ʻʻಎಲ್ಲಿ ನೀರು ಹರಿಯುವುದೋ, ಅಲ್ಲಿ ನಾಗರಿಕತೆ ಅರಳುತ್ತದೆ, ಅಂತರ್ಜಲ (Groundwater) ಅಮೂಲ್ಯ ಅದನ್ನು ಮಿತವಾಗಿ ಬಳಸಿದರೆ ಬಾಳು ಬಂಗಾರ, ಹನಿ ಹನಿ ಗೂಡಿದರೆ ಹಳ್ಳ. ಹನಿ ಹನಿ ಇಂಗಿದರೆ ಅದುವೇ ಅಂತರ್ಜಲʼʼ ಇದು ಕೇವಲ ನುಡಿಯಲ್ಲ, ಜೀವ ಕೋಟಿಗೆ ನೀರು ಅನಿವಾರ್ಯ, ನೀರಿಗೆ ಮಳೆಯೇ ಆಧಾರ, ಅಂತರ್ಜಲದಿಂದಲೇ ಜೀವ ಕುಲದ ಉದ್ಧಾರ ಎಂಬುದನ್ನು ಪ್ರಮಾಣಿಕರಿಸುವ ಪ್ರಯತ್ನ. ಯಾವುದೇ ಒಂದು ಚಟುವಟಿಕೆಗೂ ಅತ್ಯಗತ್ಯವಾದ ಸಂಪನ್ಮೂಲ ನೀರು. ಇಂದಿನ ಜಲಕ್ಷಾಮಕ್ಕೆ ಅಂತರ್ಜಲದ ಪೂರೈಕೆ ಹಾಗೂ ಬೇಡಿಕೆಗೆ ಇರುವ ಅಗಾಧವಾದ ಅಸಮತೋಲನವೇ ಪ್ರಮುಖ ಕಾರಣವಾಗಿದೆ. ಭೂಮಿಯ (Earth) ಮೇಲೆ ಬೀಳುವ ಮಳೆ ನೀರು ವ್ಯರ್ಥವಾಗಿ ಹರಿದು ಸಮುದ್ರಕ್ಕೆ ಸೇರುವುದನ್ನು ತಪ್ಪಿಸಿ ನೆಲದಾಳಕ್ಕೆ ಇಂಗುವಂತೆ ಮಾಡದಿದ್ದರೆ ಜನ-ಜಾನುವಾರುಗಳು ನಾಶವಾಗುವ ಮೂಲಕ ನಾಗರಿಕತೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ.
ಅದರಲ್ಲೂ ಇತ್ತೀಚಿನ ಅಧ್ಯಯನವೊಂದು (Water Study) ಅಂತರ್ಜಲಕ್ಕೆ ಆಗುವ ಅಪಾಯಗಳನ್ನು ಗುರುತಿಸಿದೆ. ಅಂತರ್ಜಲವು ನಮ್ಮ ಪಾದದ ಅಡಿಯಲ್ಲೇ ಇದೆ, ಭೂಮಿಯನ್ನು ಕೊರೆದು ಪಂಪ್ ಮಾಡುವಾಗ ಅದು ನಮ್ಮ ಅರಿವಿಗೆ ಬರುತ್ತದೆ. ನಮ್ಮ ಜೀವ ಕೋಟಿ, ಪರಿಸರ ವ್ಯವಸ್ಥೆಗೆ ಆಧಾರವಾಗಿರುವ ಅಂತರ್ಜಲ ಅಪಾಯದಲ್ಲಿದೆ ಎಂದರೆ ನೀವು ನಂಬುತ್ತೀರಾ? ಅಷ್ಟಕ್ಕೂ ಏನದು ಅಪಾಯ? ಭೂಮಿಯ ಮೇಲ್ಮೈ ತಾಪ ಹೆಚ್ಚಿದಷ್ಟು ಅಂತರ್ಜಲಕ್ಕೆ ಏನು ಹಾನಿಯಾಗಲಿದೆ? ಕುಡಿಯುವ ನೀರಿನ ಮೇಲೂ ಇದು ಪರಿಣಾಮ ಬೀರಲಿದೆಯೇ? ಎಂಬುದನ್ನು ನಾವಿಲ್ಲಿ ತಿಳಿಯಬಹುದು.
Advertisement
Advertisement
ಅಂತರ್ಜಲದ ತಾಪ ಹೆಚ್ಚಿದರೆ ಏನಾಗುತ್ತದೆ?
Advertisement
ಹವಾಮಾನ ಬದಲಾವಣೆಯಿಂದ ಅಂತರ್ಜಲ ರಕ್ಷಿಸಲ್ಪಡುತ್ತದೆ ಎಂದು ನಾವು ಭಾವಿಸಬಹುದು. ಏಕೆಂದರೆ ಅದು ಭೂಗತವಾಗಿರುತ್ತದೆ. ಆದ್ರೆ ನಿಜಾಂಶವೇ ಬೇರೆ. ಭೂಮಿಯ ಮೇಲ್ಮೈ ವಾತಾವರಣವು ಬೆಚ್ಚಗಾಗುತ್ತಿದ್ದಂತೆ ಹೆಚ್ಚು ಹೆಚ್ಚು ಶಾಖವು ಭೂಗತಕ್ಕೆ ತೂರಿಕೊಳ್ಳುತ್ತದೆ. ಈಗಾಗಲೇ ಇದಕ್ಕೆ ಸಾಕಷ್ಟು ಸಾಕ್ಷ್ಯಗಳೂ ಇವೆ. ಬೋರ್ವೆಲ್ ಕೊರೆಸಿದ ನಂತರ ಕೆಲವರು ಅವುಗಳನ್ನು ಮುಚ್ಚದೇ ಹಾಗೆಯೇ ಬಿಟ್ಟುಬಿಡುತ್ತಾರೆ. ಅಲ್ಲದೇ ಉಕ್ಕಿನ ಪೈಪ್‌ಗಳನ್ನು ಬಳಸುವುದರಿಂದ ಅದಕ್ಕೆ ತಗುಲುವ ಶಾಖವು ಅಂತರ್ಜಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಜೊತೆಗೆ ಭೂಗತ ದ್ರವ್ಯರಾಶಿಗಳು ಬೆಚ್ಚಗಾಗುತ್ತವೆ. ಪ್ರದೇಶದಿಂದ ಪ್ರದೇಶಕ್ಕೆ ಈ ಹವಾಮಾನ ಬದಲಾದಂತೆ ಅದು ಭೂಗತ ಜೀವರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುತ್ತದೆ. ಜೊತೆಗೆ ಕುಡಿಯುವ ನೀರಿನ ಕೊರತೆಗೂ ಕಾರಣವಾಗುತ್ತದೆ. ಮುಖ್ಯವಾಗಿ ಕೃಷಿ ಮತ್ತು ಕೈಗಾರಿಕೆಗಳು ಹೆಚ್ಚಾಗಿ ಈ ಅಂತರ್ಜಲವನ್ನು ಅವಲಂಬಿಸಿದ್ದು, ಅಂತರ್ಜಲದ ತಾಪ ಹೆಚ್ಚಿದಂತೆ ಈ ಎಲ್ಲ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀರಬಹುದು.
Advertisement
ಅನೂಕೂಲವೂ ಇದೆ:
ಕೆಲವೊಮ್ಮೆ ಬಿಸಿ ಅಂರ್ತಜಲ ಒಳ್ಳೆಯ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಭೂಮಿಯ ಮೇಲ್ಮೈ ತಾಪ ಹೆಚ್ಚಿದಂತೆ ಭೂಮಿಯೊಳಗೆ ಹತ್ತಾರು ಮೀಟರ್ ಆಳದಲ್ಲಿ ಶಾಖ ಹಿಡಿದಿಟ್ಟುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳನ್ನು ಬಳಸುವುದರಿಂದ ಶಾಖವೂ ನೀರಿನೊಂದಿಗೆ ಹೊರಬರುತ್ತದೆ. ಈಗಾಗಲೇ ಯೂರೋಪಿನಾದ್ಯಂತ ಇದು ಬಳಕೆಯಲ್ಲಿದೆ ಎಂದು ತಜ್ಞರು ಹೇಳಿದ್ದಾರೆ.
ಅನಾನುಕೂಲಗಳೇನು?
ಅಂತರ್ಜಲ ಬಿಸಿಯಾದಷ್ಟೂ ಭೂಮಿಯ ಅಡಿಯಲ್ಲಿ ವಾಸಿಸುವ ಜೀವರಾಶಿಗಳ ಜೀವಕ್ಕೆ ಹಾನಿಯನ್ನುಂಟುಮಾಡುತ್ತದೆ. ಅಲ್ಲದೇ ಅಂತರ್ಜಲವನ್ನೇ ನಂಬಿ ಬದುಕುವ ರೈತರ ಬೆಳೆಗಳಿಗೆ ಇದರಿಂದ ಹಾನಿಯೂ ಸಂಭವಿಸಬಹುದು.
ಬಿಸಿ ನೀರಿನಲ್ಲಿ ಆಮ್ಲಜನಕ ಕಡಿಮೆ:
ಅಂತರ್ಜಲಗಳು ನದಿ ಮತ್ತು ಸರೋವರಗಳನ್ನು ಪೋಷಿಸಲು ನಿಯಮಿತವಾಗಿ ಹರಿಯುತ್ತದೆ. ಹಾಗೇಯೇ ಅಂತರ್ಜಲವನ್ನೇ ಅವಲಂಬಿಸಿರುವ ಪರಿಸರ ವ್ಯವಸ್ಥೆಯನ್ನೂ ಸಂರಕ್ಷಿಸುತ್ತದೆ. ಆದ್ರೆ ಈ ನದಿ ಮತ್ತು ಸರೋವರಗಳಿಗೆ ಹರಿಯುವ ಅಂತರ್ಜಲ ಜಲಚರಗಳ ಜೀವಕ್ಕೂ ಅಪಾಯ ತರುತ್ತದೆ. ಬಿಸಿನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುವ ಕಾರಣದಿಂದ ಅವು ಜೀವ ಕಳೆದುಕೊಳ್ಳಲಿವೆ ಎಂದು ತಜ್ಞರು ವಿವರಿಸಿದ್ದಾರೆ.
ಈಗಾಗಲೇ ಆಸ್ಟ್ರೇಲಿಯಾದ ಮುರ್ರೆ ಡಾರ್ಲಿಗ್‌ನಂತರ ಜಲಾನಯನ ಪ್ರದೇಶಗಳಲ್ಲಿ ಈ ಸಮಸ್ಯೆ ಬಂದೊದಗಿದೆ. ಹೆಚ್ಚಿದ ಅಂತರ್ಜಲ ತಾಪದಿಂದ ಆಮ್ಲಜನಕದ ಕೊರತೆಯುಂಟಾಗಿ ಮೀನುಗಳು ಮತ್ತು ಇತರ ಜಲಚರಗಳ ಮಾರಣಹೋಮಕ್ಕೆ ಕಾರಣವಾಗಿದೆ. ಆದ್ರೆ ಅಟ್ಲಾಂಟಿಕ್, ಸಾಲ್ಮಾನ್‌ನಂತಹ ತಣ್ಣೀರಿನ ಸರೋವರಗಳು ಶೀತ ಅಂತರ್ಜಲ ವಿಸರ್ಜನೆಯೊಂದಿಗೆ ಆಗಾಗ್ಗೆ ನೀರಿನ ತಾಪದೊಂದಿಗೆ ಸಮತೋಲನ ಕಾಯ್ದುಕೊಳ್ಳುತ್ತಿವೆ.
ಕರ್ನಾಟಕದಲ್ಲಿ ಸದ್ಯ ಬೋರ್ವೆಲ್ ಕೊರೆಯಲು ಇರುವ ನಿಯಮಗಳೇನು?
ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಕಂಡಿಕೆ 11ರನ್ವಯ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎಲ್ಲಿ ಕೊಳವೆಬಾವಿ ಕೊರೆಯಬೇಕೆಂದರೆ ಸಂಬಂಧಪಟ್ಟ ಪ್ರಾಧಿಕಾರಿ/ಮಂಡಳಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು. ಕಂಡಿಕೆ 17ರ ಅನ್ವಯ ಯಾವ ಸ್ಥಳದಲ್ಲಿ ಕೊಳವೆಬಾವಿ ಕೊರೆಯಲು ಅನುಮತಿ ನೀಡಲಾಗುತ್ತದೆಯೋ, ಅದೇ ಸ್ಥಳದಲ್ಲಿ ಬೋರ್ ಕೊರೆಯುವುದು ಕಡ್ಡಾಯ. ಈ ನಿಯಮ ಉಲ್ಲಂಘಿಸಿದವರಿಗೆ ಕೊಳವೆಬಾವಿ ಕೊರೆಸಲು ನೀಡಿರುವ ಅನುಮತಿ ರದ್ದುಪಡಿಸಲಾಗುವುದು ಮತ್ತು ಕಾನೂನು ಕ್ರಮ ಜರುಗಿಸಲಾಗುವುದು. 36 ಪ್ರಕರಣಗಳಲ್ಲಿ ಕೊಳವೆಬಾವಿ ಕೊರೆಯುವ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಅವುಗಳನ್ನು ತಡೆಹಿಡಿಯಲಾಗಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಲಮಂಡಳಿ ತಿಳಿಸಿದೆ.
ಅನುಮತಿ ಪಡೆಯದಿದ್ದರೆ ಶಿಕ್ಷೆ ಏನು?
ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆಯುವವರು ಮತ್ತು ಕೊರೆಸುವವರು ಇಬ್ಬರಿಗೂ ಶಿಕ್ಷೆಯಾಗಲಿದೆ. ನ್ಯಾಯಾಲಯ ಕನಿಷ್ಠ 6 ತಿಂಗಳು ಶಿಕ್ಷೆ ಅಥವಾ ದಂಡ ವಿಧಿಸಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜೀವನಕ್ಕೆ ಅಗತ್ಯವಾಗಿ ಬೇಕಾದ ನೀರು, ಗಾಳಿ ಎಲ್ಲರಿಗೂ, ಎಲ್ಲಾ ಕಾಲಕ್ಕೂ ಸುಲಭವಾಗಿ ದೊರೆಯುವಂತಾಗಬೇಕು. ಇದು ಪ್ರಕೃತಿಯ ನಿಯಮವೂ ಹೌದು. ಆದರೆ ಮಾನವ ಕೇವಲ ಹಕ್ಕುಗಳಿಗೆ ಹೋರಾಡಿ, ಕರ್ತವ್ಯ ಮರೆಯುತ್ತಿರುವುದರಿಂದ ನೀರಿನ ಸಮಸ್ಯೆ ಗಂಭೀರ ಘಟ್ಟ ತಲುಪುವಂತಾಗಿದೆ. ಅಂತರ್ಜಲ ಸಂರಕ್ಷಣೆ ಆಗದಿರುವುದರಿಂದ ಹಾಗೂ ಅಭಿವೃದ್ಧಿಗೆ ಕೆಲವರು ಅಡ್ಡಗಾಲು ಹಾಕಿರುವುದರಿಂದ ಜನತೆಗೆ ಶುದ್ಧವಾದ ನೀರು ಸಿಗದೇ ಅನಾರೋಗ್ಯದಿಂದ ಬಳಲುವಂತಾಗಿದೆ. ಭೂಮಿಯ ಮೇಲೆ ಹರಿಯುವ ನೀರಿಗೂ, ಭೂಮಿಯ ಒಳಗಿರುವ ಅಂತರ್ಜಲಕ್ಕೂ ಮಳೆಯೇ ಆಧಾರ, ಮಳೆ ಬಂದಾಗ ಬಹುಪಾಲು ನೀರು ನಿಲ್ಲದೇ ಹರಿದು ವ್ಯರ್ಥವಾಗುತ್ತಿದೆ. ಇದಕ್ಕೆ ಕೆರೆ, ಕಟ್ಟೆಗಳ ಒತ್ತುವರಿ, ನೀರು ಹರಿಯುವ ರಾಜ ಕಾಲುವೆಗಳನ್ನು ಮುಚ್ಚಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದೇ ಕಾರಣವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಅಂತರ್ಜಲ ಬಳಕೆ ಎಷ್ಟು ಮುಖ್ಯವೋ ಅದೇ ರೀತಿ ಸಂರಕ್ಷಣೆ ಮತ್ತು ಅಬಿವೃದ್ಧಿಯು ಅಷ್ಟೇ ಮುಖ್ಯ. ಮಳೆ ಕಾಲ ಕಾಲಕ್ಕೆ ಸರಿಯಾಗಿ ಆಗದೆ ಏರುಪೇರು ಉಂಟಾಗದೇ ಅಸಮತೋಲನ ಹೆಚ್ಚುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಕೃತಕ ಮರುಪೂರಣ ಕಾರ್ಯಕ್ರಮಗಳು ಮುಖ್ಯ, ಚೆಕ್ ಡ್ಯಾಮ್, ಸೋಸು ಕೆರೆ, ಇಂಗು ಬಾವಿಗಳ ರಚನೆ ಮಾಡುವುದು ಸರ್ಕಾರ ಮತ್ತು ಜನತೆಯ ಕರ್ತವ್ಯವೂ ಆಗಿದೆ.