ಕಲಬುರಗಿ: ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಹೆದರಿ ಕ್ಷೇತ್ರ ಬದಲಾವಣೆ ಮಾಡೋ ಪ್ರಶ್ನೆಯೇ ಇಲ್ಲ. ತೇರದಾಳ ಕ್ಷೇತ್ರದಿಂದ ಬಿಎಸ್‍ವೈ ಸ್ಪರ್ಧಿಸಿದರೆ ನಾನು ಎದುರಿಸಲು ಸಿದ್ಧನಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ತೇರದಾಳ ಕ್ಷೇತ್ರಕ್ಕೆ ಯಾರೇ ಬಂದು ಸ್ಪರ್ಧಿಸಿದರೂ, ನಾನು ಮಾತ್ರ ಈ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಜೀವನದಲ್ಲಿ ಸೋಲು ಗೆಲುವು ಇದ್ದಾಗೆ ರಾಜಕೀಯದಲ್ಲೂ ಸೋಲು ಗೆಲುವು ಸಹಜ, ಸೋಲಲಿ ಗೆಲ್ಲಲಿ ಈ ಕ್ಷೇತ್ರದಲ್ಲೇ ಇರುತ್ತೇನೆ. ಈ ಉಮಾಶ್ರೀ ಯಾರಿಗೂ ಹೆದರೋ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಬಿಎಸ್‍ವೈ ಗೆ ಉಮಾಶ್ರೀ ಟಾಂಗ್ ಕೊಟ್ಟರು.
Advertisement
ತೇರದಾಳವೇ ಯಾಕೆ?
ತೇರದಾಳ ಕ್ಷೇತ್ರವನ್ನು ಯಡಿಯೂರಪ್ಪ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಲಿಂಗಾಯತರ ಪ್ರಾಬಲ್ಯ ಇಲ್ಲದಿದ್ದರೂ, ನೇಕಾರ ಮತದಾರರೇ ಹೆಚ್ಚಾಗಿರುವ ಈ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಮತದಿಂದ ಸೋತಿದ್ದಕ್ಕೆ ಕಾರಣ ಕೆಜೆಪಿ ಸ್ಪರ್ಧೆ ಅನ್ನೋದು ಬಿಜೆಪಿಯ ಲೆಕ್ಕಾಚಾರವಾಗಿದೆ.
Advertisement
ವಿಧಾನಸಭಾ ಚುನಾವಣೆ ಮತಗಳಿಕೆಯಲ್ಲಿ ಕಾಂಗ್ರೆಸ್ 70,189 ಮತಗಳನ್ನು ಪಡೆದರೆ, ಬಿಜೆಪಿ 67,590 ಮತಗಳನ್ನ, ಕೆಜೆಪಿ 5,558 ಮತಗಳನ್ನ ಪಡೆದುಕೊಂಡಿದ್ದವು. ಈ ಚುನಾವಣೆಯಲ್ಲಿ ಕಾಂಗ್ರೆಸ್ 2,599 ಮತಗಳ ಅಂತರದಿಂದ ಗೆಲವು ಸಾದಿಸಿತ್ತು.
Advertisement
ಲೋಕಸಭಾ ಚುನಾವಣೆ ಮತಗಳಿಕೆಯಲ್ಲಿ ಬಿಜೆಪಿ 90,154 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ 55,295, ಪಕ್ಷೇತರ 2,189 ಮತಗಳನ್ನು ಪಡೆದುಕೊಂಡಿದ್ದವು. ಈ ಚುನಾವಣೆಯಲ್ಲಿ ಬಿಜೆಪಿ 34, 859 ಮತಗಳ ಅಂತರದಿಂದ ಭಾರಿ ಗೆಲವು ಸಾಧಿಸಿತ್ತು.
Advertisement
ಯಾರು ಎಷ್ಟಿದ್ದಾರೆ?
ಈ ಕ್ಷೇತ್ರವು ಸುಮಾರು ಒಟ್ಟು 3 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಅದರಲ್ಲಿ ಸುಮಾರು 2 ಲಕ್ಷದ 20 ಸಾವಿರ ಮತದಾರರನ್ನು ಹೊಂದಿದೆ. ಇವರಲ್ಲಿ ನೇಕಾರರು 84 ರಿಂದ 90 ಸಾವಿರ, ಪಂಚಮಸಾಲಿ 35 ಸಾವಿರ, ಪರಿಶಿಷ್ಟರು 30 ಸಾವಿರ, ಕುರುಬರು 18 ಸಾವಿರ, ಮುಸ್ಲಿಮರು 10 ರಿಂದ 15 ಸಾವಿರ, ಬಣಜಿಗರು 10 ರಿಂದ 12 ಸಾವಿರ, ಜೈನರು 12 ಸಾವಿರ, ಗಾಣಿಗರು 8 ರಿಂದ 10 ಸಾವಿರ, ಮಾಳಿ ಸೇರಿದಂತೆ ಇತರೆ ಸಮುದಾಯದವರು 20 ರಿಂದ 25 ಸಾವಿರ ಇದ್ದಾರೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೊರೆದು ಬಿಎಸ್ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಲಿಂಗಾಯತರೇ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಸೋತಿತ್ತು. ಈ ಕಾರಣಕ್ಕೆ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮತ್ತು ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಅವರನ್ನು ಈ ಭಾಗದಲ್ಲಿ ನಿಲ್ಲಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.