ಕೇರಳದ (Kerala) ಕರಾವಳಿಯಲ್ಲಿ ಕೇಂದ್ರ ಸರ್ಕಾರ (Central Government) ಪ್ರಸ್ತಾವಿತ ಕಡಲಾಚೆಯ ಗಣಿಗಾರಿಕೆ ಯೋಜನೆಯನ್ನು (Offshore Mining) ವಿರೋಧಿಸಿ ಪ್ರತಿಭಟನೆಗಳನ್ನು ನಡೆಯುತ್ತಿವೆ. ಅಲ್ಲದೇ ಈ ಕ್ರಮದ ವಿರುದ್ಧ ದೆಹಲಿಯಲ್ಲಿ ಸಂಸದರು ಮತ್ತು ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ಈ ಯೋಜನೆಯ ಮಹತ್ವ, ಉದ್ದೇಶ ಹಾಗೂ ಅಗತ್ಯಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.
ಕೇರಳ ಕರಾವಳಿಯಲ್ಲಿ 745 ಮಿಲಿಯನ್ ಟನ್ ಖನಿಜ ನಿಕ್ಷೇಪ
ಕೇಂದ್ರವು ಕಳೆದ ವರ್ಷ ನವೆಂಬರ್‌ನಲ್ಲಿ ಕಡಲಾಚೆಯ ಗಣಿಗಾರಿಕೆಗೆ ದೇಶದ ಮೊದಲ ಹಂತದ ಇ-ಹರಾಜನ್ನು (50 ವರ್ಷಗಳ ಅವಧಿಗೆ ಗುತ್ತಿಗೆ) ಪ್ರಾರಂಭಿಸಿತು. ಗಣಿಗಾರಿಕೆಗೆ ದೇಶದ 13 ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಮೂರು ಕೇರಳ ಕರಾವಳಿಯಲ್ಲಿ, ಮೂರು ಗುಜರಾತ್‌ನಲ್ಲಿ ಮತ್ತು 7 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿವೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ಕೇರಳ ಕರಾವಳಿಯಲ್ಲಿ ಅಧ್ಯಯನ ನಡೆಸಿ, ಸುಮಾರು 745 ಮಿಲಿಯನ್ ಟನ್‌ಗಳಷ್ಟು ಮರಳಿನ ನಿಕ್ಷೇಪವನ್ನು ಪತ್ತೆ ಮಾಡಿದೆ. ಅಲ್ಲದೇ, ಗಣನೀಯ ಪ್ರಮಾಣದ ಕೋಬಾಲ್ಟ್-ಹೊಂದಿರುವ ಪಾಲಿ-ಮೆಟಾಲಿಕ್ ನಿಕ್ಷೇಪಗಳು, ನಿರ್ಮಾಣ ಯೋಜನೆಗಳಿಗೆ ಬಳಸಬಹುದಾದ ನಿಕಲ್ ಮತ್ತು ಅಪರೂಪದ ಖನಿಜಗಳನ್ನು ಹೊಂದಿವೆ ಎಂದು ವರದಿ ನೀಡದೆ. ಈ ಗಣಿಗಾರಿಕೆಗೆ ನೂತನ ತಂತ್ರಜ್ಞಾನದ ಅವಶ್ಯಕತೆ ಇದೆ. ಪ್ರಸ್ತುತ, ದಕ್ಷಿಣ ಕೇರಳದ ಕೊಲ್ಲಂ ಕರಾವಳಿಯ ಮೂರು ಬ್ಲಾಕ್‌ಗಳಲ್ಲಿ ಗಣಿಗಾರಿಕೆಗೆ ಪರಿಗಣಿಸಲಾಗುತ್ತಿದೆ. ಈ ಬ್ಲಾಕ್‌ಗಳಲ್ಲಿ 300 ಮಿಲಿಯನ್ ಟನ್‌ಗಳಷ್ಟು ಮರಳಿನ ನಿಕ್ಷೇಪವಿದೆ.
ಗಣಿಗಾರಿಕೆ ಕೇರಳ ಕಡಲ ವ್ಯಾಪ್ತಿ ಮೀರಿದೆ
OMDR ಕಾಯ್ದೆಯ ಪ್ರಕಾರ, ಕಡಲಾಚೆಯ ಪ್ರದೇಶಗಳಲ್ಲಿ ಗಣಿಗಳು ಮತ್ತು ಖನಿಜಗಳನ್ನು ನಿಯಂತ್ರಿಸುವ ಅಧಿಕಾರ ಕೇಂದ್ರಕ್ಕೆ ಇದೆ. ಇನ್ನೂ ಸಮುದ್ರದಲ್ಲಿ 12 ನಾಟಿಕಲ್ ಮೈಲುಗಳವರೆಗಿನ ಮೀನುಗಾರಿಕೆ ಮತ್ತು ಸಂಬಂಧಿತ ಅಭಿವೃದ್ಧಿ ಚಟುವಟಿಕೆಗಳು ಮಾತ್ರ ರಾಜ್ಯಕ್ಕೆ ಸೇರಿದ್ದಾಗಿದೆ. ಕೇರಳದ ಕೊಲ್ಲಂ ಕರಾವಳಿಯ ಮೂರು ಬ್ಲಾಕ್‌ಗಳು 12 ನಾಟಿಕಲ್ ಮೈಲುಗಳನ್ನು ಮೀರಿವೆ. ಆದ್ದರಿಂದ ಅವು ಕೇರಳ ಸರ್ಕಾರದ ಅಡಿಯಲ್ಲಿಲ್ಲ ಎಂದು ಕೇಂದ್ರ ಗಣಿ ಸಚಿವಾಲಯ ತಿಳಿಸಿದೆ.
ಏನಿದು OMDR ಕಾಯ್ದೆ?
2023ರಲ್ಲಿ ಕೇಂದ್ರ ಸರ್ಕಾರವು ದೇಶೀಯ ಖನಿಜ ಸಂಪನ್ಮೂಲ ಸಾಮರ್ಥ್ಯಗಳನ್ನು ಅಭಿವೃದ್ಧಿ ಹಾಗೂ ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸಲು ಖಾಸಗಿ ನಿರ್ವಾಹಕರಿಗೆ ಕಡಲಾಚೆಯ ಖನಿಜ ಹೊರತೆಗೆಯುವ ಅಧಿಕಾರವನ್ನು ವಿಸ್ತರಿಸಲು ಈ ಕಾಯ್ದೆಯನ್ನು ಜಾರಿಗೆ ತಂದಿದೆ.
ಕಡಲ ಗಣಿಗಾರಿಕೆಗೆ ಕೇರಳದ ವಿರೋಧವೇಕೆ?
222 ಮೀನುಗಾರಿಕಾ ಹಳ್ಳಿಗಳಲ್ಲಿ ಹರಡಿರುವ ಸುಮಾರು 11 ಲಕ್ಷ ಮೀನುಗಾರರ ಜೀವನೋಪಾಯವಾದ ಮೀನುಗಾರಿಕೆ ವಲಯಕ್ಕೆ ಹಾನಿ ಆಗುವ ಸಾಧ್ಯತೆ ಇದೆ. ಇದರಿಂದ ಕೇಂದ್ರವು ಯೋಜನೆ ಕೈಬಿಡಬೇಕೆಂದು ಕೇರಳ ಒತ್ತಾಯಿಸಿದೆ.
ಕೇರಳದ ಕರಾವಳಿ ಪ್ರದೇಶದಲ್ಲಿ ಅತ್ಯಂತ ವೈವಿಧ್ಯಮಯ ಮತ್ತು ವ್ಯಾಪಕವಾದ ಮೀನು ಸಂತತಿಯನ್ನು ಇದೆ. ಗಣಿಗಾರಿಕೆಯು ಈ ಆವಾಸಸ್ಥಾನವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಇದು ನಮ್ಮ ಪ್ರದೇಶದ ಮೀನುಗಾರರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೇರಳದ ಕರಾವಳಿಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಈಗಾಗಲೇ ತೀವ್ರವಾಗಿ ಪರಿಣಾಮ ಬೀರಿದೆ. ಅರೇಬಿಯನ್ ಸಮುದ್ರವು ವೇಗವಾಗಿ ಬಿಸಿಯಾಗುತ್ತಿದೆ ಇದೆಲ್ಲ ಮೀನುಗಾರರ ಜೀವನಕ್ಕೆ ಕಷ್ಟತಂದೊಡ್ಡುತ್ತದೆ ಎಂದು ಮೀನುಗಾರರ ಪರ ಹೋರಾಟಗಾರರು, ಪರಿಸರವಾದಿಗಳು ವಾದಿಸಿದ್ದಾರೆ.
ತಜ್ಞರು ಹೇಳೋದೇನು?
ಆಳ ಸಮುದ್ರ ಗಣಿಗಾರಿಕೆಯ ಪರಿಣಾಮದ ಬಗ್ಗೆ ರಾಷ್ಟ್ರೀಯ ಭೂ ಅಧ್ಯಯನ ಕೇಂದ್ರ (NCESS) ವಿವರವಾದ ಸಂಶೋಧನೆ ಮಾಡಿದೆ. 242 ಚದರ ಕಿಲೋಮೀಟರ್ ಪ್ರದೇಶದಲ್ಲಿ ಗಣಿಗಾರಿಕೆಯು ಮೀನುಗಾರಿಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇದರಿಂದ ಸಮುದ್ರ ಪರಿಸರ ವ್ಯವಸ್ಥೆಯನ್ನು ನಾಶವಾಗುವುದಿಲ್ಲ ಎಂದು ಹಿರಿಯ ಸಂಶೋಧಕರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಕರಾವಳಿಯಿಂದ ಸುಮಾರು 10 ಕಿಲೋಮೀಟರ್ ದೂರದ ಸಮುದ್ರದಲ್ಲಿ ಗಣಿಗಾರಿಕೆ ನಡೆಸಿದಾಗ, ಆ ಪ್ರದೇಶದಲ್ಲಿನ ಮೀನುಗಳು 6-7 ಕಿಲೋಮೀಟರ್ ಚಲಿಸುತ್ತವೆ. ಟ್ರಾಲಿಂಗ್ ಮೀನುಗಾರಿಕೆಯು ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ಇದೇ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಡಲಾಚೆಯ ಮರಳು ಗಣಿಗಾರಿಕೆಯು ಸಾಗಣೆ, ವ್ಯಾಪಾರ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದ ಮೂಲಕ ಗಮನಾರ್ಹ ಆದಾಯವನ್ನು ತರುವ ನಿರೀಕ್ಷೆಯಿದೆ .
ಕಡಲಾಚೆಯ ಗಣಿಗಾರಿಕೆ ಎಂದರೇನು?
ಕಡಲಾಚೆಯ ಗಣಿಗಾರಿಕೆಯು ಸಮುದ್ರತಳದಿಂದ ಖನಿಜಗಳು ಅಥವಾ ಅಮೂಲ್ಯ ಕಲ್ಲುಗಳನ್ನು ಹೊರತೆಗೆಯುವುದಾಗಿದೆ. ಭಾರತದಲ್ಲಿ ಕಡಲಾಚೆಯ ಗಣಿಗಾರಿಕೆಗೆ 2 ಮಿಲಿಯನ್ ಚದರ ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ಪ್ರದೇಶ ಯೋಗ್ಯವಾಗಿದೆ.
ಕಡಲಾಚೆಯ ಗಣಿಗಾರಿಕೆಗೆ ಕಳವಳಗಳೇನು?
ಕಡಲಾಚೆಯ ಗಣಿಗಾರಿಕೆಯು ಕೆಸರನ್ನು ಸೃಷ್ಟಿಸುತ್ತದೆ ಮತ್ತು ಭಾರ ಲೋಹಗಳನ್ನು ಹೊಂದಿರುವ ವಿಷಕಾರಿ ತ್ಯಾಜ್ಯ ನೀರನ್ನು ಬಿಡುಗಡೆ ಮಾಡುತ್ತದೆ, ಇದು ಸಮುದ್ರ ಜೀವಿಗಳಿಗೆ ಮತ್ತು ಸಮುದ್ರ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರುವ ಪರಿಸರ ವ್ಯವಸ್ಥೆಗಳಿಗೆ ದೀರ್ಘಕಾಲೀನ ಅಪಾಯಗಳನ್ನುಂಟುಮಾಡುತ್ತದೆ.
ಪರಿಸರ ವ್ಯವಸ್ಥೆಗಳನ್ನು ಅಸ್ಥಿರಗೊಳಿಸುತ್ತದೆ, ಇದರಿಂದ ಸುನಾಮಿಗಳು, ಚಂಡಮಾರುತಗಳು, ಸವೆತಗಳ ವಿರುದ್ಧ ನೈಸರ್ಗಿಕ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ. ಕೆಸರು ಜಲಚರಗಳ ಆವಾಸಸ್ಥಾನಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ.
ಸಮುದ್ರತಳದ ಪರಿಸರ ವ್ಯವಸ್ಥೆಗಳನ್ನು ತೊಂದರೆಗೊಳಿಸುವುದರಿಂದ ಸಂಗ್ರಹವಾಗಿರುವ ಇಂಗಾಲ ಬಿಡುಗಡೆಯಾಗಬಹುದು, ಇದು ವಾತಾವರಣದಲ್ಲಿ ಇಂಗಾಲದ ಮಟ್ಟವನ್ನು ಹೆಚ್ಚಿಸುವ ಮೂಲಕ ಹವಾಮಾನ ಬದಲಾವಣೆಗೆ ಕಾರಣವಾಗಬಹುದು. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಬಹುದು ಎಂಬ ಆತಂಕ ಸಹ ಇದೆ.