ಇಸ್ರೇಲ್, ಅಮೆರಿಕಕ್ಕೆ (USA) ಇರಾನ್ ಮೇಲೆ ದ್ವೇಷ ಇರುವುದು ಸರಿ. ಆದರೆ ಮುಸ್ಲಿಮ್ ದೇಶಗಳು (Muslim Nations) ಇರಾನ್ (Iran) ವಿಚಾರದಲ್ಲಿ ಅಮೆರಿಕಕ್ಕೆ ಬೆಂಬಲ ನೀಡಿದ್ದು ಈಗ ಗಲ್ಫ್ ರಾಷ್ಟ್ರಗಳು ಯುದ್ಧದ ಭೀತಿಗೆ ಸಿಲುಕಿದೆ.
ಮುಸ್ಲಿಮ್ ದೇಶಗಳು ರಾಜಕೀಯ, ಭದ್ರತೆ ಮತ್ತು ಪ್ರಾದೇಶಿಕ ಸ್ಪರ್ಧೆ ಈ ಮೂರು ಕಾರಣಗಳಿಗೆ ಅಮೆರಿಕಕ್ಕೆ ಬೆಂಬಲ ನೀಡುತ್ತಿವೆ. ಅಮೆರಿಕಕ್ಕೆ ಸಹಕಾರ ನೀಡಿದ್ದಕ್ಕೆ ಸಿಟ್ಟಾದ ಇರಾನ್ ಸೌದಿ ಅರೇಬಿಯಾ, ಯುಎಇ, ಕುವೈತ್, ಬಹರೇನ್, ಜೋರ್ಡಾನ್ ಮೇಲೆ ನಿರಂತರ ಡ್ರೋನ್, ಕ್ಷಿಪಣಿ ದಾಳಿ ನಡೆಸುತ್ತಿದೆ.
ಶಿಯಾ Vs ಸುನ್ನಿ
ಇರಾನ್ ಒಂದು ಶಿಯಾ ಪ್ರಾಬಲ್ಯದ ದೇಶ. ಆದರೆ ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್ ಮತ್ತು ಬಹರೇನ್ ದೇಶಗಳು ಸುನ್ನಿ ಪ್ರಾಬಲ್ಯದ ರಾಷ್ಟ್ರಗಳು. ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಇರಾನ್‌ನ ಪ್ರಭಾವವನ್ನು ತಮ್ಮ ಭದ್ರತೆಗೆ ಅಪಾಯವೆಂದು ನೋಡುತ್ತವೆ. ಯೆಮನ್, ಸಿರಿಯಾ, ಇರಾಕ್, ಲೆಬನಾನ್ ಪ್ರದೇಶಗಳಲ್ಲಿ ಇರಾನ್ ಬೆಂಬಲಿತ ಗುಂಪುಗಳು ಪ್ರಭಲವಾದರೆ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಸುನ್ನಿ ದೇಶಗಳಿಗೆ ತಿಳಿದಿದೆ.
ಅಮೆರಿಕದ ಜೊತೆಗಿನ ಅವಲಂಬನೆ
ಮಧ್ಯಪ್ರಾಚ್ಯ ದೇಶಗಳಿಗೆ ಕಚ್ಚಾ ತೈಲವೇ ಆದಾಯದ ಮೂಲ. ಈ ರಾಷ್ಟ್ರಗಳ ಆರ್ಥಿಕತೆ ಪಶ್ಚಿಮ ದೇಶಗಳೊಂದಿಗೆ ವ್ಯಾಪಾರ, ತೈಲ ಮಾರಾಟ, ಹೂಡಿಕೆಗಳ ಮೇಲೆ ಅವಲಂಬಿತವಾಗಿದೆ. ಅಮೆರಿಕ ವಿರುದ್ಧ ನಿಲುವು ತಾಳುವುದರಿಂದ ಆರ್ಥಿಕ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಕಚ್ಚಾ ತೈಲದ ವ್ಯವಹಾರ ಈಗಲೂ ಡಾಲರ್‌ನಲ್ಲಿ (Dollar) ನಡೆಯುತ್ತಿದೆ. ಅಮೆರಿಕದ ಆರ್ಥಿಕ ಹಿಂಜರಿತವಾದರೆ ಬೇರೆ ದೇಶಗಳಿಗಿಂತಲೂ ಈ ರಾಷ್ಟ್ರದ ಮೇಲೆ ಭಾರೀ ಪ್ರಭಾವ ಬೀರುತ್ತದೆ. 2008 ರಲ್ಲಿ ಆರ್ಥಿಕ ಹಿಂಜರಿತ ನಡೆದಾಗ ಗಲ್ಫ್ ರಾಷ್ಟ್ರಗಳ ರಿಯಲ್ ಎಸ್ಟೇಟ್ ಮೌಲ್ಯ ಭಾರೀ ಇಳಿಕೆಯಾಗಿತ್ತು.
ಟ್ರಂಪ್ ಜೊತೆ ಕತಾರ್ ಸಂಬಂಧ ಎಷ್ಟು ಚೆನ್ನಾಗಿದೆ ಅಂದರೆ ಕತಾರ್ ಸರ್ಕಾರವು ಟ್ರಂಪ್ ಅವರಿಗೆ ಸುಮಾರು 400 ಮಿಲಿಯನ್ ಮೌಲ್ಯದ ಐಷಾರಾಮಿ ಬೋಯಿಂಗ್ 747 ವಿಮಾನವೊಂದನ್ನು ಉಡುಗೊರೆಯಾಗಿ ನೀಡಿದೆ.

ಪ್ರವಾಸೋದ್ಯಮ
ಮುಖ್ಯವಾಗಿ ಯುಎಇ, ಸೌದಿ ಅರೇಬಿಯಾ, ಕತಾರ್, ಕುವೈತ್‌ಗಳು ಮುಸ್ಲಿಂ ದೇಶಗಳಾಗಿದ್ದರೂ ಅನಿವಾಸಿ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ದೇಶಗಳಿಗೆ ಕಚ್ಚಾ ತೈಲದಂತೆ ಪ್ರವಾಸೋದ್ಯಮವೂ ಆದಾಯದ ಭಾಗ. ಹೀಗಾಗಿ ಅತಿಯಾದ ಧಾರ್ಮಿಕತೆಗೆ ಈ ದೇಶಗಳು ಪ್ರೋತ್ಸಾಹ ನೀಡುವುದಿಲ್ಲ. ಧಾರ್ಮಿಕ ಗುರುಗಳು ಆಡಳಿತದಲ್ಲಿ ಕೈ ಹಾಕುವುದಿಲ್ಲ. ಆದರೆ ಇರಾನ್ ಅತಿಯಾದ ಧಾರ್ಮಿಕತೆಯನ್ನು ಪಾಲಿಸುತ್ತಿದೆ. ಖಮೇನಿ ಅಧಿಕಾರಕ್ಕೆ ಏರಿದ ಬಳಿಕ ಅಲ್ಲಿ ಧಾರ್ಮಿಕ ಮತಾಂತರ ಹೆಚ್ಚಾಯಿತು. ಈ ಟ್ರೆಂಡ್‌ಗೆ ಮಧ್ಯಪ್ರಾಚ್ಯ ದೇಶಗಳು ಬೆಂಬಲ ನೀಡುವುದಿಲ್ಲ.
ಅಣ್ವಸ್ತ್ರದತ್ತ ಇರಾನ್
ಇತ್ತೀಚಿನ ವರ್ಷಗಳಲ್ಲಿ ಇರಾನ್ ಆರ್ಥಿಕತೆ ಕುಸಿಯುತ್ತಿದ್ದರೂ ರಕ್ಷಣಾ ಬಜೆಟ್ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಹಾಗೆ ನೋಡಿದರೆ ಮಧ್ಯಪ್ರಾಚ್ಯದಲ್ಲಿರುವ ದೇಶಗಳು ರಕ್ಷಣೆಗೆ ಹಣವನ್ನು ಜಾಸ್ತಿ ಮೀಸಲಿಡುವುದಿಲ್ಲ. ಇರಾನ್ ಶಸ್ತಾಸ್ತ್ರ ಉತ್ಪಾದನೆಯ ಜೊತೆಗೆ ಅಣ್ವಸ್ತ್ರ ತಯಾರಿಸಲು ಮುಂದಾಗಿದ್ದು ಮಧ್ಯಪ್ರಾಚ್ಯ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಮಿಲಿಟರಿಯಲ್ಲಿ ಶಕ್ತಿಶಾಲಿಯಾದರೆ ಯಾವಾಗ ಬೇಕಾದರೂ ಇರಾನ್ ದಾಳಿ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: 30 ಬಾಂಬ್‌ಗಳಿಂದ ದಾಳಿ – ತನ್ನ ಮನೆಯಲ್ಲೇ ಖಮೇನಿ ಹತ್ಯೆಗೆ ಅಮೆರಿಕ-ಇಸ್ರೇಲ್ ರೂಪಿಸಿದ್ದ ರಣತಂತ್ರ ಹೇಗಿತ್ತು?

ಹಮಾಸ್, ಹಿಜ್ಬುಲ್ಲಾ, ಹೌತಿ ಸಂಘಟನೆಗಳಿಗೆ ಇರಾನ್ ಬೆಂಬಲ ನೀಡುತ್ತಿರುವುದು ಈ ದೇಶಗಳಿಗೆ ಗೊತ್ತಿದೆ. ಈ ಹಿಂದೆ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಕಚ್ಚಾ ತೈಲ ಘಟಕದ ಮೇಲೆಯೇ ಡ್ರೋನ್ ದಾಳಿ ನಡೆಸಿತ್ತು. ಕಚ್ಚಾ ತೈಲದಲ್ಲಿ ಸೌದಿ ಪ್ರಾಬಲ್ಯವನ್ನು ಕಡಿಮೆ ಮಾಡಲು ಇರಾನ್ ಈ ಡ್ರೋನ್ ದಾಳಿ ಮಾಡಿಸಿತ್ತು ಎಂದು ನಂತರ ತಿಳಿದು ಬಂದಿತ್ತು.
ಗಲ್ಫ್ ಯುದ್ಧ
ಇರಾನ್ ಮತ್ತು ಇರಾಕ್ ಮಧ್ಯೆ 1980 ರಿಂದ 1988 ರವರೆಗೆ ನಡೆದ ಯುದ್ಧದ ಸಮಯಲ್ಲಿ ಬಹುತೇಕ ಅರಬ್ ರಾಷ್ಟ್ರಗಳು ಇರಾಕ್‌ಗೆ ಬೆಂಬಲ ನೀಡಿದ್ದವು. ಆ ಇತಿಹಾಸಿಕ ಅಂತರ ಇಂದಿಗೂ ರಾಜಕೀಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕವು ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಲು ಮತ್ತು ಈ ಪ್ರದೇಶದ ಭದ್ರತೆಯನ್ನು ಕಾಪಾಡಲು ಹಲವಾರು ಪ್ರಮುಖ ಮಿಲಿಟರಿ ನೆಲೆಗಳನ್ನು ಹೊಂದಿದೆ.
1. ಕತಾರ್ – ಅಲ್ ಉದೈದ್ ವಾಯುನೆಲೆ (Al Udeid Air Base)
ವಿಶೇಷತೆ: ಇದು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಅತಿದೊಡ್ಡ ಮಿಲಿಟರಿ ನೆಲೆ.
ಪಾತ್ರ: ಇದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನ ಪ್ರಧಾನ ಕಚೇರಿಯಾಗಿದ್ದು, ಸುಮಾರು 10,000 ಕ್ಕೂ ಹೆಚ್ಚು ಸೈನಿಕರನ್ನು ಹೊಂದಿದೆ. ಅಮೆರಿಕದ ವಾಯುಪಡೆಯ ಕಾರ್ಯಾಚರಣೆಗಳು ಇಲ್ಲಿಂದಲೇ ನಿಯಂತ್ರಿಸಲ್ಪಡುತ್ತವೆ. ಇದನ್ನೂ ಓದಿ: ಗಲ್ಫ್ ರಾಷ್ಟ್ರಗಳ ಮೇಲೆ ಸಮರ ಸಾರಿದ ಇರಾನ್ – ಯುಎಇ ಮೇಲೆ 208 ಡ್ರೋನ್, 137 ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
ವಿಶೇಷತೆ: ಇದು ಅಮೆರಿಕದ ನೌಕಾಪಡೆಯ 5ನೇ ಫ್ಲೀಟ್ (5th Fleet) ಕೇಂದ್ರಸ್ಥಾನವಾಗಿದೆ.
ಪಾತ್ರ: ಪರ್ಷಿಯನ್ ಕೊಲ್ಲಿ, ಕೆಂಪು ಸಮುದ್ರ ಮತ್ತು ಅರಬ್ಬೀ ಸಮುದ್ರದಲ್ಲಿ ನೌಕಾ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತದೆ. ಸಮುದ್ರ ಮಾರ್ಗಗಳ ಭದ್ರತೆಗೆ ಇದು ಅತ್ಯಂತ ನಿರ್ಣಾಯಕವಾಗಿದೆ.
3. ಕುವೈತ್ – ಕ್ಯಾಂಪ್ ಆರಿಫ್ಜಾನ್ ಮತ್ತು ಅಲಿ ಅಲ್ ಸೇಲಂ ವಾಯುನೆಲೆ
ವಿಶೇಷತೆ: ಕುವೈತ್ ಅಮೆರಿಕದ ಸೈನ್ಯಕ್ಕೆ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾಗಿದೆ.
ಪಾತ್ರ: ಅಲಿ ಅಲ್ ಸೇಲಂ ವಾಯುನೆಲೆಯು “ದಿ ರಾಕ್” ಎಂದು ಪ್ರಸಿದ್ಧವಾಗಿದ್ದು, ಈ ಪ್ರದೇಶದಲ್ಲಿ ಅಮೆರಿಕದ ಸರಕು ಸಾಗಣೆ ಮತ್ತು ವೈಮಾನಿಕ ದಾಳಿಗಳಿಗೆ ಬೆಂಬಲ ನೀಡುತ್ತದೆ.

4. ಯುನೈಟೆಡ್ ಅರಬ್ ಎಮಿರೇಟ್ಸ್ (UAE) – ಅಲ್ ಧಫ್ರಾ ವಾಯುನೆಲೆ
ವಿಶೇಷತೆ: ಅಬುಧಾಬಿಯ ಸಮೀಪವಿರುವ ಈ ನೆಲೆಯು ಅತ್ಯಾಧುನಿಕ ಡ್ರೋನ್ ಮತ್ತು ಯುದ್ಧ ವಿಮಾನಗಳನ್ನು ಹೊಂದಿದೆ.
ಪಾತ್ರ: ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ವೈಮಾನಿಕ ಕಣ್ಗಾವಲು ನಡೆಸಲು ಇದನ್ನು ಬಳಸಲಾಗುತ್ತದೆ.
5. ಸೌದಿ ಅರೇಬಿಯಾ – ಪ್ರಿನ್ಸ್ ಸುಲ್ತಾನ್ ವಾಯುನೆಲೆ (PSAB)
ವಿಶೇಷತೆ: ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಗೆ (Patriot Missile Defense) ಇದು ಪ್ರಸಿದ್ಧವಾಗಿದೆ.
ಪಾತ್ರ: ಅರಬ್ ರಾಷ್ಟ್ರಗಳ ಮೇಲೆ ಇರಾನ್ ಅಥವಾ ಇತರ ಶಕ್ತಿಗಳಿಂದ ಆಗಬಹುದಾದ ಕ್ಷಿಪಣಿ ದಾಳಿಗಳನ್ನು ತಡೆಯಲು ಅಮೆರಿಕ ಈ ನೆಲೆಯನ್ನು ಬಳಸುತ್ತದೆ.
6. ಜೋರ್ಡಾನ್ – ಮುವಾಫಾಕ್ ಅಲ್-ಸಾಲ್ತಿ ವಾಯುನೆಲೆ
ವಿಶೇಷತೆ: ಇದು ಅಮೆರಿಕದ ಸಣ್ಣದಾದರೂ ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖವಾದ ನೆಲೆಯಾಗಿದೆ.
ಪಾತ್ರ: ಸಿರಿಯಾ ಮತ್ತು ಇರಾಕ್‌ನಲ್ಲಿರುವ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಈ ನೆಲೆಯನ್ನು ಬಳಸಲಾಗುತ್ತದೆ.

7. ಇರಾಕ್ – ಐನ್ ಅಲ್-ಅಸಾದ್ ವಾಯುನೆಲೆ
ಪಾತ್ರ: ಇರಾಕ್‌ನಲ್ಲಿ ಅಮೆರಿಕದ ಸೈನಿಕರ ಉಪಸ್ಥಿತಿಯು ಕಡಿಮೆಯಾಗಿದ್ದರೂ, ಐನ್ ಅಲ್-ಅಸಾದ್ ನೆಲೆ ಇಂದಿಗೂ ಸಕ್ರಿಯವಾಗಿದ್ದು, ಸ್ಥಳೀಯ ಪಡೆಗಳಿಗೆ ತರಬೇತಿ ನೀಡಲು ಮತ್ತು ಭದ್ರತೆ ಒದಗಿಸಲು ಬಳಕೆಯಲ್ಲಿದೆ.
ಈ ನೆಲೆಗಳು ಕೇವಲ ಮಿಲಿಟರಿ ಶಕ್ತಿಯ ಪ್ರದರ್ಶನವಲ್ಲದೆ, ಈ ಪ್ರದೇಶದ ತೈಲ ಮಾರ್ಗಗಳ ರಕ್ಷಣೆ ಮತ್ತು ಇಸ್ರೇಲ್‌ನಂತಹ ಅಮೆರಿಕದ ಮಿತ್ರ ರಾಷ್ಟ್ರಗಳ ಭದ್ರತೆಗೆ ಅತ್ಯಗತ್ಯವಾಗಿವೆ.
ಮಧ್ಯಪ್ರಾಚ್ಯದಲ್ಲಿ ಮುಸ್ಲಿಂ ಏಕತೆ ಇದ್ದರೂ ರಾಜಕೀಯವಾಗಿ ಏಕತೆ ಹೊಂದಿಲ್ಲ. ಪ್ರತಿ ದೇಶ ತನ್ನದೇ ರಾಷ್ಟ್ರೀಯ ಹಿತಾಸಕ್ತಿಯನ್ನು ಮೊದಲಿಗೆ ನೋಡುತ್ತದೆ. ಕೆಲವು ರಾಷ್ಟ್ರಗಳು ಸ್ಪಷ್ಟವಾಗಿ ಅಮೆರಿಕವನ್ನು ಬೆಂಬಲಿಸುವುದಿಲ್ಲ. ಆದರೆ ನೇರವಾಗಿ ಇರಾನ್ ಪರವಾಗಿಯೂ ನಿಲ್ಲುವುದಿಲ್ಲ. ಇದು ಧಾರ್ಮಿಕತೆಯ ಪ್ರಶ್ನೆಗಿಂತಲೂ ಹೆಚ್ಚು ರಾಜಕೀಯ, ಭದ್ರತೆ ಮತ್ತು ಪ್ರಾದೇಶಿಕತೆಯೇ ಮುಖ್ಯವಾಗುತ್ತದೆ. ಪ್ರತಿ ದೇಶ ತನ್ನ ಸ್ವಂತ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತದೆ.

