ಮೈಸೂರು: ಹುಣಸೂರು ಬೈ ಎಲೆಕ್ಷನ್‍ನಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರ ಬೆಂಬಲ ಯಾರಿಗೆ ಎಂಬುದು ಸದ್ಯಕ್ಕೆ ಹುಣಸೂರಿನ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆ. ಮತದಾನಕ್ಕೆ ಇನ್ನೂ 7 ದಿನ ಮಾತ್ರ ಬಾಕಿ ಇದೆ. ಆದರೂ ಜಿಟಿಡಿ ಮೌನ ಮಾತ್ರ ಮುರಿಯುತ್ತಿಲ್ಲ. ಇದು ಅಭ್ಯರ್ಥಿಗಳ ಟೆನ್ಷನ್ ಹೆಚ್ಚಿಸಿದೆ.
ಹುಣಸೂರು ಬೈ ಎಲೆಕ್ಷನ್‍ನಲ್ಲಿ ಜಿ.ಟಿ ದೇವೇಗೌಡರ ಮತ್ತು ಅವರ ಪುತ್ರ ಜಿ.ಡಿ ಹರೀಶ್ ಗೌಡ ಪಾತ್ರ ದೊಡ್ಡದಿದೆ. ಇವರು ಮನಸ್ಸು ಮಾಡಿದರೆ ಕನಿಷ್ಟ 10 ಸಾವಿರ ಮತಗಳನ್ನು ಯಾವುದೇ ಪಕ್ಷಕ್ಕೆ ಆದರೂ ಹಾಕಿಸುವ ಶಕ್ತಿ ಇದೆ. ಜಿಟಿಡಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ನನಗೂ ಈ ಚುನಾವಣೆಗೂ ಸಂಬಂಧ ಇಲ್ಲ. ನಾನು ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ ಎಂದು ಘೋಷಿಸಿ ಹುಣಸೂರು ಕಡೆಗೆ ತಲೆ ಹಾಕಿಯೂ ಮಲಗುತ್ತಿಲ್ಲ.
Advertisement
Advertisement
ದಳಪತಿಗಳ ಮೇಲೆ ಮುನಿಸಿಕೊಂಡಿರುವ ಜಿಟಿಡಿ, ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಹೀಗಾಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿಗೆ ಬೆಂಬಲಿಸುತ್ತಾರೆ ಎಂದುಕೊಳ್ಳಲಾಗಿತ್ತು. ಒಂದು ಹಂತದಲ್ಲಿ ತಮ್ಮ ಪುತ್ರನಿಗೆ ಹುಣಸೂರಿನಲ್ಲಿ ಬಿಜೆಪಿ ಟಿಕೆಟ್ ಕೊಡಿಸಲು ಯತ್ನಿಸಿದ್ದರು. ಆದರೆ, ಇದು ಫಲ ಕೊಡಲಿಲ್ಲ. ಹೀಗಾಗಿ ನಾನು ನ್ಯೂಟ್ರಲ್ ಎಂದು ಹೇಳಿ ತಮ್ಮ ಕ್ಷೇತ್ರದ ಓಡಾಟದಲ್ಲಿ ಮಗ್ನರಾಗಿದ್ದಾರೆ.
Advertisement
Advertisement
ಯಾವಾಗ ಜಿಟಿಡಿ ಬಿಜೆಪಿಗೂ ಬೆಂಬಲ ನೀಡಲ್ಲ ಎಂದು ಹೇಳಿದರೋ ಆಗ ಕಾಂಗ್ರೆಸ್‍ಗೂ ಆಸೆ ಚಿಗುರಿತ್ತು. ತಕ್ಷಣ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಖುದ್ದಾಗಿ ಜಿಟಿಡಿಗೆ ಕರೆ ಮಾಡಿ ತಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೇಳಿದ್ದರು. ಸಿದ್ದರಾಮಯ್ಯ ಕರೆ ಮಾಡಿದ್ದು ಬಹಿರಂಗವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಕೂಡ ಜಿಟಿಡಿಗೆ ಕರೆ ಮಾಡಿ ಎಚ್. ವಿಶ್ವನಾಥ್ ಬೆಂಬಲಿಸುವಂತೆ ಕೇಳಿ ಕೊಂಡರು. ಇಬ್ಬರಿಗೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಹೇಳಿರುವ ಕಾರಣ ಕುತೂಹಲ ಹೆಚ್ಚಿದೆ.
ಈ ನಡುವೆ, ಜಿಟಿಡಿ ಅವರನ್ನು ಕನ್ವಿನ್ಸ್ ಮಾಡುವ ಕೊನೆ ಯತ್ನವನ್ನು ಸಂಸದ ಪ್ರಜ್ವಲ್ ರೇವಣ್ಣ ನಡೆಸಿದರು. ಆದರೆ, ದಳಪತಿಗಳ ಜೊತೆಗೆ ಮನಸ್ಸು ಮುರಿದುಕೊಂಡಿರುವ ಜಿಟಿಡಿ ನಾನಾಗಲಿ, ನನ್ನ ಮಗನಾಗಲಿ ಪ್ರಚಾರಕ್ಕೆ ಬರಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದಾರೆ. ಹೀಗಾಗಿ, ದಳಪತಿಗಳು ಜಿಟಿಡಿ ಮೇಲಿನ ಆಸೆ ಬಹುತೇಕ ಬಿಟ್ಟಿದ್ದಾರೆ. ಜಿಟಿಡಿ ಬೆಂಬಲ ಇಲ್ಲದೆ ತಮ್ಮ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸುವುದು ಕಷ್ಟ ಎಂದು ಗೊತ್ತಿದ್ದರು ಅದನ್ನು ತೋರ್ಪಡಿಸಿಕೊಳ್ಳದೆ ಜಿಟಿಡಿ ಹೆಸರು ಎತ್ತದೆ ಪ್ರಚಾರ ಮಾಡುತ್ತಿದ್ದಾರೆ.
ಜಿಟಿಡಿಯ ಒಂದು ನಿರ್ದೇಶನಕ್ಕಾಗಿ ಅವರ ಬೆಂಬಲಿಗರು ಕಾಯುತ್ತಿದ್ದಾರೆ. ಜಿಟಿಡಿ ಇಂತಹ ಪಕ್ಷಕ್ಕೆ ಮತ ಹಾಕಿ, ಹಾಕಿಸಿ ಎಂದು ಸಂದೇಶ ರವಾನೆ ಮಾಡಿದ್ದೆ ನಿಜವಾದರೆ ಅವರು ಯಾವ ಪಕ್ಷದ ಹೆಸರು ಹೇಳಿರುತ್ತಾರೋ ಆ ಪಕ್ಷ ಗೆಲುವಿನ ದಡ ಸೇರುವುದು ನಿಶ್ಚಿತ. ಏಕೆಂದರೆ ಹುಣಸೂರಲ್ಲಿ ಜಿಟಿಡಿ ಮತ್ತು ಅವರ ಪುತ್ರ ಹರೀಶ್ ಗೌಡ ಗೆ ಇಂತಹದೊಂದು ದೊಡ್ಡ ಬೆಂಬಲದ ಗುಂಪಿದೆ.