ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳನ್ನ ದತ್ತು ತೆಗೆದುಕೊಳ್ಳೋಕೆ ನಾನ್ಯಾರು, ನಾನು ನನ್ನ ಕೈಲಾದ ಅಳಿಲು ಸೇವೆಯನ್ನಷ್ಟೇ ನಾನು ಮಾಡುತ್ತಿದ್ದೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ನಟ ಪ್ರಕಾಶ್ ರೈ, ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಸಾಮಾನ್ಯ ಶಿಕ್ಷಣ ಅನ್ನೋದು ಎಲ್ಲರ ಹಕ್ಕು ಎಲ್ಲರಿಗೂ ಸಿಗಬೇಕಿದೆ. ಆದರೆ ಈಗ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣವಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.
Advertisement
Advertisement
ಪ್ರಕಾಶ್ ರೈ ಸರ್ಕಾರಿ ಶಾಲೆಗಳನ್ನ ದತ್ತು ತೆಗೆದುಕೊಳ್ತಾರೆ ಅನ್ನೋದು ಮಾರ್ಖತನದ ಮಾತು. ನಾನ್ಯಾರು ದತ್ತು ತೆಗೆದುಕೊಳ್ಳೋಕೆ? ಯಾರಪ್ಪನ ಆಸ್ತಿಯನ್ನು ಯಾರು ದತ್ತು ತೆಗೆದುಕೊಳ್ಳೋದು? ಇದು ದತ್ತು ತೆಗೆದುಕೊಳ್ಳೋದು ಅಲ್ಲ, ಈಗಾಗಲೇ ಹಲವು ಅಧ್ಯಾಪಕರು ಹಾಗೂ ಕೆಲ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಿದ್ದಾರೆ. ಅವರ ಕೆಲಸಕ್ಕೆ ನಾನು ಬೆನ್ನು ತಟ್ಟಿ ಪ್ರೋತ್ಸಾಹಿಸಿ ನನ್ನಿಂದ ಆಗುವ ಅಳಿಲು ಸೇವೆ ಮಾಡಲು ಬಂದಿದ್ದೇನೆ ಎಂದರು.
Advertisement
ಗೌರಿ ಹಂತಕರ ಪತ್ತೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಪ್ರಕಾಶ್ ರೈ, ಇಷ್ಟು ದಿನ ಎಸ್‍ಐಟಿ ಹಂತಕರನ್ನು ಹಿಡಿದಿಲ್ಲ ಎಂದು ಹೇಳುತ್ತಿದ್ದೀರಿ. ಆದರೆ ಈಗ ಎಸ್‍ಐಟಿ ಹಂತಕರನ್ನ ಹಿಡಿಯುತ್ತಿದೆ. ತನಿಖೆ ಕೊನೆ ಹಂತಕ್ಕೆ ಬಂದಿದೆ. ಹೀಗಾಗಿ ಯಾರು ಯಾರ ಮೇಲೆ ಅಪವಾದ ಹೊರಿಸುವುದು ಬೇಡ. ಎಸ್‍ಐಟಿಯೇ ಒಂದು ಸಂಸ್ಥೆಯ ಮೇಲೆ ಹೇಳ್ತಿದೆ. ಆದರೆ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ತನಿಖೆ ಮುಗಿಯಲಿ ಅಂತಿಮವಾಗಿ ಸತ್ಯ ತಿಳಿದು ಹಂತಕ ಯಾರು ಯಾಕೆ ಮಾಡಿದ್ದಾರೆ ಅಂತ ಗೊತ್ತಾಗಲಿ. ಸಮಾಜದಲ್ಲಿ ಮುಂದೆ ಮತ್ತೊಂದು ಗೌರಿಯ ಹತ್ಯೆ ಆಗದಂತೆ ಯೋಚನೆ ಮಾಡೋಣ ಎಂದು ಹೇಳಿದರು.