ಭಾರತದಾದ್ಯಂತದ ಹಲವು ನಗರಗಳಲ್ಲಿ ಡೆಂಗ್ಯೂ (Dengue) ಪ್ರಕರಣಗಳ ಉಲ್ಬಣಗೊಂಡಂತೆ, ಬ್ರೆಜಿಲ್ ಮತ್ತು ಇತರ ದಕ್ಷಿಣ ಅಮೆರಿಕದ ದೇಶಗಳು ಸೇರಿದಂತೆ ವಿಶ್ವದೆಲ್ಲೆಡೆ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇನ್ನೂ ವಿಶ್ವ ಆರೋಗ್ಯ ಸಂಸ್ಥೆಯ (WHO) ದತ್ತಾಂಶದ ಪ್ರಕಾರ ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ. ಜಾಗತಿಕವಾಗಿ 1.2 ಕೋಟಿಗೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ಡೆಂಗ್ಯೂ ಎಂದರೇನು?
Advertisement
ಡೆಂಗ್ಯೂ ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಡೆಂಗ್ಯೂವಿನಿಂದ ಹೆಚ್ಚಿನ ಜನರಲ್ಲಿ ಸಾಮಾನ್ಯ ರೋಗಲಕ್ಷಣಗಳು ಕಂಡು ಬರುತ್ತದೆ. ಅಂದರೆ ಜ್ವರ, ತೀವ್ರ ತಲೆನೋವು, ಸ್ನಾಯು ಮತ್ತು ಕೀಲು ನೋವುಗಳು, ವಾಕರಿಕೆ ಮತ್ತು ವಾಂತಿ, ಕಣ್ಣುಗಳ ಹಿಂದೆ ನೋವು ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತವೆ. ತೀವ್ರ ತರವಾದ ಪ್ರಕರಣಗಳಲ್ಲಿ, ಸೋಂಕು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು. ಅಲ್ಲದೇ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಸಾವು ಕೂಡ ಸಂಭವಿಸಲಿದೆ.
Advertisement
ಸೋಂಕಿನ ಪರಿಣಾಮವೇನು?
Advertisement
ರಕ್ತನಾಳಗಳಿಗೆ ಡೆಂಗ್ಯೂ ವೈರಸ್ ಹಾನಿಯುಂಟು ಮಾಡುತ್ತದೆ. ರಕ್ತಕಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಪರಿಣಾಮವಾಗಿ ಅಂಗಾಂಗ ವೈಫಲ್ಯವಾಗುತ್ತದೆ. ಕೆಲವೊಮ್ಮೆ ಜೀವಕ್ಕೂ ಸಂಚಕಾರ ತರಬಹುದು.
Advertisement
ಈ ವರ್ಷ ಎಷ್ಟು ಮಂದಿಗೆ ಡೆಂಗ್ಯೂ ಸೋಂಕು ಕಾಣಿಸಿಕೊಂಡಿದೆ?
ಈ ವರ್ಷದ ಆಗಸ್ಟ್‌ವರೆಗೆ ಜಾಗತಿಕವಾಗಿ 1.2 ಕೋಟಿಗೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿವೆ. ಡೆಂಗ್ಯೂನಿಂದ 6,991 ಸಾವುಗಳು ದಾಖಲಾಗಿವೆ ಎಂದು WHO ದ ಜಾಗತಿಕ ಡೆಂಗ್ಯೂ ವರದಿಯ ಅಂಕಿಅಂಶಗಳು ತಿಳಿಸಿವೆ.
ಇದು ಕಳೆದ ವರ್ಷ ದಾಖಲಾದ 52.7 ಲಕ್ಷ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಮೊದಲು, ಕಳೆದ ದಶಕದಲ್ಲಿ, ಸುಮಾರು 20-30 ಲಕ್ಷ ವಾರ್ಷಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅಲ್ಲದೇ 2024 ರ ದಾಖಲೆಯ ಸಂಖ್ಯೆಗಳಲ್ಲಿ ಬಹಳಷ್ಟು ವರದಿ ಆಗದೆ ಲೆಕ್ಕಕ್ಕೆ ಸಿಗದಿರುವುದು ಸಾಕಷ್ಟಿದೆ ಎನ್ನಲಾಗಿದೆ.
ಭಾರತದಲ್ಲಿ ಡೆಂಗ್ಯೂ ಪ್ರಕರಣಗಳ ಸ್ಥಿತಿ ಏನು?
ಕಳೆದ ಎರಡು ತಿಂಗಳಿಂದ ದೇಶದ ಹಲವಾರು ನಗರಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ ಎಂದು ವರದಿಯಾಗಿದೆ. ಇತ್ತೀಚಿನ ಲಭ್ಯವಿರುವ ಮಾಹಿತಿಯ ಪ್ರಕಾರ ಜೂನ್ ಅಂತ್ಯದವರೆಗೆ 32,000 ಕ್ಕೂ ಹೆಚ್ಚು ಪ್ರಕರಣಗಳು ಮತ್ತು 32 ಸಾವುಗಳಿಗೆ ಡೆಂಗ್ಯೂಗೆ ಕಾರಣವಾಗಿವೆ.
2023 ರ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ವರದಿಯಾದ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಭಾರತದಲ್ಲಿ ಸುಮಾರು 50% ಏರಿಕೆಯಾಗಿದೆ ಎಂದು ಆಗಸ್ಟ್ ಆರಂಭದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದರು.
ಬೆಂಗಳೂರಲ್ಲಿ ಡೆಂಗ್ಯೂ ಸ್ಥಿತಿ ಹೇಗಿದೆ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 9,035 ಡೆಂಗ್ಯೂ ಕೇಸ್ ಗಳು ವರದಿಯಾಗಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆರೋಗ್ಯ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿದ ಸೊಳ್ಳೆಗಳ ಲಾರ್ವಾಗಳು ಕೊಚ್ಚಿಕೊಂಡು ಹೋಗುತ್ತಿದೆ. ಹೀಗಾಗಿ ದೈನಂದಿನ ಸರಾಸರಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿವೆ ಎಂದು ಹೇಳಿದ್ದಾರೆ.
ಜೂನ್ ತಿಂಗಳಿನಲ್ಲಿ ಪ್ರತ ನಿತ್ಯ 200 ಪಾಸಿಟಿವ್ ಕೇಸ್‌ಗಳು ವರದಿಯಾಗುತ್ತಿದ್ದವು. ಆದರೆ, ಆಗಸ್ಟ್ 1 ರಿಂದ 6 ರ ನಡುವೆ 771 ಪ್ರಕರಣಗಳು ವರದಿಯಾಗಿವೆ. ಕಳೆದ ವಾರ ದೈನಂದಿನ ಸರಾಸರಿ 130ಕ್ಕೆ ಇಳಿದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಡೆಂಗ್ಯೂ ಪ್ರಕರಣಗಳ ಹೆಚ್ಚಳದ ಹಿಂದಿರುವ ಕಾರಣವೇನು?
ನಗರೀಕರಣ: ದಟ್ಟವಾದ ಜನಸಂಖ್ಯೆ ಹೊಂದಿರುವ ನಗರ ಪ್ರದೇಶಗಳಲ್ಲಿ ರೋಗವು ಹೆಚ್ಚು ವೇಗವಾಗಿ ಹರಡುತ್ತದೆ. ಏಕೆಂದರೆ ನಗರ ಪ್ರದೇಶಗಳು ಈಡಿಸ್ ಈಜಿಪ್ಟಿ ಸೊಳ್ಳೆಗಳ ಸಂತಾನವೃದ್ಧಿಗೆ ಅನೇಕ ಅವಕಾಶವಿದೆ. ಈ ಕಾರಣದಿಂದ ಡೆಂಗ್ಯೂ ಹೆಚ್ಚಳಕ್ಕೆ ಅನುಕೂಲವಾಗಲಿದೆ.
ಹವಾಮಾನ ಬದಲಾವಣೆ: ತಾಪಮಾನದಲ್ಲಿನ ಹೆಚ್ಚಳವು ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಕಾರಣವಾಗುತ್ತದೆ. ಇದಲ್ಲದೆ, ಹವಾಮಾನ ಬದಲಾವಣೆಯು ವೈರಸ್ ಹೆಚ್ಚು ಬಲವಾಗಲು ಮತ್ತು ಹರಡಲು ಕಾರಣವಾಗಿದೆ. ಇನ್ನೂ ಈಡಿಸ್ ಈಜಿಪ್ಟಿ ಇದು ಶುದ್ಧವಾದ, ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ.
ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ & ಪ್ರಿವೆನ್ಷನ್ ಪ್ರಕಾರ ʻಹೆಚ್ಚಿನ ತಾಪಮಾನವು ಡೆಂಗ್ಯೂ ಹರಡುವ ಸೊಳ್ಳೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಡೆಂಗ್ಯೂವಿನಂತಹ ರೋಗ ವೇಗವಾಗಿ ಹಬ್ಬಲಿದೆ ಎಂದು ಹೇಳಿದೆ.
ಜನರ ಸಂಚಾರ: ಜನ ಡೆಂಗ್ಯೂ ಬಾಧಿತ ಪ್ರದೇಶಗಳಿಗೆ ಭೇಟಿ ನೀಡುವುದು ಹೆಚ್ಚಿನ ರೋಗ ಹರಡುವಿಕೆಗೆ ಕಾರಣವಾಗಿದೆ. ಡೆಂಗ್ಯೂ ಅಲ್ಲದೇ ಚಿಕೂನ್‌ಗುನ್ಯಾ ಮತ್ತು ಜಿಕಾದಂತಹ ಇತರ ಸೋಂಕುಗಳು ಸಹ ಹರಡುತ್ತವೆ.
ಡೆಂಗ್ಯೂ ತಡೆಗಟ್ಟುವುದು ಹೇಗೆ?
ಸೊಳ್ಳೆಗಳು ಮನೆಗಳ ಸುತ್ತಮುತ್ತ ಸಂತಾನೋತ್ಪತ್ತಿ ಮಾಡದಂತೆ ಎಚ್ಚರವಹಿಸಬೇಕು. ಕುಂಡಗಳಲ್ಲಿ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು.
Aedes aegypti ಸೊಳ್ಳೆಗಳು ಹಗಲಿನಲ್ಲಿ ಕಚ್ಚುತ್ತವೆ. ಇದರಿಂದ ಸೊಳ್ಳೆ ಕಡಿತದಿಂದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಇಡೀ ದೇಹವನ್ನು ಆವರಿಸುವ ಬಟ್ಟೆಗಳನ್ನು ಧರಿಸುವುದರಿಂದ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದಾಗಿದೆ.
* ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು
* ನೀರು ಶೇಖರಣೆಯಾಗುವ ಯಾವುದೇ ಪ್ರದೇಶವಿದ್ದರೂ ಶುಚಿಗೊಳಿಸಬೇಕು
* ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು
* ಸರಾಗವಾಗಿ ನೀರು ಹರಿಯುವಂತೆ ಚರಂಡಿ, ಮೋರಿಗಳನ್ನು ಸುಸ್ಥಿತಿಯಲ್ಲಿಡಬೇಕು
* ಮನೆ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು
* ಸೊಳ್ಳೆ ನಿವಾರಕ ಬಳಕೆ ಮಾಡಬೇಕು
ಡೆಂಗ್ಯೂ ವಿರುದ್ಧ ಯಾವುದೇ ಲಸಿಕೆಗಳಿವೆಯೇ?
WHO ಎರಡು ಲಸಿಕೆಗಳನ್ನು ಡೆಂಗ್ಯೂವಿಗೆ ಶಿಫಾರಸು ಮಾಡುತ್ತದೆ. ಸನೋಫಿಯ ಡೆಂಗ್ವಾಕ್ಸಿಯಾ ಮತ್ತು ಟಕೆಡಾದ ಕ್ಯೂಡೆಂಗಾ. ಆದರೆ, ಇವುಗಳಿಗೆ ಭಾರತದಲ್ಲಿ ಅನುಮೋದನೆ ಸಿಕ್ಕಿಲ್ಲ. ಭಾರತದಲ್ಲಿ ತನ್ನದೇ ಆದ ಹಲವಾರು ಲಸಿಕೆಗಳನ್ನು ನೀಡಲಾಗುತ್ತಿದೆ.
ಆರಂಭಿಕ ಹಂತದಲ್ಲಿ ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಎಲ್ಲಾ ಆಸ್ಪತ್ರೆಗಳಲ್ಲೂ ಡೆಂಗ್ಯೂ ರೋಗಕ್ಕೆ ಚಿಕಿತ್ಸೆ ಲಭ್ಯವಿದೆ. ಡೆಂಗ್ಯೂ ಜ್ವರ ತೀವ್ರಮಟ್ಟದಲ್ಲಿದ್ದರೆ, ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ವೈದ್ಯರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ.