೇ ಭಿನ್ನಾಭಿಪ್ರಾಯ ಮೂಡಿ ಹೊರ ನಡೆದರು. ಇದೇ ಸಂದರ್ಭವನ್ನು ನಾವು ಸದ್ಬಳಕೆ ಮಾಡಿಕೊಂಡಿದ್ದೇವೆ ಎಂದು ಹೇಳಿ ಸರ್ಕಾರ ರಚನೆಗೆ ಮುಂದಾಗಿದನ್ನು ಸಮರ್ಥಿಸಿಕೊಂಡರು.
Advertisement
ನಮ್ಮ ಪಕ್ಷದಲ್ಲಿ ಹೈ ಕಮಾಂಡ್ ಅವರೇ ಅಂತಿಮ ನಿರ್ಧಾರ ಮಾಡಬೇಕು. ಹೀಗಾಗಿ ನಾವು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆವು. ಈ ವೇಳೆ ಅವರು ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಅವರು ಸಂಸತ್‍ನಲ್ಲಿ ಕಾರ್ಯನಿರತರಾಗಿದ್ದರಿಂದ ರಾತ್ರಿ ವೇಳೆ ಸಭೆ ನಡೆಸಿ ಚರ್ಚಿಸಿ, ರಾತ್ರಿ 11ಕ್ಕೆ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಸರ್ಕಾರ ರಚನೆಗೆ ತಡವಾಗಿ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ನಮ್ಮದು 105 ಇದ್ದರೂ ಇಬ್ಬರು ಪಕ್ಷೇತರರು ಬೆಂಬಲ ನೀಡಿದ್ದಾರೆ. ಅಲ್ಲದೆ, ಬಿಎಸ್‍ಪಿಯ ಮಹೇಶ್ ಅವರನ್ನು ಉಚ್ಛಾಟನೆ ಮಾಡಿದ್ದಾರೆ. ಬಿಎಸ್‍ಪಿ ಹೈ ಕಮಾಂಡ್ ಮಹೇಶ್ ಅವರಿಗೆ ಮೈತ್ರಿ ಸರ್ಕಾರಕ್ಕೆ ಮತ ಹಾಕಿ ಎಂದರೂ ಸಹ ಹೋಗಿಲ್ಲದ್ದನ್ನು ಕಂಡರೆ ಅವರು ನಮ್ಮ ಪರವಾಗಿದ್ದಾರೆ ಎಂದರ್ಥ. ಹೀಗಾಗಿ ನಾವು 108 ಜನ ಆಗುತ್ತೇವೆ. ಬಹುಮತಕ್ಕೆ ಕೇವಲ 5 ಸ್ಥಾನ ಮಾತ್ರ ವ್ಯತ್ಯಾಸವಾಗಲಿದೆ ಎಂದು ಮಾಧುಸ್ವಾಮಿ ತಿಳಸಿದರು.
ಈ ಹಿಂದೆ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯಪಾಲರು ಸಂವಿಧಾನದಕ್ಕೆ ಬದ್ಧವಾಗಿ ಕ್ರಮ ಕೈಗೊಂಡರು. ಅಲ್ಲದೆ, ಮೈತ್ರಿ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಕೇವಲ 24 ಗಂಟೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದರು. ಹೀಗಾಗಿ ಗಲಿಬಿಲಿಯಾಯಿತು. ಅಲ್ಲದೆ, ಆಗ ಪಕ್ಷೇತರರು ಸಹ ಅವರೊಂದಿಗೆ ಹೋಗಿದ್ದರು. ಇಂದು ಆ ಪರಿಸ್ಥಿತಿ ಇಲ್ಲ ಅವರೊಂದಿಗೆ ಪಕ್ಷೇತರರು, ಬಿಎಸ್‍ಪಿ ಶಾಸಕರಿಲ್ಲ. ನಾವು ಒಟ್ಟು 108 ಜನ ಇದ್ದೇವೆ. ಅಲ್ಲದೆ, ಅತೃಪ್ತ ಶಾಸಕರೂ ಸಹ ಯಾವುದೇ ಕಾರಣಕ್ಕೂ ಮರಳಿ ಮೈತ್ರಿ ಪಕ್ಷಗಳನ್ನು ಸೇರುವುದಿಲ್ಲ. ಹೀಗಾಗಿ ಸರ್ಕಾರ ನಡೆಸುವ ಕುರಿತು ನಮಗೆ ವಿಶ್ವಾಸವಿದೆ ಎಂದರು.