ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಮನೆಮನೆಯಲ್ಲಿಯೂ ಪಟಾಕಿಯದ್ದೇ ಸದ್ದು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ದೀಪಾವಳಿಗೆ ಪಟಾಕಿ (Fire Crackers) ಇನ್ನಷ್ಟು ಮೆರುಗು ನೀಡುತ್ತದೆ. ಅದರಲ್ಲೂ ಮಕ್ಕಳು ಪಟಾಕಿ ಸಿಡಿಸುವುದನ್ನು ನೋಡಲು ಬಲು ಇಷ್ಟಪಡುತ್ತಾರೆ. ಆದರೆ ಈ ಬಾರಿ ದೀಪಾವಳಿ ಹೊಸ್ತಿಲಲ್ಲಿ ದೆಹಲಿ (New Delhi) ಸರ್ಕಾರ ಜನವರಿ 1ರವರೆಗೂ ಪಟಾಕಿ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ಚಳಿಗಾಲದಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ದೆಹಲಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
ದೆಹಲಿಯಲ್ಲಿ ಪಟಾಕಿ ನಿಷೇಧ ಏಕೆ?
ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುವ ಅಪಾಯವಿದೆ. ಈ ಸಮಯದಲ್ಲಿ ಪಟಾಕಿಗಳನ್ನು ಸುಡುವುದು ಮಾಲಿನ್ಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಆದ್ದರಿಂದ ಕಳೆದ ವರ್ಷದಂತೆ ಈ ವರ್ಷವೂ ಪಟಾಕಿ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಪಟಾಕಿಗಳ ತಯಾರಿಸುವಿಕೆ, ಸಂಗ್ರಹ ಮತ್ತು ಮಾರಾಟದ ಮೇಲಿನ ನಿಷೇಧ 2025ರ ಜನವರಿ 1ರವರೆಗೆ ಜಾರಿಯಲ್ಲಿರುತ್ತದೆ ಎಂದು ಗೋಪಾಲ್ ರೈ ಮಾಹಿತಿ ನೀಡಿದ್ದಾರೆ.
Advertisement
Advertisement
ಆನ್‌ಲೈನ್‌ನಲ್ಲಿಯೂ ಪಟಾಕಿ ಮಾರಾಟ ಹಾಗೂ ಖರೀದಿಸುವಿಕೆಗೆ ನಿಷೇಧ ಹೇರಲಾಗಿದೆ. ಇದರಿಂದ ಜನರನ್ನು ಮಾಲಿನ್ಯದಿಂದ ರಕ್ಷಿಸಬಹುದು. ದೀಪ ಬೆಳಗುವ ಮೂಲಕ ಹಾಗೂ ಸಿಹಿ ಹಂಚುವ ಮೂಲಕ ದೀಪಾವಳಿಯನ್ನು ಹಬ್ಬಗಳನ್ನು ಆಚರಿಸುವಂತೆ ಗೋಪಾಲ್ ರೈ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಪಟಾಕಿಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಲುವಾಗಿ ದೆಹಲಿ ವಾಯುಮಾಲಿನ್ಯ ಸಮಿತಿ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ 21ಪ್ರಮುಖ ಅಂಶಗಳನ್ನು ಒಳಗೊಂಡ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಲಾಗುವುದು ಎಂದು ಗೋಪಾಲ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
ಸುಪ್ರೀಂ ಕೋರ್ಟ್ ವಿಚಾರಣೆಯ ನಂತರ 2017ರಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಪಟಾಕಿಯನ್ನು ನಿಷೇಧಿಸಲಾಯಿತು. ಇದಾದ ಬಳಿಕ ದೆಹಲಿ ಸರ್ಕಾರವು 2020ರಿಂದ ಪ್ರತಿ ಚಳಿಗಾಲದಲ್ಲಿ ಎಲ್ಲಾ ಪಟಾಕಿಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟದ ಮೇಲೆ ನಿಷೇಧ ಹೇರಿದೆ. ಅಲ್ಲದೇ ಕೇವಲ ಹಸಿರು ಪಟಾಕಿಯನ್ನು ಬಳಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
Advertisement
ಪಟಾಕಿಯಿಂದ ವಾಯುಮಾಲಿನ್ಯ ಹೇಗೆ ಉಂಟಾಗುತ್ತದೆ?
ನಿಕ್ಕಲ್, ಕಾಪರ್, ಲೆಡ್‌ನಂತಹ ಹೆಚ್ಚಿನ ರಾಸಾಯನಿಕ ಮಿಶ್ರಿತ ಪಟಾಕಿ ಸಿಡಿಸಿದರೆ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಪರಿಸರ ಅಧಿಕಾರಿಗಳು ಹೇಳುತ್ತಾರೆ. ಪಟಾಕಿ ಉರಿದು ಸ್ಫೋಟಗೊಳ್ಳಲು ಹಾಗೂ ಪ್ರಕಾಶಮಾನವಾಗಿ ಕಾಣಲು ಅಪಾಯಕಾರಿ ರಾಸಯನಿಕಗಳನ್ನು ಬಳಸುತ್ತಾರೆ. ಆಕ್ಸಿಡೈಸರ್‌ಗಳು, ಇಂಧನ, ಬಣ್ಣ ಮತ್ತು ಬೈಂಡರ್‌ಗಳ ಮಿಶ್ರಣದಿಂದ ಪಟಾಕಿಗಳು ಕಲರ್‌ಫುಲ್ ಆಗಿ ಕಾಣಿಸುವುದಲ್ಲದೇ ನೋಡಲು ಆಕರ್ಷಣೀಯವಾಗಿರುತ್ತದೆ. ಪಟಾಕಿಗಳನ್ನು ಸಿಡಿಸಿದಾಗ, ಅವು ವಿಷಕಾರಿ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತವೆ. ಅದು ಉಸಿರಾಟ, ಆರೋಗ್ಯ ಮತ್ತು ಪರಿಸರಕ್ಕೆ ಹಾನಿ ಮಾಡುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೇಳಿದೆ.
ಆರೋಗ್ಯದ ಮೇಲೆ ಪರಿಣಾಮ ಹೇಗೆ?
ಪಟಾಕಿಗಳು ವಿಷಕಾರಿ ಅನಿಲಗಳನ್ನು ಹೊರಸೂಸುತ್ತವೆ. ಸಲ್ಫರ್ ಡೈಆಕ್ಸೈಡ್ , ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್ ಮತ್ತು ಪರ್ಟಿಕ್ಯುಲೆಟ್ ಮ್ಯಾಟರ್ ಜೊತೆಗೆ ಹಲವಾರು ರಾಸಾಯನಿಕಗಳು ಗಾಳಿಯ ಗುಣಮಟ್ಟದಲ್ಲಿ ಹಾನಿಕಾರಕ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.
ಪಟಾಕಿಯಲ್ಲಿ ಸೀಸವನ್ನು ಬಳಸಲಾಗುತ್ತದೆ. ಇದು ನಮ್ಮ ಮೆದುಳು ಮತ್ತು ನರಗಳ ಮೇಲೆ ಹೆಚ್ಚು ಪರಿಣಾಮ ಬೀರುವ ವಿಷಕಾರಿ ಹೊಗೆಯನ್ನು ಹೊರಸೂಸುತ್ತದೆ. ಮಕ್ಕಳು ಹೆಚ್ಚು ಪಟಾಕಿ ಹಚ್ಚುವುದರಿಂದ ಬೆಳವಣಿಗೆಯಲ್ಲಿ ವಿಳಂಬ ಹಾಗೂ ಕಲಿಕೆಯಲ್ಲಿ ಅಸಮರ್ಥತೆಯನ್ನು ಅನುಭವಿಸಬಹುದು ಎಂದು ಡಾ. ಸಮೀರ್ ಗುಪ್ತಾ ಹೇಳಿದ್ದಾರೆ.
ಮೆಗ್ನೇಸಿಯಂ ಒಳಗೊಂಡ ಪಟಾಕಿಯ ಹೊಗೆಯನ್ನು ಉಸಿರಾಡುವುದರಿಂದ ಮೆಟಲ್ ಫ್ಯೂಮ್ ಎಂಬ ಜ್ವರ ಕಾಣಿಸಿಕೊಳ್ಳಬಹುದು. ಇದು ಜನರಲ್ಲಿ ಶೀತ ಮತ್ತು ಸ್ನಾಯು ದೌರ್ಬಲ್ಯವನ್ನು ಉಂಟುಮಾಡುತ್ತದೆ.
ಶಬ್ದ ಮಾಲಿನ್ಯ ಶಬ್ದ ತುಂಬಾ ಜನರಲ್ಲಿ ಆತಂಕವನ್ನುಂಟು ಮಾಡುತ್ತದೆ ಅದರಿಂದ ಪ್ಯಾನಿಕ್ ಅಟ್ಯಾಕ್ಸ್, ವಯಸ್ಸಾದವರಿಗೆ ಹೃದಯ ಸಂಬಂಧಿತ ತೊಂದರೆಗಳು, ಕೆಲವು ಬಾರಿ ಹೃದಯಾಘಾತವಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಜೊತೆಗೆ ಪಟಾಕಿ ಹೊಡೆದಾಗ ರೇಡಿಯೋ ಆಕ್ಟೀವ್ ಸಬ್ಸ್ಟೆನ್ಸ್ ಬಿಡುಗಡೆಯಾಗಿರುತ್ತದೆ. ಅದು ದೀರ್ಘಕಾಲದ ಕ್ಯಾನ್ಸರ್ ಅಪಾಯವನ್ನು ಉಂಟು ಮಾಡಬಹುದು, ಮಕ್ಕಳಲ್ಲಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಬೆಂಕಿಯ ಅಪಾಯಗಳು ಹೆಚ್ಚಿನ ಪ್ರಮಾಣದಲ್ಲಿ ಆಗುವ ಸಾಧ್ಯತೆ ಇರುತ್ತದೆ, ಏಕಾಏಕಿ ಬೆಂಕಿ ಹೊತ್ತಿಕೊಳ್ಳಬಹುದು. ಇದು ಸುಟ್ಟಗಾಯಗಳು, ಕಣ್ಣು ಹಾಗೂ ಇತರೆ ನಿಮ್ಮ ಅಂಗಗಳಿಗೆ ಹಾನಿಯುಂಟು ಮಾಡಬಹುದು.
ಬಣ್ಣ ಬರಲು ಹಾಕುವ ಲವಣಾಂಶಗಳು, ಜಿಂಕ್, ಮೆಗ್ನೀಸಿಯಂ ಫ್ಯೂಮ್ ಫೀವರ್ ಉಂಟು ಮಾಡುತ್ತದೆ ಅಂದರೆ ಹೊಗೆಯಿಂದ ಜ್ವರ ಬರುವುದುಂಟು, ಕ್ಯಾಡ್ಮಿಯಂ ದೇಹದಲ್ಲಿ ಅನೀಮಿಯಾ ಅಂದರೆ ರಕ್ತಹೀನತೆಯನ್ನು ಸೃಷ್ಟಿಸುತ್ತದೆ. ಗರ್ಭಿಣಿಯರಿಗೆ, ಪಟಾಕಿ ಮಾಲಿನ್ಯವು ಹೆಚ್ಚು ಅಪಾಯಗಳನ್ನು ಉಂಟುಮಾಡುತ್ತದೆ. ಗರ್ಭಾವಸ್ಥೆಯ ಆರಂಭಿಕ ಹಂತಗಳಲ್ಲಿ, ಪಟಾಕಿಗಳಿಂದ ಉತ್ಪತ್ತಿಯಾಗುವ ದೊಡ್ಡ ಶಬ್ದಗಳಿಗೆ ಒಡ್ಡಿಕೊಳ್ಳುವುದು, ತಾಯಿಗೆ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು.
ದೀಪಾವಳಿಯ ಸಮಯದಲ್ಲಿ ಜೋರಾಗಿ ಸಿಡಿಯುವ ಪಟಾಕಿಗಳು ಸುಮಾರು 85 ಡೆಸಿಬಲ್‌ಗಿಂತಲೂ ಹೆಚ್ಚಿನ ಶಬ್ದವನ್ನು ಉಂಟುಮಾಡುತ್ತವೆ. ಇದು ಕಿವಿಯ ತಮಟೆಗಳನ್ನು ಹಾನಿಗೊಳಿಸುತ್ತದೆ. ಕೇವಲ 15 ನಿಮಿಷಗಳ ಕಾಲ ಸುಮಾರು 100 ಡಿಬಿ ಧ್ವನಿಯ ತೀವ್ರತೆಗೆ ಒಡ್ಡಿಕೊಳ್ಳುವುದು ತಾತ್ಕಾಲಿಕ ಶ್ರವಣ ನಷ್ಟಕ್ಕೆ ಕಾರಣವಾಗಬಹುದು ಮತ್ತು ದೀರ್ಘಕಾಲ ಈ ಶಬ್ದಕ್ಕೆ ಒಡ್ಡಿಕೊಳ್ಳುವುದರಿಂದ ಕಿವಿ ಕೇಳಿಸದಯೇ ಇರಬಹುದು.
ಶಬ್ದ ಮಾಲಿನ್ಯವು ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು. ಹಠಾತ್ ದೊಡ್ಡ ಶಬ್ದಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಹೃದಯ ಬಡಿತವನ್ನು ಉಲ್ಬಣಗೊಳಿಸಬಹುದು. ಇದು ಹೃದಯಾಘಾತದಿಂದ ಬಳಲುತ್ತಿರುವವರಿಗೆ ಹೆಚ್ಚಿನ ತೊಂದರೆ ಉಂಟುಮಾಡಬಹುದು.
ವಿಶೇಷವಾಗಿ ಅಸ್ತಮಾ ಅಥವಾ ಇತರ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ ಜನರು ಪಟಾಕಿಗಳನ್ನು ಹೊಡೆಯಬಾರದು. ವಾಯು ಮಾಲಿನ್ಯ ಇರುವ ಸ್ಥಳದಲ್ಲಿ ಉಸಿರಾಡುವುದರಿಂದ ಅವರ ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಐಸಿಎಂಆರ್ ಅಧ್ಯಯನದ ಪ್ರಕಾರ, 2019ರಲ್ಲಿ 1.7 ಮಿಲಿಯನ್ ಸಾವುಗಳು ಅಥವಾ ಭಾರತದಲ್ಲಿನ ಒಟ್ಟು ಸಾವುಗಳಲ್ಲಿ ಶೇ. 18ರಷ್ಟು ಸಾವುಗಳು ವಾಯು ಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ವಾಯು ಮಾಲಿನ್ಯದಿಂದ ರೋಗಿಗಳು ಕಣ್ಣು, ಮೂಗು, ಗಂಟಲು ಮತ್ತು ಚರ್ಮದ ಕಿರಿಕಿರಿ, ಕೆಮ್ಮು, ಉಸಿರಾಟದ ತೊಂದರೆ, ಉಬ್ಬಸ, ಎದೆ ಉರಿಯಂತಹ ಕೆಲವು ಲಕ್ಷಣಗಳನ್ನು ಹೊಂದಬಹುದು. ಅಸ್ವಸ್ಥತೆ, ಎದೆನೋವು, ತಲೆನೋವು, ತಲೆತಿರುಗುವಿಕೆ, ಕೈಕಾಲು ದೌರ್ಬಲ್ಯ ಇತ್ಯಾದಿಗಳನ್ನು ಕೂಡ ಅನುಭವಿಸಬಹುದು.