ದಾವಣಗೆರೆ: ಪ್ರತಿಯೊಬ್ಬ ನಾಗರೀಕನೂ ಪೊಲೀಸರ ಕೆಲಸ ನಿರ್ವಹಿಸಬಹುದು. ಜವಾಬ್ದಾರಿ ಮತ್ತು ಶಿಸ್ತಿನಿಂದ ವರ್ತಿಸುವ ಮೂಲಕ, ರಸ್ತೆ ಅಪಘಾತಕ್ಕೀಡಾದವರನ್ನು ರಕ್ಷಿಸುವ ಮೂಲಕ ಹೀಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿ ವ್ಯಕ್ತಿ ಪೊಲೀಸ್ ಆಗಬಹುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಮತ್ತು ರಸ್ತೆ ಸುರಕ್ಷತೆ ಕುರಿತಾಗಿ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹನುಮಂತರಾಯ ಅವರು, ಹಿಂದೆಲ್ಲ ರಸ್ತೆ ಅಪಘಾತಕ್ಕೀಡಾದವರನ್ನು ಜನರು ರಕ್ಷಿಸಿದರೆ ವಿಚಾರಣೆ, ಪೊಲೀಸ್ ಠಾಣೆ ಎಂದು ಅಲೆದಾಡಬೇಕು ಎಂದು ಹಿಂಜರಿಯುತ್ತಿದ್ದರು. ಆದರೆ ಈಗ ಕಾನೂನು ತಿದ್ದುಪಡಿಯಾಗಿದ್ದು, ರಕ್ಷಕರಿಗೆ ಯಾವುದೇ ಕಾನೂನಿನ ಕಟ್ಟಲೆಗಳಿರುವುದಿಲ್ಲ. ಹೀಗಾಗಿ ಎಲ್ಲರೂ ರಕ್ಷಣೆಗೆ ಮುಂದೆ ಬರಬೇಕೆಂದರು. ನಮ್ಮ ವೈಯಕ್ತಿಕ ರಕ್ಷಣೆ, ದೇಶದ ಕಾನೂನು, ಸುವ್ಯವಸ್ಥೆ, ರಸ್ತೆ ಸಂಚಾರಿ ನಿಯಮ ಸೇರಿದಂತೆ ಎಲ್ಲಾ ನಿಯಮಗಳು ಮತ್ತು ಶಿಸ್ತು ಪಾಲನೆಯಲ್ಲಿ ಸಮುದಾಯದ ಸಹಭಾಗಿತ್ವದ ಪಾತ್ರ ದೊಡ್ಡದಿರುತ್ತದೆ. ಸಮುದಾಯ ಎಂದರೆ ಈ ದೇಶದ ಜನತೆ. ಈ ಸಮುದಾಯ ಶಿಸ್ತಿನಿಂದ ಉತ್ತಮ ಕಾರ್ಯಗಳಲ್ಲಿ ಕೈಜೋಡಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
Advertisement
Advertisement
ದೇಶದ ಕಾನೂನನ್ನು ಇಂದಿನ ವಿದ್ಯಾರ್ಥಿಗಳು ಪಾಲಿಸುತ್ತಿಲ್ಲ. ಇದು ವಿಷಾಧನೀಯ. ಬಹುತೇಕ ವಿದ್ಯಾರ್ಥಿಗಳು ಇಂದು ಬೈಕ್ ಬಳಸುತ್ತಾರೆ. ಪೋಷಕರು ಬೈಕಿನೊಂದಿಗೆ ಒಂದು ಹೆಲ್ಮೆಟ್ ಸಹ ನೀಡಿ ಅವರು ಕಡ್ಡಾಯವಾಗಿ ಬಳಸುವಂತೆ ನೋಡಿಕೊಳ್ಳಬೇಕು. ದಾವಣಗೆರೆಯಲ್ಲೂ ಟ್ರಿಪಲ್ ರೈಡಿಂಗ್, ಹೆಲ್ಮೆಟ್ ಧರಿಸದಿರುವುದು ಸೇರಿದಂತೆ ಬಹಳಷ್ಟ ರಸ್ತೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಸಾಕ್ಷರತೆ ಇಲ್ಲದವರಿಗೆ ಕಾನೂನು ತಿಳಿಸಿ, ಅನುಷ್ಠಾನಗೊಳಿಸುವುದು ಕಷ್ಟ ಎಂದುಕೊಂಡಿದ್ದೆವು. ಆದರೆ ಸಾಕ್ಷರರಾದ ವಿದ್ಯಾರ್ಥಿಗಳೇ ಕಾನೂನು ಪಾಲಿಸದಿದ್ದರೆ ಯಾರಿಗೆ ಹೇಳುವುದು ಎಂದು ಪ್ರಶ್ನಿಸಿದರು.
Advertisement
Advertisement
ಸಿಸಿಟಿವಿ ಅಳವಡಿಕೆ:
ಮನೆಗಳಿಗೆ ಸಿಸಿ ಟಿವಿ ಅಳವಡಿಸುವುದರಿಂದ ಅನೇಕ ಕ್ರಿಮಿನಲ್ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು. ಕರ್ನಾಟಕ ಸೇಫ್ಟಿ ಆಕ್ಟ್ ಪ್ರಕಾರ ನೂರು ಜನ ಸೇರುವಂತಹ ಹಾಗೂ ಪ್ರತಿದಿನ 500 ಮಂದಿ ಭೇಟಿ ನೀಡುವಂತಹ ಪ್ರದೇಶಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಅಳವಡಿಸದಿದ್ದಲ್ಲಿ ದಂಡ ಹಾಕಲಾಗುತ್ತೆ ಎಮಬ ನಿಯಮವಿದೆ. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ದೇವಸ್ಥಾನ, ಚರ್ಚ್, ಮಸೀದಿ ಸೇರಿದಂತೆ ಸಾರ್ವಜನಿಕರು ಭೇಟಿ ನೀಡುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಇದ್ದು, ಮನೆಗಳಿಗೂ ಅಳವಡಿಸಿಕೊಂಡಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಅನುಕೂಲವಾಗುತ್ತದೆ.
ಈ ಸುರಕ್ಷತೆ ಬಗ್ಗೆ ತಿಳಿಸುವ ಕಾಯ್ದೆ ಬಗ್ಗೆ ಸಾಕಷ್ಟು ಪ್ರಚಾರ ನೀಡುತ್ತಿದ್ದರೂ ಬಹುತೇಕ ಜನರಿಗೆ ಕರ್ನಾಟಕ ಸುರಕ್ಷತಾ ಕಾಯ್ದೆ ಬಗ್ಗೆ ತಿಳಿದಿಲ್ಲ. ನಮ್ಮ ದೇಶದಲ್ಲಿ ಜನರು ಮತ್ತು ಪೊಲೀಸರ ಅನುಪಾತದಲ್ಲಿ ಬಹಳ ವ್ಯತ್ಯಾಸ ಇದೆ. ದಾವಣಗೆರೆ ನಗರದಲ್ಲೇ 5 ರಿಂದ 6 ಲಕ್ಷ ಜನರಿದ್ದು, ಪೊಲೀಸರ ಸಂಖ್ಯೆ 2 ಸಾವಿರ ಇದೆ. ಆದ್ದರಿಂದ ಎಲ್ಲಾ ವ್ಯಕ್ತಿಗಳೂ ಜವಾಬ್ದಾರಿಯಿಂದ ನಡೆದುಕೊಳ್ಳುವ ಮೂಲಕ ಪೊಲೀಸರಾಗಬಹುದು ಎಂದು ಹನುಮಂತರಾಯ ಅವರು ತಿಳಿ ಮಾತು ಹೇಳಿದರು.