– ವಿಐಪಿ ಕ್ರೌಡ್‌ನಿಂದ ಬೇಸತ್ತ ಸಿಬ್ಬಂದಿ
ಕೋಲ್ಕತ್ತಾ: ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಆಗಮಿಸಿದ್ದಾರೆ. `ಗೋಟ್ ಟೂರ್’ ಭಾಗವಾಗಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ (Salt Lake Stadium) ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೆಸ್ಸಿ ಅವರ ಭಾರತಕ್ಕೆ ಭೇಟಿ ನೀಡಿದ ಕ್ಷಣ ಅವಿಸ್ಮರಣೀಯವಾಗಲಿದೆ ಎಂದೇ ಎಂದೇ ಭಾವಿಸಲಾಗಿತ್ತು. ಆದ್ರೆ ಅಲ್ಲಿ ನಡೆದಿದ್ದು ಬೇರೆ. ನೋಡನೋಡ್ತಿದ್ದಂತೆ ಫುಟ್ಬಾಲ್ ಅಂಗಳ ರಣಾಂಗಣವಾಯಿತು.
ಟಿಕೆಟ್ ಪಡೆದು ಮೆಸ್ಸಿ ಕಣ್ತುಂಬಿಕೊಳ್ಳಲು ಕಾಯ್ತಿದ್ದ ಲಕ್ಷಾಂತರ ಅಭಿಮಾನಿಗಳು ಕಾರ್ಯಕ್ರಮ ಸರಿಯಾಗಿ ಆಯೋಜನೆ ಮಾಡದೇ ಇದ್ದಿದ್ದಕ್ಕೆ ರೊಚ್ಚಿಗೆದ್ದು ದಾಂಧಲೆ ಮಾಡಿದರು. ಆದ್ರೆ 1 ಗಂಟೆ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಮೆಸ್ಸಿ 22 ನಿಮಿಷಕ್ಕೆ ನಿರ್ಗಮಿಸಿದ್ದು ಏಕೆ ಅನ್ನೋದರ ಬಗ್ಗೆ ಕುತೂಹಲ ಇದ್ದೇ ಇತ್ತು. ಇದೀಗ ಅಸಲಿ ಕಾರಣ ಬಯಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾದ ಮೆಸ್ಸಿ ಕಾರ್ಯಕ್ರಮದಲ್ಲಿ ದಾಂಧಲೆ – ಚೇರ್, ಬಾಟಲ್ ಎಸೆದು ಅಕ್ರೋಶ

22 ನಿಮಿಷಕ್ಕೇ ಮೆಸ್ಸಿ ಹೊರಟಿದ್ದೇಕೆ?
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ನೆರೆದಿದ್ದರು. ಇದರೊಂದಿಗೆ ವಿಐಪಿ, ವಿವಿಐಪಿಗಳೂ ಇದ್ದರು. ನೆರೆದಿದ್ದ ಮೆಸ್ಸಿ ಅಭಿಮಾನಿಗಳಲ್ಲಿ ಬಹುತೇಕರು 4,000 ರೂಪಾಯಿಗಿಂತ ಹೆಚ್ಚಿನ ಬೆಲೆಯ ಟಿಕೆಟ್‌ಗಳನ್ನ ಖರೀದಿಸಿದ್ದರು. ಆದ್ರೆ ಮೆಸ್ಸಿ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ ರಾಜಕಾರಣಿಗಳು, ವಿವಿಐಪಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಳು ಮುಗಿಬಿದ್ದರು.
ಮೆಸ್ಸಿ 11 ಗಂಟೆಗೆ ಇಂಟರ್ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಮೈದಾನಕ್ಕೆ ಬಂದರು. ಆದ್ರೆ ಬೆಳಗ್ಗೆ 8 ಗಂಟೆಯಿಂದಲೇ ಕಾದುಕುಳಿತಿದ್ದ ಅಭಿಮಾನಿಗಳು ಮೆಸ್ಸಿ ಕಂಡು ಚಪ್ಪಾಳೆ ಮಳೆಗರೆದರು. ಅಭಿಮಾನಿಗಳ ಖುಷಿ ಕೆಲವೇ ಕ್ಷಣಗಳಲ್ಲಿ ಕಮರಿತು. ಇದನ್ನೂ ಓದಿ: ನಿವೃತ್ತಿಯಿಂದ ಹಿಂದೆ ಸರಿದ ವಿನೇಶ್ ಫೋಗಟ್ – 2028ರ ಒಲಿಂಪಿಕ್ಸ್‌ನಲ್ಲಿ ಅಖಾಡಕ್ಕಿಳಿಯುವುದಾಗಿ ಘೋಷಣೆ

ನೆರೆದಿದ್ದ ವಿಐಪಿಗಳ ಗುಂಪೇ ಮೆಸ್ಸಿ ಅವರನ್ನ ಮುತ್ತಿಕೊಂಡಿತ್ತು. ತಾವು, ತಮ್ಮ ಕುಟುಂಬಸ್ಥರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ನಿರತರಾಗಿದ್ದರು. ಕೆಲವರಿಗೆ ಆಟೋಗ್ರಾಫ್ ಸಹ ಕೊಡ್ತಿದ್ರು. ಆದ್ರೆ ಅಭಿಮಾನಿಗಳಿಗೆ ಮಾತ್ರ ಮೆಸ್ಸಿ ಅವರ ಮುಖ ನೋಡುವುದಕ್ಕೂ ಸರಿಯಾಗಿ ಆಗಲಿಲ್ಲ. ಈ ನಡುವೆ ಕಾರ್ಯಕ್ರಮ ಆಯೋಜಕರು ಅವರನ್ನ ಏಕಾಂಗಿಯಾಗಿ ಬಿಡಿ, ವಿಐಪಿ ಕ್ರೌಡ್ ನಿಯಂತ್ರಿಸುವಂತೆ ಕೇಳಿಕೊಂಡರು. ಆದ್ರೆ ಅವರ ಮನವಿಯನ್ನ ಕಡೆಗಣಿಸಲಾಯಿತು. ಕೊನೆಗೆ ಭದ್ರತಾ ಕಾರಣಗಳಿಂದ ಮೆಸ್ಸಿ ಅವರನ್ನ ನಿಗದಿತ ಕಾರ್ಯಕ್ರಮಕ್ಕೂ ಮುನ್ನವೇ ಕರೆದುಕೊಂಡು ಹೋಗಲಾಯಿತು. ಬಳಿಕ ರೊಚ್ಚಿಗೆದ್ದ ಪ್ರೇಕ್ಷಕರು ದಾಂಧಲೆ ನಡೆಸಿದರು.

