– ಗುಪ್ತಚರ ವರದಿ ಏನ್ ಹೇಳುತ್ತೆ?
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿತ್ತು. ಸೋಲಿಲ್ಲದ ಸರದಾರ ಖ್ಯಾತಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಕೈ ನಾಯಕ ಉಮೇಶ್ ಜಾಧವ್ ಅವರನ್ನೇ ಹೈಜಾಕ್ ಮಾಡಿಕೊಂಡು ಕಣಕ್ಕಿಳಿಸಿತ್ತು. ಹಾಗಾಗಿ ಮೊದಲಿಗಿಂತಲೂ ಈ ಬಾರಿ ಕಲಬುರಗಿ ಕ್ಷೇತ್ರ ಕೊಂಚ ದೇಶದ ಗಮನವನ್ನೇ ಸೆಳೆದಿತ್ತು.
Advertisement
ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ಖಾಸಗಿ ಏಜೆನ್ಸಿ ಮುಖಾಂತರ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇತ್ತ ರಾಜ್ಯ ಸರ್ಕಾರ ಗುಪ್ತಚರ ಇಲಾಖೆಯ ಸಮೀಕ್ಷೆ ಸಹ ತನ್ನ ವರದಿಯನ್ನು ಸಿಎಂ ಮುಂದೆ ನೀಡಿದೆ.
Advertisement
Advertisement
ದೋಸ್ತಿ ಲೆಕ್ಕ: ಕಲಬುರಗಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳಲಿದ್ದು, ಅಫಜಲಪುರ ಹಾಗೂ ಜೇವರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಉಮೇಶ್ ಜಾಧವ್ ಸಮಬಲದ ಮತ ಪಡೆಯುವ ಸಾಧ್ಯತೆಗಳಿವೆ ಎಂದು ದೋಸ್ತಿ ನಾಯಕರು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
Advertisement
ಕಲಬುರಗಿ ದಕ್ಷಿಣದಲ್ಲಿ 3 ಸಾವಿರ, ಕಲಬುರಗಿ ಉತ್ತರದಲ್ಲಿ 25 ಸಾವಿರ, ಕಲಬುರಗಿ ಗ್ರಾಮಾಂತರದಲ್ಲಿ 5 ಸಾವಿರ, ಸೇಡಂನಲ್ಲಿ 10 ಸಾವಿರ, ಗುರುಮಠಕಲ್ ನಲ್ಲಿ 3 ಸಾವಿರ, ಚಿತ್ತಾಪುರದಲ್ಲಿ 10 ಸಾವಿರ ಮುನ್ನಡೆ ಪಡೆದು ಒಟ್ಟು 70 ಸಾವಿರ ಮತಗಳ ಅಂತರದಲ್ಲಿ ಮಲ್ಲಿಕಾರ್ಜುನ ಖರ್ಗೆ 12ನೇ ಬಾರಿ(ವಿಧಾನಸಭಾ + ಲೋಕಸಭಾ ಸೇರಿ) ಗೆಲುವು ದಾಖಲಿಸುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳಿದೆ.
ಬಿಜೆಪಿ ಲೆಕ್ಕ: ಕಮಲ ನಾಯಕರು ನಡೆಸಿರುವ ಸಮೀಕ್ಷೆ ಪ್ರಕಾರ, ಕಲಬುರಗಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉಮೇಶ್ ಜಾಧವ್ 5ರಲ್ಲಿ ಮುನ್ನಡೆ ಪಡೆದು ಗೆಲುವು ಕಾಣುತ್ತಾರೆ. ಉಳಿದ ಮೂರು ಕ್ಷೇತ್ರಗಳಾದ ಕಲಬುರಗಿ ಉತ್ತರದಲ್ಲಿ 20 ಸಾವಿರ, ಗುರುಮಿಠಕಲ್ ನಲ್ಲಿ 4 ಸಾವಿರ, ಚಿತ್ತಾಪುರದಲ್ಲಿ 5 ಸಾವಿರ ಲೀಡ್ ನಲ್ಲಿ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳುತ್ತಾರೆ ಎನ್ನುವ ವರದಿ ನೀಡಿದೆ.
ಕಲಬುರಗಿ ದಕ್ಷಿಣದಲ್ಲಿ 10 ಸಾವಿರ, ಕಲಬುರಗಿ ಗ್ರಾಮೀಣದಲ್ಲಿ 10 ಸಾವಿರ, ಸೇಡಂನಲ್ಲಿ 10 ಸಾವಿರ, ಜೇವರ್ಗಿಯಲ್ಲಿ 10 ಸಾವಿರ ಮತ್ತು ಅಫಜಲಪುರದಲ್ಲಿ 12 ಸಾವಿರ ಮತಗಳ ಲೀಡ್ ಉಮೇಶ್ ಜಾಧವ್ ಪಡೆದುಕೊಂಡು ಕನಿಷ್ಠ 20 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಸಮೀಕ್ಷೆ ಹೇಳಿದೆ.
ಗುಪ್ತಚರ ವರದಿ: ಗುಪ್ತಚರ ಇಲಾಖೆ ಮಲ್ಲಿಕಾರ್ಜುನ ಖರ್ಗೆಯವರ ಗೆಲುವು ನಿಶ್ಚಿತ ಎಂದು ಹೇಳಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿನಲ್ಲಿ ಮೂರರಲ್ಲಿ ಉಮೇಶ್ ಜಾಧವ್ ಮತ್ತು 5ರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಕಲಬುರಗಿ ದಕ್ಷಿಣದಲ್ಲಿ 5 ಸಾವಿರ, ಜೇವರ್ಗಿಯಲ್ಲಿ 7 ಸಾವಿರ, ಅಫಜಲಪುರದಲ್ಲಿ 8 ಸಾವಿರ ಮತಗಳ ಮುನ್ನಡೆಯನ್ನು ಉಮೇಶ್ ಜಾಧವ್ ಕಾಣಲಿದ್ದಾರೆ. ಉಳಿದಂತೆ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ದಕ್ಷಿಣದಲ್ಲಿ 15 ಸಾವಿರ, ಕಲಬುರಗಿ ಗ್ರಾಮೀಣದಲ್ಲಿ 5 ಸಾವಿರ, ಸೇಡಂನಲ್ಲಿ 10 ಸಾವಿರ, ಗುರುಮಿಠಕಲ್ ನಲ್ಲಿ 35 ಸಾವಿರ ಮತ್ತು ಚಿತ್ತಾಪುರದಲ್ಲಿ 10 ಸಾವಿರ ಮತಗಳ ಮುನ್ನಡೆ ಪಡೆದುಕೊಂಡು ಸುಮಾರು 55 ಸಾವಿರ ಲೀಡ್ ನಲ್ಲಿ ಸಂಸದೀಯ ನಾಯಕ 12ನೇ ಗೆಲುವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಗುಪ್ತಚರ ವರದಿಯಲ್ಲಿ ತಿಳಿಸಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.