ಕರ್ನಾಟಕ ವಿಧಾನಸಭೆಗೆ ಚುನಾವಣೆ (Karnataka Election 2023) ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಹಂಬಲದೊಂದಿಗೆ ಪ್ರಮುಖ ರಾಜಕೀಯ ಪಕ್ಷಗಳು ನಾನಾ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಆದರೆ ಮತದಾರ ಮಾತ್ರ ಪ್ರತಿ ಚುನಾವಣೆಯಲ್ಲೂ ಅನಿರೀಕ್ಷಿತ ಎಂಬಂತೆ ಫಲಿತಾಂಶವನ್ನ ನೀಡುತ್ತಾ ಬಂದಿದ್ದಾನೆ. ಯಾವ ಪಕ್ಷಗಳ ಅಥವಾ ರಾಜಕೀಯ ವಿಶ್ಲೇಷಕರ ಊಹೆಗೆ ನಿಲುಕದಂತೆ ಪ್ರತಿ ಬಾರಿ ಫಲಿತಾಂಶ ಬರುತ್ತಿದೆ. ಈಗ ಮತ್ತೆ ರಾಜ್ಯ ವಿಧಾನಸಭಾ ಚುನಾವಣೆ ಬಂದಿದ್ದು, ಅಂತಿಮ ರಿಸಲ್ಟ್ ಏನಿರಲಿದೆ? ಯಾವ ಪಕ್ಷ ಸರ್ಕಾರ ರಚಿಸುತ್ತೆ? ಈ ಬಾರಿಯೂ ಅತಂತ್ರವೋ ಅಥವಾ ಸ್ವತಂತ್ರ ಸರ್ಕಾರವೋ ಎಂಬ ನಾನಾ ಪ್ರಶ್ನೆಗಳು ಮೂಡಿವೆ.
ಕರ್ನಾಟಕ ವಿಧಾನಸಭಾ ಚುನಾವಣೆಗಳ ಇತಿಹಾಸವನ್ನು ಗಮನಿಸಿದರೆ ಅನೇಕ ಅಚ್ಚರಿದಾಯಕ ಬೆಳವಣಿಗೆಗಳಾಗಿವೆ. ರಾಷ್ಟ್ರೀಯ ಪಕ್ಷಗಳಲ್ಲೊಂದು ಹೆಚ್ಚು ಸೀಟುಗಳನ್ನು ಗೆದ್ದರೂ ಒಟ್ಟು ಮತಗಳ ಸಂಖ್ಯೆಯಲ್ಲಿ ಕುಸಿತ ಕಂಡಿರುತ್ತೆ. ಅಂತೆಯೇ ಒಟ್ಟು ಮತಗಳಲ್ಲಿ ಹೆಚ್ಚು ಮತಗಳನ್ನು ಪಡೆದ ಮತ್ತೊಂದು ರಾಷ್ಟ್ರೀಯ ಪಕ್ಷ, ಕಡಿಮೆ ಸೀಟುಗಳನ್ನು ಗೆದ್ದಿರುತ್ತೆ. ಕಳೆದ ನಾಲ್ಕು ಚುನಾವಣೆಗಳ ಇತಿಹಾಸ ಗಮನಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?
Advertisement
Advertisement
ಕಾಂಗ್ರೆಸ್‌ಗೇ ಹೆಚ್ಚು ಮತ. ಆದ್ರೆ!
ರಾಜ್ಯ ವಿಧಾನಸಭೆ 2004ರಿಂದ ನಡೆದ ಒಟ್ಟು 4 ಚುನಾವಣೆಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಹೆಚ್ಚು ಮತಗಳನ್ನು ಪಡೆದದ್ದು ಕಾಂಗ್ರೆಸ್ (Congress). ಹೆಚ್ಚು ಮತಗಳನ್ನು ಪಡೆದ ಸ್ಥಾನದಲ್ಲಿ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದರೆ, ಬಿಜೆಪಿ (BJP) 2 ಹಾಗೂ ಜೆಡಿಎಸ್ (JDS) 3ನೇ ಸ್ಥಾನದಲ್ಲಿದೆ. ಕಳೆದ 4 ಚುನಾವಣೆಗಳಲ್ಲೂ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದರೂ, ಮತಗಳೆಲ್ಲ ಗೆಲುವಾಗಿ ಮಾರ್ಪಡಾಗಿಲ್ಲ. ಹಾಗಾದ್ರೆ ಈ ಅವಧಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಪಡೆದ ಒಟ್ಟು ಮತಗಳೆಷ್ಟು, ಸೀಟುಗಳೆಷ್ಟು ಮತ್ತು ಎಷ್ಟನೇ ಸ್ಥಾನದಲ್ಲಿದ್ದವು ಎಂಬುದನ್ನು ವಿವರವಾಗಿ ತಿಳಿಯೋಣ.
Advertisement
Advertisement
2004ರ ಚುನಾವಣೆ
ಈ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ. 35.3 ರಷ್ಟು ಮತಗಳನ್ನು ಪಡೆದುಕೊಂಡಿದ್ದರೂ, ಕಾಂಗ್ರೆಸ್ ಗೆದ್ದಿದ್ದು 65 ಕ್ಷೇತ್ರಗಳಲ್ಲಿ ಮಾತ್ರ. ಆದರೆ ಶೇ. 28.3 ರಷ್ಟು ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ 79 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ಶೇ.20.8 ರಷ್ಟು ಮತಗಳನ್ನು ಪಡೆದಿದ್ದ ಜೆಡಿಎಸ್ 58 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತ್ತು. ಈ ಚುನಾವಣೆಯ ಫಲಿತಾಂಶದ ಅಂಕಿಅಂಶವನ್ನು ಗಮನಿಸಿದರೆ, ಕಾಂಗ್ರೆಸ್ ಮತ ಪ್ರಮಾಣದಲ್ಲಿ ಗಣನೀಯ ಬದಲಾವಣೆ ಏನೂ ಆಗಿಲ್ಲ. ಆದರೆ ಪಕ್ಷವು ಗೆದ್ದ ಕ್ಷೇತ್ರಗಳಲ್ಲಿ ಮಾತ್ರ ಭಾರೀ ಏರಿಳಿತವಾಗಿದೆ. ಅಂತೆಯೇ ಬಿಜೆಪಿ ಪಡೆದ ಮತ ಪ್ರಮಾಣ ಕಡಿಮೆಯಾದರೂ ಹೆಚ್ಚು ಕ್ಷೇತ್ರಗಳು ದಕ್ಕಿವೆ. ನಂತರ ನಡೆದ ಚುನಾವಣೆಗಳಲ್ಲೂ (2013ರ ಚುನಾವಣೆ ಹೊರತುಪಡಿಸಿ) ಇದೇ ಮಾದರಿಯ ಚಿತ್ರಣ ಗೋಚರಿಸುತ್ತದೆ. ಇದನ್ನೂ ಓದಿ: PublicTV Explainer: ಭೂಮಿ ಆಯ್ತು.. ಇನ್ಮುಂದೆ ಸಮುದ್ರದಾಳದಲ್ಲಿ ಶುರುವಾಗುತ್ತಂತೆ ಗಣಿಗಾರಿಕೆ!
2008ರ ಚುನಾವಣೆ
ಇಲ್ಲೂ ಅಷ್ಟೆ, ಚಲಾವಣೆಯಾದ ಒಟ್ಟು ಮತಗಳಲ್ಲಿ ಕಾಂಗ್ರೆಸ್ ಶೇ. 34.8 ರಷ್ಟು ಮತಗಳನ್ನು ಪಡೆದಿತ್ತು. ಆದರೂ ಗೆದ್ದಿದ್ದು ಮಾತ್ರ 80 ಕ್ಷೇತ್ರಗಳಲ್ಲಿ. ಇನ್ನು ಬಿಜೆಪಿ ಶೇ. 33.9 ಮತಗಳನ್ನಷ್ಟೇ ಪಡೆದಿದ್ದರೂ, ಗೆದ್ದಿದ್ದು 110 ಕ್ಷೇತ್ರಗಳಲ್ಲಿ. ಜೆಡಿಎಸ್ ಶೇ. 19 ರಷ್ಟು ಮತಗಳನ್ನು ಪಡೆದು 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
2013ರ ಚುನಾವಣೆ
ರಾಜ್ಯ ರಾಜಕೀಯದಲ್ಲಾದ ಅಚ್ಚರಿದಾಯಕ ಬೆಳವಣಿಗೆಯಿಂದಾಗಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಗೆಲುವು ದಾಖಲಿಸಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಿ ಕಾಂಗ್ರೆಸ್ ಪೂರ್ಣಾವಧಿ ಆಡಳಿತ ನಡೆಸಿತ್ತು. ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಯಡಿಯೂರಪ್ಪ ಅವರು ಪಕ್ಷ ತೊರೆದು ಕೆಜೆಪಿ ಕಟ್ಟಿದರು. ಅಂತೆಯೇ ಬಿ.ಶ್ರೀರಾಮುಲು ಅವರು ಬಿಎಸ್‌ಆರ್ ಪಕ್ಷ ಸ್ಥಾಪಿಸಿದರು. ಇದರಿಂದ 2013ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪೆಟ್ಟನ್ನೇ ತಿಂದಿತು. ಈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಶೇ. 36.6 ರಷ್ಟು ಮತಗಳನ್ನು ಪಡೆದು, 112 ಕ್ಷೇತ್ರಗಳಲ್ಲಿ ಗೆದ್ದಿತು. ಬಿಜೆಪಿ ಶೇ. 19.9 ರಷ್ಟು ಮತಗಳನ್ನಷ್ಟೇ ಪಡೆದು, 40 ಕ್ಷೇತ್ರಗಳನ್ನು ಮಾತ್ರ ತನ್ನದಾಗಿಸಿಕೊಂಡಿತು. ಇನ್ನು ಜೆಡಿಎಸ್ ಶೇ. 20.2 ರಷ್ಟು ಮತಗಳನ್ನು ಪಡೆದು, 40 ಕ್ಷೇತ್ರಗಳಲ್ಲಿ ಜಯ ಸಾಧಿಸಿತು. ಯಡಿಯೂರಪ್ಪ ಅವರ ಹೊಸ ಪಕ್ಷವಾಗಿದ್ದ ಕೆಜೆಪಿ ಶೇ. 9.8 ರಷ್ಟು ಮತ ಪಡೆದು, 6 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇದರಿಂದ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಯಿತು. ಈ ಕಾರಣಕ್ಕಾಗಿ 2014ರ ಲೋಕಸಭಾ ಚುನಾವಣೆಗೂ ಮೊದಲು ಯಡಿಯೂರಪ್ಪ ಅವರನ್ನು ಮನವೊಲಿಸಿ ಬಿಜೆಪಿಗೆ ಮತ್ತೆ ಸೇರ್ಪಡೆಗೊಳಿಸಲಾಯಿತು.
2018ರ ಚುನಾವಣೆ
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 39 ರಷ್ಟು ಮತಗಳನ್ನು ಪಡೆದಿದ್ದರೂ ಸಹ, 80 ಕ್ಷೇತ್ರಗಳನ್ನಷ್ಟೇ ಗೆಲ್ಲಲು ಶಕ್ತವಾಯಿತು. ಬಿಜೆಪಿ ಶೇ. 36.2 ರಷ್ಟು ಮತಗಳನ್ನಷ್ಟೇ ಪಡೆದಿದ್ದರೂ, 104 ಕ್ಷೇತ್ರಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇನ್ನು ಜೆಡಿಎಸ್ ಶೇ. 18.3 ರಷ್ಟು ಮತ ಪಡೆದು 37 ಕ್ಷೇತ್ರಗಳನ್ನು ಗೆದ್ದಿತ್ತು. ಇದನ್ನೂ ಓದಿ: PublicTV Explainer: ಲ್ಯಾಬ್‌ನಲ್ಲಿ DNA ಇಟ್ರೆ ಸಾಕು ನಿಮ್ಗೆ ಸಿಗುತ್ತೆ ಚಿಕನ್, ಮಟನ್, ಬೀಫ್, ಫೋರ್ಕ್ ಮಾಂಸ!
ಕಾರಣ ಏನು?
ಹಳೇ ಮೈಸೂರು ಭಾಗದಲ್ಲಿ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ಇರುತ್ತದೆ. ಈ ಭಾಗದಲ್ಲಿ ಬಿಜೆಪಿ ಪ್ರಭಾವ ತುಂಬಾ ಕಡಿಮೆ. ಇದರಿಂದ ಬಿಜೆಪಿ ಒಟ್ಟು ಮತಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿರುತ್ತದೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇರುತ್ತದೆ. ಈ ಭಾಗದಲ್ಲಿ ಕೆಲವು ಕಡೆ ಜೆಡಿಎಸ್ ಅಭ್ಯರ್ಥಿಗಳನ್ನೇ ಹಾಕುವುದಿಲ್ಲ. ಹೀಗಾಗಿ ಚುನಾವಣೆಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಕಾಂಗ್ರೆಸ್ ಮುಂದಿರುತ್ತದೆ.