ಇಸ್ಲಾಮಾಬಾದ್: ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿರುವ ಹಿನ್ನೆಲೆ ಟ್ವೀಟ್ ಮಾಡಿದ ನೊಬೆಲ್ ಪುರಸ್ಕೃತೆ ಮಲಾಲಾ ಯುಸೂಫಾಜಿ ವಿರುದ್ಧ ಭಾರತೀಯರು ಸಿಡಿದೆದ್ದಿದ್ದಾರೆ.
ನಾನು ಬಾಲ್ಯದಲ್ಲಿದ್ದಾಗಿಂದಲೂ, ನನ್ನ ತಂದೆ-ತಾಯಿ, ನನ್ನ ಅಜ್ಜ-ಅಜ್ಜಿಯರ ಕಾಲದಿಂದಲೂ ಕಾಶ್ಮೀರದ ಜನತೆ ಸಂಘರ್ಷದಲ್ಲಿಯೇ ಬದುಕು ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿ ನನಗೆ ಕಾಶ್ಮೀರದ ಮಹಿಳೆ ಮತ್ತು ಮಕ್ಕಳ ಬಗ್ಗೆ ಚಿಂತೆಯಾಗುತ್ತಿದೆ. ಅಲ್ಲಿ ಮತ್ತಷ್ಟು ಹಿಂಸಾಚಾರ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಹೆಚ್ಚು ನಷ್ಟವನ್ನು ಅನುಭವಿಸಬೇಕಾಗುತ್ತೆ ಎಂದು ಟ್ವೀಟ್‍ನಲ್ಲಿ ಮಲಾಲಾ ಬರೆದುಕೊಂಡಿದ್ದಾರೆ.
The people of Kashmir have lived in conflict since I was a child, since my mother and father were children, since my grandparents were young. pic.twitter.com/Qdq0j2hyN9
— Malala Yousafzai (@Malala) August 8, 2019
ಈ ಟ್ವೀಟ್‍ಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಭಾರತೀಯರು ಮಲಾಲಾ ಟ್ವೀಟ್‍ಗೆ ರೀ-ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಹುಟ್ಟುವ ಮೊದಲು ಕಾಶ್ಮೀರಕ್ಕೆ ಪಾಕಿಸ್ತಾನ ಏನೆಲ್ಲಾ ಮಾಡಿದೆ ಅಂತ ಗೊತ್ತಾ ಎಂದು ಪ್ರಶ್ನಿಸಿ, ಪಾಕ್ ದಾಳಿಗಳ ಬಗ್ಗೆ ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ನೀವು ಮೂಲತಃ ಪಾಕಿಸ್ತಾನದವರು. ಆದರೆ ಈಗ ಪಾಕಿಸ್ತಾನ ಬಿಟ್ಟು ಇಂಗ್ಲೆಂಡಿನಲ್ಲಿ ನೆಲೆಸಿದ್ದು ಯಾಕೆ? ಪಾಕ್‍ನಲ್ಲಿ ಉಗ್ರರು ರಕ್ತದೋಕುಳಿ ಹರಿಸುತ್ತಿರುವುದನ್ನು ನೋಡಿದರೆ ನಿಮಗೆ ಸತ್ಯ ಅರಿವಾಗುತ್ತೆ. ಪಾಕಿಸ್ತಾನ ಉಗ್ರರ ಸ್ವರ್ಗ ಎನ್ನುವು ವಿಚಾರ ಇಡೀ ಜಗತ್ತಿಗೆ ತಿಳಿದಿದಿದೆ. ಈ ಬಗ್ಗೆ ನಿಮಗೆ ಗೊತ್ತಿಲ್ಲವೇ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.
ನಿಮಗೆ ಕಾಶ್ಮೀರ ಮಾತ್ರ ಕಾಣುತ್ತೆ. ಬಲುಚಿಸ್ತಾನದಲ್ಲಿ ಆಗುತ್ತಿರುವ ಹಿಂಸಾಚಾರದ ಬಗ್ಗೆ ತಿಳಿದಿಲ್ಲವಾ? ಭಾರತ ಬಗ್ಗೆ ಮಾತನಾಡೋರು ಬಲುಚಿಸ್ತಾನ ಬಗ್ಗೆ ಯಾಕೆ ಧ್ವನಿ ಎತ್ತಿಲ್ಲ ಎಂದು ಪ್ರಶ್ನಿಸಿ ನೆಟ್ಟಿಗರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ರಾಯಭಾರಿಯನ್ನು ಪಾಕಿಸ್ತಾನವು ಹೊರಹಾಕಿ, ಭಾರತದ ಜೊತೆಗಿನ ದ್ವಿಪಕ್ಷೀಯ ವ್ಯಪಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದನ್ನು ಸೇರಿಸಿ ಐದು ಅಂಶಗಳ ಯೋಜನೆಯನ್ನು ಘೋಷಿಸಿದೆ. ಅಲ್ಲದೆ ಜಮ್ಮು-ಕಾಶ್ಮೀರದ ಕುರಿತು ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಮಾಡುತ್ತೇವೆ ಎಂದು ಪಾಕ್ ಹೇಳಿದೆ.
370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಭಾರತ ಸರ್ಕಾರ ವಿಭಜನೆ ಮಾಡಿದೆ. ಅಲ್ಲದೆ ಸರ್ಕಾರ ಈ ದೊಡ್ಡ ಕ್ರಮ ತೆಗೆದುಕೊಳ್ಳುವ ಮುಂಚಿತವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ 40 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಳುಹಿಸಿದೆ.
ಈ ಭಾಗದಲ್ಲಿ ಯಾವುದೇ ಹಿಂಸಾಚಾರ ನಡೆಯಬಾರದೆಂದು ಫೋನ್ ಸೇವೆಗಳು ಮತ್ತು ಇಂಟರ್‍ನೆಟ್ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ. ಉನ್ನತ ಅಧಿಕಾರಿಗಳು ಸಂಪರ್ಕಕ್ಕಾಗಿ ಸ್ಯಾಟಲೈಟ್ ಫೋನ್‍ಗಳನ್ನು ಬಳಸುತ್ತಿದ್ದಾರೆ. ಕಲ್ಲು ತೂರಾಟದಂತಹ ಘಟನೆಗಳನ್ನು ಹೊರತುಪಡಿಸಿ, ಇಲ್ಲಿನ ಪರಿಸ್ಥಿತಿ ಶಾಂತವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.