ಬರೋಬ್ಬರಿ ಎಂಟು ವರ್ಷಗಳ ನಂತರ ನಟ ಉಪೇಂದ್ರ (Upendra) ಅವರು ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಹಾಗಾಗಿ ಅವರ ನಿರ್ದೇಶನದ ‘ಯುಐ’ (UI) ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಟೀಸರ್ ಅಥವಾ ಟ್ರೈಲರ್ ಯಾವಾಗ ಬರಬಹುದು ಎನ್ನುವ ಕಾಯುವಿಕೆ ಹೆಚ್ಚಾಗಿದೆ. ಅದನ್ನು ತಿಳಿಸುವುದಕ್ಕಾಗಿಯೇ ನಿರ್ಮಾಪಕ ಕೆ.ಪಿ ಶ್ರೀಕಾಂತ್ (KP Srikanth) ಮತ್ತು ನವೀನ್ ಮನೋಹರ್ (Naveen) ಒಟ್ಟಾಗಿ ಉಪ್ಪಿ ಮನೆಗೆ ಹೋಗುತ್ತಾರೆ. ಉಪ್ಪಿ ಇಬ್ಬರೂ ನಿರ್ಮಾಪಕರಿಗೆ ಬೆಚ್ಚಿ ಬೀಳಿಸುತ್ತಾರೆ.
ಸಿನಿಮಾ ಹೇಗೆ ಬಂದಿದೆ ಅಂತ ತಿಳಿಸೋಕೆ ಒಂದು ತುಣುಕು ರಿಲೀಸ್ ಮಾಡೋಣ ಸರ್ ಎನ್ನುತ್ತಾರೆ ನಿರ್ಮಾಪಕರು. ತುಣುಕು ತೋರಿಸಿ ಸಿನಿಮಾ ಹೇಗಿದೆ ಅಂತ ಹೇಳೋದಾಗಿದ್ದರೆ, ಎರಡು ಗಂಟೆ ಸಿನಿಮಾ ಯಾಕ್ರೀ ಮಾಡಬೇಕು ಎಂದು ಪ್ರಶ್ನೆ ಮಾಡುತ್ತಾರೆ ಉಪೇಂದ್ರ. ಸಿನಿಮಾ ಪಬ್ಲಿಸಿಟಿ ಮಾಡ್ಬೇಕಲ್ಲ ಸರ್ ಎನ್ನುವ ನಿರ್ಮಾಪಕರ ಪ್ರಶ್ನೆಗೆ, ‘ಪಬ್ಲಿಸಿಟಿ ಯಾಕ್ ಬೇಕು?’ ಎಂದು ಕೇಳುವ ಮೂಲಕ ನಿರ್ಮಾಪಕರಿಗೆ ಗಾಬರಿ ಮೂಡಿಸುತ್ತಾರೆ. ಇದೊಂದು ಪಬ್ಲಿಸಿಟಿಗಾಗಿ ಮಾಡಿದ ವಿಡಿಯೋವಾಗಿದ್ದರೂ, ಒಂದ್ ತರಹ ಬೇರೆ ರೀತಿಯಲ್ಲಿ ಸಿನಿಮಾ ಪ್ರಮೋಷನ್ ಶುರು ಮಾಡಿದ್ದಾರೆ ಉಪೇಂದ್ರ.
ಉಪ್ಪಿಇದೊಂದು ಹೆಸರು ಕನ್ನಡಿಗರಿಗೆ ಮಾತ್ರ ಅಲ್ಲ, ದಕ್ಷಿಣ ಭಾರತದ ಜನರಲ್ಲಿ ಕಿಚ್ಚು ಮೂಡಿಸುತ್ತದೆ. ಹುಚ್ಚು ಹಿಡಿಸುತ್ತದೆ. ಅದರಲ್ಲೂ ಇವರೇ ನಿರ್ದೇಶಕ ಅದರಂತೂ ಕೇಳಬೇಕೆ? ಇಲ್ಲಿವರೆಗೆ ಉಪ್ಪಿ ನಿರ್ದೇಶನ ಮಾಡಿದ ಸಿನಿಮಾಗಳದ್ದು ಒಂದು ತೂಕವಾದರೆ, ಈ ಯುಐ ಇದೆಯಲ್ಲ ಅದು ಭೂಮಿ ತೂಕ. ಭರ್ತಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಹಲವಾರು ಗ್ರೇಟ್ ಸ್ಪೆಶಾಲಿಟಿಗಳಿವೆ. ಭಾರತದಲ್ಲೇ ಮೊದಲ ಬಾರಿ ಎನ್ನುವಂಥ ವಿಷಯ ಹಾಗೂ ತಾಂತ್ರಿಕ ಕೆಲಸಗಳಿವೆ.
ಉಪ್ಪಿ ನಿರ್ದೇಶನ ಅಂದರೆ ಅಲ್ಲಿ ಗ್ರಾಫಿಕ್ಸ್ ಗೆ ಕೆಲಸ ಅಷ್ಟೇನೂ ಇರುತ್ತಿರಲಿಲ್ಲ. ಆದರೆ ಈ ಬಾರಿ ಉಪ್ಪಿ ಹಳೇ ಸ್ಟೈಲ್ ಮರೆತು ಅತ್ಯದ್ಭುತ ನಯಾ ತಂತ್ರಜ್ಞಾನಕ್ಕೆ ಕೈ ಹಾಕಿದ್ದಾರೆ. ಕಂಪ್ಯೂಟರೈಸ್ಡ್ ಕ್ಯಾಮೆರಾ ಬಳಸುತ್ತಿದ್ದಾರೆ. ಮೊಕೊ ಬೋಟ್ ಹೆಸರಿನ ಈ ಕ್ಯಾಮೆರಾದಲ್ಲಿ ಇಲ್ಲಿವರೆಗೆ ಭಾರತದ ಯಾವುದೇ ಸಿನಿಮಾ ಚಿತ್ರೀಕರಣ ಮಾಡಿಲ್ಲ. ಅದರ ಜೊತೆಗೆ ವರ್ಚುವಲ್ ಗ್ರಾಫಿಕ್ಸ್ ಕೂಡ ಕೆಲಸ ಮಾಡಲಿದೆ. ಕೆಲವೊಂದು ತಾಂತ್ರಿಕ ವಿಷಯ ಈಗ ಅರ್ಥವಾಗುವುದಿಲ್ಲ. ಅದನ್ನು ಸಿನಿಮಾ ನೋಡಿದ ಮೇಲೆಯೇ ಅನುಭವಿಸಬೇಕು. ಈ ಹೊಸ ತಂತ್ರಜ್ಞಾನಕ್ಕೆ ನಿರ್ಮಾಪಕರಲ್ಲಿ ಒಬ್ಬರಾದ ನವೀನ್ ಮನೋಹರ್ ನಾಯ್ಡು ಬರೀ ಹೆಗಲು ಕೊಟ್ಟಿಲ್ಲ ಜೀವವನ್ನೇ ತೇಯುತ್ತಿದ್ದಾರೆ. ಉಪ್ಪಿ ಇದಕ್ಕೆ ಹೆಮ್ಮೆ ಪಡುತ್ತಾರೆ.
`ಇದೊಂದು ಗ್ಲೋಬಲ್ ಸಿನಿಮಾ’ ಎನ್ನುತ್ತಾರೆ ಉಪ್ಪಿ. ಯಾರೇ ನೋಡಿದರೂ ಇದನ್ನು ಒಪ್ಪಿಕೊಳ್ಳಬೇಕು. ಹಾಗಿರುತ್ತದೆ ಕತೆ ಹಾಗೂ ಮೇಕಿಂಗ್ ಎನ್ನುವುದು ಇವರ ಷರಾ. ಇದುವರೆಗೆ ಮನಸಿಗೆ ಸಂಬಂಧಿಸಿದ ವಿಷಯ ಹೆಣೆಯುತ್ತಿದ್ದ ಉಪ್ಪಿ ಈ ಬಾರಿಯೂ ಹಾಗೆಯೇ ಮಾಡಿರುತ್ತಾರೆ. ಆದರೆ ವಿಷಯ ಮಾತ್ರ ಇಡೀ ವಿಶ್ವಕ್ಕೆ ಮೆಚ್ಚುಗೆಯಾಗುತ್ತದೆ ಎನ್ನುವುದು ಇವರ ನಂಬಿಕೆ. ಇದರ ಜೊತೆಗೆ ಅಪ್‌ಡೇಟ್ ತಂತ್ರಜ್ಞಾನವನ್ನು ದಿಕ್ಕೆಡಿಸುವಂತೆ ಬಳಸಿಕೊಳ್ಳಲಿದ್ದಾರೆ. ಅದಕ್ಕಾಗಿಯೇ ಹಗಲು ರಾತ್ರಿ ಬೆವರು ಸುರಿಸುತ್ತಿದ್ದಾರೆ. ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಬಿಡುಗಡೆ ಬಗ್ಗೆ ಸದ್ಯಕ್ಕೆ ಮಾತಾಡೋದು ಬೇಡ.
ಅದ್ಭುತ ತಂಡವನ್ನು ಕಟ್ಟಿಕೊಂಡು ಉಪ್ಪಿ ಹೊಸ ಯುದ್ಧಕ್ಕೆ ಸಜ್ಜಾಗಿದ್ದಾರೆ. ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೇ ಇದನ್ನು ಮಾಡುತ್ತಿದ್ಧಾರೆ ಎಂದು ತಿಳಿಯಬೇಡಿ. ಈಗ ಆಗಬೇಕಿತ್ತು. ಆಗುತ್ತಿದೆ ಅಷ್ಟೇ. ಇದಕ್ಕೆ ಲಹರಿ ಆಡಿಯೋ (Lahari Audio) ಸಂಸ್ಥೆ ಮಾಲೀಕರ ಮಗ ಮನೋಹರ್ ನಾಯ್ಡು ಮಕ್ಕಳಾದ ಚಂದ್ರು, ನವೀನ್ ಹಾಗೂ ಸಲಗ ಕೆ.ಪಿ.ಶ್ರೀಕಾಂತ್ (KP Srikanth)ಬಂಡವಾಳ ಹಾಕಿದ್ದಾರೆ. ಎಲ್ಲರೂ ಒಂದೊಂದೆ ಕೆಲಸವನ್ನು ಹಂಚಿಕೊಂಡಿದ್ದಾರೆ.
Web Stories