ಚಿಕ್ಕಬಳ್ಳಾಪುರ: ರಾಜ್ಯದ ಬಹುತೇಕ ಕಡೆ ಬರದ ವಾತಾವರಣ, ಬರದ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹಗಲು ರಾತ್ರಿ ಎನ್ನದೇ ಪಾತಾಳದಿಂದ ಅಂರ್ತಜಲ ಬಗೆದು ಹನಿ ಹನಿ ನೀರುಣಿಸಿ ಬಂಗಾರದಂತಹ ಹೂಗಳನ್ನ ಬೆಳೆದಿದ್ದಾರೆ. ಆದರೆ ಬರದ ನಡುವೆ ಕಳೆದ ಮೂರು ದಿನಗಳಿಂದ ಬಂದ ಮಳೆ (Rain) ಈಗ ಆ ಜಿಲ್ಲೆಯ ಹೂ ಬೆಳೆಗಾರರಿಗೆ (Flower Growers) ಬರೆ ಹಾಕುವಂತೆ ಮಾಡಿದೆ.
ರಾಶಿ ರಾಶಿ ಹೂ ಬಿಕರಿಯಾಗದೇ ರೈತರು ಸುಖಾಸುಮ್ಮನೆ ಬಿಸಾಡಿ ಹೋಗುವಂತಹ ಘಟನೆ ಚಿಕ್ಕಬಳ್ಳಾಪುರ (Chikkballapura) ಹೂವಿನ ಮಾರುಕಟ್ಟೆಯಲ್ಲಿ (Flower Market) ನಡೆದಿದೆ. ಹೂವಿನ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಕೇಳುವವರಿಲ್ಲದೇ, ಖರೀದಿ ಮಾಡುವವರಿಲ್ಲದೇ ಎಸೆದು ಹೋಗಿದ್ದಾರೆ.
ಕಳೆದ 1 ತಿಂಗಳು ಸೇರಿದಂತೆ ಅದರಲ್ಲೂ ವರಮಹಾಲಕ್ಷ್ಮೀ ಹಬ್ಬಕ್ಕೆ ಭಾರೀ ಏರಿಕೆ ಕಂಡಿದ್ದ ಹೂವಿನ ದರ ಈಗ ಪಾತಾಳಕ್ಕೆ ಕುಸಿದಿದೆ. ವರಮಹಾಲಕ್ಷ್ಮೀ ಹಬ್ಬದಂದು 1 ಕೆಜಿ ಚೆಂಡು ಹೂ 40 ರಿಂದ 70 ರೂ.ಗೆ ಮಾರಾಟವಾಗಿತ್ತು. ಆದರೆ ಈಗ ಚೆಂಡು ಹೂ ಖರೀದಿ ಮಾಡುವವರೇ ಇಲ್ಲ. ಈಗ 1 ಕೆಜಿ ಚೆಂಡು ಹೂ 1 ರೂ., 2 ರೂ.ಗೆ ಮಾರಾಟವಾಗುತ್ತಿದೆ. ಹೀಗಾಗಿ ರೈತರು ಮಾರಾಟಕ್ಕೆ ತಂದಿದ್ದ ಹೂವನ್ನ ಮಾರುಕಟ್ಟೆಯಲ್ಲೇ ಬಿಸಾಡಿ ಹೋಗುತ್ತಿದ್ದಾರೆ. ಇದನ್ನೂ ಓದಿ: ಹಿಂದೂ ಸಮಾಜದ ಅನಿಷ್ಟಗಳಿಗೆ ಮುಸ್ಲಿಮರ ಆಕ್ರಮಣವೇ ಕಾರಣ: ಆರ್‌ಎಸ್ಎಸ್ ಮುಖಂಡ ಕೃಷ್ಣ ಗೋಪಾಲ್
ವರಮಹಾಲಕ್ಷ್ಮೀ (Varamahalakshmi) ಹಬ್ಬದ ಸಮಯದಲ್ಲಿ ಸೇವಂತಿಗೆ 300 ರಿಂದ 600 ರೂಪಾಯಿಗೂ ಮಾರಾಟವಾಗಿತ್ತು. ಈಗ 5 ರೂ. 10 ರೂ.ಗೆ ಇಳಿದಿದೆ. ಮಳೆಯಿಂದ ನೆನೆದು ಹೋದ ಒದ್ದೆಯಾದ ಹೂಗಳನ್ನ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಸೇವಂತಿಗೆ ಹೂಗಳನ್ನ ಸಹ ರೈತರು ಎಲ್ಲಂದರಲ್ಲಿ ಎಸೆಯುತ್ತಿದ್ದಾರೆ.
ಮತ್ತೊಂದೆಡೆ 150 ರೂಪಾಯಿಯಿಂದ 250 ರೂಪಾಯಿಗೆ ಮಾರಾಟವಾಗುತ್ತಿದ್ದ ಗುಲಾಬಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು 10 ರಿಂದ 20 ರೂಪಾಯಿಗೆ ಮಾರಾಟವಾಗುತ್ತಿದೆ. ಮಳೆಯಿಲ್ಲದೆ ಈಗ ಧಿಡೀರ್ ಮಳೆ ಬಂದ ಕಾರಣ ಹೂಗಳ ಇಳುವರಿಯಲ್ಲಿ ಹೆಚ್ಚಳವಾಗಿ ಹೂ ಬೆಲೆ ಕುಸಿದಿದೆ ಎನ್ನುತ್ತಾರೆ ವರ್ತಕರು.
ಒಟ್ಟಿನಲ್ಲಿ ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಬೆಲೆ ಕುಸಿತದಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಎಸೆದು ಬರಿಗೈಯಲ್ಲೇ ಮನೆಗೆ ಹೋಗುವಂತಾಗಿದೆ. ಒಂದು ಕಡೆ ಮಳೆ ಬಂದರೂ ಕಷ್ಟ. ಮಳೆ ಬರದಿದ್ದರೂ ಕಷ್ಟ ಎನ್ನುವಂತೆ ರೈತರಿಗೆ ನಷ್ಟ ಎಂಬಂತಾಗಿದೆ.
Web Stories