ಡೊನಾಲ್ಡ್ ಟ್ರಂಪ್ (Donald Trump) ಅವರ ‘ಅಮೆರಿಕ ಫಸ್ಟ್’ ನೀತಿ ಮತ್ತು ‘ವೀಸಾ’ ಕುರಿತ ಖ್ಯಾತ ಉದ್ಯಮಿ ಎಲಾನ್ ಮಸ್ಕ್ (Elon Musk) ಹೇಳಿಕೆಯೊಂದು ಅಮೆರಿಕದಲ್ಲಿ ‘ಹೆಚ್-1ಬಿ’ ವೀಸಾ ಬಗೆಗಿನ ಚರ್ಚೆ ಜೋರಾಗಿದೆ. ಹೆಚ್-1ಬಿ ವೀಸಾ ಎಂದೊಡನೆ ಭಾರತೀಯ ಮತ್ತು ಚೀನಾ ಮೂಲದ ಟೆಕ್ಕಿಗಳ ಗಮನ ವಿಶ್ವದ ದೊಡ್ಡಣನ ಕಡೆ ವಾಲುತ್ತದೆ. ಏಕೆಂದರೆ, ಈ ವೀಸಾಗೆ ಅಷ್ಟೊಂದು ಮಹತ್ವವಿದೆ. ಹೆಚ್-1ಬಿ ವೀಸಾ ವಿದೇಶಿ ವೃತ್ತಿಪರರಿಗೆ, ಅದರಲ್ಲೂ ವಿಶೇಷವಾಗಿ ಭಾರತೀಯರಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೃತ್ತಿಜೀವನವನ್ನು ಕಂಡುಕೊಳ್ಳಲು ಹೆಚ್ಚು ಬೇಡಿಕೆಯಿರುವ ಕೆಲಸದ ಪರವಾನಗಿಗಳಲ್ಲಿ ಒಂದಾಗಿದೆ. ಹೀಗಾಗಿ, ಆ ವೀಸಾ ಬಗ್ಗೆ ದೇಶದ ಇಬ್ಬರು ಗಣ್ಯ ವ್ಯಕ್ತಿಗಳು ತಳೆದಿರುವ ನಿಲುವು ವಿಶ್ವಮಟ್ಟದಲ್ಲಿ ಕುತೂಹಲ ಹೆಚ್ಚಿಸಿದೆ.
ಅಷ್ಟಕ್ಕೂ ಏನಿದು ಹೆಚ್-1ಬಿ ವೀಸಾ? ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತೀಯರಿಗೆ ಏಕೆ ಮುಖ್ಯವಾಗಿದೆ ಎಂಬುದರ ಸರಳೀಕೃತ ವಿವರಣೆ ಇಲ್ಲಿದೆ.
Advertisement
Advertisement
ಹೆಚ್-1ಬಿ ವೀಸಾ ಎಂದರೇನು?
ಹೆಚ್-1ಬಿ (H-1b Visa) ಎಂಬುದು ವಲಸಿಗಯೇತರ ನೀಡುವ ವೀಸಾ ಆಗಿದೆ. ಇದು ತಾತ್ಕಾಲಿಕ ಯುಎಸ್ ಕೆಲಸದ ವೀಸಾವಾಗಿದ್ದು, ತಂತ್ರಜ್ಞಾನ, ಎಂಜಿನಿಯರಿಂಗ್, ಹಣಕಾಸು ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅವಕಾಶ ನೀಡುತ್ತದೆ. ವೀಸಾ ಅವಧಿಯನ್ನು ಆರಂಭದಲ್ಲಿ ಮೂರು ವರ್ಷಗಳವರೆಗೆ ಮಂಜೂರು ಮಾಡಲಾಗಿದ್ದು, ಇದನ್ನು ಗರಿಷ್ಠ ಆರು ವರ್ಷಗಳ ವರೆಗೆ ವಿಸ್ತರಿಸಬಹುದು. ಗ್ರೀನ್ ಕಾರ್ಡ್ (ಶಾಶ್ವತ ರೆಸಿಡೆನ್ಸಿ) ಅನ್ನು ಅನುಸರಿಸುವ ವ್ಯಕ್ತಿಗಳಿಗೆ, ವೀಸಾವನ್ನು ಅನಿರ್ದಿಷ್ಟವಾಗಿ ನವೀಕರಿಸಬಹುದು. ಇದು ಯುಎಸ್‌ನಲ್ಲಿ ದೀರ್ಘಾವಧಿಯ ಉದ್ಯೋಗ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
Advertisement
ಅಪ್ಲಿಕೇಶನ್ ಪ್ರಕ್ರಿಯೆ ಹೇಗಿರುತ್ತೆ?
ಪ್ರತಿ ವರ್ಷ ಯುಎಸ್ ಸರ್ಕಾರವು 65,000 ಹೆಚ್-1ಬಿ ವೀಸಾಗಳನ್ನು ನೀಡುತ್ತದೆ. ಜೊತೆಗೆ ಯುಎಸ್ ವಿಶ್ವವಿದ್ಯಾನಿಲಯಗಳಿಂದ ಉನ್ನತ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 20,000 ವೀಸಾಗಳನ್ನು ಕಾಯ್ದಿರಿಸಲಾಗಿದೆ. ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳೊಂದಿಗೆ (ಯುಎಸ್‌ಸಿಐಎಸ್) ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಲಾಟರಿ ವ್ಯವಸ್ಥೆಯು ನಂತರ ಯಾದೃಚ್ಛಿಕವಾಗಿ ಅರ್ಜಿದಾರರನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ನಂತರ, ಅಂತರರಾಷ್ಟ್ರೀಯ ಉದ್ಯೋಗಿಗಳ ಪರವಾಗಿ ಸಂಬಂಧಪಟ್ಟ ಕಂಪನಿಗಳು ಈ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತವೆ. ವಿಶೇಷವಾಗಿ ಟೆಕ್ ಕಂಪನಿಗಳಲ್ಲಿ ಈ ಕಾರ್ಯಕ್ರಮ ಜನಪ್ರಿಯವಾಗಿದೆ. ಪ್ರತಿ ವರ್ಷ ಸಾವಿರಾರು ನುರಿತ ಕೆಲಸಗಾರರನ್ನು ನೇಮಿಸಿಕೊಳ್ಳಲು ಈ ವೀಸಾವನ್ನು ಬಳಸಲಾಗುತ್ತದೆ.
Advertisement
ವೀಸಾದ ಪ್ರಯೋಜನಗಳೇನು?
ಹೆಚ್-1ಬಿ ವೀಸಾವು ವೃತ್ತಿಪರರಿಗೆ ಮತ್ತು ಉದ್ಯೋಗದಾತರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
6 ವರ್ಷಗಳ ಕೆಲಸದ ಅವಧಿ: ಹೆಚ್-1ಬಿ ವೀಸಾ ಪಡೆದ ನಂತರ, ಆರು ವರ್ಷಗಳ ಕೆಲಸದ ಪರವಾನಗಿ ಪಡೆಯಲಾಗುತ್ತದೆ. ಸಾಮಾನ್ಯ ಕೆಲಸದ ವೀಸಾ 3 ವರ್ಷಗಳು. ಅದಾದ ನಂತರ ವೀಸಾವನ್ನು ನವೀಕರಿಸಬೇಕಾಗುತ್ತದೆ. ಈ ವೀಸಾ ಹೊಂದಿರುವವರು ಅಮೆರಿಕ ಮೂಲದ ವೃತ್ತಿಪರರಿಗೆ ಸಮಾನ ವೇತನ ಮತ್ತು ಕೆಲಸದ ಸ್ಥಾನಮಾನಗಳನ್ನು ಖಾತ್ರಿಪಡಿಸಿಕೊಳ್ಳಬಹುದು. ಈ ವೀಸಾ ಹೊಂದಿರುವವರಿಗೆ ತಮ್ಮ ಅನುಭವ, ಶಿಕ್ಷಣ, ಉದ್ಯೋಗದ ಆಧಾರದ ಮೇಲೆ ಕನಿಷ್ಠ ವೇತನ ಖಾತ್ರಿಪಡಿಸಲಾಗುತ್ತದೆ.
ಉದ್ಯೋಗ ಬದಲಾಯಿಸಲು ಸಹಕಾರಿ: ಹೆಚ್-1ಬಿ ವೀಸಾ ಪಡೆದ ನಂತರ ವೃತ್ತಿಪರರು ಸುಲಭವಾಗಿ ಉದ್ಯೋಗಗಳನ್ನು ಬದಲಾಯಿಸಿಕೊಳ್ಳಬಹುದು. ಪ್ರಯೋಜಕತ್ವ ಬದಲಾಯಿಸಲು ಉದ್ಯೋಗ ನೀಡುವ ಕಂಪನಿಗಳು ಅರ್ಜಿ ಸಲ್ಲಿಸಬಹುದು. ನಂತರ ಅನುಮೋದನೆ ಸಿಗುವವರೆಗೂ ಕಾಯುವ ಅಗತ್ಯವಿಲ್ಲ. ಹೊಸ ಸ್ಥಳದಲ್ಲಿ ತಕ್ಷಣವೇ ಕೆಲಸ ಪ್ರಾರಂಭಿಸಬಹುದು.
ಡ್ಯುಯೆಲ್ ಇಂಟೆಂಡ್ ಸ್ಟೇಟಸ್: ಹೆಚ್-1ಬಿ ಡ್ಯುಯೆಲ್ ಇಂಟೆಂಡ್ ವೀಸಾ ಆಗಿದೆ. ಅಂದರೆ, ವೀಸಾ ಹೊಂದಿರುವವರು ತಾತ್ಕಾಲಿಕ ವೀಸಾದಲ್ಲಿರುವಾಗಲೂ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಯಾವುದೇ ವಿದೇಶಿ ವೃತ್ತಿಪರರು ಅಮೆರಿಕ ಪ್ರಜೆಯಾಗಲು ಇದು ದಾರಿ ಮಾಡಿಕೊಡುತ್ತದೆ.
ಭಾರತೀಯರಿಗೆ ಇದು ಏಕೆ ಮುಖ್ಯ?
ಅಮೆರಿಕದ ಹೆಚ್-1ಬಿ ವೀಸಾ ಪಡೆಯುವ ರಾಷ್ಟçಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ಭಾರತದಿಂದ ಹೆಚ್ಚು ನುರಿತ ವೃತ್ತಿಪರರು ಅಗಾಧ ಸಂಖ್ಯೆಯಲ್ಲಿ ಹೆಚ್-1ಬಿ ವೀಸಾ ಪಡೆದುಕೊಳ್ಳುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ಚೀನಾ ಮತ್ತು ಮೂರನೇ ಸ್ಥಾನದಲ್ಲಿ ಕೆನಡಾ ದೇಶಗಳಿವೆ. ಯುಎಸ್‌ನಲ್ಲಿ ವೃತ್ತಿ ಅವಕಾಶಗಳನ್ನು ಬಯಸುವ ಭಾರತೀಯ ವೃತ್ತಿಪರರಿಗೆ ಈ ವೀಸಾ ನಿರ್ಣಾಯಕ ಮಾರ್ಗವಾಗಿದೆ. ಆದಾಗ್ಯೂ, ವಲಸೆಯ ಬಗ್ಗೆ ನಡೆಯುತ್ತಿರುವ ನೀತಿ ಬದಲಾವಣೆಗಳು ಮತ್ತು ಚರ್ಚೆಗಳು ಭಾರತೀಯ ವೃತ್ತಿಪರರಿಗೆ ಅವಕಾಶ ಮತ್ತು ಸವಾಲಾಗಿದೆ.
ಯಾವ ಕಂಪನಿಗಳು ಹೆಚ್-1ಬಿ ವೀಸಾದಲ್ಲಿ ಹೆಚ್ಚು ಉದ್ಯೋಗಿಗಳನ್ನು ಹೊಂದಿವೆ?
ಅಮೆಜಾನ್ ಇ-ಕಾಮರ್ಸ್ ಕಂಪನಿಯು 2024ರಲ್ಲಿ ಆರಂಭಿಕ ಉದ್ಯೋಗಕ್ಕಾಗಿ 3,871 ಸಂಖ್ಯೆಯೊಂಹದಿಗೆ ಹೆಚ್ಚು ಅನುಮೋದಿತ ಹೆಚ್-1ಬಿ ವೀಸಾಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿ ಕಾಗ್ನಿಜೆಂಟ್, ಮೂರನೇ ಸ್ಥಾನದಲ್ಲಿ ಇನ್ಫೋಸಿಸ್ ಕಂಪನಿಗಳಿವೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಟಿಸಿಎಸ್, ಐಬಿಎಂ, ಮೈಕ್ರೋಸಾಫ್ಟ್, ಹೆಚ್‌ಸಿಎಲ್ ಅಮೆರಿಕ, ಗೂಗಲ್ ಸ್ಥಾನ ಪಡೆದಿವೆ.
ವೀಸಾ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರೋದ್ಯಾಕೆ?
2016ರ ಅಧ್ಯಕ್ಷೀಯ ಚುನಾವಣೆ ವೇಳೆಯೂ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾ ರದ್ದು ಮಾಡುವುದಾಗಿ ಶಪಥ ಮಾಡಿದ್ದರು. ‘ಅಮೆರಿಕ ಫಸ್ಟ್’ ಎಂಬುದು ಅವರ ನಿಲುವು. ಅಮೆರಿಕದಲ್ಲಿ ಪ್ರತಿಭೆಗಳಿಗೇನು ಕಡಿಮೆಯಿಲ್ಲ ಅನ್ನೋದು ಅವರ ವಾದ. ಈಗ ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಶೀಘ್ರದಲ್ಲೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹೊತ್ತಿನಲ್ಲಿ ವೀಸಾ ವಿಚಾರದಲ್ಲಿ ಅವರು ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ.
ಇದರ ನಡುವೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಲಾನ್ ಮಸ್ಕ್ ಅವರು ಕೂಡ ವೀಸಾ ಬಗ್ಗೆ ಮಾತನಾಡಿದ್ದಾರೆ. ‘ಹೆಚ್-1ಬಿ’ ವೀಸಾ ವ್ಯವಸ್ಥೆಯಲ್ಲಿ ಭಾರಿ ದೋಷವಿದ್ದು, ಶೀಘ್ರ ಅದರಲ್ಲಿ ಸುಧಾರಣೆ ತರಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಮಾತು ದೇಶದಲ್ಲಿ ವೀಸಾ ಬಗ್ಗೆ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.
ಹೆಚ್-1ಬಿ ವೀಸಾ, ಯುಸ್‌ನಲ್ಲಿ ಮಹತ್ವದ ರಾಜಕೀಯ ಮತ್ತು ಆರ್ಥಿಕ ಚರ್ಚೆಯ ವಿಷಯವಾಗಿದೆ. ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯಲ್ಲಿ ಭಾರತೀಯ-ಅಮೆರಿಕನ್ ಸಾಹಸೋದ್ಯಮ ಬಂಡವಾಳಗಾರ ಶ್ರೀರಾಮ ಕೃಷ್ಣನ್ ಅವರನ್ನು ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರನ್ನಾಗಿ ನೇಮಿಸಿದಾಗ ವಿವಾದ ಹುಟ್ಟಿಕೊಂಡಿತು. ಅವರ ನೇಮಕಾತಿಯು ಹೆಚ್-1ಬಿ ವೀಸಾಗಳ ಮೇಲಿನ ದೇಶ-ನಿರ್ದಿಷ್ಟ ಮಿತಿಯನ್ನು ತೆಗೆದುಹಾಕುವ ಕುರಿತು ಚರ್ಚೆಗಳೊಂದಿಗೆ ಹೊಂದಿಕೆಯಾಯಿತು. ಈ ಬದಲಾವಣೆಯು ಟೆಕ್ ವಲಯದಲ್ಲಿ ಭಾರತೀಯ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳನ್ನು ತೆರೆಯಬಹುದು. ಹೀಗಾಗಿ, ಈ ವಿವಾದ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.