ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಅಭ್ಯರ್ಥಿ ರಿಜ್ವಾನ್ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ರೋಡ್ ಶೋ ನಡೆಸುತ್ತಿದ್ದಾರೆ. ಈ ವೇಳೆ ಸಿದ್ದರಾಮಯ್ಯ 15 ಲಕ್ಷ ಅಲ್ಲ 15 ಪೈಸೆನು ಹಾಕಲಿಲ್ಲ ಇವನ ಮನೆ ಹಾಳಾಗ. ನರೇಂದ್ರ ಮೋದಿ ಕ್ಯೂ ಜೂಟ್ ಬೋಲ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಮಾತನಾಡಿದ ಅವರು, ನೀವೆಲ್ಲಾ ಪ್ರಬುದ್ಧ ಮತದಾರರು. ಹಾಗಾಗಿ ಸರಿಯಾಗಿ ಯೋಚನೆ ಮಾಡಿ ತೀರ್ಮಾನ ಮಾಡಬೇಕು. ಪಿ.ಸಿ ಮೋಹನ್ ಅವರು ನಾನು 10 ವರ್ಷಗಳ ಕಾಲ ನಾನು ಲೋಕಸಭಾ ಸದಸ್ಯನಾಗಿದೆ. ನನ್ನ ಮುಖ ನೋಡಬೇಡಿ. ಮೋದಿ ಮುಖ ನೋಡಿ ವೋಟ್ ಹಾಕಿ ಎಂದು ಹೇಳುತ್ತಾರೆ. ಯಾಕೆ ಇವರಿಗೆ ಮುಖ ಮುಚ್ಚಿಕೊಳ್ಳೋ ಹಾಗೆ ಆಗಿದ್ಯಾ? ನಾಚಿಕೆ ಆಗಬೇಕು. ಹಾಗೆ ಕೇಳೋಕೆ ಮಾನ ಮರ್ಯಾದೆ ಇಲ್ವಾ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ಅವರು ಏನಾದರೂ ಮಾಡಿದ್ದಾರಾ. ನರೇಂದ್ರ ಮೋದಿ ನೋಡಿ ಎಂದು ಹೇಳುತ್ತಾರೆ. ನರೇಂದ್ರ ಮೋದಿ 5 ವರ್ಷಗಳಲ್ಲಿ ಏನೂ ಕೆಲಸ ಮಾಡಿದ್ದಾರೆ. ಅವರು ನುಡಿದಂತೆ ನಡೆದಿದ್ದಾರಾ?. ಅವರು ಕೊಟ್ಟ ವಚನಗಳನ್ನು ಈಡೇರಿಸಿದ್ದಾರಾ. ನಾವು ಏಕೆ ಮತ್ತೆ ಅವರಿಗೆ ಮತ ಹಾಕಬೇಕು. ಕಳೆದ 5 ವರ್ಷದಲ್ಲಿ ಬಾಯೋ, ಬೆಹೆನೋ ಭಾಷಣ ಮಾಡುವುದು ಬಿಟ್ಟರೆ, ಮನ್ ಕೀ ಬಾತ್, ವಿದೇಶ ಪ್ರವಾಸ ಮಾಡುವುದು ಬಿಟ್ಟರೆ ಅವರ ಸಾಧನೆ ಶೂನ್ಯ. ಬಾಯಿ ಬಡಾಯಿ ಸಾಧನೆ ಶೂನ್ಯ. ಇದಕ್ಕಾಗಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕಾ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಈಗ 2 ಕೋಟಿ ಉದ್ಯೋಗ, 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ್ದರು. ಯುವಕರ ನಿರುದ್ಯೋಗ ಸಮಸ್ಯೆ ಬಗ್ಗೆ ಹರಿಸುತ್ತೇನೆ ಎಂದರು. ಆದರೆ ಅವರು ಉದ್ಯೋಗ ಸೃಷ್ಟಿ ಮಾಡಿಲ್ಲ. ಉದ್ಯೋಗ ಕೇಳಿದರೆ ಪಕೋಡ ಮಾರಿ ಎಂದು ಹೇಳುತ್ತಾರೆ. ಮಾತು ಎತ್ತಿದ್ದರೆ, ಚೌಕಿದಾರ್ ಎಂದು ಹೇಳುತ್ತಾರೆ. ಯಾರೇ ಪ್ರಧಾನಿ ಆದರೂ ಅವರು ಚೌಕಿದಾರ್. ಆದರೆ ವಿಜಯ್ ಮಲ್ಯ, ನೀರವ್ ಮೋದಿ ಹೇಗೆ ದೇಶ ಬಿಟ್ಟು ಓಡಿ ಹೋದರು ಎಂದು ಪ್ರಶ್ನಿಸಿದರು.
ವಿಜಯ್ ಮಲ್ಯ ಭಾರತ ಬಿಟ್ಟು ಹೋಗುವಾಗ ನಾನು ಅರುಣ್ ಜೇಟ್ಲಿಗೆ ಹೇಳಿ ಹೋಗಿದೆ ಎಂದು ಹೇಳಿಕೆ ನೀಡಿದ್ದರು. ಮೋದಿ ಚೌಕಿದಾರ್ ಅಲ್ಲ ಇವನು ಭಾಗಿದಾರ್. ದೇಶದ ಭ್ರಷ್ಟಾಚಾರದ ಭಾಗಿದಾರ್. ವಿದೇಶದ ಕಪ್ಪು ಹಣವನ್ನು ತಂದು ಎಲ್ಲರ ಅಂಕೌಂಟ್‍ಗೆ 15 ಲಕ್ಷ ರೂ. ಹಾಕುತ್ತೀನಿ ಎಂದರು. ಅಲ್ಲ 15 ಪೈಸೆನು ಹಾಕಲಿಲ್ಲ ಇವನ ಮನೆ ಹಾಳಾಗ. ಕ್ಯೂ ಜೂಟ್ ಬೋಲ ನರೇಂದ್ರಜೀ ಎಂದು ಸಿದ್ದರಾಮಯ್ಯ ಮೋದಿ ಅವರನ್ನು ಪ್ರಶ್ನಿಸಿದರು.
ಈಗ ಎಲ್ಲಾ ಚೌಕಿದಾರ್ ಆಗಿದ್ದಾರೆ. ಪಿಸಿ ಮೋಹನ್ ಚೌಕಿದಾರ್, ಜೈಲಿಗೆ ಹೋಗಿಬಂದ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡುನು ಚೌಕಿದಾರ್, ಜೈಲಿಗೆ ಹೋಗಿಬಂದ ಜನಾರ್ದನ ರೆಡ್ಡಿನು ಚೌಕಿದಾರ್, ಶ್ರೀರಾಮುಲುನು ಚೌಕಿದಾರ್. 65 ಇಸವಿಯಿಂದ ನೋಡುತ್ತಿದ್ದೇನೆ. ಪ್ರಧಾನಿ ಮೋದಿಯಷ್ಟು ಸುಳ್ಳು ಹೇಳುವಂತಹ ಪ್ರಧಾನಿ ಈ ದೇಶದಲ್ಲಿ ನಾನು ನೋಡಿಲ್ಲ. ಮೋದಿ ಮಹಾ ಸುಳ್ಳುಗಾರ. ಅವರು ಏನೂ ಮಾಡಿಲ್ಲ, ಹೇಳಿದಂತೆ ನಡೆದುಕೊಂಡಿಲ್ಲ ಎಂದು ಕಿರಿಕಾಡಿದರು.