ಶತ್ರುದೇಶಗಳ ಮೇಲೆ ಯುದ್ಧ ಮಾಡುವ ಸಂದರ್ಭದಲ್ಲಿ ವಿಶೇಷ ತಂತ್ರಜ್ಞಾನವುಳ್ಳ ಅಸ್ತ್ರಗಳು, ಬಾಂಬ್ ದಾಳಿ, ಕ್ಷಿಪಣಿ ದಾಳಿಗಳನ್ನು ನಡೆಸುವುದು ಸಾಮಾನ್ಯ. ಆದರೆ ಹಿಜ್ಬುಲ್ಲಾ ಉಗ್ರರ ನೆಲೆಯಾಗಿರುವ ಲೆಬನಾನ್ ದೇಶದಲ್ಲಿ ವಿಚಿತ್ರ ಘಟನೆಯೊಂದು ಇಡೀ ವಿಶ್ವವನ್ನೇ ದಂಗು ಬಡಿಸಿದೆ. ಹಿಜ್ಬುಲ್ಲಾ ಸಮುದಾಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಹೊಸ ಹೊಸ ತಂತ್ರಗಳನ್ನು ರೂಪಿಸಿ ಹಿಜ್ಬುಲ್ಲಾ ಸದಸ್ಯರ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಹಿಜ್ಬುಲ್ಲಾ ಸಂಘಟನೆಯ ಸಾವಿರಾರು ಮಂದಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾಗ, ಅವರ ಕೈಯ್ಯಲ್ಲಿದ್ದ ಅಥವಾ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಪೇಜರ್ ಗಳು ಏಕಾಏಕಿ ಸ್ಫೋಟಗೊಂಡು, 9 ಮಂದಿ ಸಾವನ್ನಪ್ಪಿದ್ದು, 2,800 ಮಂದಿ ಗಾಯಗೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಈ ಘಟನೆಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ವೇಳೆ ಏಕಾಏಕಿ ವಾಕಿಟಾಕಿಗಳು ಸಹ ಸ್ಫೋಟಗೊಂಡು ಹಲವರು ಸಾವನ್ನಪ್ಪಿದ್ದು, ಇನ್ನೂ ಅನೇಕರು ಗಾಯಗೊಂಡಿದ್ದಾರೆ. ಇಷ್ಟಕ್ಕೂ ಹಿಜ್ಬುಲ್ಲಾ ಉಗ್ರರು ಪೇಜರ್‌ಗಳನ್ನು ಯಾಕೆ ಬಳಸುತ್ತಿದ್ದರು. ಪೇಜರ್‌ಗಳು ಉಗ್ರರಿಗೆ ಮಾರಕವಾಗಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. 5ಜಿ ಮೊಬೈಲ್‌ಫೋನ್ ಯುಗದಲ್ಲಿ ಹಿಜ್ಬುಲ್ಲಾ ಉಗ್ರರು ಮಾತ್ರ ಪೇಜರ್ ಮೂಲಕ ಸಂವಹನ ಯಾಕೆ ನಡೆಸುತ್ತಿದ್ದರು ಎಂಬ ಪ್ರಶ್ನೆಗೆ ಇಲ್ಲಿ ಉತ್ತರಿಸಲಾಗಿದೆ.
ಪೇಜರ್ ಎಂದರೇನು?
ಪೇಜರ್‌ಗಳು ಪುಟ್ಟ ವಿದ್ಯುನ್ಮಾನ ಉಪಕರಣಗಳಾಗಿದ್ದು, ಅವುಗಳ ಮೂಲಕ ಟೆಕ್ಸ್ಟ್ ಮಾದರಿಯ ಕಿರು ಸಂದೇಶವನ್ನು ಒಬ್ಬರಿಂದೊಬ್ಬರಿಗೆ ಕಳುಹಿಸಬಹುದು. ಪ್ರತಿಯೊಂದು ಪೇಜರ್‌ಗಳಿಗೆ ಮೊಬೈಲ್ ನಂಬರ್‌ಗಳಂತೆ ಪ್ರತ್ಯೇಕ ನಂಬರ್ ನೀಡಲಾಗಿರುತ್ತದೆ. ಅಂತ ಒಂದು ಪರಿಕರಗಳಿಂದ ಮತ್ತೊಂದು ಪರಿಕರಗಳಿಗೆ ಗ್ರಾಹಕರ ಸೇವಾ ವಿಭಾಗದ ಸಿಬ್ಬಂದಿಯ ನೆರವಿನಿಂದ ಸಂದೇಶಗಳನ್ನು ಕಳುಹಿಸಬಹುದು. ಇವುಗಳಿಗೆ ಇಂಟರ್ನೆಟ್ ಬೇಕಿಲ್ಲ. ಇವು ರೇಡಿಯೋ ತರಂಗಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಈ ಪರಿಕರಗಳನ್ನು ಬಳಸುವವರಿಗಾಗಿ ಪ್ರತ್ಯೇಕವಾದ ಕಾಲ್ ಸೆಂಟರ್ ಮಾದರಿಯ ಗ್ರಾಹಕರ ಸೇವಾ ವಿಭಾಗವಿರುತ್ತದೆ.
Advertisement
Advertisement
ಆ ಕಾಲ್ ಸೆಂಟರ್‌ಗಳಿಗೆ ಫೋನ್ ಮಾಡಿ, ಪೇಜರ್‌ನ ಯಾವ ಸಂಖ್ಯೆಗೆ ಯಾವ ರೀತಿಯ ಸಂದೇಶ ಕಳುಹಿಸಬೇಕು ಎಂಬುದನ್ನು ಫೋನಿನಲ್ಲಿ ಹೇಳಬೇಕು. ಸ್ಥಳೀಯ ಭಾಷೆಯಲ್ಲೇ ಈ ಸಂದೇಶ ಹೇಳಬಹುದು. ಅನಂತರ ನಾವು ಹೇಳಿದ ಸಂದೇಶವನ್ನು ಅವರು ಅಕ್ಷರ ರೂಪಕ್ಕೆ ಇಳಿಸಿ ಅವುಗಳನ್ನು ಗ್ರಾಹಕ ಸೂಚಿಸಿದ್ದ ಪೇಜರ್‌ಗೆ ಕಳುಹಿಸಲಾಗುತ್ತದೆ. ಹೊಸ ಸಂದೇಶ ಬಂದ ಕೂಡಲೇ ಸಂದೇಶ ರಿಸೀವ್ ಮಾಡುವ ಗ್ರಾಹಕನ ಪೇಜರ್ ಉಪಕರಣದಲ್ಲಿ ಬೀಪ್ ಸೌಂಡ್ ಕೇಳಿಸುತ್ತದೆ. ಕೂಡಲೇ ಆತ ಆ ಸಂದೇಶವನ್ನು ಓದುತ್ತಾನೆ. ಪೇಜರ್‌ಗಳು ಭಾರತದಲ್ಲಿಯೂ ಈ ಮೊದಲು ಬಳಕೆಯಲ್ಲಿದ್ದವು .ಮೊಬೈಲ್ ತಂತ್ರಜ್ಞಾನ ಬಂದ ನಂತರ ಅವು ಮಾಯವಾದವು.
Advertisement
ಹಿಜ್ಬುಲ್ಲಾ ಉಗ್ರರಿಗೆ ಪೇಜರ್ ಆಪ್ತ ಯಾಕೆ?
ಪೇಜರ್ ಗಳು ರೇಡಿಯೋ ತರಂಗಗಳ ಆಧಾರದಲ್ಲಿ ಕೆಲಸ ಮಾಡುತ್ತವೆ. ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ತರಂಗಗಳನ್ನು ಬಳಸುತ್ತವೆ. ಮೊಬೈಲ್‌ನಲ್ಲಿ ಹರಿದಾಡುವ ದತ್ತಾಂಶಗಳನ್ನು ಅನ್ಯರು ಪರಿಶೀಲಿಸುವುದು ಸುಲಭ. ಆದರೆ, ರೇಡಿಯೋ ತರಂಗಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಅಲ್ಲಿ ನಡೆಯುವ ಸಂವಹನವನ್ನು ಸಾಮಾನ್ಯ ತಂತ್ರಜ್ಞಾನಗಳಿಂದ ಟ್ರ್ಯಾಕ್ ಮಾಡಿ ಓದಲು ಸಾಧ್ಯವಿಲ್ಲ. ಹಾಗಾಗಿಯೇ ಉಗ್ರರು ಅವುಗಳನ್ನು ಬಳಸುತ್ತಿದ್ದರು.
Advertisement
ಸಾಮಾನ್ಯವಾಗಿ ಪೇಜರ್‌ಗಳು ಮೆಸೇಜ್ ಕಳಿಸಲು ಹಾಗೂ ಸಂದೇಶ ಸ್ವೀಕರಿಸಲು ತಮ್ಮದೇ ಆದ ತರಂಗಾಂತರ ಬಳಕೆ ಮಾಡಿಕೊಳ್ಳುತ್ತವೆ. ಈ ಮೆಸೇಜ್‌ಗಳಲ್ಲಿ ಅಕ್ಷರ, ಸಂಖ್ಯೆ ಎರಡನ್ನೂ ರವಾನಿಸಬಹುದು. ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಪೇಜರ್ ತಂತ್ರಜ್ಞಾನ ತುಂಬಾನೇ ಪುರಾತನ. 1921ರಲ್ಲಿ ಮೊದಲ ಬಾರಿಗೆ ಪೇಜರ್ ಬಳಕೆಗೆ ಬಂತು. ಅಮೆರಿಕದ ಡೆಟ್ರಾಯಿಟ್ ಪೊಲೀಸ್ ಇಲಾಖೆ ಮೊದಲ ಬಾರಿಗೆ ಪೇಜರ್ ಬಳಕೆ ಮಾಡಿತ್ತು. ಅಷ್ಟೊಂದು ಪುರಾತನ ತಂತ್ರಜ್ಞಾನವನ್ನ ಇಂದಿಗೂ ಹಿಜ್ಬುಲ್ಲಾ ಉಗ್ರರು ಬಳಕೆ ಮಾಡುತ್ತಿದ್ದಾರೆ.
ಲೆಬನಾನ್‌ನಲ್ಲಿ ಮೊಬೈಲ್ ತಂತ್ರಜ್ಞಾನ ಸಂಹವನದ ಸುರಕ್ಷತೆಗೆ ಅಷ್ಟಾಗಿ ಕ್ರಮಗಳು ಚಾಲ್ತಿಯಲ್ಲಿಲ್ಲ. ಅಲ್ಲಿ ಸಂವಹನ ತರಂಗಗಳ ಸಂರಕ್ಷಣೆಗಾಗಿ ಪ್ರತ್ಯೇಕ ವ್ಯವಸ್ಥೆಯಿಲ್ಲ. ಇದನ್ನು ಮನಗಂಡೇ ಇಸ್ರೇಲ್ ತಂತ್ರಜ್ಞರು ಉಗ್ರರು ಬಳಸುತ್ತಿದ್ದ ರೇಡಿಯೋ ತರಂಗಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪೇಜರ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಯ್ಕೆಗಳು ಇಲ್ಲ. ಆದರೆ ದೊಡ್ಡ ಮಟ್ಟದ ಪ್ರದೇಶದಲ್ಲಿ ಏಕಕಾಲಕ್ಕೆ ಸಂವಹನ ನಡೆಸಲು ಇದು ಸೂಕ್ತ ಉಪಕರಣ. ಅದರಲ್ಲೂ ಮೊಬೈಲ್ ನೆಟ್‌ವರ್ಕ್ ತುಂಬಾನೇ ದುರ್ಬಲವಾಗಿರುವ ಪ್ರದೇಶಗಳಲ್ಲೂ ಪೇಜರ್ ಕಾರ್ಯ ನಿರ್ವಹಿಸಬಲ್ಲವು. ತಾಂತ್ರಿಕವಾಗಿ ಯಾವುದೇ ಸಮಸ್ಯೆಗಳು ಆಗೋದು ಅತಿ ಕಡಿಮೆಯಾದ ಕಾರಣ, ಉಗ್ರರಿಗೆ ಇವು ಆಪ್ತವಾಗಿವೆ. ಎಲ್ಲಕ್ಕಿಂತಾ ಹೆಚ್ಚಾಗಿ ಸಂದೇಶ ಕಳುಹಿಸುವ ಹಾಗೂ ಸ್ವೀಕರಿಸುವ ವ್ಯಕ್ತಿಗಳ ನೆಟ್‌ವರ್ಕ್ ಪತ್ತೆ ಮಾಡೋದು ಕಷ್ಟ. ಹೀಗಾಗಿ, ಯಾರು ಎಲ್ಲಿದ್ದಾರೆ ಎಂದು ಸುಲಭವಾಗಿ ಗೊತ್ತೇ ಆಗಲ್ಲ.
ಇನ್ನು ಪೇಜರ್‌ಗಳು ಸುದೀರ್ಘಾವಧಿಯ ಬ್ಯಾಟರಿ ಬಾಳಿಕೆ ಹೊಂದಿವೆ. ಹೀಗಾಗಿ, ತುರ್ತು ಪರಿಸ್ಥಿತಿಗಳಲ್ಲಿ ದಿನಗಟ್ಟಲೆ ಪೇಜರ್ ಬಳಕೆ ಮಾಡಬಹುದಾಗಿದೆ. ಅದರಲ್ಲೂ ಅತ್ಯಂತ ರಹಸ್ಯವಾಗಿ ಕಾರ್ಯ ನಿರ್ವಹಿಸುವ ಉಗ್ರ ಸಂಘಟನೆಗಳು ತಾವಿರುವ ನೆಲೆ ಗೊತ್ತಾಗದ ರೀತಿಯಲ್ಲಿ ರಹಸ್ಯವಾಗಿ ಸಂವಹನ ನಡೆಸೋದಕ್ಕೂ ಈ ಉಪಕರಣ ನೆರವಾಗುತ್ತದೆ.
ವಾಕಿಟಾಕಿಗಳು ಬ್ಲಾಸ್ಟ್:
ಹಿಜ್ಬುಲ್ಲಾ ಉಗ್ರರ ನೆಲೆಯಾಗಿರುವ ಲೆಬನಾನ್‌ನಲ್ಲಿ ಸಾವಿರಾರು ಪೇಜರ್‌ಗಳು ಸ್ಫೋಟಗೊಂಡ ಮಾರನೇ ದಿನವೇ ವಾಕಿ ಟಾಕಿಗಳೂ ಸ್ಫೋಟಗೊಂಡಿವೆ. ಈ ಎಲ್ಲಾ ಘಟನೆಗಳಲ್ಲಿ ಒಟ್ಟು 32 ಮಂದಿ ಮೃತಪಟ್ಟಿದ್ದು, 3,250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೂರಾರು ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಹಲವರಿಗೆ ಮಾರಣಾಂತಿಕ ಗಾಯಗಳಾಗಿವೆ.
ಹಿಜ್ಬುಲ್ಲಾ ಉಗ್ರ ಸಂಘಟನೆ ಸದಸ್ಯರು ಪೇಜರ್‌ಗಳನ್ನ ಬಳಕೆ ಮಾಡುತ್ತಿದ್ದರೆ, ವಾಕಿಟಾಕಿಗಳನ್ನ ಇರಾನ್ ಬೆಂಬಲಿತ ಉಗ್ರರು ಬಳಕೆ ಮಾಡುತ್ತಿದ್ದರು. ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಈ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದರು. ವಾಕಿಟಾಕಿಗಳು ಸ್ಫೋಟಗೊಂಡ ಪರಿಣಾಮ 20 ಮಂದಿ ಸಾವನ್ನಪ್ಪಿದ್ದು, 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಪೇಜರ್ ಸ್ಫೋಟದಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ವಾಕಿಟಾಕಿ ಜೊತೆಗೆ ಆಗಮಿಸಿದ್ದ ಹೆಜ್ಬೊಲ್ಲಾ ಉಗ್ರ ಸಂಘಟನೆ ಸದಸ್ಯರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಅಂತ್ಯ ಸಂಸ್ಕಾರದ ಹೊತ್ತಲ್ಲೇ ವಾಕಿಟಾಕಿಗಳು ಸಿಡಿದಿವೆ.
ಇನ್ನು ಪೇಜರ್ ಸ್ಫೋಟದ ಹಿಂದೆ ಖತರ್ನಾಕ್ ಲೇಡಿಯೊಬ್ಬಳ ಕೈವಾಡವಿದೆ ಎಂಬ ಆರೋಪಗಳೂ ಕೇಳಿಬಂದಿತ್ತು. ಆಕೆಯ ಹೆಸರು ಕ್ರಿಸ್ಟಿಯಾನಾ ಬರ್ಸೋನಿ- ಆರ್ಸಿಡಿಯಾಕೊನೊ (49), ಆಕೆ ಹಂಗೇರಿ ಮೂಲದ ಬಿಎಸಿ ಕನ್ಸಲ್ಟಿಂಗ್‍ನ ಮಾಲೀಕಳು. ಆಕೆ ಸುಮಾರು 7 ಭಾಷೆಗಳಲ್ಲಿ ಪರಿಣತಳು. ಕಣ ಭೌತಶಾಸ್ತ್ರ ವಿಷಯದಲ್ಲಿ ಪಿಎಚ್‍ಡಿ ಪದವೀಧರೆ. ಇಷ್ಟೇ ಅಲ್ಲದೇ ಕಲಾವಿದೆ ಕೂಡ. ಹಂಗೇರಿಯ ಬುಡಾಪೆಸ್ಟ್‌ನ ಅಪಾರ್ಟ್‍ಮೆಂಟ್ ಒಂದರಲ್ಲಿ ಆಕೆ ಚಿತ್ರಿಸಿದ ನಗ್ನಚಿತ್ರಗಳ ರಾಶಿಯೇ ಇದೆ. ಇವುಗಳಲ್ಲದೆ ಆಕೆ ಆಫ್ರಿಕಾ ಮತ್ತು ಯುರೋಪ್‍ನ ಅನೇಕ ಭಾಗಗಳಲ್ಲಿ ನೆರವಿನ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾಳೆ.
ಪೇಜರ್‌ಗಳನ್ನು ವಿನ್ಯಾಸ ಮಾಡಲು ತನ್ನ ಮೂಲ ತೈವಾನ್ ಉತ್ಪಾದಕ ಗೋಲ್ಡ್ ಅಪೊಲೋದಿಂದ ಪರವಾನಗಿ ಹೊಂದಿರುವುದಾಗಿ ಆಕೆಯ ಕಂಪೆನಿ ಲೆಬನಾನ್ ಸ್ಫೋಟದ ಬಳಿಕ ಹೇಳಿಕೆ ನೀಡಿತ್ತು. ಆದರೆ ಈ ಪೇಜರ್‌ಗಳನ್ನು ತಾನು ತಯಾರಿಸಿರುವುದಲ್ಲ. ನಾನು ಇಲ್ಲಿ ಕೇವಲ ಮಧ್ಯವರ್ತಿಯಷ್ಟೇ ಎಂದು ಕ್ರಿಸ್ಟಿಯಾನಾ ಸ್ಪಷ್ಟನೆ ನೀಡಿದ್ದಾಳೆ.
ಈ ಘಟನೆ ಬಳಿಕ ಆಕೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೇ ಆಕೆಯನ್ನು ಅಕ್ಕಪಕ್ಕದ ಮನೆಯವರು ನೋಡಿಲ್ಲ ಎನ್ನುತ್ತಿದ್ದಾರೆ. ಸುದ್ದಿಸಂಸ್ಥೆಗಳು ಮಾಡಿದ ಕರೆಗಳು ಹಾಗೂ ಇ- ಮೇಲ್‍ಗಳಿಗೆ ಕ್ರಿಸ್ಟಿಯಾನಾ ಸ್ಪಂದಿಸಿಲ್ಲ. ಬಿಎಸಿ ಕನ್ಸಲ್ಟಿಂಗ್ ಒಂದು ಮಧ್ಯವರ್ತಿ ಕಂಪೆನಿಯಾಗಿದ್ದು, ಅದು ದೇಶದಲ್ಲಿ ಯಾವುದೇ ಉತ್ಪಾದನಾ ಘಟಕ ಹೊಂದಿಲ್ಲ. ಪೇಜರ್‌ಗಳನ್ನು ಹಂಗೇರಿಗೆ ಆಮದು ಮಾಡಿಕೊಳ್ಳಲಾಗಿಲ್ಲ ಎಂದು ಹಂಗೇರಿ ಸರ್ಕಾರ ತಿಳಿಸಿದೆ.
ಲೆಬನಾನ್‌ನ ಹಿಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ಬೆದರಿಕೆ ಹಾಕಿದ ಬೆನ್ನಲ್ಲೇ ಇಸ್ರೇಲ್ ಸೇನೆ ತನ್ನ ವಾಯು ದಾಳಿ ಆರಂಭ ಮಾಡಿದೆ. ಇಸ್ರೇಲ್ ಭದ್ರತಾ ಪಡೆಗಳು (ಐಡಿಎಫ್) ಲೆಬನಾನ್ ದೇಶದ ಮೇಲೆ 100ಕ್ಕೂ ಹೆಚ್ಚು ರಾಕೆಟ್‌ಗಳ ಮೂಲಕ ದಾಳಿ ನಡೆಸಿದೆ. ಈ ದಾಳಿಗಳಲ್ಲಿ ಹಿಜ್ಬುಲ್ಲಾ ಉಗ್ರ ಸಂಘಟನೆಗೆ ಸೇರಿದ ಹಲವು ನೆಲೆಗಳು ಧ್ವಂಸಗೊಂಡಿವೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಉಗ್ರ ಸಂಘಟನೆ ನೆಲೆಗಳು ಹರಡಿಕೊಂಡಿವೆ. ಇಸ್ರೇಲ್ ದೇಶಕ್ಕೆ ತಾಗಿಕೊಂಡಂತೆ ಇರುವ ಈ ನೆಲೆಗಳ ಮೂಲಕವೇ 2023ರ ಅಕ್ಟೋಬರ್ 7 ರ ಬಳಿಕ ಹಿಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಇದೀಗ ಆ ನೆಲೆಗಳನ್ನೇ ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ.