Connect with us

Bengaluru City

ನೂತನ ಡಿಜಿ & ಐಜಿ ನೇಮಕ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ

Published

on

ಬೆಂಗಳೂರು: ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇಮಕಕ್ಕೆ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಹಾಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು 2020ರ ಜನವರಿ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಡಿಜಿ ನೇಮಕಕ್ಕೆ ಸರ್ಕಾರ ಪ್ರಕ್ರಿಯೆ ನಡೆಸಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ನೇತೃತ್ವದಲ್ಲಿ ನಿನ್ನೆ ಉನ್ನತಾಧಿಕಾರಿಗಳ ಸಭೆ ನಡೆಯಿತು. 1983ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ನೀಲಮಣಿ ರಾಜು ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಡಿಜಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿಯಮದಂತೆ ಸರ್ಕಾರ ಹಿರಿತನಕ್ಕೆ ಆದ್ಯತೆ ನೀಡಬೇಕಿದ್ದು, ಉನ್ನತಾಧಿಕಾರ ಸಮಿತಿ ಅರ್ಹರಾಗಿರುವ 3 ಹಿರಿಯ ಅಧಿಕಾರಿಗಳ ಹೆಸರುಗಳಿರುವ ಪ್ಯಾನಲ್ ಅನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಬೇಕು. ಈ ಅಧಿಕಾರಿಗಳ ಸೇವಾ ಹಿರಿತನ ಮತ್ತು ಕಾರ್ಯಕ್ಷಮತೆ ಬಗ್ಗೆ ಕೇಂದ್ರ ಸರ್ಕಾರಕ್ಕೇನಾದ್ರೂ ಆಕ್ಷೇಪಗಳಿದ್ದರೆ ವರದಿ ನೀಡುತ್ತದೆ. ವರದಿ ಬಳಿಕ ರಾಜ್ಯ ಸರ್ಕಾರ ಮೂವರ ಪೈಕಿ ಯಾರನ್ನಾದ್ರೂ ಆಯ್ಕೆ ಮಾಡಕೊಳ್ಳಬಹುದು. ಈ ನೇಮಕ ಮತ್ತು ಆಯ್ಕೆ ರಾಜ್ಯ ಸರ್ಕಾರದ ವಿವೇಚನಾಧಿಕಾರವಾದ್ರೂ ಈ ನಿಯಮಗಳನ್ನು ಪಾಲಿಸಲೇಬೇಕು.

ನಿನ್ನೆ ನಡೆದ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ 3 ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. 1985ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಎಡಿಜಿಪಿ ಎ.ಎಂ.ಪ್ರಸಾದ್, 1986 ಬ್ಯಾಚ್‍ನ ಅಧಿಕಾರಿಗಳಾಗಿರುವ ಎಡಿಜಿಪಿಗಳಾದ ಪ್ರವೀಣ್ ಸೂದ್ ಮತ್ತು ಪಿ.ಕೆ.ಗರ್ಗ್ ಇವರುಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

ಎ.ಎಂ. ಪ್ರಸಾದ್ ಅವರಿಗೆ 2020ರ ಅಕ್ಟೋಬರ್ ತಿಂಗಳವರೆಗೆ ಸೇವೆಗೆ ಅವಕಾಶವಿದ್ದು, ಬಹುತೇಕ ಪ್ರಸಾದ್ ಅವರೇ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗುವುದು ಖಚಿತ. ನಂತರದ ಅವಕಾಶವಿರುವ ಪ್ರವೀಣ್ ಸೂದ್ ಅವರಿಗೆ 2024ರ ಮೇ ತಿಂಗಳವರೆಗೂ ಸೇವಾವಧಿ ಇದೆ. ಪಿ.ಕೆ.ಗರ್ಗ್ ಅವರಿಗೆ 2021ರ ಏಪ್ರಿಲ್‍ವರೆಗೆ ಅವಕಾಶವಿದೆ. ಹೀಗಾಗಿ ಸೇವಾ ಹಿರಿತನ ಪರಿಗಣಿಸಿ ಎ.ಎಂ.ಪ್ರಸಾದ್ ಅವರಿಗೆ ಡಿಜಿ ಹುದ್ದೆ ಲಭಿಸುವ ಸಾಧ್ಯತೆ ಇದೆ. ಜನವರಿ ಅಂತ್ಯಕ್ಕೆ ನೂತನ ಡಿಜಿ ನೇಮಕ ಆದೇಶ ಹೊರಬೀಳಲಿದೆ.

Click to comment

Leave a Reply

Your email address will not be published. Required fields are marked *