ಬೆಳಗಾವಿ: ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿಕೆ ವಿಚಾರವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalkrishna) ಕಿಡಿಕಾರಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನಾಯಕರು ಶಾಂತಿ ಮಂತ್ರ ಪಠಿಸುವಾಗ ನೀವ್ಯಾಕೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ನಾಯಕರು ಸುಮ್ಮನಿರುವಾಗ ನಿಮಗೆ ಚಟ ಯಾಕೆ? ಯತೀಂದ್ರ ಮಾತಾಡಿದ್ದು ಉರಿಯುವ ಬೆಂಕಿಗೆ ತುಪ್ಪ ಹಾಕಿದಂತಾಗಿದೆ ಎಂದು ಗರಂ ಆದರು.
ಬಿಜೆಪಿಯವರು ಇದನ್ನೇ ಬಳಸಿಕೊಳ್ತಾರೆ. ಏನಿದು ಗೊಂದಲ? ಯಾಕೆ ಸುಮ್ ಸುಮ್ನೆ ಮಾತನಾಡುತ್ತೀರಿ? ಶಾಂತಿ ಘೋಷಣೆ ಮಾಡಿರುವಾಗ ಇದೆಲ್ಲ ಬೇಕಾ? ಇಂದಿನ ಸಿಎಲ್‌ಪಿ ಸಭೆಯಲ್ಲಿ ನಾನು ಬಹಿರಂಗವಾಗಿ ಚರ್ಚೆ ಮಾಡುತ್ತೇನೆ. ಸಚಿವ ಸ್ಥಾನದ ಬಗ್ಗೆಯೂ ಗಟ್ಟಿ ಧ್ವನಿಯಲ್ಲಿ ಕೇಳುತ್ತೇನೆ. ಹೊಸಬರಿಗೆಲ್ಲ ಅವಕಾಶ ಕೊಡ್ರಪ್ಪ ಅಂತ ನಾನು ಗಟ್ಟಿ ಧ್ವನಿಯಲ್ಲಿ ಕೇಳ್ತೀನಿ ಎಂದರು. ಇದನ್ನೂ ಓದಿ: ನಾನೇ ನಿಜವಾದ ವಿರೋಧ ಪಕ್ಷದ ನಾಯಕ – ಸದನದಲ್ಲಿ ಕುರ್ಚಿ ಬದಲಾವಣೆಗೆ ಯತ್ನಾಳ್ ಗರಂ
ಬೇಳೂರು ಗೋಪಾಲಕೃಷ್ಣ ಮಾತನ್ನು ನಾನೂ ಅನುಮೋದಿಸುತ್ತೇನೆ, ಬೇಳೂರು ಸರಿಯಾಗಿ ಹೇಳಿದ್ದಾರೆ ಅಂತಾ ಶಾಸಕ ಮಾಗಡಿ ಬಾಲಕೃಷ್ಣ ಹೇಳಿದ್ದಾರೆ. ಸುವರ್ಣಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಥರದ ಮಾತುಗಳ ಅವಶ್ಯಕತೆ ಈಗ ಇಲ್ಲ. ನಮ್ಮಲ್ಲಿ ಹೈಕಮಾಂಡ್ ಇದ್ದು ಸಿಎಲ್‌ಪಿ ಸಭೆಯಲ್ಲಿ (CLP Meeting) ಚರ್ಚೆ ಮಾಡಿ ನಿರ್ಧಾರ ಮಾಡುವ ವಿಷಯ ಇದಲ್ಲ ಎಂದರು.
ಹೈಕಮಾಂಡ್ ಸ್ಟ್ರಾಂಗ್ ಆಗಿದ್ದು ಎಲ್ಲಾ ತೀರ್ಮಾನ ಅವರೇ ಮಾಡುತ್ತಾರೆ. ನಮ್ಮ ನಮ್ಮ ನಾಯಕರ ಪರ ಬ್ಯಾಟಿಂಗ್ ಮಾಡುವುದು ಸಹಜ. ವಿರೋಧ ಪಕ್ಷದವರು ಇದನ್ನೇನು ಬಳಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ತಟ್ಟೆಯಲ್ಲಿ ನೊಣ ಬಿದ್ದಿದ್ದರೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅಂತಾ ವಾಗ್ದಾಳಿ ನಡೆಸಿದರು.

