ಹಂದಿ ಮಾಂಸ ಸೇವನೆ ಹೆಚ್ಚಳ – ಶಟಲ್‌ ಕಾಕ್‌ಗೆ ಬಂತು ಬರ, ಬೆಲೆ ದಿಢೀರ್‌ ಏರಿಕೆ!

Public TV
5 Min Read
Shuttle Cock

ವಿಶ್ವದಲ್ಲಿ ಅತಿವೇಗವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್‌ ಕೂಡ ಒಂದು. ಭಾರತದಲ್ಲೂ ಬ್ಯಾಡ್ಮಿಂಟನ್‌ ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕ್ರಿಕೆಟ್‌ನ ಬಳಿಕ ಭಾರತದಲ್ಲಿ ಬ್ಯಾಡ್ಮಿಂಟನ್ ಆಟ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲೇ ಶಟಲ್‌ ಕಾಕ್‌ನ ಬೆಲೆ ಗಗನಕ್ಕೇರುತ್ತಿದೆ. ಕಳೆದ 1 ವರ್ಷದ ಅವಧಿಯಲ್ಲಿ ಇದರ ಬೆಲೆ ದುಪ್ಪಟ್ಟಾಗಿದೆ. ಹಂದಿ ಮಾಂಸ ಸೇವನೆಯೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅರೇ ಇದೇನಪ್ಪಾ? ಹಂದಿ ಮಾಂಸ ಸೇವನೆಗೂ ಶಟಲ್‌ ಕಾಕ್‌ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲಿ ಮೂಡುತ್ತದೆ. ಹಾಗಿದ್ರೆ ಶಟಲ್‌ ಕಾಕ್‌ ಬೆಲೆ ಏರಲು ಕಾರಣವೇನು? ಹಂದಿ ಮಾಂಸ ಸೇವನೆಗೂ ಶಟಲ್‌ ಕಾಕ್‌ ಬೆಲೆ ಏರಿಕೆಗೂ ಇರುವ ನಂಟೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಶಟಲ್ ಕಾಕ್ ಬೆಲೆ ಏಕಾಏಕಿ ಏರಿಕೆ:
ಬ್ಯಾಡ್ಮಿಂಟನ್ ಆಟದಲ್ಲಿ ಬಳಕೆಯಾಗುವ ಹಕ್ಕಿ ಪುಕ್ಕದ ಶಟಲ್‌ನ ಬೆಲೆ ಕಳೆದ 1 ವರ್ಷದಲ್ಲಿ ದುಪ್ಪಟ್ಟಾಗಿದೆ. ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಬಳಕೆ ಮಾಡುತ್ತಿದ್ದ ಶಟಲ್‌ ಕಾಕ್‌ಗಳು ಸುಮಾರು 150 ರೂ.ಗೆ ಲಭ್ಯವಾಗುತ್ತಿದ್ದವು. ಈಗ ಇವುಗಳ ಬೆಲೆ 300 ರೂ. ದಾಟಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಶಟಲ್‌ ಕಾಕ್‌ಗಳ ಉತ್ಪಾದನೆಯಲ್ಲಾಗಿರುವ ಕೊರತೆ. ಪ್ರಮುಖ ಪಂದ್ಯಾವಳಿಗಳಿಗಾಗಿ ಪ್ರತೀ ವರ್ಷ ಸುಮಾರು 21 ಕೋಟಿ ಶಟಲ್‌ ಕಾಕ್ ಬಳಕೆಯಾಗುತ್ತವೆ. ಆದರೆ ಇಷ್ಟೊಂದು ಶಟಲ್‌ ಕಾಕ್‌ಗ‌ಳನ್ನು ಒದಗಿಸಲು ಉತ್ಪಾದಕಾ ಕಂಪನಿಗಳು ವಿಫಲವಾಗಿರುವುದರಿಂದ ಶಟಲ್‌ ಕಾಕ್ ಬೆಲೆಯು ಚಿನ್ನದಂತೆ ದಿಢೀರ್ ಏರಿಕೆ ಕಂಡಿದೆ.

ಭಾರತದ ಪ್ರತಿಷ್ಠಿತ ಪುಲ್ಲೇಲಾ ಗೋಪಿಚಂದ್‌ ಅಕಾಡೆಮಿ ಸೇರಿ ವಿಶ್ವದ ಕೆಲ ಪ್ರತಿಷ್ಠಿತ ತರಬೇತಿ ಕೇಂದ್ರಗಳಲ್ಲಿ ಕೇವಲ ಎರಡು ವಾರಕ್ಕೆ ಆಗುವಷ್ಟು ಶಟಲ್‌ ಕಾಕ್ ಮಾತ್ರ ಸ್ಟಾಕ್‌ ಇದೆಯಂತೆ. ಶಟಲ್‌ ಕಾಕ್ ಕೊರತೆ ಆಗಲು ಚೀನಾದಲ್ಲಿ ಜನ ಬಾತುಕೋಳಿ, ಹೆಬ್ಬಾತು ಬಿಟ್ಟು ಹಂದಿ ಮಾಂಸವನ್ನು ಹೆಚ್ಚಾಗಿ ಸೇವಿಸುತ್ತಿರುವುದೇ ಕಾರಣ‌ ಎನ್ನಲಾಗುತ್ತಿದೆ. ಕೇಳಲು ಆಶ್ಚರ್ಯ ಎನಿಸಿದರೂ ಇದು ಸತ್ಯ.‌

Shuttle Cock 2

ಶಟಲ್ ಉತ್ಪಾದನೆಯಲ್ಲಿ ಚೀನ ಪ್ರಾಬಲ್ಯ:
ಶಟಲ್ ಉತ್ಪಾದನೆಯ ಜಾಗತಿಕ ಕೇಂದ್ರ ಎನಿಸಿಕೊಂಡಿರುವ ಚೀನದ ಗೈಝ ಪ್ರಾಂತದಲ್ಲಿ ಉತ್ಪಾದನೆಯ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಇಲ್ಲಿರುವ ಶಟಲ್ ಕಾಕ್ ಉತ್ಪಾದಕ ಕೇಂದ್ರಗಳು ಕಳೆದ ವರ್ಷ ತಿಂಗಳಿಗೆ 30 ಲಕ್ಷ ಶಟಲ್ ಕಾಕ್‌ ಉತ್ಪಾದನೆಯನ್ನು ಮಾಡುತ್ತಿದ್ದವು. ಆದರೆ, ಇದರ ಪ್ರಮಾಣ ಈ ವರ್ಷ 20 ಲಕ್ಷಕ್ಕೆ ಕುಸಿತ ಕಂಡಿದೆ. ಇಲ್ಲಿ ಶಟಲ್‌ ಕಾಕ್ ಉತ್ಪಾದನೆಗೆ ಬಾಡಿಗೆ ರಹಿತ ಭೂಮಿಯನ್ನು ಸರ್ಕಾರ ಒದಗಿಸಿರುವುದರಿಂದ ಕಂಪನಿಗಳು ನಷ್ಟಕ್ಕೀಡಾಗದೇ ಉಳಿದುಕೊಂಡಿವೆ. ಶಟಲ್‌ ಕಾಕ್‌ಗಳನ್ನು ತಯಾರು ಮಾಡಲು ಬೇಕಾದ ಪುಕ್ಕಗಳ ಕೊರತೆ ಉಂಟಾಗಿರುವುದೇ ಕಾಕ್ ಉತ್ಪಾದನೆ ಕುಂಠಿತವಾಗಲು ಕಾರಣ ಎನ್ನಲಾಗಿದೆ.

ಶಟಲ್‌ ಕಾಕ್‌ ತಯಾರಿಕೆ ಹೇಗೆ?
ಬ್ಯಾಡ್ಮಿಂಟನ್‌ನಲ್ಲಿ ಬಳಸುವ ಶಟಲ್‌‌ ಕಾಕ್ ತಯಾರಿಸಲು ಹೆಬ್ಬಾತು (ಗೂಸ್‌) ಹಾಗೂ ಬಾತುಕೋಳಿಯ ಪುಕ್ಕಗಳನ್ನು ಬಳಸಲಾಗುತ್ತದೆ. ಚೀನಾದಲ್ಲಿ ಸಂಪ್ರದಾಯಿಕವಾಗಿ ಈ ಎರಡರ ಮಾಂಸಕ್ಕೆ ಭಾರೀ ಬೇಡಿಕೆ ಇರುವ ಕಾರಣ, ಅಲ್ಲಿನ ರೈತರು ಹೆಚ್ಚಾಗಿ ಸಾಕಣಿಕೆ ಮಾಡುತ್ತಾರೆ.

ಒಂದು ಶಟಲ್‌‌ ಕಾಕ್ ತಯಾರಿಸಲು 16 ಪುಕ್ಕಗಳು ಬೇಕಾಗುತ್ತವೆ. ಸಣ್ಣ ಪುಟ್ಟ ಟೂರ್ನಿಗಳಲ್ಲಿ, ಹವ್ಯಾಸಕ್ಕಾಗಿ ಬ್ಯಾಡ್ಮಿಂಟನ್‌ ಆಡುವವರ ಬಳಕೆಗೆ ಬಾತುಕೋಳಿಯ ಪುಕ್ಕದಿಂದ ತಯಾರಿಸಿದ ಕಾಕ್‌ಗಳು ಸಾಕು. ಆದರೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಹೆಬ್ಬಾತುವಿನ ಪುಕ್ಕದಿಂದ ತಯಾರಿಸಿದ ಕಾಕ್‌ಗಳು ಬಳಕೆಯಾಗುತ್ತದೆ. ಅಂ.ರಾ. ಸಿಂಗಲ್ಸ್‌ ಪಂದ್ಯವೊಂದರಲ್ಲಿ ಸಾಮಾನ್ಯವಾಗಿ 2 ಡಜನ್‌ ಶಟಲ್‌ ಕಾಕ್‌ಗಳು ಬಳಕೆಯಾಗುತ್ತವೆ.

ಶಟಲ್‌ ಕಾಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ (ಬಿಡ್ಲ್ಯುಎಫ್‌), ಶಟಲ್‌‌ ಕಾಕ್ ತಯಾರಿಕ ಸಂಸ್ಥೆಗಳಿಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿದೆ. ಆದರೆ, ಪುಕ್ಕಗಳ ಕೊರತೆಯಿಂದಾಗಿ ಅಗತ್ಯಕ್ಕೆ ತಕ್ಕಂತೆ ಶಟಲ್‌ ಕಾಕ್‌ ಪೂರೈಕೆ ಕಷ್ಟ ಎಂದು ತಯಾರಿಕ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ, ಶಟಲ್‌ ಕಾಕ್‌ಗಳ ಬೆಲೆ 30%ರಿಂದ 40%ರಷ್ಟು ಹೆಚ್ಚಳವಾಗಿದೆ.

Shuttle Cock 1

ಶಟಲ್‌ ಕಾಕ್‌ ಬೆಲೆ ಏರಿಕೆಗೆ ಕಾರಣವೇನು?
ಚೀನಿಯರಿಗೆ ಹಂದಿ ಮಾಂಸ ಎಂದರೆ ಎಲ್ಲಿಲ್ಲದ ಪ್ರೀತಿ. ಜಗತ್ತಿನಲ್ಲಿ ಅತಿಹೆಚ್ಚು ಹಂದಿ ಮಾಂಸ ಸೇವಿಸುವ, ರಫ್ತು ಮಾಡುವ ದೇಶ ಚೀನಾ. ಕಳೆದ 6 ತಿಂಗಳಿಂದ ಹಂದಿ ಮಾಂಸದ ಬೆಲೆ ನಿರಂತರವಾಗಿ ಕುಸಿಯುತ್ತಿದ್ದು, ಜನ ಹೆಚ್ಚಾಗಿ ಹಂದಿ ಮಾಂಸವನ್ನೇ ಸೇವಿಸುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ರೈತರು, ಬಾತುಕೋಳಿ ಹಾಗೂ ಹೆಬ್ಬಾತು ಸಾಕುವುದನ್ನು ನಿಲ್ಲಿಸಿ ಹಂದಿ ಸಾಕಣೆ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಶಟಲ್‌ ಕಾಕ್‌ ಕೊರತೆಯಾಗಲು ಇದು ಕಾರಣವಾಗಿದೆ.

ವಿಶ್ವದ 57.7%ರಷ್ಟು ಹಂದಿ ಮಾಂಸ ಚೀನದಲ್ಲೇ ಸೇವಿಸಲಾಗುತ್ತಿದೆ.ಇದಕ್ಕೂ ಮುನ್ನ ಚೀನದಲ್ಲಿ ಬಾತುಕೋಳಿಯನ್ನು ಹೆಚ್ಚು ಸೇವಿಸಲಾಗುತ್ತಿತ್ತು. 2023ರಲ್ಲಿ 1.1 ಕೋಟಿ ಇದ್ದ ಬಾತುಕೋಳಿ ಸಾಕಾಣಿಕೆ 2024ರಲ್ಲಿ 90 ಲಕ್ಷಕ್ಕೆ ಕುಸಿದಿದೆ. 2025ರಲ್ಲಿ ಇನ್ನೂ ಕುಸಿದಿದ್ದು, ಶಟಲ್ ಕಾಕ್‌ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ.

ಪುಕ್ಕ ಉತ್ಪಾದನೆಯಲ್ಲಿ 35% ಕುಸಿತ:
ಚೀನದಲ್ಲಿ ಬಾತುಕೋಳಿ ಪುಕ್ಕದ ಉತ್ಪಾದನೆಯಲ್ಲಿ ಒಂದೇ ವರ್ಷದಲ್ಲಿ 35%ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ. ಹೀಗಾಗಿ ಬೆಲೆ ಗಗನಕ್ಕೇರುತ್ತಿದೆ. 2019ರಲ್ಲಿ ಚೀನದಲ್ಲಿ 400 ಕೋಟಿ ಬಾತುಕೋಳಿಗಳಿವೆ ಎಂದು ಅಂದಾಜಿಸಲಾಗಿತ್ತು. ಇದು ಈಗ 200 ಕೋಟಿಗೆ ಇಳಿಕೆಯಾಗಿದೆ. ಆದರೂ 80%ರಷ್ಟು ಬೇಡಿಕೆಯನ್ನು ಪೂರೈಸಲು ಚೀನ ಸಫಲವಾಗಿದ್ದು, ಪೂರ್ಣ ಬೇಡಿಕೆಯನ್ನು ಪೂರೈಸಲಾಗದ ಕಾರಣ ಬೆಲೆ ಏರಿಕೆಯಾಗುತ್ತಿದೆ.

ಭಾರತದಲ್ಲೂ ಇವೆ ಉತ್ಪಾದನಾ ಘಟಕಗಳು:
ಶಟಲ್ ಕಾಕ್‌ ಉತ್ಪಾದನೆಯಲ್ಲಿ ಚೀನದ ಏಕಸ್ವಾಮ್ಯತೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿರುವ ದೇಶವೆಂದರೆ ಅದು ಭಾರತ. ಆದರೂ ವಿಶ್ವದ ಬೇಡಿಕೆಗೆ ಸಾಕಾಗುವಷ್ಟು ಪುಕ್ಕದ ಶಟಲ್‌ ಕಾಕ್‌ಗಳನ್ನು ಉತ್ಪಾದನೆ ಮಾಡಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ. ಪಶ್ಚಿಮ ಬಂಗಾಳದ ಉಲುಬೇರಿಯಾದ ಸುತ್ತಮುತ್ತ ಸುಮಾರು 150ಕ್ಕೂ ಹೆಚ್ಚು ಸಣ್ಣ ಸಣ್ಣ ಉತ್ಪಾದನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಭಾರತಕ್ಕೆ ಬೇಕಿರುವ 65%ರಷ್ಟು ಕಾಕ್ ಇಲ್ಲಿ ಉತ್ಪಾದನೆಯಾಗುತ್ತದೆ. ಇದಲ್ಲದೆ ಪಂಜಾಬ್‌ನ ಜಲಂಧರ್‌ನಲ್ಲೂ ಉತ್ಪಾದನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಕಾಕ್ ಉತ್ಪಾದನೆ ಮಾಡುವಷ್ಟು ಬಾತುಕೋಳಿಗಳನ್ನು ಭಾರತದಲ್ಲಿ ಸಾಕಾಣಿಕೆ ಮಾಡುತ್ತಿಲ್ಲ.

Shuttle Cock

ಪರ್ಯಾಯ ಮಾರ್ಗಗಳೇನು?
-ನೈಲಾನ್‌ನಿಂದ ತಯಾರಿಸಿದ ಶಟಲ್‌ ಕಾಕ್‌ಗಳನ್ನು ಜಾಗತಿಕವಾಗಿ ಒಪ್ಪಿಕೊಳ್ಳುವುದು
-ಸಿಂಥೆಟಿಕ್ ಶಟಲ್‌ ಕಾಕ್‌ಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಸುವುದು
-ಆರಂಭದಲ್ಲಿ ಪುಕ್ಕ ಹಾಗೂ ಸಿಂಥೆಟಿಕ್ ಮಿಶ್ರ ಕಾಕ್‌ಗಳನ್ನು ಬಳಸುವುದು
-ಬಾತುಕೋಳಿಗಳ ಸಾಕಣೆ ಮತ್ತು ಪುಕ್ಕದ ಸಂಗ್ರಹಣೆಯನ್ನು ಹೆಚ್ಚಿಸುವುದು
-ಚೀನದಿಂದ ಹೊರಗೆ ಉತ್ಪಾದನಾ ಘಟಕಗಳನ್ನು ಹೆಚ್ಚು ಮಾಡುವುದು

ಪ್ಲಾಸ್ಟಿಕ್ ಕಾಕ್‌ಗೆ ಬ್ಯಾಡ್ಮಿಂಟನ್ ಪಟುಗಳ ವಿರೋಧ:
2018ರ ವೇಳೆಯಲ್ಲಿ ಚೀನದಲ್ಲಿ ಭಾರೀ ಪ್ರಮಾಣದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದರಿಂದ ಶಟಲ್ ಕಾಕ್ ಉತ್ಪಾದನೆ ಕುಂಠಿತಗೊಂಡಿತ್ತು. ಹೀಗಾಗಿ ಪ್ಲಾಸ್ಟಿಕ್ ಶಟಲ್‌‌ ಕಾಕ್‌ಗಳನ್ನು ಪಂದ್ಯಾವಳಿಗಳಲ್ಲಿ ಬಳಕೆ ಮಾಡಲು ಆರಂಭಿಸಲಾಗಿತ್ತು. ಆದರೆ ಇದಕ್ಕೆ ಬಹುತೇಕ ಬ್ಯಾಡ್ಮಿಂಟನ್ ಪಟುಗಳು ವಿರೋಧ ವ್ಯಕ್ತಪಡಿಸಿದ್ದು, ಈ ಶಟಲ್‌ ಕಾಕ್‌ಗೆ ನಿಖರತೆ ಕಡಿಮೆ ಎಂದು ವಾದಿಸಿದ್ದರು. ಆದರೆ ಇದೀಗ ಪುಕ್ಕದ ಶಟಲ್‌ ಕಾಕ್‌ಗಳ ಕೊರತೆ ಉಂಟಾಗಿರುವುದರಿಂದ ಮತ್ತೊಮ್ಮೆ ಪರ್ಯಾಯದ ಕಡೆಗೆ ಜಗತ್ತು ಚಿಂತಿಸಲು ಆರಂಭಿಸಿದೆ.

Share This Article