ಟೀಂ ಇಂಡಿಯಾ ಜರ್ಸಿ ಮೇಲಿನ 3 ಸ್ಟಾರ್‌ಗಳ ಹಿಂದಿದೆ ಕಥೆ

Public TV
2 Min Read
Cricket

ಬೆಂಗಳೂರು: ನಾವು ಕ್ರಿಕೆಟ್ ಅಭಿಮಾನಿಗಳು. ಅದರಲ್ಲೂ ಟೀಂ ಇಂಡಿಯಾ ಮ್ಯಾಚ್ ಇದ್ರೆ ಸಾಕು ಎಷ್ಟೇ ಕೆಲಸ ಇದ್ದರೂ ಕೊಂಚ ಬಿಡುವು ಮಾಡಿಕೊಂಡು ಮ್ಯಾಚ್ ನೋಡುತ್ತೇವೆ. ಆದರೆ ಕೆಲವರಿಗೆ ಕೆಲವು ವಿಚಾರಗಳೇ ಗೊತ್ತಿರುವುದಿಲ್ಲ.

ಟೀಂ ಇಂಡಿಯಾ ಆಟಗಾರರ ಜರ್ಸಿಯ ಎಡಭಾಗದಲ್ಲಿ ಬಿಸಿಸಿಐ ಲೋಗೋ ಇರುತ್ತದೆ. ಅದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರ ಮೇಲೆ ಮೂರು ಸ್ಟಾರ್‌ಗಳೂ ಇರುತ್ತವೆ. ಆದರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಆಟಗಾರರ ಜರ್ಸಿಯ ಮೇಲೆ ಎರಡು ಸ್ಟಾರ್ ಮಾತ್ರ ಇದ್ವು. ಹಾಗಾದ್ರೆ ಈ ಸ್ಟಾರ್‌ಗಳು ಏನನ್ನ ಪ್ರತಿನಿಧಿಸುತ್ತವೆ? ಯಾರು ನೀಡುತ್ತಾರೆ ಗೊತ್ತಾ?

TEAM INDIA 2

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ನಡೆಸುತ್ತದೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಟೆಸ್ಟ್ ವರ್ಲ್ಡ್ ಚಾಂಪಿಯನ್‍ಶಿಪ್ ಕೂಡ ಆರಂಭಿಸಿದೆ. ಈ ಪೈಕಿ ಟೀಂ ಇಂಡಿಯಾ ಎರಡು ಬಾರಿ ಏಕದಿನ ವಿಶ್ವಕಪ್ ಹಾಗೂ ಒಂದು ಬಾರಿ ಟಿ20 ವಿಶ್ವಕಪ್ ಗೆದ್ದುಗೊಂಡಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ಅದಾದ 28 ವರ್ಷಗಳ ಬಳಿಕ ಅಂದ್ರೆ 2011ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಈ ಸಾಧನೆ ಮಾಡಿತ್ತು. ಅಷ್ಟೇ ಅಲ್ಲದೆ 2007ರಲ್ಲಿ ಐಸಿಸಿ ಆರಂಭಿಸಿದ್ದ ಚೊಚ್ಚಲ ಟಿ20 ವಿಶ್ವಕಪ್ ಅನ್ನು ಭಾರತ ಧೋನಿ ನಾಯಕತ್ವದಲ್ಲಿ ತನ್ನ ಮುಡಿಗೆ ಏರಿಸಿಕೊಂಡಿತ್ತು.

ಇದನ್ನೆಲ್ಲ ಯಾಕೆ ತಿಳಿಯಬೇಕು ಗೊತ್ತಾ? ಟೀಂ ಇಂಡಿಯಾ ಜರ್ಸಿ ಮೇಲೆ ಇರುವ ಸ್ಟಾರ್ ಗಳಿಗೂ ವಿಶ್ವಕಪ್ ಚಾಂಪಿಯನ್‍ಶಿಪ್‍ಗೂ ನಂಟಿದೆ. ಹೌದು, ಐಸಿಸಿ ನಡೆಸುವ ಎರಡು ಮಾದರಿಯ ವಿಶ್ವಕಪ್‍ನಲ್ಲಿ ಭಾರತ ಇದುವರೆಗೂ ಮೂರು ಬಾರಿ ಚಾಂಪಿಯನ್‍ಶಿಪ್ ಆಗಿದೆ. ಹೀಗಾಗಿ ಮೂರು ಸ್ಟಾರ್‌ಗಳು ಟೀಂ ಇಂಡಿಯಾ ಜರ್ಸಿ ಮೇಲಿವೆ.

Team India 1

ಹಾಗಾದ್ರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಭಾರತದ ಆಟಗಾರರು ಎರಡು ಸ್ಟಾರ್‌ಗಳಿರುವ ಜರ್ಸಿಯನ್ನು ಧರಿಸಿದ್ದು ಯಾಕೆ ಗೊತ್ತಾ? ಟೀಂ ಇಂಡಿಯಾ ಇದುವೆರೆಗೂ ಎರಡು ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿದೆ. ಹೀಗಾಗಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆಟಗಾರರು ಎರಡು ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಇದೇ ಸಮಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಆಟಗಾರರು 5 ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಎರಡು ಬಾರಿ ಚಾಂಪಿಯನ್ ಗರಿಮೆ ಪಡೆದಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರರು 2 ಸ್ಟಾರ್ ಹಾಗೂ ತಲಾ ಒಂದು ಬಾರಿ ಚಾಂಪಿಯನ್ ಆಗಿರುವ ಶ್ರೀಲಂಕಾ ಮತ್ತು ಪಾಕಿಸ್ತಾನದ ಆಟಗಾರರು ಒಂದು ಸ್ಟಾರ್ ಹೊಂದಿದ್ದ ಜರ್ಸಿ ಧರಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *